ಸ್ನೇಹದ ಬೆಸುಗೆಯ ಬಂಧ, ಬಾಳಿನಲ್ಲಿ ಬೀರುವುದು ಸುಗಂಧ. ಬಾಲ್ಯವನ್ನು ನೆನಪಿಸಿಕೊಂಡರೆ ಮೊದಲು ನೆನಪಾಗುವುದೇ ನಮ್ಮ ತುಂಟಾಟ, ತರಲೆಗಳು, ತಿಂದ ಪೆಟ್ಟುಗಳು… ಈ ಅಮೂಲ್ಯ ನೆನಪುಗಳಲ್ಲಿ ನಕ್ಷತ್ರಗಳಂತೆ ಹೊಳೆಯುವವರೇ ಸ್ನೇಹಿತರು.
ಊರಲ್ಲಿ ಜಾತ್ರೆಯ ಸಂಭ್ರಮ ಯಕ್ಷಗಾನ ಬಯಲಾಟವನ್ನು ಸವಿಯಲು ಗೆಳೆಯರ ಜೊತೆಗೂಡಿ ಹೋಗುತ್ತಿದ್ದೆ. ಪ್ರಸಂಗವನ್ನು ಸವಿಯುತ್ತಾ ಸಿಗುತ್ತಿದ್ದ ಚಟ್ಟಂಬಡೆಗಾಗಿ ನಮ್ಮ ಕೋಳಿಜಗಳ ಯಾವತ್ತೂ ಇರುತ್ತಿತ್ತು. ಕೆಂಪು ಕಣ್ಣಿನ ಅಸುರ ವೇಷವು ನನ್ನನ್ನೇ ದಿಟ್ಟಿಸಿ ನೋಡುವಾಗ ಭಯವಾದದ್ದು ನಿಜ. ಕೆಲವು ಗೆಳೆಯರು ನಿದ್ರೆಯ ಮಂಪರಿನ ಹೋರಾಟದಲ್ಲಿ ನನ್ನ ಭುಜವೇ ಆಸರೆ ಆಗಿತ್ತು. ನವರಾತ್ರಿ ದಿನಗಳಲ್ಲಿ ನವದಿನವೂ ದೇವಾಲಯದಲ್ಲಿ ಭಜನೆಯನ್ನು ಮಾಡಿ ರಾತ್ರಿ ಜೊತೆಯಲ್ಲಿ ಕುಳಿತು ಊಟ ಮಾಡಿ ಹರಟೆ ಹೊಡೆದು ಸುಖ-ಕಷ್ಟಗಳನ್ನು ಹಂಚಿಕೊಳ್ಳುವಾಗ ಎಷ್ಟೊಂದು ಖುಷಿ. ತರಗತಿಯಲ್ಲಿ ಹೀಗಾಯ್ತು ಹಾಗಾಯ್ತು, ಹೀಗಾಗಬೇಕಿತ್ತು ಎನ್ನುವ ಗೆಳೆಯರ ಮಾತಿಗೆ ಕಿವಿಯಾಗಿ ಆಗಸವೇ ಚಪ್ಪರಹಾಕಿ ಕಾಯುತ್ತಿದ್ದಂತಿತ್ತು.
ಬೇಸಿಗೆ ರಜೆಯಲ್ಲಿ ಐಸ್ ಕ್ಯಾಂಡಿಯ ಮಜಾವನ್ನು ಸವಿಯುತ್ತಾ ಕ್ರಿಕೆಟ್ ಆಟವನ್ನು ಆಡುತ್ತಾ ಸೋತರೂ ಗೆದ್ದರೂ ಅದನ್ನು ಸಮನಾಗಿ ಸ್ವೀಕರಿಸುತ್ತಾ ಆ ದಿನಗಳನ್ನು ಕಳೆಯುತ್ತಿದ್ದೆವು. ಮೈದಾನ ಇತ್ತಾದ್ರೂ ಅಲ್ಲಿ ಸಂಜೆ ಮಾತ್ರ ಆಡುವುದು ಸಾಮಾನ್ಯವಾಗಿತ್ತು. ಉಳಿದ ಹೊತ್ತಲ್ಲಿ ನಮ್ಮನೆ ಅಂಗಳವೇ ಆಟದ ಮೈದಾನವಾಗಿತ್ತು. ಜಾತ್ರೆಯ ಸಮಯದಲ್ಲಿ ಮನೆಯಲ್ಲಿ ಕಾಡಿ ಬೇಡಿ ಒಂದಷ್ಟು ಚಿಲ್ಲರೆ ನಾಣ್ಯ ಸಂಗ್ರಹಿಸಿ ಐಸ್ ಕ್ಯಾಂಡಿಯನ್ನು ಪಡೆದು ಸವಿಯುವಾಗ ಎಷ್ಟೊಂದು ಖುಷಿ. ಈ ಪಟ್ಟಿಯಲ್ಲಿ ಬೊಂಬಾಯಿ ಮಿಠಾಯಿಗೆ ವಿಶೇಷ ಸ್ಥಾನ!
ಇನ್ನೂ ಮಳೆಗಾಲ ಬಂತಂದರೆ ಸಾಕಿತ್ತು .ಊರಲ್ಲಿ ಹರಿಯುತ್ತಿದ್ದ ನದಿಯ ಪಕ್ಕದ ತೋಡಿನಲ್ಲಿ ದೋಣಿಯ ಸಾಲುಗಳನ್ನು ಬಿಡುತ್ತಿದ್ದೆವು. ಶಾಲೆಯ ಆರಂಭದ ದಿನಗಳಲ್ಲಿ ಶಾಲೆಗಳಿಗೆ ಹೋಗಲು ಉತ್ಸಾಹವೇ ಇರದು. ಆದರೆ ಶಾಲೆಗೆ ನಡೆದುಕೊಂಡು ಹೋಗುವ ದಾರಿಯ ಮದ್ಯೆ ಗೆಳೆಯರೊಂದಿಗೆ ಸೇರಿ ಮಾಡಿದ ಗಮ್ಮತ್ತು ತುಸು ಹೆಚ್ಚಿತ್ತು. ಸ್ನೇಹಿತರ ನಗುವಿನ ಆಲಾಪನೆ, ಅವರ ಕಥೆಗಳ ಬಿತ್ತನೆ, ಆ ನಡಿಗೆಯ ಸಂತಸಕ್ಕೆ ಪುಷ್ಟಿ ನೀಡುತ್ತಿತ್ತು. ಆ ಮಾರ್ಗವಾಗಿ ನಡೆವಾಗ ಇಂದಿಗೂ ಆ ದಿನಗಳು ಕಣ್ತುಂಬಿ ಬರುತ್ತವೆ.
ಮನದ ನೋವನ್ನು ಸ್ನೇಹಿತರ ಜೊತೆಯಲ್ಲಿ ಹಂಚಿಕೊಳ್ಳುವಾಗ ಏನೋ ಒಂಥರಾ ಉಲ್ಲಾಸ. ಬಾಲ್ಯದಲ್ಲಿ ನಡೆದ ಸಣ್ಣ ಸಣ್ಣ ಸಂಚಿಕೆಯನ್ನು ಪ್ರಸ್ತುತ ಗೆಳೆಯರೊಂದಿಗೆ ಹೇಳಿಕೊಳ್ಳುವಾಗ ಆ ಬಾಲ್ಯ ಮತ್ತೆ ಬರಬಾರದೇ ಅನಿಸುತ್ತದೆ.
ಅಳಿದುಳಿದ ಭಾವನೆಗಳಿಗೆ ಮರು ಜೀವ ತುಂಬುವ ಆ ಸ್ಥಳಗಳು, ಶಾಲಾ ಗುಂಪಿನ ಭಾವಚಿತ್ರಗಳು, ಮಾವಿನ ಮರ, ಗಣೇಶೋತ್ಸವ, ನಾವು ಓಡಾಡಿದ ಪರೀಕ್ಷೆ ಬಸ್ಸು, ಕಿಣಿ ಕಿಣಿ ಐಸ್ ಕ್ಯಾಂಡಿ ಮಾವ, ತೆಂಗಿನ ಹೆಡೆ…ಹೀಗೆ…
ಇವುಗಳನ್ನು ನೋಡುವಾಗ ಬಾಲ್ಯವೆನ್ನುವ ಆಗಸವು ನೆನಪುಗಳನ್ನು ಮೋಡಗಳಿಂದ ಅನುಭವ ಎನ್ನುವ ಮಳೆಯನ್ನು ಮನಸು ಎನ್ನುವ ಭುವಿಯ ಮೇಲೆ ಮುದ್ದಾಗಿ ಉದುರುವಾಗ ಸಂತಸದ ಚಿಗುರು ಹುಲುಸಾಗಿ ಬೆಳೆಯುತ್ತದೆ. ಬಾಲ್ಯದ ಸವಿಯಲ್ಲಿ ಸುವರ್ಣಾಕ್ಷರಗಳೇ ನನ್ನ ಗೆಳೆಯರು. ಅವರ ಸ್ನೇಹದ ಕಾಣಿಕೆ ಪ್ರೀತಿಯ ಆರೈಕೆ ನನ್ನೊಳಗೆ ಶಾಶ್ವತ.
-ಗಿರೀಶ್ ಪಿ.ಎಂ
ಪ್ರಥಮ ಎಂ.ಎ, ಇತಿಹಾಸ ಮತ್ತು ಪುರಾತತ್ವಶಾಸ್ತ್ರ
ವಿ.ವಿ ಕಾಲೇಜು ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ