ಭಾರತ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನಗಳಿಸಿದವರು ಮರಾಠರು. ತಮ್ಮ ಅಪ್ರತಿಮ ದೇಶಭಕ್ತಿ, ಧೈರ್ಯ, ಸಾಹಸ, ಸಮಯ ಪ್ರಜ್ಞೆ ಮತ್ತು ತಮ್ಮದೇ ಆದ ಗೆರಿಲ್ಲ ಮಾದರಿಯ ಯುದ್ಧಗಳಿಗೆ ಹೆಸರಾದವರು. ತಾಯಿನಾಡಿಗಾಗಿ ತಮ್ಮ ಪ್ರಾಣವನ್ನು ಅರ್ಪಣೆಗೈಯಲು ಹಿಂಜರಿಯದ ಅಸೀಮ ದೇಶಪ್ರೇಮಿಗಳಾದ ಮರಾಠರ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಂತರ ಚಿರಸ್ಥಾಯಿಯಾಗಿ ಉಳಿದ ಹೆಸರು ...ತಾನಾಜಿ.
ತಾನಾಜಿಯು ಶಿವಾಜಿ ಮಹಾರಾಜನ ಸೇನಾಪತಿಯಾಗಿದ್ದನು. ಇದಕ್ಕೂ ಪೂರ್ವದಲ್ಲಿ ಅವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದರು. ತಾನಾಜಿ ಮಾಲುಸರೆಯ ತಂದೆ ಕಾಳೋಜಿ ಓರ್ವ ಉತ್ತಮ ಕತ್ತಿ ವರಸೆ ಪಟುವಾಗಿದ್ದು ಮಗನಿಗೆ ಕತ್ತಿವರಸೆಯನ್ನು ಹೇಳಿಕೊಡುವುದರ ಜೊತೆ ಜೊತೆಗೆ ದೇಶಭಕ್ತಿಯ ಪಾಠವನ್ನು ರಕ್ತದ ಕಣಕಣದಲ್ಲಿ ತುಂಬಿದನು. ಯುದ್ಧವೊಂದರಲ್ಲಿ ತಂದೆಯ ಮರಣಾನಂತರ ತಾನಾಜಿಯು ತಂದೆಯ ಖಡ್ಗವನ್ನು ಹಿಡಿದು ಸೈನ್ಯ ಪ್ರವೇಶಿಸಿ ಮುಂದೆ ಅಸೀಮ ದೇಶಭಕ್ತ ಸೇನಾಪತಿಯಾದನು.
ಒಂದು ದಿನ ಶಿವಾಜಿಯ ತಾಯಿ ರಾಜಮಾತೆ ಜೀಜಾಬಾಯಿಯು ಕೊಂಡಾಣ(ಶಿವಗಡ)ದ ಕೋಟೆಯ ಮೇಲೆ ನಮ್ಮ ಕೇಸರಿ ಧ್ವಜ ಹಾರಾಡಬೇಕೆಂಬ ಆಶಯವನ್ನು ಪುತ್ರ ಶಿವಾಜಿಯ ಮುಂದೆ ವ್ಯಕ್ತಪಡಿಸಿದಾಗ ಶಿವಾಜಿಯು ಕೊಂಡಾಣ ಕೋಟೆಯನ್ನು ಗೆಲ್ಲುವ ತಾಂತ್ರಿಕ ನೈಪುಣ್ಯ ಕಲೆಗಾರಿಕೆಯು ಮರಾಠರ ಸೈನ್ಯದಲ್ಲಿ ಕೇವಲ ತಾನಾಜಿಗಿದೆ, ಆದರೆ ಆತ ತನ್ನ ಪುತ್ರ ರಾಯಬಾನ ಮದುವೆಯ ತಯಾರಿಯಲ್ಲಿದ್ದಾನೆ ಎಂದು ಹೇಳಿದನು.
ಇತ್ತ ತನ್ನ ಮಗನೊಂದಿಗೆ ರಾಜಧಾನಿಗೆ ಆಗಮಿಸಿದ ತಾನಾಜಿಯು ಇನ್ನೋರ್ವ ಅರಮನೆಯ ಸೇವಾ ವಲಯದ ವ್ಯಕ್ತಿಯಿಂದ ರಾಜ ಮಾತೆಯ ಆಶಯವನ್ನು ಅರಿತು ಶಿವಾಜಿಯ ಬಳಿ ಸಾರಿ ತನ್ನನ್ನು ಕೊಂಡಾಣ ಕೋಟೆಯನ್ನು ವಶಪಡಿಸಿಕೊಳ್ಳಲು ಕಳುಹಿಸಬೇಕೆಂದು ಕೋರಿಕೊಂಡನು. ಮನೆಯಲ್ಲಿ ಮಗನ ಮದುವೆ ಇಟ್ಟುಕೊಂಡು ಹೇಗೆ ಹೋಗುವೆ ಎಂಬ ಪ್ರಶ್ನೆಗೆ ನನ್ನ ಮಗನಿಗೆ ನನ್ನಂತೆ ಶಿವಾಜಿ ಮಹಾರಾಜರು ಕೂಡ ತಂದೆಯೇ ನನ್ನ ಮಗನ ಮದುವೆಯನ್ನು ಶಿವಾಜಿ ಮಹಾರಾಜರು ಮಾಡಲಿ ನಾನು ಕೊಂಡಾಣದ ಮದುವೆಯನ್ನು ಮಾಡುತ್ತೇನೆ ಎಂದು ಹೇಳಿ ತಾನಾಜಿ ರಾಜಮಾತೆ ಜೀಜಾಬಾಯಿಯವರ ಆಶೀರ್ವಾದವನ್ನು ಪಡೆದು ತನ್ನ ಸೈನ್ಯವನ್ನು ಒಗ್ಗೂಡಿಸಿಕೊಂಡು ತನ್ನ ಪತ್ನಿ ಮತ್ತು ಮಗನಿಗೆ ವಿಷಯವನ್ನು ತಿಳಿಸಿ ಕೊಂಡಾಣದೆಡೆಗೆ ಪಯಣ ಬೆಳೆಸಿದನು.
ಇತ್ತ ಮೊಘಲ ದೊರೆಯಿಂದ ಪ್ರೇರೇಪಿತನಾಗಿ ಕೊಂಡಾಣವನ್ನು ಈಗಾಗಲೇ ವಶಪಡಿಸಿಕೊಂಡ ದುರಾಚಾರಿಯಾದ ಉದಯಭಾನ್ ಸಿಂಗ್ ಎಂಬ ಸಾಮಂತ ರಾಜನು ತಾನಾಜಿಯ ಬರುವಿಕೆಗಾಗಿ ಕಾದು ಕುಳಿತಿದ್ದನು. ಕೋಟೆ ಕೋಟೆಗಳನ್ನೇ ದ್ವಂಸ ಮಾಡುವ ಅತಿ ದೊಡ್ಡ ತೋಪೊಂದನ್ನು ಮೊಘಲ ನವಾಬನಿಂದ ಕಾಣಿಕೆಯಾಗಿ ಪಡೆದಿದ್ದ ಉದಯಭಾನಸಿಂಗ ಶಿವಾಜಿಯು ವಾಸವಾಗಿದ್ದ ರಾಜಧಾನಿಯ ಕೋಟೆಯನ್ನು ಒಡೆಯಲು ಸನ್ನದ್ಧನಾಗಿದ್ದನು.
ಶಿವಗಡದ ಕೋಟೆಯು ದುರ್ಗಮ ಬೆಟ್ಟದಲ್ಲಿದ್ದು ಕಡಿದಾದ ಆ ಬೆಟ್ಟವನ್ನು ಏರಲು ಅಪಾರ ನೈಪುಣ್ಯತೆ ಮತ್ತು ಚಾಕಚಕ್ಯತೆಗಳು ತಾನಾಜಿಯ ಸೈನ್ಯಕ್ಕೆ ಇತ್ತು. ತಾನಾಜಿ ತಮ್ಮ ಸೈನ್ಯದ ಈ ಸಾಹಸಿ ಕಾರ್ಯಕ್ಕೆ ಅವರು ಆಯ್ದುಕೊಂಡಿದ್ದು ನಟ್ಟಿರುಳಿನ ರಾತ್ರಿಯನ್ನು. ಮಿಂಚು ಗುಡುಗಿನ ಭರಾಟೆಯ ನಡುವೆ ತಾನಾಜಿ ತನ್ನ ಸೈನ್ಯವನ್ನು ಮೂರು ವಿಭಾಗಗಳನ್ನಾಗಿ ಮಾಡಿ ಕೋಟೆಯ ಎರಡು ದ್ವಾರ ಬಾಗಿಲುಗಳ ಮೂಲಕ ದಾಳಿ ಮಾಡಲು ಯೋಜಿಸಿದನಲ್ಲದೆ ತಾನು ನೇರವಾಗಿ ಕೊಂಡಾಣದ ದುರ್ಗಮ ಬೆಟ್ಟವನ್ನು ತನ್ನ ಪಡೆಯೊಂದಿಗೆ ಏರಲಾರಂಭಿಸಿದನು. ಅಂತಿಮವಾಗಿ ಕೋಟೆಯನ್ನು ಪ್ರವೇಶಿಸಿದ ಮರಾಠರು ಮತ್ತು ಮೊಘಲರ ಸೈನ್ಯದ ನಡುವೆ ಭೀಕರ ಕಾಳಗ ನಡೆಯಿತು. ಉದಯಭಾನ್ ಸಿಂಗನ ಖಡ್ಗದಿಂದ ಕೈಯನ್ನು ಕಳೆದುಕೊಂಡ ತಾನಾಜಿಯು ಮತ್ತೆ ಕೈಗೆ ಬಟ್ಟೆಯನ್ನು ಸುತ್ತಿಕೊಂಡು ಹೋರಾಟ ನಡೆಸಿ ಅಂತಿಮವಾಗಿ ಆತನ ತೋಪಿನೊಂದಿಗೆ ಆತನನ್ನು ಕಟ್ಟಿ ಕೋಟೆಯಿಂದ ಕೆಳಭಾಗಕ್ಕೆ ಆತನನ್ನು ದಬ್ಬಿದನು. ಆದರೆ ಕೊನೆಯ ಕ್ಷಣದಲ್ಲಿ ಉದಯಭಾನ್ ಸಿಂಗನ ಖಡ್ಗದಿಂದ ಆದ ಗಾಯದಿಂದಾಗಿ ತಾನಾಜಿಯ ವೀರ ಮರಣವಾಯಿತು.
ಇತ್ತ ಮನೆಯಲ್ಲಿ ಮಗನ ಮದುವೆ ಸಂಭ್ರಮದಿಂದ ಜರುಗಿತು ಅತ್ತ ತಂದೆಯ ಮರಣವಾಗಿತ್ತು. ಮಗನ ಮದುವೆಯ ದಿಬ್ಬಣ ಹೊರಟರೆ ಅತ್ತೆ ತಂದೆಯ ಶವಯಾತ್ರೆ ಸೊಸೆಯ ಕೊರಳಿಗೆ ತಾಳಿ ಬಿದ್ದರೆ, ಅತ್ತೆ ತಾಳಿಯನ್ನು ಬಿಚ್ಚಿಟ್ಟಳು. ಇದಲ್ಲವೇ ವಿಧಿ ವಿಪರ್ಯಾಸ.
ವ್ಯಾಕುಲಚಿತ್ತನಾಗಿದ್ದ ಶಿವಾಜಿಯ ಮನಸ್ಸು ಕೇಡನ್ನು ಶಂಕಿಸುತ್ತಿತ್ತು, ಕಣ್ಣಿಂದ ನೀರು ಧಾರೆಯಾಗಿ ಹರಿಯುತ್ತಿತ್ತು. ಯುದ್ಧವಾರ್ತೆಯನ್ನು ಹೊತ್ತು ತಂದ ಕುದುರೆ ಸವಾರ ಕೊಂಡಾಣದ ಕೋಟೆ ನಮ್ಮದಾಯಿತು.... ಆದರೆ ಕೆಲವೇ ಕ್ಷಣಗಳ ಮುಂಚೆ ತಾನಾಜಿಯವರ ಬಲಿದಾನವಾಯಿತು ಎಂಬ ವಾರ್ತೆಯನ್ನು ಉಸುರಿದನು. ಕಣ್ಣು ತುಂಬಿಕೊಂಡ ಶಿವಾಜಿ ಮಹಾರಾಜನ ಬಾಯಿಂದ ಬಂದ ಒಂದೇ ಒಂದು ಉದ್ಗಾರ.... "ಘಡ ಆಲಾ ಪರ ಸಿಂಹ ಗೇಲಾ " ಎಂದಾಗಿತ್ತು ಕೋಟೆ ಏನೋ ಬಂತು ಆದರೆ ನಮ್ಮ ಸಿಂಹವನ್ನು ಕಳೆದುಕೊಂಡೆವು ಎಂದು. ತಾನಾಜಿಯಂತಹ ಅಪ್ರತಿಮ ಸಮರಸಿಂಹವನ್ನು ಕಳೆದುಕೊಂಡ ಮರಾಠ ಸೈನ್ಯ ಬಡವಾಯಿತು. ತಾನಾಜಿಯ ಸಮಾಧಿಯನ್ನು ಶಿವಗಡದ (ಕೊಂಡಾಣ) ಕೋಟೆಯಲ್ಲಿ ಮಾಡಿದ ಶಿವಾಜಿ ಮಹಾರಾಜನು ತಾನಾಜಿಯ ಸ್ಮರಣಾರ್ಥ ಆ ಕೋಟೆಗೆ ಸಿಂಹಗಢ ಎಂದು ನಾಮಕರಣ ಮಾಡಿದನು.
ಇಂದಿಗೂ ತಾನಾಜಿಯ ಸಮಾಧಿಯ ಮುಂದೆ ಮರಾಠಿ ಗೀತೆಗಳನ್ನು, ಆತನ ಕುರಿತ ಲಾವಣಿಗಳನ್ನು ಹಾಡುವರು. ಪ್ರತಿದಿನವೂ ತಾನಾಜಿಯ ಸಮಾಧಿಯನ್ನು ಪೂಜಿಸಿ ಆತನ ಹೆಸರಿನಲ್ಲಿ ತೋಪನ್ನು ಹಾರಿಸುವ, ಸಿಡಿಮದ್ದನ್ನು ಹಾರಿಸಿ ಆತನಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸುವರು. ಮಹಾರಾಷ್ಟ್ರ ರಾಜ್ಯದ ಪುಣೆಯಿಂದ ಸ್ವಲ್ಪವೇ ದೂರದಲ್ಲಿರುವ ಸಿಂಹಗಡದ ಕೋಟೆ ಕೇವಲ ಪ್ರೇಕ್ಷಣೀಯ ಸ್ಥಳ ಮಾತ್ರವಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಬಲಿದಾನಗೈದ ಈ ನಾಡು ಕಂಡ ಶ್ರೇಷ್ಠ ಯೋಧನ ಕುರಿತಾದ ಮಾಹಿತಿ ನೀಡುವ ತಾಣವಾಗಿದೆ. ಮತ್ತೊಮ್ಮೆ ಹೇಳುವ ಬನ್ನಿ.... ಇಂಥವರ ಸಂತತಿ ಸಾವಿರವಾಗಲಿ ಎಂದು.
-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ. ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ