ಬೆಂಗಳೂರು: ಬೆಂಗಳೂರಿನಲ್ಲಿ ಪ್ರಥಮ ವಿಶ್ವ ಕನ್ನಡ ಕಲಾ ಸಮ್ಮೇಳನವು ಭಾನುವಾರ (ಆ.20) ನಡೆಯಿತು. ಹೆಬ್ಬಾಳದ ಅಲ್ಯುಮ್ನಿ ಎಸೋಸಿಯೇಶನ್ ಸಭಾ ಭವನದಲ್ಲಿ ಹತ್ತು ಹಲವಾರು ಸಾಂಸ್ಕೃತಿಕ ಮೇಳಗಳ ಜೊತೆಗೆ ಹಿರಿ ಕಿರಿಯ ಗಜಲ್ ಕವಿಗಳ ಅಂತಾರಾಜ್ಯ ಮಟ್ಟದ ಗಜಲ್ ಕವಿಗೋಷ್ಠಿ ಕೂಡ ನಡೆಯಿತು. ಪ್ರಸಿದ್ಧ ಗಜಲ್ ಸಾಹಿತಿ ಸಿದ್ಧರಾಮ ಹೊನಕಲ್ ರವರು ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಈ ಸಮಾರಂಭವನ್ನು ಸುಮಂಗಲೀ ಸೇವಾಶ್ರಮದ ಮಾತೆ ಡಾ. ಎಸ್.ಜಿ ಸುಶೀಲಮ್ಮ ಉದ್ಘಾಟಿಸಿದರು. ಕನ್ನಡ ಕುವರ ಅಶೋಕ್ ಕುಮಾರ್ ಅವರು ಸರ್ವಾಧ್ಯಕ್ಷರಾಗಿ ಕನ್ನಡದ ವಿಶ್ವವ್ಯಾಪಿತ್ವವನ್ನು ಕೊಂಡಾಡಿದರು. ನಗರ ಪಾಲಿಕೆಯ ಎಂ ಆನಂದ್ ಕುಮಾರ್, ಗೌರವಾಧ್ಯಕ್ಷೆ ಎ ಶೈಲಜಾ ಬಾನು, ಕೃಷಿ ವಿಶ್ವ ವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಡಾ ಹೆಚ್ ಎಲ್ ಹರೀಶ್, ಚಲನಚಿತ್ರ ನಟಿ ಗಿರಿಜಾ ಲೋಕೇಶ್ ಮತ್ತಿತರರು ಸಮಯೋಚಿತವಾಗಿ ಮಾತನಾಡಿದರು.
ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ ಸುರೇಶ್ ನೆಗಳಗುಳಿ ಗಜಲ್ ಗೋಷ್ಠಿಯ ಚಾಲನೆ ನೀಡಿ ಈ ರೀತಿಯ ಗೋಷ್ಠಿಗಳಿಂದ ಹಲವು ಕವಿಗಳ ಸ್ನೇಹ ಸಮ್ಮಿಲನವೂ ಆಗುತ್ತದೆ ಎಂದು ಸ್ವರಚಿತ ಗಜಲ್ ವಾಚಿಸಿದರು.
ಹಾ.ಮ.ಸತೀಶ, ಅನಸೂಯಾ ಸಿದ್ಧರಾಮ, ಶೈಲಶ್ರೀ, ಶಶಿಧರ, ವಿದ್ಯಾವತಿ ಕಂಕಲಗಿ, ಸಾವಿತ್ರಮ್ಮ, ಓಂಕಾರ್, ಸಾವನ್ ಜೆ, ನಾರಾಯಣ ಸ್ವಾಮಿ, ಕಮಲಾಕ್ಷಿ ಕೌಜಲಗಿ, ಶೈಲಜಾ ಬಾಬು, ಅನ್ನಪೂರ್ಣ ಹಿರೇಮಠ,ಮಮತಾ ಎಚ್ ವಿ.ಶರಣಯ್ಯ, ಪಾರ್ವತಿ, ವಿಜಯ ನಿರ್ಮಲ ಮುಂತಾದವರು ಕ್ರಮವಾಗಿ ವಾಚಿಸಿದರು.
ಸಿದ್ಧರಾಮ ಹೊನ್ಕಲ್ ಮಾತನಾಡುತ್ತಾ, ಹಲವು ಬಗೆಯ ಗಜಲ್‌ಗಳು ಹಲವು ಭಾವವನ್ನು ಪ್ರಕಟ ಪಡಿಸುವುದರಿಂದ ಬೌದ್ಧಿಕ ಮಟ್ಟದ ಪೋಷಣೆಯಾಗುತ್ತದೆ. ಹಲವರ ಜೊತೆಗೆ ಸಂಪರ್ಕವೂ ವರ್ಧಿಸುತ್ತದೆ. ಬರೆಯುವುದು ಮಾತ್ರವಲ್ಲದೆ ಬಿತ್ತರಿಸುವುದೂ ಒಂದು ಕಲೆ ಎನ್ನುತ್ತಾ ಕನ್ನಡದಲ್ಲೂ ಗಜಲ್ ಕಾವ್ಯ ವರ್ಧನೆಯಾಗುವುದಕ್ಕೆ ಹರ್ಷ ವ್ಯಕ್ತ ಪಡಿಸಿ ತಮ್ಮಗಜಲ್ ವಾಚಿಸಿದರು.
ಕನ್ನಡ ಚಳುವಳಿ ಮುಖಂಡ ಪಾಲನೇತ್ರ ಮತ್ತು ಕಾ.ವೆಂ. ಶ್ರೀನಿವಾಸ ಮೂರ್ತಿಯವರು ಸದಾಶಯ ನುಡಿದರು. ಚಿತ್ರನಟ ಲೋಕೇಶ್ ಹಾಗೂ ಸಿ.ಆರ್ ಸಿಂಹ ಸ್ಮಾರಕ ಪ್ರಶಸ್ತಿಗಳು ಮತ್ತು ಸಿದ್ಧಲಿಂಗ ಶ್ರೀ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಜಲ್ ಕವಿಗಳನ್ನು ಹಾರ, ಶಾಲು ಸಹಿತವಾಗಿ ಪುರಸ್ಕರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ