ನೃತ್ಯ ವಿಮರ್ಶೆ: ಸ್ತುತಿಶ್ರೀ ಅದ್ಭುತ ರಂಗಪ್ರವೇಶ

Upayuktha
0

ಬೆಂಗಳೂರು: ರಂಗಪ್ರವೇಶ ಅಥವಾ ಅರಂಗೇಟ್ರಮ್ ಒಂದು ಕಲಾವಿದನ ಬೆಳವಣಿಗೆಯ ಮೊದಲ ಹೆಜ್ಜೆ. ವರ್ಷಗಳಿಂದ ಸತತವಾಗಿ ಕಲೆಯನ್ನು ಅಭ್ಯಾಸ ಮಾಡಿ ಗುರುಗಳ ಅನುಮತಿ ಪಡೆದು ಕಲಾವಿದರು ಮೊದಲ ಬಾರಿ ವೇದಿಕೆಯನ್ನು ಏರುವ  ಕಾರ್ಯಕ್ರಮವೇ ರಂಗಪ್ರವೇಶ.


ಉದಯೋನ್ಮುಖ ಕಲಾವಿದೆ ಕು.ಸ್ತುತಿಶ್ರೀ ತಿರುಮಲೆ ‘ನೃತ್ಯ ಕುಸುಮಾಂಜಲಿ’ ಶೀರ್ಷಿಕೆಯಡಿ 06-08-2023ರಂದು ಬೆಂಗಳೂರಿನ ಜಯನಗರ ಬಡಾವಣೆಯ ಜೆ.ಎಸ್.ಎಸ್. ಸಭಾಂಗಣದಲ್ಲಿ ತಮ್ಮ ರಂಗಪ್ರವೇಶ ಪ್ರದರ್ಶನ ನೀಡಿದರು. ಪ್ರಥಮ ಪಿ.ಯು.ಸಿ ವ್ಯಾಸಂಗ ಮಾಡುತ್ತಿರುವ ಕು.ಸ್ತುತಿಶ್ರೀ ಇವರು ವಿದುಷಿ ಶ್ರೀರಂಜಿನಿ ಉಮೇಶ್ ಹಾಗೂ ಹಿರಿಯ ಗುರುಗಳಾದ ಶ್ರೀಮತಿ ರೇವತಿ ನರಸಿಂಹನ್ ಅವರಲ್ಲಿ ನೃತ್ಯಾಭ್ಯಾಸ ಮಾಡಿ ಪ್ರಸ್ತುತ ‘ನಟನತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್‘ನ ವಿದುಷಿ ಶ್ರೀಮತಿ ವೈ.ಜಿ.ಶ್ರೀಲತಾ ನಿಕ್ಷಿತ್ ಅವರಲ್ಲಿ ಕಲಿಕೆಯನ್ನು ಮುಂದುವರಿಸಿ, ಅವರ ಮಾರ್ಗದರ್ಶನದಲ್ಲಿ  ರಂಗಪ್ರವೇಶ ಮಾಡಿದ್ದಾರೆ.


ಅದ್ಭುತವಾದ ಈ ರಂಗಪ್ರವೇಶವು ಓರ್ವ ನುರಿತ ಕಲಾವಿದೆ ನೀಡುವ ಕಾರ್ಯಕ್ರಮದಂತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಉತ್ತಮ ಕಲಾವಿದೆಯಾಗುವ ಭರವಸೆ ಮೂಡಿಸಿದೆ.


ಪ್ರೇಕ್ಷಕರ ಮನ ಗೆದ್ದರು: 

ಸ್ತುತಿಶ್ರೀ ತನ್ನ ರಂಗಪ್ರವೇಶದ ಪ್ರಾರಂಭದಲ್ಲಿ ಪುಷ್ಪಾಂಜಲಿ, , ಊತ್ತುಕ್ಕಾಡು ವೆಂಕಟಸುಬ್ಬಯ್ಯ ಕವಿಯ ಗಂಭೀರ ನಾಟ ರಾಗದ ಶ್ರೀವಿಘ್ನರಾಜಂಭಜೆಯ ನಂತರ ಮಿಶ್ರ ಅಲರಿಪು ನರ್ತಿಸಿ, ಈ ಬಂಧಗಳಲ್ಲೇ ತಮ್ಮ ಛಾಪನ್ನು ಮೂಡಿಸಿದರು. ತದನಂತರ ಕೆಲವು ಅಪರೂಪದ ರಚನೆಗಳಿಂದ ಪ್ರೇಕ್ಷಕರ ಮನ ಗೆದ್ದರು. ಇಳಂಗೋ ಅಡಿಗ ವಿರಚಿತ ಚಿಲಪ್ಪತಿಕಾರಮ್ ನಿಂದ ಆಯ್ದ ಒಂದು ಭಾಗ ‘ವಡವರೈ ಮತ್ತಾಕ್ಕಿ ವಾಸುಕಿಯೈ ನಾಣಾಕ್ಕಿ’. ಗುರುಗಳಾದ ವಿದುಷಿ ಶ್ರೀಲತಾ ಅವರ ವಿಶೇಷ ನೃತ್ಯ ಸಂಯೋಜನೆಯಲ್ಲಿ ಭಾವಪೂರ್ಣವಾಗಿ ಅಭಿನಯಿಸಿದರು. ಯಶೋದೆಯು ಮಣ್ಣುತಿನ್ನುತ್ತಿದ್ದ ಕೃಷ್ಣನ ಬಾಯಲ್ಲಿ ಮೂರು ಲೋಕಗಳನ್ನೂ ಕಾಣುತ್ತಾಳಷ್ಟೆ. ಹಾಗೆ ಕಾಣುವ ಆ ಲೋಕಗಳಲ್ಲಿ ಪ್ರಳಯವನ್ನೂ ಕೃಷ್ಣನ ಲೀಲಾ ವಿಶೇಷಗಳನ್ನೂ ಕಾಣುತ್ತಾಳೆ.


ಅಪರೂಪದ ರಚನೆ:   

ರಂಗಪ್ರವೇಶದ ಮುಖ್ಯ ಭಾಗವಾಗಿ ಆಯ್ದುಕೊಂಡ ಮತ್ತೊಂದು ಅಪರೂಪದ ರಚನೆ,  ಪದ್ಮಭೂಷಣ ಡಾ.ಎಮ್.ಬಾಲ ಮುರಳೀ ಕೃಷ್ಣ  ಅವರ ‘ಷಣ್ಮುಖಪ್ರಿಯ ರಾಗದ  ಓಂಕಾರ ಪ್ರಣವ ನಾದೋದ್ಭವ  ಶ್ರುತಿ ಲಯ ಸ್ವರ’  ಈ ಅದ್ಭುತ ರಚನೆಯ ಕ್ಲಿಷ್ಟಕರ  ಭಾವನೆಗಳನ್ನು ಗುರು ಶ್ರೀಲತಾ ಇವರು ನೃತ್ಯಕ್ಕೆ ಅಳವಡಿಸಿರುವುದು ಶ್ಲಾಘನೀಯವಾದರೆ, ಆ ಭಾವನೆಗಳನ್ನು ಅಷ್ಟೇ ಸೊಗಸಾಗಿ ನೃತ್ಯದಲ್ಲಿ ಅದ್ಭುತವಾಗಿ ಪ್ರದರ್ಶಿಸಿದ ಕಲಾವಿದೆಯನ್ನೂ ನಿಜಕ್ಕೂ ಮೆಚ್ಚಬೇಕು. ನಂತರದ ಪ್ರಸ್ತುತಿಯಲ್ಲಿ  ಪೆರಿಯಾಳ್ವಾರ್ ಇವರ ಪಲ್ಲಾಂಡು, ಶ್ರೀ ಆಂಡಾಳ್ ಅವರ ನಾಚ್ಚಿಯಾರ್ ತಿರುಮೊಳಿ, ತಿರುಪ್ಪಾವೈಗಳ ಆಯ್ದ ಪಾಶುರಗಳಿಂದ ರಚಿಸಿ ನೃತ್ಯಕ್ಕೆ ಸಂಯೋಜಿಸಿದ ‘ಆಂಡಾಳ್ ಕಲ್ಯಾಣ’ ವೈಭವಯುತವಾಗಿತ್ತು.. ಶ್ರೀ ಪುರಂದರ ದಾಸರ ‘ಹನುಮಂತ ದೇವ ನಮೋ’ ನೃತ್ಯ  ಕಲಾವಿದೆಯ  ಸಾಧನೆಯ ಮೈಲಿಗಲ್ಲೆನ್ನುವಂತೆ ಅತ್ಯಂತ  ಆಕರ್ಷಕವಾಗಿದ್ದು  ಹನುಮಂತನ ‘ಲಂಕಾದಹನ’ ಸನ್ನಿವೇಷವು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು. ಶ್ರೀ ಲಾಲ್ಗುಡಿ ಜಿ.ಜಯರಾಮನ್ ಅವರ ಮೋಹನ ಕಲ್ಯಾಣಿ ರಾಗದ ತಿಲ್ಲಾನ ಹಾಗೂ ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.


ಹಿಮ್ಮೇಳ ಒದಗಿಸಿದ ಪ್ರಖ್ಯಾತ ಕಲಾವಿದರು:

ಪ್ರದರ್ಶನಕ್ಕೆ ಅತ್ಯಂತ ಉತ್ತಮ ಹಿಮ್ಮೇಳ ಒದಗಿಸಿದ ಪ್ರಖ್ಯಾತ ಕಲಾವಿದರು ಸಂಗೀತದಲ್ಲಿ ವಿ.ರೋಹಿತ್ ಭಟ್, ನಟುವಾಂಗದಲ್ಲಿ  ವಿದುಷಿ ಶ್ರೀಲತ ನಿಕ್ಷಿತ್, ಮೃದಂಗ ವಿದ್ವಾನ್ ಹರ್ಷ ಸಾಮಗ, ಕೊಳಲು ಶ್ರೀ ಮಹೇಶ್ ಸ್ವಾಮಿ, ವೈಲಿನ್ ನಲ್ಲಿ   ಶ್ರೀ ಪ್ರಾದೇಶ್ ಆಚಾರ್,  ಹಾಗೂ ರಿದಮ್  ಪ್ಯಾಡ್ ನಲ್ಲಿ ಶ್ರೀ ಕಾರ್ತಿಕ್ ಭಟ್. ಭರತನಾಟ್ಯ ಗುರು ಶ್ರೀಮತಿ  ರೂಪಶ್ರೀ ಮದುಸೂದನ್  ಇವರು ಈ ಅದ್ಭುತ ಕಾರ್ಯಕ್ರಮವನ್ನು ಚೊಕ್ಕವಾಗಿ ನಿರ್ವಹಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top