ಚಿತ್ರ: 1. ಕುಸುಮಾವತಿ ಅವರಿಂದ ಪ್ರಾರ್ಥನೆ | ಚಿತ್ರ 2. ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಮತ್ತು ಉದಯ ಜೈನ್ ಅವರಿಂದ ಆಣೆಪ್ರಮಾಣ
ಉಜಿರೆ: ಸೌಜನ್ಯಳ ತಾಯಿ ಕುಸುಮಾವತಿ ಭಾನುವಾರ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ನೇತ್ರಾವತಿ ಸ್ನಾಘಟ್ಟದಿಂದ ಧರ್ಮಸ್ಥಳದಲ್ಲಿ ಪ್ರವೇಶದ್ವಾರದ ವರೆಗೆ ಶಿವಪಂಚಾಕ್ಷರಿ ಪಠಣದೊಂದಿಗೆ ಪಾದಯಾತ್ರೆಯಲ್ಲಿ ಬಂದು ಬಳಿಕ ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ಬಂದು ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಸೌಜನ್ಯ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಉಗ್ರ ಶಿಕ್ಷೆ ನೀಡಬೇಕು. ತನ್ಮೂಲಕ ಕೊಲೆಯಾದ ಸೌಜನ್ಯ ಆತ್ಮಕ್ಕೆ ಶಾಂತಿ ದೊರಕುವಂತಾಗಬೇಕು ಎಂದು ಕುಸುಮಾವತಿ ಕಣ್ಣೀರು ಸುರಿಸಿ ಅಣ್ಣಪ್ಪಸ್ವಾಮಿ ಪದತಲದಲ್ಲಿ ಪ್ರಾರ್ಥನೆ ಸಲ್ಲಿಸಿ ಕ್ಷಮೆಯಾಚಿಸಿ, ಕಾಣಿಕೆ ಅರ್ಪಿಸಿದರು. ಪ್ರಸಾದ ಸ್ವೀಕರಿಸಿದರು.
ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಮತ್ತು ಉದಯ ಜೈನ್, ಅಣ್ಣಪ್ಪಸ್ವಾಮಿ ಬೆಟ್ಟದ ತಳದಲ್ಲಿ ಪ್ರಾರ್ಥನೆ ಸಲ್ಲಿಸಿ ಸೌಜನ್ಯ ಕೊಲೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಆಣೆಪ್ರಮಾಣ ಮಾಡಿದರು. ತಮ್ಮ ಬಗ್ಯೆ ಅಪಪ್ರಚಾರವಾಗುತ್ತಿದೆ. ನೈಜ ಆರೋಪಿ ಪತ್ತೆಯಾಗಿ ಉಗ್ರಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. ತಾವು ನಿತ್ಯವೂ ಈ ಬಗ್ಯೆ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಧೀರಜ್ ಕೆಲ್ಲ ಮಾತನಾಡಿ ತಾವು ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ. ತಾವು ಯಾವುದೇ ರೀತಿಯ ತನಿಖೆಗೆ ಸಿದ್ಧರಿದ್ದೇವೆ. ತಮ್ಮ ಸಂಸಾರದ ಬಗ್ಯೆಯೂ ಮಾಧ್ಯಮದವರು ಕಾಳಜಿ ವಹಿಸಿ ಅಪಪ್ರಚಾರ ಮಾಡಬಾರದು ಎಂದು ಸಲಹೆ ನೀಡಿದರು.
ಗೊಂದಲದ ವಾತಾವರಣ, ಪೊಲೀಸರೊಂದಿಗೆ ಮಾತಿನ ಚಕಮಕಿ:
ಅಣ್ಣಪ್ಪ ಸ್ವಾಮಿ ಬೆಟ್ಟ ಮತ್ತು ಪ್ರವೇಶದ್ವಾರದ ಬಳಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಲ್ಲದೆ ಭಾನುವಾರವಾದುದರಿಂದ ಭಕ್ತರ ಸಂಖ್ಯೆಯೂ ಅಧಿಕವಾಗಿತ್ತು. ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳದವರೆಗೂ ಬಿಗು ಪೊಲೀಸ್ ಬಂದೋಸ್ತ್ ಮಾಡಲಾಗಿತ್ತು.
ಎಸ್.ಪಿ. ರಿಶ್ಯಂತ್ ಅವರೆ ಉಸ್ತುವಾರಿ ವಹಿಸಿದರು. ಪೊಲೀಸ್ ವ್ಯಾನನ್ನು ಅಣ್ಣಪ್ಪ ಸ್ವಾಮಿ ಬೆಟ್ಟದ ಎದುರು ತಂದು ನಿಲ್ಲಿಸಿದಾಗ ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ವ್ಯಾನನ್ನು ತೆರವುಗೊಳಿಸಿ ಪ್ರವೇಶದ್ವಾರದ ಬಳಿ ನಿಲ್ಲಿಸಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದರು. ಕೊನೆಗೆ ಪೊಲೀಸ್ ವ್ಯಾನನ್ನು ಹೊರಗೆ ಕಳುಹಿಸಿದಾಗ ವಾತಾವರಣ ತಿಳಿಯಾಯಿತು. ಅಂತೂ ಸದ್ಯದ ಮಟ್ಟಿಗೆ ವಾತಾವರಣ ತಿಳಿಯಾಗಿ ಶಾಂತಿ ನೆಲೆಸಿದೆ.
ಆಣೆ ಪ್ರಮಾಣದ ಮಾಡದೆ ಹಿಂತಿರುಗಿದ ಕುಸುಮಾವತಿ:
ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಮತ್ತು ಉದಯ ಜೈನ್ ಅಣ್ಣಪ್ಪ ಸ್ವಾಮಿ ಸನ್ನಿಧಿಯಲ್ಲಿ ತಮ್ಮ ಬಗ್ಯೆ ಮಾಡಿದ ಸುಳ್ಳು ಆರೋಪಗಳ ಬಗ್ಯೆ ಆಣೆ ಪ್ರಮಾಣ ಮಾಡಬೇಕೆಂದು ಕುಸುಮಾವತಿಯವರಿಗೆ ಸವಾಲು ಹಾಕಿದ್ದರೂ, ಅವರು ಪ್ರಾರ್ಥನೆ ಸಲ್ಲಿಸಿ, ಆಣೆ ಪ್ರಮಾಣ ಮಾಡದೆ ಹಿಂದಿರುಗಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ