ಜೀವನವೆಂಬುದು ಗೊತ್ತಿಲ್ಲದ ಜಾಗದ ಕಡೆಗೆ ನಡೆಸುವ ಸುಂದರ ಪ್ರಯಾಣ! ಇಲ್ಲಿ ತಲುಪುವ ಜಾಗಕ್ಕಿಂತ ದಾರಿಯನ್ನು ಅನುಭವಿಸುವುದೇ ಜಾಣತನ. ಈ ಸುಧೀರ್ಘ ಪ್ರಯಾಣದಲ್ಲಿ ನಮ್ಮ ಬಸ್ ಏರಿ ಇಳಿದುಹೋಗುವವರು ಹಲವರು. ನಮ್ಮ ಮನಸ್ಸಲ್ಲಿ ಜಾಗ ಪಡೆಯುವವರು ಕೆಲವರು ಮಾತ್ರ. ಹೆಚ್ಚಿನ ಬಾರಿ ಅವರು ನಮ್ಮ ಸ್ನೇಹಿತರಾಗಿರುತ್ತಾರೆ!
ಅಪರಿಚಿತರಾಗಿದ್ದು ಪರಿಚಿತರಾಗಿ, ಗೆಳೆಯರಾಗಿ, ಪ್ರಾಣ ಸ್ನೇಹಿತರಾಗಿ, ಒಮ್ಮೊಮ್ಮೆ ನಮಗೆ ಎಲ್ಲವೂ ಆಗಿಬಿಡುವ ಅವರು ನಮ್ಮ ಪ್ರಯಾಣವನ್ನು ಮತ್ತಷ್ಟು ಸುಂದರವಾಗಿಸುತ್ತಾರೆ. ಅವರೊಂದಿಗಿನ ತರಲೆ, ತುಂಟಾಟ, ಜಗಳ, ಮುನಿಸು ಎಲ್ಲವೂ ಎಲ್ಲವೂ ಚೆಂದವೇ. ಕೆಲವೊಮ್ಮೆ ಅವರೇ ನಮಗೆ ನೋವು ತರಿಸಬಹುದು, ನಮ್ಮನ್ನು ಹತಾಶರನ್ನಾಗಿಸಬಹುದು. ಆದರೆ ಅದೂ ಒಂದು ಪಾಠ, ಮರೆಯಬಾರದ ಅಥವಾ ಮರೆಯಲಾಗದ ನೆನಪು.
ಸ್ನೇಹಕ್ಕೂ ಕಾಲೇಜು ಜೀವನಕ್ಕೂ ಬಿಟ್ಟಿರಲಾರದ ಸಂಬಂಧ. ಅಲ್ಲಿ ʼಸೀನಿಯರ್ಸ್ʼ ರೂಪದಲ್ಲಿ ಬಂದು ಏನನ್ನೋ ಕಲಿಸಿ ಬಂದಷ್ಟೇ ಹೋಗುವವರು ಮನಸ್ಸಲ್ಲಿ ಮಾತ್ರ ಸದಾ ಉಳಿದುಬಿಡುತ್ತಾರೆ. ನಾವು ಅಣ್ಣ., ಅಕ್ಕ ಎಂದು ಕರೆಯುವಾಗ ನಮ್ಮವರೇ ಎನ್ನುವ ಭಾವನೆ. ನಮಗೆಲ್ಲಾ ನೋವಾದಾಗ ಅವರು ಅದಕ್ಕೆ ಸ್ಪಂದಿಸುತ್ತಾ ಹಾಗೂ ಅವರ ಸಂತೋಷ -ಕಷ್ಟಗಳಲ್ಲಿ ನಾವೂ ಪಾಲುದಾರರಾಗಿರುವುದು ನಮ್ಮ ಪ್ರಯಾಣ ಇನ್ನೂ ನಿಧಾನವಾಗಿದ್ದರೆ ಎಷ್ಟು ಚೆನ್ನಾತಿತ್ತು ಅನ್ನಿಸುವಂತೆ ಮಾಡುತ್ತದೆ!
ಹೌದು, ಬದುಕೆಂಬ ಈ ಬಸ್ ಪ್ರಯಾಣ ಎಲ್ಲೂ ನಿಲ್ಲುವುದಿಲ್ಲ. ಸಂಬಂಧಿಕರು,ಸ್ನೇಹಿತರು ಯಾರೂ ಇಲ್ಲಿ ಶಾಶ್ವತವಲ್ಲ ಎಂದು ಅರಿವಿಗೆ ಬಂದಾಗ, ಎಲ್ಲರನ್ನೂ ಒಂದಲ್ಲಾ ಒಂದು ದಿನ ಬೀಳ್ಕೊಡಬೇಕು ಎಂದು ನೆನೆಯುವಾಗಲೇ ಹೃದಯ ತುಂಬಿ ಕಣ್ಣಿನ ಕಟ್ಟೆ ಒಡೆಯುತ್ತದೆ. ಆದರೆ ಅದೇ ಜೀವನ! ಇಲ್ಲಿ ಅತಿಯಾಸೆ ಬೇಡ. ನಮ್ಮೊಂದಿಗೆ ಒಂದಷ್ಟು ದೂರ ದಿನ ಬಂದು ಪ್ರಯಾಣವನ್ನು ಹಗುರಾಗಿಸುವವರು, ನೆನಪಲ್ಲಿ ಉಳಿದು ಕಾಡುವ ಸ್ನೇಹಿರರೇ ನಮ್ಮ ಆಸ್ತಿ. ಸಂಬಂಧಗಳು ಕ್ಷಣಿಕವಿರಬಹುದು, ಆದರೆ ನೆನಪುಗಳು ಶಾಶ್ವತ.
-ರಮಿತ. ರೈ
ದ್ವಿತೀಯ ಬಿ ಎ
ವಿ ವಿ ಕಾಲೇಜು ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ