1947ರ ಆಗಸ್ಟ್ 15ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಬಂದಿದ್ದು ಎಲ್ಲರಿಗೂ ಗೊತ್ತು. ಅದೊಂದು ಐತಿಹಾಸಿಕ ಘಟನೆ. ಆ ಘಟನೆಯನ್ನು ಆಗಲೇ ಆಚರಿಸಿ ಆಗಿತ್ತು. ಅನಂತರ ಪ್ರತಿ ವರ್ಷ ಅದೇ ದಿನ ಆಚರಿಸುವುದು ಆ ಐತಿಹಾಸಿಕ ಘಟನೆಯ ವಾರ್ಷಿಕ ಸಂಸ್ಮರಣೆ ಅಷ್ಟೇ.
ಹಾಗಾಗಿ- ಈ ಲೆಕ್ಕಾಚಾರದಂತೆ 1948ರ ಆಗಸ್ಟ್ 15ರಿಂದ ಮೊದಲ ಸ್ವಾತಂತ್ರ್ಯದ ವಾರ್ಷಿಕೋತ್ಸವ ಆಚರಣೆ ಆರಂಭವಾಯಿತು ಎನ್ನಬಹುದು. ಅದರಂತೆ ಲೆಕ್ಕ ಹಾಕಿದರೆ ಈಗ ಆಚರಿಸುತ್ತಿರುವುದು 76ನೇ ವಾರ್ಷಿಕೋತ್ಸವ.
ಯಾವುದೇ ಒಂದು ಘಟನೆ ಘಟಿಸುವುದು ಒಂದೇ ಬಾರಿ. ನಂತರ ಏನಿದ್ದರೂ ಅದನ್ನು ನೆನಪಿಸಿಕೊಳ್ಳುವುದೋ, ಸಂಭ್ರಮದ ಆಚರಣೆಯೋ ಎಲ್ಲ ಅನಂತರ ಪ್ರತಿ ವರ್ಷ ನಡೆಯುವ ಪ್ರಕ್ರಿಯೆ.
ಆದರೆ 1947ರ ಆಗಸ್ಟ್ 15ರ ಸಂಭ್ರಮಾಚರಣೆಗೂ 1948ರ ಆಗಸ್ಟ್ 15ರ ಸಂಭ್ರಮಾಚರಣೆಗೂ ಏನು ವ್ಯತ್ಯಾಸ? ವ್ಯತ್ಯಾಸ ಇಲ್ಲವೆನ್ನುವುದಾದರೆ 1947ರಲ್ಲಿ ಆಚರಿಸಿದ್ದು ಒಂದನೆಯದು, 1948ರಲ್ಲಿ ಆಚರಿಸಿದ್ದು ಎರಡನೆಯದು- ಈ ರೀತಿ ಲೆಕ್ಕಾ ಹಾಕುತ್ತಾ ಬಂದರೆ ಈಗ ಆಚರಿಸಲಾಗುವ ಸ್ವಾತಂತ್ರ್ಯದ ಸಂಭ್ರಮಾಚರಣೆ 77ನೆಯದ್ದು ಎಂಬುದು ಸರಿ.
ಆದರೆ ಸಾಮಾನ್ಯವಾಗಿ ಲೋಕರೂಢಿಯಲ್ಲಿ ಜನ್ಮದಿನಾಚರಣೆ ಇರಬಹುದು, ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆ ಇರಬಹುದು- ಇವೆಲ್ಲ ಮೊದಲ ಬಾರಿ ಘಟಿಸಿದ್ದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಮೊದಲ ವರ್ಷಾಚರಣೆಯ ದಿನದಿಂದ ಗಣನೆಗೆ ತೆಗೆದುಕೊಂಡು ಇಂತಿಷ್ಟನೇ ವಾರ್ಷಿಕೋತ್ಸವ ಅಥವಾ ಇಂತಿಷ್ಟನೇ ಜನ್ಮದಿನಾಚರಣೆ ಎಂದು ಪರಿಗಣಿಸಲಾಗುತ್ತದೆ.
ಆದರೆ ಒಂದು ಸಾರ್ವಭೌಮ, ಸ್ವತಂತ್ರ ದೇಶದ ಐತಿಹಾಸಿಕ ಘಟನೆಯನ್ನು ಸ್ಮರಿಸಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಪ್ರತಿವರ್ಷ ಇಂತಹ ಗೊಂದಲಗಳು ಸೃಷ್ಟಿಯಾಗುತ್ತಿವೆ. ಅದು ಸ್ವಾತಂತ್ರ್ಯ ದಿನಾಚರಣೆ ಇರಬಹುದು ಅಥವಾ ಗಣರಾಜ್ಯೋತ್ಸವ ಇರಬಹುದು, ಎರಡಕ್ಕೂ ಈ ಗೊಂದಲಗಳು ಸಮಾನವಾಗಿ ಅನ್ವಯವಾಗುತ್ತವೆ.
ಭಾರತ ಸರಕಾರವೇ ಈ ಸಲದ ಸ್ವಾತಂತ್ರ್ಯ ದಿನಾಚರಣೆಯನ್ನು 77ನೆಯದು ಎಂದು ಅಧಿಕೃತವಾಗಿ ಹೇಳುವಾಗ ನಾವೆಲ್ಲರೂ ಅದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹಾಗಾಗಿ ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವದ ಲೆಕ್ಕಾಚಾರದಂತೆ ಇಲ್ಲಿಗೆ ಅನ್ವಯಿಸದೆ, ಸರಕಾರ ಹೇಳುವ ಅಧಿಕೃತ ಸಂಖ್ಯೆಯನ್ನೇ ಒಪ್ಪಿಕೊಳ್ಳೋಣ ಅಲ್ಲವೇ...?
77ನೇ ಸ್ವಾತಂತ್ರ್ಯೋತ್ಸವ- 76 ಅಲ್ಲ. ಹೇಗೆ ಅಂದರೆ- 1947ರ ಆಗಸ್ಟ್ 15 ಮೊದಲನೇ ಸ್ವಾತಂತ್ರ್ಯ ದಿನಾಚರಣೆ. ಅಲ್ಲಿಂದ 1956ಕ್ಕೆ 10ನೇ ಸ್ವಾತಂತ್ರ್ಯ ದಿನಾಚರಣೆ. ಇದೇ ರೀತಿ 1957ರಿಂದ 1966, 1967ರಿಂದ 1976, 1977ರಿಂದ 1986, 1987ರಿಂದ 1996, 1997ರಿಂದ 2006, 2007ರಿಂದ 2016 ಈ ರೀತಿ ಲೆಕ್ಕ ಹಾಕುತ್ತಾರೆ. 2016ರಲ್ಲಿ ಆಚರಿಸಿದ ದಿನಾಚರಣೆ 70ನೆಯದು. 2017ರಲ್ಲಿ 71, 2018ರಲ್ಲಿ 72, 2019ರಲ್ಲಿ 73, 2020ರಲ್ಲಿ 74, 2021ರಲ್ಲಿ 75, 2022ರಲ್ಲಿ 76 ಮತ್ತು ಈಗ 2023ರಲ್ಲಿ 77ನೆಯದು.
ಈ ಮೂಲಕ ಗೊಂದಲ ಬಗೆಹರಿಯಲಿ ಎಂಬುದು ನಮ್ಮೆಲ್ಲರ ಆಶಯ.
ಎಲ್ಲರಿಗೂ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು
- ಉಪಯುಕ್ತ ನ್ಯೂಸ್ ಬಳಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ