ಗೋಕರ್ಣ: ಅನೇಕ ಮಂದಿ ಸ್ವಾತಂತ್ರ್ಯ ಯೋಧರ ತ್ಯಾಗ- ಬಲಿದಾನದ ಫಲವಾಗಿ ಸಾಮ್ರಾಜ್ಯಶಾಹಿ ಆಡಳಿತ ಕೊನೆಗೊಂಡು ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ದೇಶದ ಉತ್ತಮ ಭವಿಷ್ಯದ ದೃಷ್ಟಿಯಿಂದ ಈ ಇತಿಹಾಸವನ್ನು ನಾವು ತಿಳಿದುಕೊಳ್ಳುವುದು ಅಗತ್ಯ ಎಂದು ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪ್ರಾಚೀನ ವಿಜ್ಞಾನ ವಿಭಾಗದ ಮುಖ್ಯಸ್ಥ ಅ.ಪು. ನಾರಾಯಣಪ್ಪ ಅಭಿಪ್ರಾಯಪಟ್ಟರು.
77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗೋಕರ್ಣದ ಮಾತೃಭೂಮಿ ಕ್ಯಾಂಪಸ್‍ನ ಸಾರ್ವಭೌಮ ಗುರುಕುಲದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು, ಮೊದಲೇ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮೊದಲು ಹಾಗೂ ಆ ಬಳಿಕ ಅನೇಕ ಮಂದಿ ಯೋಧರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಮಹಾತ್ಮಗಾಂಧಿ, ಸುಭಾಸ್‍ಚಂದ್ರ ಬೋಸ್, ಝಾನ್ಸಿರಾಣಿ ಲಕ್ಷ್ಮೀಬಾಯಿ, ವೀರ ಸಾವರ್ಕರ್, ಮಂಗಲಪಾಂಡೆ ಹೀಗೆ ಅನೇಕ ಮಂದಿ ಯೋಧರ ಬಲಿದಾನದ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ ಎಂದು ಬಣ್ಣಿಸಿದರು.
ಬ್ರಿಟಿಷ್ ಸರ್ಕಾರ ಎರಡನೇ ಮಹಾಯುದ್ಧದ ಬಳಿಕ ಅನಿವಾರ್ಯವಾಗಿ ಭಾರತಕ್ಕೆ ಸ್ವಾತಂತ್ರ್ಯ ನೀಡಿತು. ಭಾರತವನ್ನು ನಿಭಾಯಿಸುವುದು ಕಷ್ಟಸಾಧ್ಯ ಹಾಗೂ ಭಾರತೀಯ ಸೇನೆ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠವಾಗಿಲ್ಲ ಎಂಬ ಕಾರಣಕ್ಕೆ ಸ್ವಾತಂತ್ರ್ಯ ನೀಡಲಾಯಿತು. ನಮ್ಮ ವೀರಯೋಧರ ತ್ಯಾಗ ಬಲಿದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ರಾಷ್ಟ್ರಯೋಧರನ್ನು ಸಜ್ಜುಗೊಳಿಸುವುದು ಅಗತ್ಯ ಎಂದು ಹೇಳಿದರು.
ವಿವಿವಿಯ ಗೌರವಾಧ್ಯಕ್ಷ ಡಿ.ಡಿ.ಶರ್ಮ, ಆಡಳಿತಾಧಿಕಾರಿಗಳಾದ ಪ್ರಸನ್ನ ಕುಮಾರ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಮುಖ್ಯೋಪಾಧ್ಯಾಯಿನಿಯಾದ ಸೌಭಾಗ್ಯ ಭಟ್ಟ, ಪ್ರಾಂಶುಪಾಲರಾದ ಶಶಿಕಲಾ ಕುರ್ಸೆ ಮತ್ತಿತರರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಅಕ್ಷಯ್ ಅಡಿಗುಂಡಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಅ.ಪು. ನಾರಣಪ್ಪನವರು ಮಕ್ಕಳಿಗೆ ದೇಶಭಕ್ತಿಗೀತೆಯನ್ನು ಹೇಳಿಕೊಟ್ಟರು. ಅಪ್ರತಿಮ ದೇಶಭಕ್ತರಾದ ಭಗತ್ ಸಿಂಗರ ಜೀವನ ಚರಿತ್ರೆಯ ಬಗ್ಗೆ ಮತ್ತು ಜಲಿಯನವಾಲಾಭಾಗ್ ಘಟನೆಯ ಹಿನ್ನಲೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶಪ್ರೇಮ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಗುರುಕುಲದ ವಿದ್ಯಾರ್ಥಿಗಳು ದೇಶಪ್ರೇಮ ಸಾರುವ ನಾಟಕ, ದೇಶಭಕ್ತಿಗೀತೆ, ನೃತ್ಯ, ಚಿತ್ರಕಲೆ, ಮೈಮ್, ಭಾಷಣ, ಹಾರ್ಮೋನಿಯಂನಲ್ಲಿ ಝಂಡಾ ಗೀತೆಗಳ ಮೂಲಕ ರಂಜಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಗುರುಕುಲದ ವಿದ್ಯಾರ್ಥಿನಿ ಪೃಥ್ವಿ ಹೆಗಡೆ ರಾಷ್ಟ್ರಗೀತೆಯನ್ನು ವೀಣೆಯಲ್ಲಿ ಅದ್ಭುತವಾಗಿ ನುಡಿಸುವ ಮೂಲಕ ಕಾರ್ಯಕ್ರಮ ಸಂಪನ್ನವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ