ಉಳ್ಳಾಲ: ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತು ಜಂಟಿಯಾಗಿ ಗಡಿನಾಡ ಕನ್ನಡ ಉತ್ಸವವನ್ನು ಆಗಸ್ಟ್ 26 ರಂದು ತಲಪಾಡಿಯ ವಿಶ್ವಾಸ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂತರ್ ರಾಜ್ಯದ ಕನ್ನಡಿಗರ ಹಿತಾಸಕ್ತಿ ಕಾಪಾಡುವುದು, ಕರ್ನಾಟಕ ರಾಜ್ಯದ ಗಡಿಭಾಗ ಕಾಸರಗೋಡಿನ ಕನ್ನಡಿಗರಿಗೆ ಕನ್ನಡದ ಉಳಿವಿಗಾಗಿ ನೈತಿಕ ಬೆಂಬಲ ನೀಡಿ ಕನ್ನಡತನವನ್ನು ಬಲಗೊಳಿಸುವುದು, ಗಡಿಭಾಗದ ಜನರ ಭಾವನೆಗಳಿಗೆ ಸ್ಪಂದಿಸಿ ಸಾಂಸ್ಕೃತಿಕ ಹೊಂದಾಣಿಕೆ ಮಾಡುವುದು, ಕಾಸರಗೋಡಿನಲ್ಲಿ ಜನಿಸಿ ಇದೀಗಲೂ ಕನ್ನಡಕ್ಕಾಗಿ ಹೋರಾಟ ನಡೆಸುತ್ತಿರುವ ಕನ್ನಡಿಗರನ್ನು ಗುರುತಿಸಿ ಗೌರವಿಸುವುದು ಈ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಆ.26 ರಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ಉದ್ಘಾಟನ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭಾ ಸಭಾಪತಿ ಯು.ಟಿ ಖಾದರ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಮಂಜೇಶ್ವರದ ಶಾಸಕ ಎ.ಕೆ ಎಂ ಅಶ್ರಫ್, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ.ಎಂ ಪ್ರಭಾಕರ ಜೋಷಿ ಆಶಯ ಭಾಷಣ ಮಾಡಲಿದ್ದಾರೆ. ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಹರಿಕೃಷ್ಣ ಪುನರೂರು, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಮಂಗಳೂರು ಕನ್ನಡ ಸಂಸ್ಕೃತಿ ಇಲಾಖೆಯ ರಾಜೇಶ್ ಜಿ, ಕಸಾಪ ಕೇರಳ ಘಟಕದ ಅಧ್ಯಕ್ಷ ಎಸ್ ಯು ಭಟ್ ಮತ್ತಿತರರು ಭಾಗವಹಿಸಲಿದ್ದಾರೆ.
ಉತ್ಸವದಲ್ಲಿ ಗಡಿನಾಡಿನ ಭಾಷೆ, ಶಿಕ್ಷಣದ ಸವಾಲುಗಳ ಕುರಿತು ವಿಚಾರಗೋಷ್ಠಿ, ಗಡಿನಾಡಿನ ಸಾಹಿತ್ಯ ಪರಂಪರೆ ಕುರಿತು ಉಪನ್ಯಾಸ, ಬಹುಭಾಷಾ ಕವಿಗೋಷ್ಠಿ, ಗಡಿನಾಡಿನ ಸಾಂಸ್ಕೃತಿಕ ಸಾಮರಸ್ಯದ ಕಥನಗಳು ಎಂಬ ಸಂವಾದ ಗೋಷ್ಠಿಗಳು ನಡೆಯಲಿದೆ. ಇದರಲ್ಲಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ವಾಂಸರು, ಕವಿಗಳು ಭಾಗವಹಿಸಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭದಲ್ಲಿ ವಿದ್ವಾಂಸರಾದ ಪ್ರೊ.ಎ.ವಿ ನಾವಡ ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಗಡಿನಾಡಿನ ಸಾಹಿತ್ಯ, ಚಳವಳಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಐವರು ಮಹನೀಯರನ್ನು ಗೌರವಿಸಲಾಗುವುದು. ರಮಾನಂದ ಬನಾರಿ, ಮಲಾರ್ ಜಯರಾಮ ರೈ, ಡಾ.ಪ್ರಮೀಳಾ ಮಾಧವ, ಬಿ.ಎಸ್ ಹಸನಬ್ಬ ಅಮ್ಮೆಂಬಳ, ಪುರುಷೋತ್ತಮ ಪೆರ್ಲ ಇವರನ್ನು ಸನ್ಮಾನಿಸಲಾಗುವುದು. ಪ್ರೊ. ಎಂ ಬಿ ಪುರಾಣಿಕ್ ಸನ್ಮಾನಿಸಲಿದ್ದಾರೆ. ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ಉತ್ಸವದಲ್ಲಿ ಕನ್ನಡ ಗೀತೆಗಳ ಗಾಯನ, ನೃತ್ಯ ಸಂಭ್ರಮ, ಗಡಿ ಪ್ರದೇಶದ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಾ. ಎಂ.ಪಿ. ಶ್ರೀನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರತಿಕಾಗೋಷ್ಠಿಯಲ್ಲಿ ಗಡಿನಾಡ ಕನ್ನಡ ಉತ್ಸವ ಸಮಿತಿ, ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷರು ಗಡಿ ಉತ್ಸವ ಸಮಿತಿ ಗೌರವಾಧ್ಯಕ್ಷ ಅರಿಬೈಲ್ ಗೋಪಾಲ ಶೆಟ್ಟಿ, ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ, ಗಡಿ ಪ್ರದೇಶ ಅಭಿವೃದ್ಧಿ ಸಮಿತಿ ಸಮನ್ವಯಕಾರ ಸುಬ್ಬಯ್ಯ ಕಟ್ಟೆ, ಗಡಿ ಉತ್ಸವ ಸಮಿತಿy ಸಂಯೋಜಕ ಹಾಗೂ ಸಂಚಾಲಕ ಜಿ.ವೀರೇಶ್ವರ ಭಟ್ ಕರ್ಮರ್ಕರ್ ಗಂಗೇನೀರು, ಕಾಸರಗೋಡಿನ ಕನ್ನಡ ಹೋರಾಟಗಾರ ಪ್ರೊ.ಎ ಶ್ರೀನಾಥ್ ಇವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ