ಮಕ್ಕಳ ಉನ್ನತ ಶಿಕ್ಷಣಕ್ಕೆ ಸಂಘಗಳು ಒತ್ತು ನೀಡಬೇಕು: ಆಶಾ

Upayuktha
0

          ಶ್ರೀ ವೀರನಾರಾಯಣ ದೇವಳದಲ್ಲಿ ಆಟಿಡೊಂಜಿ ದಿನಟ್ ಆಟಿದ ನೆಂಪು ಕಾರ್ಯಕ್ರಮ 


ಮಂಗಳೂರು:
ಸಾಧನೆ ಮಾಡಬೇಕಾದರೆ ಶಿಕ್ಷಣವೇ ಮುಖ್ಯವಾದುದರಿಂದ ಕುಲಾಲ ಸಮುದಾಯದ ಮಕ್ಕಳು ಹೆಚ್ಚು ಹೆಚ್ಚು ವಿದ್ಯೆಯನ್ನು ಕಲಿತು ಉನ್ನತ ಸ್ಥಾನಕ್ಕೆ ಬರಬೇಕು. ಇದಕ್ಕಾಗಿ ಸಂಘ ಸಂಸ್ಥೆಗಳು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಉಪನ್ಯಾಸಕಿ ಆಶಾ ಅವರು ಹೇಳಿದರು. 


ಅವರು ನಗರದ ಕುಲಶೇಖರದಲ್ಲಿರುವ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘವು ಆಯೋಜಿಸಿದ್ದ  ಆಟಿಡೊಂಜಿ ದಿನಟ್ ಆಟಿದ ನೆಂಪು ಕಾರ್ಯಕ್ರಮದ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು. 


ಆಟಿ ತಿಂಗಳು ಎಂಬುದು ಪ್ರಕೃತಿಯೇ ನೀಡಿದ ಒಂದು ಬಿಡುವಿನ ತಿಂಗಳು ಎಂದರೂ ತಪ್ಪಾಗಲಾರದು. ಏಕೆಂದರೆ ಆಟಿ ತಿಂಗಳಲ್ಲಿ ಪ್ರಕೃತಿದತ್ತವಾಗಿ ಸಿಗುವಂತ ಮರದ ಕೆತ್ತೆ, ಎಲೆ, ಸಸ್ಯಗಳಲ್ಲಿ ಔಷಧೀಯ ಗುಣಗಳು ತುಂಬಿಕೊಂಡಿವೆ ಎಂಬ ನಂಬಿಕೆಯಿಂದ ನಾವೆಲ್ಲ  ಪಾಲೆದ ಮರದ ಕೆತ್ತೆಯ ಕಷಾಯವನ್ನು ಕುಡಿಯುತ್ತಿದ್ದೇವೆ. ಇದನ್ನು ಹಿರಿಯರು ಆಚರಿಸಿಕೊಂಡು ಬಂದಿರುವ ಪದ್ಧತಿ ಆಗಿದ್ದರೂ, ಇದರಲ್ಲಿ ಸತ್ಯ ಅಡಗಿದೆ. ಮನೆ ಮನೆಗಳಲ್ಲಿ ಆಟಿ ತಿಂಗಳ ಆಚರಣೆಯನ್ನು ಮುಂದುವರಿಸಿದರೆ ನಮ್ಮ ಮಕ್ಕಳು ಇದನ್ನು ಕಲಿತು ಮುಂದುವರಿಸುತ್ತಾರೆ, ಅಲ್ಲದೆ ಮಕ್ಕಳು ಮತ್ತು ಪೋಷಕರ ಸಂಬಂಧಗಳು ಗಟ್ಟಿಯಾಗುತ್ತವೆ ಎಂದರು. 

ಆಟಿ ತಿಂಗಳ ಆಹಾರ ಪದ್ಧತಿಯ ಬಗ್ಗೆ ವಿವರಿಸಿದ ಅವರು ಆಟಿ ಕಳೆಂಜ, ಹೆಣ್ಣು ಮಕ್ಕಳು ಆಟಿ ಕೂರಲು ತವರು ಮನೆಗೆ ಹೋಗುವುದು ಮುಂತಾದ ವಿಷಯಗಳ ಮಹತ್ವ ವನ್ನು ವಿವರಿಸಿದರು.  


ಕಾರ್ಯಕ್ರಮದಲ್ಲಿ  ಕುಂಬಾರಿಕೆಯಲ್ಲಿ ತೊಡಗಿಸಿಕೊಂಡು ಸಾಧನೆಗೈದ ವಾರಿಜ ಮುಲ್ಕಿ, ಎಂ.ಟೆಕ್‌ನಲ್ಲಿ ಸಾಧನೆಗೈದ ವರ್ಷಿತ್ ಬಂಟ್ವಾಳ, ಸಮಾಜ ಸೇವಕ ಸುನಿಲ್ ಕೃಷ್ಣಾಪುರ ಅವರನ್ನು ಗೌರವಿಸಲಾಯಿತು. 

   

ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ವಿಭಾಗ, ಶ್ರೀ ವೀರನಾರಾಯಣ ಮಾತೃ ಮಂಡಳಿ, ಶ್ರೀ ದೇವಿ ಮಾತೃ ಮಂಡಳಿ ಸಾಥ್ ನೀಡಿದ್ದವು. ಕಾರ್ಯಕ್ರಮದ ಪ್ರಾರಂಭದಲ್ಲಿ ಜನಪದ ನೃತ್ಯ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ವಹಿಸಿದ್ದರು. 


ಮುಖ್ಯ ಅಥಿತಿಗಳಾಗಿ ಮಾತೃ ಸಂಘದ ಪ್ರದಾನ ಕಾರ್ಯದರ್ಶಿ ಸದಾಶಿವ ಕುಲಾಲ್, ಶ್ರೀ ವೀರನಾರಾಯಣ ದೇವಸ್ಥಾನದ ಮೊಕ್ತೇಸರರಾದ  ಪುರುಷೋತ್ತಮ ಕುಲಾಲ್ ಕಲ್ಬಾವಿ, ಮಂಗಳೂರು ಪೊಲೀಸ್ ಲೇನ್‌ನಲ್ಲಿ ಶ್ರೀದೇವಿ ದೇವಸ್ಥಾನದ ಅಧ್ಯಕ್ಷರಾದ  ಪ್ರಸಾದ್ ಕುಲಾಲ್, ಶ್ರೀ ವೀರನಾರಾಯಣ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾದ  ಸುಂದರ ಕುಲಾಲ್ ಶಕ್ತಿನಗರ, ಸೇವಾ ದಳಪತಿ ಕಿರಣ್ ಅಟ್ಲೂರು, ಮಾತೃ ಸಂಘದ ಸಮಿತಿಯ ಸದಸ್ಯರಾದ   ರೇಖಾ ಸಂಜೀವ,  ಉಮಾ ಚಂದ್ರಶೇಖರ್ , ಶ್ರೀ ದೇವಿ ಮಾತೃ ಮಂಡಳಿಯ ಅಧ್ಯಕ್ಷರಾದ  ರೂಪ ಕೆ.ಎಸ್. ಉಪಸ್ಥಿತರಿದ್ದರು. 


ಕುಮಾರಿ ರಕ್ಷಾ ಪ್ರಾರ್ಥನೆ ಮಾಡಿದರು. ಬಂದ ಅತಿಥಿಗಳನ್ನು ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷರಾದ  ಜಲಾಜಕ್ಷಿ ಪಿ. ಕುಲಾಲ್  ಸ್ವಾಗತಿಸಿದರು. ಜಿಲ್ಲಾ ಮಹಿಳಾ ವಿಭಾಗದ ಕಾರ್ಯದರ್ಶಿಯಾದ  ಪ್ರಭಾ. ಎಸ್. ಕುಲಾಲ್  ಪ್ರಸ್ತಾವನೆ ಮಾಡಿದರು. ಶ್ರೀ ವೀರನಾರಾಯಣ ಮಾತೃ ಮಂಡಳಿಯ ಅಧ್ಯಕ್ಷರಾದ ಗೀತಾ ಮನೋಜ್ ಧನ್ಯವಾದ ನೀಡಿದರು. ಪ್ರವೀಣ್ ಬಸ್ತಿ ಮತ್ತು ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವೀರನಾರಾಯಣ ದೇವಸ್ಥಾನದ ಟ್ರಸ್ಟಿ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಾಮೋದರ ಬಂಗೇರ, ಕೋಶಾಧಿಕಾರಿ ಕುಶಾಲಪ್ಪ ಕುಲಾಲ್, ಸುರೇಶ್ ಕುಲಾಲ್ ಚಾ ಪರ್ಕ ತಂಡದ ಕಲಾವಿದ ತಿಮ್ಮಪ್ಪ ಕುಲಾಲ್ ಉಪಸ್ಥಿತರಿದ್ದರು.


ಮಧ್ಯಾಹ್ನ ಮಹಿಳಾ ವಿಭಾಗದ ಸದಸ್ಯರು ಮನೆಯಲ್ಲಿ ಮಾಡಿ ತಂದ ಆಟಿಯ ತಿನಸುಗಳೊಂದಿಗೆ ಹ ಭೋಜನ ಕೂಟ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಚೇತನ್ ಖುಷಿ ಸಭಿಕರ ಮನರಂಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
To Top