ಬೆಂಗಳೂರು ಸಮೀಪ ನೇತಾಜಿ ವಿಶ್ವವಿದ್ಯಾಲಯ ಸ್ಥಾಪನೆಗೆ ರೂ‍ಪುರೇಷೆ ಸಿದ್ಧ

Upayuktha
0

ನೇತಾಜಿ ಸುಭಾಶ್ಚಂದ್ರ ಬೋಸ್‌ ಸಂಶೋಧನಾ ಮತ್ತು ಬಹುಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿ ಎಂ. ರಾಜ್ ಕುಮಾರ್ ಅಧಿಕಾರ ಸ್ವೀಕಾರ

ಆರ್‌.ಆರ್.ನಗರದಲ್ಲಿ 40 ಅಡಿ ಎತ್ತರದ ಪ್ರತಿಮೆ ಸ್ಥಾಪನೆಗೆ ನಿರ್ಧಾರ


ಬೆಂಗಳೂರು: ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ತತ್ವ, ಆದರ್ಶಗಳು ಜನರ ನರನಾಡಿಗಳಲ್ಲಿ ಹರಿಯಬೇಕು ಎಂಬ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನೇತಾಜಿ ಸುಭಾಶ್ಚಂದ್ರ ಬೋಸ್‌ ರೀಸರ್ಚ್‌ ಆ್ಯಂಡ್‌ ಮಲ್ಪಿ ಡೆವಲಪ್‌ಮೆಂಟ್‌ ಟ್ರಸ್ಟ್‌ ರಜತ ಮಹೋತ್ಸವ ಆಚರಿಸಿ, ಸ್ವರ್ಣ ಮಹೋತ್ಸವದತ್ತ ಹೆಜ್ಜೆ ಇಟ್ಟಿದೆ. ನೇತಾಜಿ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಎಂ.ರಾಜ್‌ಕುಮಾರ್‌ ಇದೀಗ ಅಧಿಕಾರ ವಹಿಸಿಕೊಂಡಿದ್ದು, ಟ್ರಸ್ಟ್‌ ಇದೀಗ ನಗರದ  ಹೊರವಲಯದಲ್ಲಿ ನೇತಾಜಿ ವಿಶ್ವವಿದ್ಯಾಲಯ ಸ್ಥಾಪನೆಗೆ ನೀಲ ನಕ್ಷೆ ರೂಪಿಸಿದೆ.

‘ಈ ವಿಶ್ವವಿದ್ಯಾಲಯದ ರೂಪುರೇಷೆ ಈಗಾಗಲೇ ಸಿದ್ಧವಾಗಿದ್ದು, ಆರಂಭದಲ್ಲಿ ಟ್ರಸ್ಟ್‌ನ ಕೇಂದ್ರಸ್ಥಾನವಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ದೇಶದಲ್ಲೇ ದೊಡ್ಡದಾದ, ನೇತಾಜಿ ಅವರ 40 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುವುದು. ಈ ಮಾದರಿ ಕ್ಯಾಂಪಸ್‌ನಲ್ಲಿ  ಕೆ.ಜಿ.ಯಿಂದ ಪಿ.ಜಿ. ತನಕ ಬೋಧನೆಯ ಸುಸಜ್ಜಿತ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಲಾಗುತ್ತಿದೆ. ನೇತಾಜಿ ಅವರ ಕುರಿತಾದ ಜ್ಞಾನಾರ್ಜನೆಯ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮಲಿದೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಎಂ.ರಾಜ್‌ಕುಮಾರ್ ತಿಳಿಸಿದ್ದಾರೆ.


ನೇತಾಜಿ ಪ್ರಭಾವ:

ಬೆಂಗಳೂರು ಉತ್ತರ ಕಾಂಗ್ರೆಸ್‌ ಘಟಕದ ಅದ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ರಾಜ್‌ಕುಮಾರ್ ಅವರು ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರಿಂದ ಬಹಳ ಮಟ್ಟಿಗೆ ಪ್ರಭಾವಿತರಾದವರು. ದೇಶದೆಲ್ಲೆಡೆ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಜೀವನ, ಕೊಡುಗೆಯ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂಬ ಸಂಕಲ್ಪ ತೊಟ್ಟಿದ್ದು, ತಮ್ಮ ಟ್ರಸ್ಟ್‌ನ ಪದಾಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.


ಪುಸ್ತಕ ಪ್ರಕಟಣೆ,  ಗ್ರಂಥಾಲಯ ಸ್ಥಾಪನೆ, ನೇತಾಜಿ ಜೀವನವನ್ನು ಯುವಜನತೆಗೆ ಪರಿಚಯಿಸುವ ಹಲವಾರು  ಕಾರ್ಯಕ್ರಮಗಳನ್ನು ತಮ್ಮ ನೇತಾಜಿ ಭವನದ ಮೂಲಕ ರೂಪಿಸಲಾಗಿದೆ. ಇನ್ನಷ್ಟು ಕಾರ್ಯಕ್ರಮಗಳ ಯೋಜನೆಯನ್ನು ಟ್ರಸ್ಟ್‌ ಹಾಕಿಕೊಂಡಿದೆ.



ಶತಮಾನೋತ್ಸವದಲ್ಲಿ ಕಂಡ ಕನಸು

ನೇತಾಜಿ ಅವರ ಜನ್ಮಶತಮಾನೋತ್ಸವ 1997ರಲ್ಲಿ ನಡೆದಿತ್ತು. ಅಗ ವಿಧಾನ ಪರಿಷತ್ ಸಭಾಪತಿ ಆಗಿದ್ದವರು ಡಿ.ಬಿ.ಕಲ್ಮಣ್ಕರ್‌. ಅವರು ನೇತಾಜಿ ಅವರ ಶೇಷ್ಠ ಅನುಯಾಯಿಯಾಗಿದ್ದರು. ಅವರ ಸಂಕಲ್ಪದಂತೆ ನೇತಾಜಿ ಸುಭಾಶ್ಚಂದ್ರ ಬೋಸ್‌ ರೀಸರ್ಚ್ ಆ್ಯಂಡ್ ಮಲ್ಪಿ ಡೆವಲಪ್‌ಮೆಂಟ್‌ ಟ್ರಸ್ಟ್‌ ಸ್ಥಾಪನೆಗೊಂಡಿತು. ಕಲ್ಮಣ್ಕರ್ ಅವರ ಗೌರವಾಧ್ಯಕ್ಷತೆಯಲ್ಲಿ ಹಲವು ಐಎಎಸ್‌ ಅಧಿಕಾರಿಗಳು, ಸಮಾಜ ಸೇವಕರು ಮತ್ತು ಅನೇಕ ಗಣ್ಯರ ಪಾಲ್ಗೊಳ್ಳುವಿಕೆಯೊಂದಿಗೆ ಈ ಟ್ರಸ್ಟ್‌ಗೆ ರೂಪ ದೊರೆಯಿತು. ಆಗಿನ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೇ ನೇತಾಜಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.


ಟ್ರಸ್ಟ್‌ ಸ್ಥಾಪನೆಯ ಬಳಿಕ ಹಲವಾರು ಕಾರ್ಯಗಳನ್ನು ದೇಶದ ಉದ್ದಗಲಗಳಲ್ಲಿ ಮಾಡುತ್ತ ಬರಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನೇತಾಜಿ ಚೇತನಾ ಯಾತ್ರೆ ಕೈಗೊಳ್ಳಲಾಗಿತ್ತು. ಅದು ಕರ್ನಾಟಕದ ಎಲ್ಲಾ  ಜಿಲ್ಲಾ ಕೇಂದ್ರಗಳಿಗೂ ಸಂಚರಿಸಿತ್ತು. ಆಗ ನೇತಾಜಿ ಜೀವನ ಚರಿತ್ರೆಯನ್ನು ಬಿಂಬಿಸುವ ಪುಸ್ತಕವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ನೀಡಲಾಗಿತ್ತು.


ಟ್ರಸ್ಟ್ ಸ್ಥಾಪನೆಯ ಬಳಿಕ ಪೋಷಣೆಯೂ ಅತ್ಯುತ್ತಮವಾಗಿಯೇ ನಡೆದಿದೆ. ನ್ಯಾಯಮೂರ್ತಿ ಆರ್.ಜೆ.ದೇಸಾಯಿ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಕೆ.ಎಂ. ಕೋಟಿ, ಹಿರಿಯರಾದ ಜಿ.ಆರ್‌.ಶಿವಶಂಕರ, ಸಿ.ಮುನಿವೆಂಕಟಸ್ವಾಮಿ, ಹಿರಿಯ ರಾಜಕೀಯ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಎಸ್‌.ಎಂ.ಕೃಷ್ಣ, ಎಚ್‌.ಕೆ.ಪಾಟೀಲ್‌ ಮೊದಲಾದವರ ಸಹಕಾರದಿಂದ ಟ್ರಸ್ಟ್‌ ಮುನ್ನಡೆಯುತ್ತ ಬಂದಿದೆ.


ವಿಧಾನಸೌಧದ ಈಶಾನ್ಯ ಭಾಗದಲ್ಲಿ 12 ಅಡಿ ಎತ್ತರದ ನೇತಾಜಿ ಪುತ್ಥಳಿ ಸ್ಥಾಪಿಸುವಲ್ಲಿ ಟ್ರಸ್ಟ್ ಪಾತ್ರ ದೊಡ್ಡದು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪುತ್ಥಳಿಯನ್ನು ಅನಾವರಣಗೊಳಿಸಿದ್ದರು. ನೇತಾಜಿ ಜನ್ಮದಿನದಂದು ಇಂದಿಗೂ ಮುಖ್ಯಮಂತ್ರಿಗಳು ಈ  ಪುತ್ಥಳಿಗೇ ಹಾರ ಹಾಕಿ ಸ್ಮರಿಸುತ್ತಾರೆ ಎಂಬುದು ವಿಶೇಷ.


ನೇತಾಜಿ ಹುಟ್ಟುಹಬ್ಬ ಪ್ರಯುಕ್ತ ಪ್ರತಿ ವರ್ಷ ಐದು ಮಂದಿಗೆ ನೇತಾಜಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ನೇತಾಜಿ ಭವನವಂತೂ ಇಂದು ನೇತಾಜಿ ಅವರ ಜೀವನವನ್ನು ತಿಳಿದುಕೊಳ್ಳಲು ಇರುವ ದೊಡ್ಡ ಕೇಂದ್ರವಾಗಿ ಬದಲಾಗಿದೆ. ಎನ್.ಎಸ್.ಜೋಷಿ ಸಹಿತ ಹಲವರು ಈ ಭವನ ನಿರ್ಮಾಣಕ್ಕೆ ಸಹಕರಿಸಿ‌ದ್ದಾರೆ. ನೇತಾಜಿ ಅವರ ಪುತ್ರಿ ಅನಿತಾ ಬೋಷ್‌, ಅಳಿಯ ಮಾರ್ಟಿನ್‌ ಪಫ್‌ ಅವರು ಅನೇಕ ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ.


ನೇತಾಜಿ ಸುಬಾಶ್ಚಂದ್ರ ಬೋಸ್ ಅವರ ಜೀವನ ಎಲ್ಲರಿಗೂ ಆದರ್ಶ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅವರು ವಹಿಸಿದ ಪಾತ್ರವೂ ಬಹಳ ದೊಡ್ಡದು. ಅದನ್ನು ಮುಂದಿನ ಪೀಳಿಗೆಗೂ ತಿಳಿಸುವ ಅಗತ್ಯ ಇದೆ. ಈ ಉದ್ದೇಶದಿಂದಲೇ ಸ್ಥಾಪನೆಯಾದ ಟ್ರಸ್ಟ್ ಇದೀಗ ಎಂ.ರಾಜ್‌ಕುಮಾರ್ ಅವರ ಸಾರಥ್ಯದಲ್ಲಿ ತನ್ನ ಸ್ಥಾಪನೆಗೆ ನಿಜ ಉದ್ದೇಶ ಈಡೇರಿಸುತ್ತ ಮುನ್ನಡೆಯುತ್ತಿದೆ.


ಟ್ರಸ್ಟ್‌ನ ನೂತನ ಅಧ್ಯಕ್ಷರಾದ ಎಂ.ರಾಜ್‌ಕುಮಾರ್ ಅವರೊಂದಿಗೆ ಜಿ.ಆರ್.ಶಿವಶಂಕರ್ (ಪ್ರಧಾನ ಕಾರ್ಯದರ್ಶಿ), ರಾಜಯೋಗೀಂದ್ರ ವೀರಯ್ಯ ಸ್ವಾಮಿ ಶಾಸ್ತ್ರಿಮಠ ಗುರೂಜಿ (ಸಂಸ್ಥಾಪಕ ಟ್ರಸ್ಟಿ), ಗುರು ಶಾಸ್ತ್ರಿಮಠ (ಉಪಾಧ್ಯಕ್ಷ), ಸಂಜಯ್‌  ಡಿ.ಕಲ್ಮಣ್ಕರ್‌ (ಉಪಾಧ್ಯಕ್ಷ), ಡಾ.ಉಮಾ ಶೇಷಗಿರಿ (ಕಾರ್ಯದರ್ಶಿ), ಅಮರನಾಥ ಕೋಟಿ (ಖಜಾಚಿ), ರವೀಂದ್ರ ನಾರಾಯಣ ಜೋಷಿ, ಆರ್‌.ವಿಶಾಲ್‌, ಸ್ಮರಣ್‌ ಶಿವಶಂಕರ್‌, ರಾಹುಲ್ ಶೇಷಗಿರಿ, ಆದಿತ್ಯ ಸಂಜಯ್‌ ಕಲ್ಮಣ್ಕರ್ (ಟ್ರಸ್ಟಿಗಳು) ಅವರು ಈ ದೂರದೃಷ್ಟಿಯ ಯೋಜನೆಯಲ್ಲಿ ಕೈಜೋಡಿಸಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top