ತಾಳೆ ಮರದಿಂದ ‘ಕಳ್ಳು’ (ತಾಳೆ ರಸ) ತೆಗೆಯುವುದು ಎಲ್ಲರಿಗೂ ಗೊತ್ತಿದೆ. ಎಳೆ ಬಿಸಿಲೂ ನುಸುಳದ ನಸುಕಿನಲ್ಲಿ ಸುಮಾರು ನೂರು ಅಡಿ ಎತ್ತರದ ತಾಳೆ ಮರಕ್ಕೆ ಏರಿ, ಮರದ ತುದಿಯಲ್ಲಿ ತಾಳೆ ಕೊಂಬಿಗೆ ಇರಿಸಲಾದ ಮಡಿಕೆಗೆ ಹದ ಪ್ರಮಾಣದ ಸುಣ್ಣ ಬೆರಸುತ್ತಾರೆ. ಮರುದಿನ ಅದರಲ್ಲಿ ಸಂಗ್ರಹಗೊAಡ ತಾಳೆರಸವನ್ನು ಸಂಗ್ರಹಿಸುತ್ತಾರೆ.
ಮರದಿಂದ ತಾಳೆರಸ (ಕಳ್ಳು) ಇಳಿಸುವುದೇ ಒಂದು ಸಾಹಸ ಹಾಗೂ ಸೊಗಸಿನ ದೃಶ್ಯವಾದರೆ, ಇದರಿಂದ ಸಿದ್ಧಪಡಿಸುವ ಓಲೆ ಬೆಲ್ಲದ ತಯಾರಿಯು ಒಂದು ಶ್ರಮ ಮತ್ತು ಕ್ರಮದ ಸಂಕಲನವಾಗಿದೆ.
ಬಂಟ್ವಾಳದ ಅಲ್ಲಿಪಾದೆಯ ಆನಂದ ಸಾಲಿಯಾನ್ ಅಡೆಂಕಿಲ್ದೊಟ್ಟು ಸುಮಾರು ೨೦ ವರ್ಷಗಳಿಂದ ಓಲೆ ಬೆಲ್ಲ ತಯಾರಿಸಿ, ಮಾರುತ್ತಿದ್ದಾರೆ. ವಂಶಪಾರಂಪರ್ಯವಾಗಿ ಬಂದ ಈ ಕಾಯಕವನ್ನು ಜತನದಿಂದ ಮುನ್ನಡೆಸಿಕೊಂಡು ಬಂದಿದ್ದಾರೆ.
ಕ್ರಮ ಸರಿಯಿದ್ದರೆ ಮಾತ್ರ ಓಲೆಬೆಲ್ಲ ಸರಿಯಾಗುತ್ತದೆ. ಓಲೆಬೆಲ್ಲ ತಯಾರಿಗೆ ತಾಳೆರಸ ಮತ್ತು ಎಲೆಗಳು ಬಹುಮುಖ್ಯ. ಆದರೆ, ಇಂದು ತಾಳೆಮರಗಳು ಸಿಗುವುದು ಗ್ರಾಮ ಭಾಗದಲ್ಲಿ ಮಾತ್ರ. ಅದೂ ವಿರಳ.
‘ಓಲೆ ಬೆಲ್ಲದಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ತಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ ಎನ್ನುತ್ತಾರೆ ತಜ್ಞರು. ಬೆಲ್ಲವು ಹೆಚ್ಚು ಸಮಯದವರೆಗೆ ನಮಗೆ ಚುರುಕು ಹಾಗೂ ಶಕ್ತಿ ನೀಡುತ್ತದೆ. ಓಲೆ ಬೆಲ್ಲಕ್ಕೆ ಬಹುಬೇಡಿಕೆ ಇದೆ. ಇದರ ಪೂರೈಕೆಯೆ ಕಷ್ಟ ವಾಗುತ್ತಿದೆ’ ಎನ್ನುತ್ತಾರೆ ಆನಂದ್ ಸಾಲಿಯಾನ್.
ತಾಳೆಮರದಿಂದ ತಂದ ತಾಳೆರಸವನ್ನು ಕಬ್ಬಿಣದ ಬಾಣಲೆಗೆ ಸುರಿದು ಕಟ್ಟಿಗೆ ಒಲೆಯ ಬೆಂಕಿ ಮೇಲೆ ಇಡುತ್ತಾರೆ. ಬೆಳಗ್ಗೆ 8 ಗಂಟೆಗೆ ಒಲೆಯಲ್ಲಿ ಇರಿಸಿದರೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ದ್ರಾವಣ ಬೆಂದು ಬೆಲ್ಲ ಹೊಯ್ಯುವ ಪಾಕವಾಗುತ್ತದೆ. ಬಿಸಿ ಆಗುವ ಸಮಯದಲ್ಲಿ ಬೆಲ್ಲದ ಪಾಕಕ್ಕೆ ತೆಂಗಿನ ಎಣ್ಣೆಯನ್ನು ಹಾಕುತ್ತಾರೆ. ಅದು ಬೆಲ್ಲದ ರುಚಿ ಹಾಗೂ ಕಂಪನ್ನು ಹೆಚ್ಚಿಸುತ್ತದೆ.
ಇದೇ ಸಂದರ್ಭದಲ್ಲಿ ಮಣ್ಣಿನ ನೆಲದ ಮೇಲೆ ಒದ್ದೆ ಮಾಡಿದ ಬಟ್ಟೆ ಅಥವಾ ಚಾಪೆಯನ್ನು ಹಾಸಿ, ಅದರ ಮೇಲೆ ವೃತ್ತಾಕಾರದಲ್ಲಿ ಸುತ್ತಿದ ತಾಳೆಗರಿಯನ್ನು ಬಳೆಯ ರೀತಿಯಲ್ಲಿ ಇರಿಸುತ್ತಾರೆ. ಇದಕ್ಕೆ ಹೊಯ್ಯಲು ಹದವಾದ ಬೆಲ್ಲದ ದ್ರಾವಣವನ್ನು ಸುರಿಯುತ್ತಾರೆ. ಮರದ ಕೋಲಿನ ಸಹಾಯದಿಂದ ಸರಿಯಾಗಿ ತಿರುಗಿಸಿ ಬೆಲ್ಲದ ಪಾಕವನ್ನು ಅರ್ಧ ಇಂಚಿನಷ್ಟು ದಪ್ಪವಿರುವ ಓಲೆ ಬಳೆಯೊಳಗೆ ಹೊಯ್ಯುತ್ತಾರೆ. ಇದು ಅನುಭವಜನ್ಯ ಮತ್ತು ಕೈಚಳಕದ ಕಾಯಕ. ಹೊಯ್ದ 20 ನಿಮಿಷಗಳ ಬಳಿಕ ಈ ಓಲೆಬೆಲ್ಲಗಳನ್ನು ಹಾಸಿದ್ದ ಬಟ್ಟೆ ಅಥವಾ ಚಾಪೆಯಿಂದ ಎಬ್ಬಿಸುತ್ತಾರೆ.
ಬಿಸಿಲಿಗೆ ಬಾಡಿಸಿ ಇಟ್ಟ ತಾಳೆಗರಿಗಳೊಳಗೆ 24 (2 ಡಜನ್) ಓಲೆಬೆಲ್ಲಗಳನ್ನು ಒಂದರ ಮೇಲೊಂದರಂತೆ ಇಟ್ಟು ತಾಳೆಗರಿ ದಂಡಿನಿಂದ ತಯಾರಿಸಿದ ಹಗ್ಗದಿಂದ ಗಟ್ಟಿಯಾಗಿ ಬಿಗಿದು ಮಾರಾಟ ತಯಾರು ಮಾಡುತ್ತಾರೆ.
‘ಈ ಪಾರಂಪರಿಕ ಓಲೆಬೆಲ್ಲಕ್ಕೆ ಉತ್ತಮ ಬೇಡಿಕೆ ಇದೆ. ಇದನ್ನು ಸ್ವಸ್ಥ ಆರೋಗ್ಯಕ್ಕೆ ಹಾಗೂ ಕೆಲವು ಔಷಧಿಯಲ್ಲೂ ಬಳಸುತ್ತಾರೆ’ ಎನ್ನುತ್ತಾರೆ ಅವರು.
ಪ್ರಖ್ಯಾತ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ