ರಾಷ್ಟ್ರಭಕ್ತಿ, ದೇಶಾಭಿಮಾನ ಪ್ರತಿಯೊಬ್ಬರಲ್ಲೂ ಇರಬೇಕು
ಬದಿಯಡ್ಕ: ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವ ಮತ್ತು ದೇಶಕ್ಕಾಗಿ ಹಿರಿಯರು ಮಾಡಿದ ತ್ಯಾಗ, ಬಲಿದಾನಗಳ ನೆನಪುಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಿ ಸಂಭ್ರಮಿಸುವ ಕಾರ್ಯಕ್ರಮವೇ ಸ್ವಾತಂತ್ರ್ಯ ದಿನಾಚರಣೆ ಎನ್ನಬಹುದು. ನಮ್ಮ ಬದುಕು, ನಡೆನುಡಿ ಪರಿಸರ ಸ್ವಚ್ಛತೆ, ಸಾಮಾಜಿಕ ಕಳಕಳಿ, ದೇಶಾಭಿಮಾನ ಇವುಗಳೆಲ್ಲವೂ ಪ್ರತಿಯೊಬ್ಬನಲ್ಲಿಯೂ ಇರಬೇಕಾದಂತಹ ಮುಖ್ಯ ಗುಣಗಳಾಗಿವೆ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸನ್ನಡತೆ, ಸದ್ಭುದ್ದಿಗಳನ್ನು ಪ್ರೇರೇಪಿಸುತ್ತಿರುವ ಉತ್ತಮ ವಿದ್ಯಾಭ್ಯಾಸವನ್ನು ಮಕ್ಕಳಿಗೆ ನೀಡುವ ಈ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಿಮ್ಮ ಜೊತೆ ಆಚರಿಸಿರುವುದು ಸಂತೋಷವನ್ನುಂಟು ಮಾಡಿದೆ. ಈ ಶಾಲೆಯಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆಗೈದು ಉತ್ತಮ ಭವಿಷ್ಯವನ್ನು ರೂಪಿಸುವಂತಾಗಲಿ ಎಂದು ಕೇರಳ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಕುಞ್ಞಣ್ಣ ಬದಿಯಡ್ಕ ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿದ ೭೭ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ, ಕೋಶಾಧಿಕಾರಿ ರಾಜಗೋಪಾಲ ಚುಳ್ಳಿಕ್ಕಾನ, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು.
ವೈಶಾಲಿ ವರ್ಮುಡಿ ಸ್ವಾಗತಿಸಿ, ಸ್ವಸ್ತಿ ಕುಳೂರು ವಂದಿಸಿದರು. ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಂದ ದೇಶಪ್ರೇಮವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಸಿಹಿತಿಂಡಿಯನ್ನು ವಿತರಿಸಲಾಯಿತು. ಧ್ವಜಾರೋಹಣದ ನಂತರವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಅಧ್ಯಾಪಕ ವಿನಯಪಾಲ್ ನೇತೃತ್ವದಲ್ಲಿ ಸ್ಕೌಟ್ ವಿದ್ಯಾರ್ಥಿಗಳು ಗೌರವರಕ್ಷೆ ನೀಡಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರು ಧ್ವಜಗೀತೆ ಹಾಡಿದರು. ಎಲ್ಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಿಸ್ತುಬದ್ಧ ಶಾರೀರಿಕ ವ್ಯಾಯಾಮವನ್ನು ಪ್ರದರ್ಶಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ