ಪಣಜಿ: ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಅಂತೆಯೇ ಗೋವಾದಲ್ಲಿ 25ಕ್ಕೂ ಹೆಚ್ಚು ಕನ್ನಡ ಸಂಘಟನೆಗಳಿವೆ. ಎಲ್ಲ ಕನ್ನಡ ಸಂಘಟನೆಗಳೂ ಒಗ್ಗೂಡಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಬೇಕು ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ನುಡಿದರು.
ಅಖಿಲ ಗೋವಾ ಕನ್ನಡ ಮಹಾಸಂಘ ಹಾಗೂ ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಗೋವಾ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾದ ಬಿಚೋಲಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಹೊರ ರಾಜ್ಯ ಗೋವಾಕ್ಕೆ ಬಂದು ಕನ್ನಡಿಗರು ತಮ್ಮ ಜೀವನ ಕಟ್ಟಿಕೊಂಡಿರುವುದು ಮಾತ್ರವಲ್ಲದೆಯೇ ಗೋವಾದ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಗೋವಾದಲ್ಲಿ ಕೂಲಿ ಕಾರ್ಮಿಕರಿಂದ ಹಿಡಿದು ಸರ್ಕಾರದ ಉನ್ನತ ಹುದ್ಧೆಯಲ್ಲಿಯೂ ಕನ್ನಡಿಗರು ಕೆಲಸ ನಿರ್ವಹಿಸುತ್ತಿದ್ದಾರೆ. ನಾವು ಯಾವುದೇ ರಾಜ್ಯಕ್ಕೆ ಬಂದು ನೆಲೆಸಿದ್ದರೂ ನಾವೆಲ್ಲರೂ ಭಾರತೀಯರು, ನಾವೆಲ್ಲ ಒಂದು ಎಂಬ ಭಾವನೆ ನಮಗೆ ಮುಖ್ಯ. ಇಂದು ನಾವೆಲ್ಲ ಒಗ್ಗಟ್ಟಾಗಿ ಕನ್ನಡ ಸಂಘಟನೆಯ ವತಿಯಿಂದ ಗೋವಾದಲ್ಲಿ ಧ್ವಜಾರೋಹಣ ನೆರವೇರಿಸುತ್ತಿರುವುದು ನಮಗೆಲ್ಲ ಹೆಮ್ಮೆ ಎನಿಸುತ್ತಿದೆ ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ (ರೆಡ್ಡಿ) ನುಡಿದರು.
ಉದ್ಯಮಿ ಮುಸ್ತಾಕ್ ಶೇಖ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ಮಭೂಮಿ ಕನ್ನಡ ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹೊಸ್ಮನಿ, ಉಪಾಧ್ಯಕ್ಷ ನಾಗೇಶ್ ಮೂಟೆಬೆನ್ನೂರು, ಕರ್ಮಭೂಮಿ ಕನ್ನಡ ಸಂಘದ ಬಸವರಾಜ್ ಅಬ್ಬಿಗೇರಿ, ಸೇರಿದಂತೆ ಕನ್ನಡ ಸಂಘಟನೆಯ ಪದಾಧಿಕಾರಿಗಳು, ಕನ್ನಡಿಗರು ಉಪಸ್ಥಿತರಿದ್ದರು.
ವರದಿ: ಪ್ರಕಾಶ್ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ