ಸ್ವಾತಂತ್ರ್ಯ ಕೊಟ್ಟದ್ದಲ್ಲ..! ಪಡೆದುಕೊಂಡದ್ದು...

Upayuktha
0


ಪ್ಪತ್ತೇಳನೆಯ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ನಿಂತು, ಭವ್ಯ ಭಾರತ ವಿಶ್ವಗುರುವಾಗಿ ವಿಜೃಂಭಿಸುವುದನ್ನು ಕಣ್ಣಾರೆ ಕಂಡಮೇಲೂ, ಒಂದು ಕ್ಷಣವಾದರೂ ದೇಶಾಭಿಮಾನದ ಸಿಂಹಾವಲೋಕನ ಮಾಡಿಕೊಳ್ಳದಿದ್ದರೆ ಈ ಮಣ್ಣಿನಲ್ಲಿ ಜನ್ಮತಳೆದದ್ದು ವ್ಯರ್ಥವೇ ಸರಿ.. ಈ ದಿನದವರೆಗೂ ಭಾರತ ಸಾಮಾಜಿಕ, ರಾಜಕೀಯ, ಆರ್ಥಿಕ ರಂಗಗಳಲ್ಲಿ ಅನೇಕಾನೇಕ ಬದಲಾವಣೆ ಕಂಡಿದೆಯಾದರೂ ಈ ರಾಷ್ಟ್ರಜೀವನದ  ಅಮೃತಸ್ಪರ್ಶ ಅನುಭವಕ್ಕೆ ಬರುತ್ತಿಲ್ಲ.! ಯಾಕೆಂದರೆ ನಮ್ಮ ಆಂತರ್ಯವನ್ನು ಮುಟ್ಟಿ ಬಡಿದೆಬ್ಬಿಸುವ ಆದರ್ಶ ಚೇತನದ ಅಕ್ಷಯಪಾತ್ರೆ ಬರಿದಾಗಿದೆ ಮತ್ತು ಚಿಂತನೆಗೆ ಗ್ರಹಣ ಹಿಡಿದಿದೆ ಎಂಬುವುದಕ್ಕೆ ಈ ಶೀರ್ಷಿಕೆಗಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ.


ತಿರಂಗವೇರಿದಾಗಿನಿಂದಲೂ ನಾವು ನಮ್ಮವರಿಗೆ "ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು, ಈ ದೇಶದ ಚುಕ್ಕಾಣಿಯನ್ನ ಕೊಟ್ಟು ಹೋದರು" ಎಂದೇ ಹೇಳಿಕೊಂಡು ಬರಲಾಗುತ್ತಿದೆ ಜೊತೆಗೆ ನೈಜ ಇತಿಹಾಸವನ್ನು ಮರೆಮಾಚಿ, ತಿರುಚಿ ದೇಶಾಭಿಮಾನದ ಭಾವನೆ ಮೂಡಿಸಲಾಗುತ್ತಿದೆ ಎಂದರೆ ಇದಕ್ಕಿಂತ ದೊಡ್ಡ ದುರ್ದೈವ ಇನ್ನೊಂದಿಲ್ಲ. 


ನಮ್ಮ ಸ್ವಾತಂತ್ರ್ಯ ಹೋರಾಟ ಮುಖ್ಯವಾಗಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಎಂಬ ಎರಡು ಮಜಲುಗಳಲ್ಲಿ ನಡೆದಿದ್ದರೂ  ನಮ್ಮ ಮನಸ್ಸುಗಳಲ್ಲಿ  ಗಾಢವಾಗಿ ಉಳಿದ ಹೋರಾಟಗಳೆಂದರೆ ಉಪವಾಸ ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗ. ಆದರೆ ದುರ್ವಿಧಿಯೆಂದರೆ ಬ್ರಿಟಿಷರ ಮನವೊಲಿಸದೆ,ಎದೆಗೆ ಎದೆ ಕೊಟ್ಟು ನಿಂತ, ಸೆರೆಮನೆಯಲ್ಲೂ ದೇಶಪ್ರೇಮದ ಕಿಚ್ಚು ಹೆಚ್ಚಿಸಿದ, ವೀರಾಗ್ರಣಿಗಳಿಗೆ ದೇಶದ್ರೋಹದ ಪಟ್ಟ ದೊರೆತದ್ದು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅವರನ್ನು ಮೂಲೆಗುಂಪಾಗಿಸಿದ್ದು  ಸೂರ್ಯ ಚಂದ್ರರಷ್ಟೇ ಸತ್ಯ..!


1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿಸಿ, ಹೋರಾಟದ ದಿಕ್ಕಿಗೆ ಹೊಸ ಭಾಷ್ಯ ಬರೆದದ್ದು ಮಂಗಲ್ ಪಾಂಡೆಯಾದರೂ ಅದಕಿಂತಲೂ ಮುನ್ನ 1837ರಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ  ಸುಳ್ಯದಲ್ಲಿ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ನಡೆದ ಹೋರಾಟದ ತೀವ್ರತೆಯನ್ನು ಈ ದಿವಸ ನಾವೆಷ್ಟು ಮಂದಿ ನೆನಪುಮಾಡಿಕೊಂಡಿದ್ದೇವೆ.1905 ರ ಬಂಗಾಲ ವಿಭಜನೆ  ತೀವ್ರಗಾಮಿಗಳನ್ನು ಪ್ರೇರೆಪಿಸಿದ ಮುಖ್ಯ ಘಟನೆಯಾದರೂ ಅಹಿಂಸಾ ಮಾರ್ಗದಿಂದ ಸ್ವರಾಜ್ಯ ಎಂಬುದು ಹಗಲುಗನಸು ಎಂಬ ತತ್ವ ಸಿದ್ಧಾಂತದೊಂದಿಗೆ ಮುನ್ನಡೆದ ನಾಯಕರ ನೋವುಗಳನ್ನು ಅದೆಷ್ಟು ಬಾರಿ ನಾವು ಮೆಲುಕು ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.?


ಅದೆಷ್ಟೋ ಜೀವಗಳು ಈ ಮಣ್ಣಿಗಾಗಿ ರಕ್ತ ಹರಿಸಿವೆ, ಜೀವನ ಸವೆಸಿವೆ, ಒಂದು ವೇಳೆ ಆ ಬಿಸಿರಕ್ತದ ನಾಯಕರು ಹೋರಾಟಕ್ಕೆ ಇಳಿಯದೇ ಹೋಗಿದ್ದರೆ, ಸ್ವರಾಜ್ಯ ಕನಸಾಗೆ ಉಳಿಯುತ್ತಿತ್ತು.ಬಿಳಿಯರು ಬಿನ್ನಹ ಮನವಿಗಳಿಗೆ ಬಗ್ಗುವವರೇ ಆಗಿರಲಿಲ್ಲ, ಅವರು ಹೇಳಿದಂತೆ ನಾವು ನಡೆದುಕೊಂಡರೆ ಮಾತ್ರ ನಮ್ಮ ಮೇಲೆ ಅವರಿಗೆ ಅನುಕಂಪ ಇರುತಿತ್ತೆ ವಿನಃ ಭಾರತ ಬಿಟ್ಟು ತೊಲಗುವ ಕಿಂಚಿತ್ ಯೋಚನೆಯೂ ಅವರಿಗೆ ಇರಲಿಲ್ಲ.ಯಾವಾಗ ವೀರಾಗ್ರಣಿಗಳ, ವೀರಮಹಿಳೆಯರ  ಹೋರಾಟದ, ತ್ಯಾಗ ಬಲಿದಾನದ ಪರಿಚಯವಾಯಿತೋ,ಸಮಸ್ತ ದೇಶವೇ ಒಂದಾಗಿ ಭಾರತಾಂಬೆಗೆ ಜಯವೆಂದು ಬಂದರೋ, ವಂದೇ ಮಾತರಂ ಘೋಷಣೆಗಳ ಉದ್ಗಾರ ಗಗನಚುಂಬಿಸಿತೋ ಯಾವಾಗ ಬಿಳಿಯರು ಕಟ್ಟಿದ ಸಾಮ್ರಾಜ್ಯ ತರಗೆಲೆಯಂತೆ ಉದುರಲು ಪ್ರಾರಂಭಿಸಿತೋ, ಯಾವಾಗ ಊರುಊರಿನಲ್ಲಿ ಬಲಿದಾನಗಳ ಸಂಖ್ಯೆ ಹೆಚ್ಚತೊಡಗಿತೋ ಆವಾಗಲೇ ದೇಶ ಬಿಟ್ಟು ಚದುರಲು ತೀರ್ಮಾನ ಕೈಗೊಂಡರು."ಸ್ವರಾಜ್ಯ ನನ್ನ ಆ ಜನ್ಮ ಸಿದ್ಧ ಹಕ್ಕು" ಎಂದು ಘೋಷಣೆ ಮೊಳಗಿದಾಗಲೇ ಬಿಳಿಯರ ಕರಿನೆರಳು ಬೆವರತೊಡಗಿತ್ತು.


ಅಮರ ಚೇತನಗಳ ತ್ಯಾಗದ ಹಿಂದೆ,ಬಲವಾಗಿ ಪ್ರೇರಣೆ ನೀಡಿದ್ದು ಭರತ ನೆಲಕೆ ಸಂಬಂಧಿಸಿದ ಸಾಹಿತ್ಯಗಳು ಮತ್ತು ಸಾಹಿತಿಗಳು ದೇಶಪ್ರೇಮದ, ದೇಶಭಕ್ತಿಯ ಅಮೃತ ಸಿಂಚನದ ಭೋರ್ಗರೆತ ಬಿಸಿರಕ್ತವನ್ನು ಮತ್ತಷ್ಟು ಪ್ರೇರೇಪಿಸಿತು.. ಪ್ರಾಣ ಪಣವಿಟ್ಟಾದರೂ ಸರಿಯೇ, ಬಿಳಿಯರ ಹುಟ್ಟಡಗಿಸಲು ದುಂಬಿಗಳಂತೆ ಮುಗಿಬಿದ್ದು ಬಂದರು. ಈ ವೀರಾಗ್ರಣಿಗಳ ಹೋರಾಟದ ದಾರಿಯನ್ನು ಪಟ್ಟಿ ಮಾಡುತ್ತಾ ಹೋದಷ್ಟು ದೇಶಪ್ರೇಮದ ಅಲೆ, ಧುಮ್ಮನೆ ಬಂದು ಮೈಗಪ್ಪಳಿಸುವವು.

ದೇಶಪ್ರೇಮದ ಅಂತಃಕರಣದ ಮುಖ್ಯ ಭಾವವೇ ಸ್ವರಾಜ್ಯ,ಸ್ವಾತಂತ್ರ್ಯ ಪಡೆಯುವುದೇ ಹೊರತು ಸ್ವಾತಂತ್ರ್ಯ ಕೇಳುವುದಾಗಿರಲಿಲ್ಲ.




- ಶಿವಪ್ರಸಾದ್ ಬೋಳಂತೂರು

ವಿ.ವಿ ಕಾಲೇಜು ಮಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top