ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮೂಲೆಯೊಂದರ ಮಠದಲ್ಲಿ ಅತ್ಯಂತ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದ ಆ ಹುಡುಗ ಮುಂಬೈ ಸೇರಿ ಮರಾಠಿ ನಾಟಕ ರಂಗದಲ್ಲಿ ಮೆರೆದು ಮುಂದೆ ಕನ್ನಡ ಚಿತ್ರರಂಗದ ಅತ್ಯಂತ ಪ್ರಭಾವಿ ನಟರಲ್ಲಿ ಒಬ್ಬನಾದ. ಸ್ಪುರದ್ರೂಪಿ, ಗಂಭೀರ ಸ್ವಭಾವದ ಸಾಫ್ಟ್ ಕ್ಯಾರೆಕ್ಟರ್ಗಳಿಗೆ ಹೆಸರಾದ ಅಭಿಜಾತ ಕಲಾವಿದ, ಮುಂದೆ ತರಲೆ ಪಾತ್ರಗಳನ್ನು ಕೂಡ ಲೀಲಾಜಾಲವಾಗಿ ಅಭಿನಯಿಸಿದ್ದರು.
70-80ರ ದಶಕದ ಚಲನಚಿತ್ರ ರಂಗದ ಅತ್ಯಂತ ಜನಪ್ರಿಯ, ಆದರೆ ಅಷ್ಟೇ ಸೌಜನ್ಯಶೀಲ ನಟರಲ್ಲಿ ಒಬ್ಬರಾಗಿದ್ದು ಆತನ ಹೆಗ್ಗಳಿಕೆ. ಅವರ ಚಲನಚಿತ್ರಗಳನ್ನು ನೋಡಲೆಂದೇ ಒಂದು ಬೃಹತ್ ಮಹಿಳಾ ಪ್ರೇಕ್ಷಕ ಗಣವನ್ನು ಹೊಂದಿದವರು, ದಕ್ಷಿಣ ಭಾರತದ ಬಹುತೇಕ ದಿಗ್ಗಜ ನಟರಾದ ಕಮಲ್ ಹಾಸನ್, ಮಮ್ಮೂಟಿ, ರಜನಿಕಾಂತ್ ಅವರಿಂದ ವಿಶ್ವ ಮಾನ್ಯ, ಕ್ಲಾಸ್ ನಟನೆಂದು ಕರೆಯಲ್ಪಟ್ಟವರು. ಅವರೇ ಚಿತ್ರರಂಗದಲ್ಲಿ ಸುಮಾರು ಐದು ದಶಕಗಳನ್ನು ಕಳೆದ ನಮ್ಮೆಲ್ಲರ ಪ್ರೀತಿಯ ನಟ ಅನಂತನಾಗ್. ಅಭಿಜಾತ ನಟನೆಗೆ, ಉತ್ತಮ ಪಾತ್ರ ನಿರ್ವಹಣೆಗೆ ಅವರಿಗೆ ಅವರೇ ಸಾಟಿ ಎಂಬಂತಹ ವ್ಯಕ್ತಿ ಅನಂತನಾಗ್. ಕನ್ನಡ ಆಲ್ಲದೇ ಬಹುಭಾಷಾ ನಟರಾಗಿ ಗುರುತಿಸಿಕೊಂಡವರು ಅನಂತನಾಗ್.
ಅನಂತ್ ನಾಗ್ ಅವರ ಮೂಲ ಹೆಸರು ಅನಂತ ನಾಗರಕಟ್ಟೆ. ಹುಟ್ಟಿದ್ದು ಭಟ್ಕಳ ತಾಲೂಕಿನ ಶಿರಾಲಿಯಲ್ಲಿ 1948ರ ಸೆಪ್ಟೆಂಬರ್ 4ರಂದು. ತಂದೆ ಸದಾನಂದ ಮತ್ತು ತಾಯಿ ಆನಂದಿ. ಸಾಂಪ್ರದಾಯಿಕ ಕೊಂಕಣಿ ಮಾತನಾಡುವ ಕುಟುಂಬದಲ್ಲಿ ಹುಟ್ಟಿದ ಅನಂತನಾಗ್ ಅವರ ಒಡಹುಟ್ಟಿದವರು ಅಕ್ಕ ಶಾಮಲಾ ಮತ್ತು ತಮ್ಮ ಶಂಕರ್ ನಾಗ್.
ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಅಜ್ಜರಕಾಡಿನಲ್ಲಿರುವ ಕ್ಯಾಥೋಲಿಕ್ ಶಾಲೆಯಲ್ಲಿ ಪಡೆದ ಅವರು ಮುಂದೆ ದಕ್ಷಿಣ ಕನ್ನಡದ ಆನಂದಾಶ್ರಮ ಮತ್ತು ಉತ್ತರ ಕನ್ನಡದ ಚಿತ್ತಾಪುರ ಮಠಗಳಲ್ಲಿ ಶಿಕ್ಷಣವನ್ನು ಪಡೆದರು. ಮುಂದೆ ಒಂಬತ್ತನೇ ತರಗತಿಗೆ ಅವರು ಮುಂಬೈಯ ಶಾಲೆಯೊಂದರಲ್ಲಿ ಸೇರಿಕೊಂಡರು.ಅಲ್ಲಿ ಶಾಲೆಯ ಪಠ್ಯ ಅರ್ಥವಾಗದೆ ಹೋದಾಗ, ಶಾಲೆಗೆ ತುಸು ಹತ್ತಿರದಲ್ಲಿಯೇ ಇದ್ದ ನಾಟಕ ರಂಗಭೂಮಿಯ ಪರಿಚಯ ಇವರಿಗಾಯಿತು.
ರಂಗಭೂಮಿಯಿಂದ ಆಕರ್ಷಿತಗೊಂಡ ಅನಂತನಾಗ್ ಮುಂದೆ ಕೊಂಕಣಿ, ಕನ್ನಡ, ಹಿಂದಿ ಮತ್ತು ಮರಾಠಿ ಭಾಷೆಗಳ ನಾಟಕಗಳಲ್ಲಿ ಅಭಿನಯಿಸಲು ಆಯ್ಕೆಯಾದರು. ದಿಗ್ಗಜ ನಾಟಕಕಾರರಾದ ಅಮೋಲ್ ಪಾಲೇಕರ್, ಸತ್ಯದೇವ ದುಬೆ ಮತ್ತು ಗಿರೀಶ್ ಕಾರ್ನಾಡ್ ಅವರೊಂದಿಗೆ ಸುಮಾರು ಐದು ವರ್ಷಗಳ ಕಾಲ ಇವರು ನಾಟಕಗಳಲ್ಲಿ ಅಭಿನಯಿಸಿದರು.
1973 ರಲ್ಲಿ ಇವರ ಮೊಟ್ಟಮೊದಲ ಕನ್ನಡ ಚಲನಚಿತ್ರ ಸಂಕಲ್ಪ ಬಿಡುಗಡೆಯಾಯಿತು. ಸುಮಾರು ಐದು ವರ್ಷಗಳ ಕಾಲ ಹಿಂದಿ ಚಲನಚಿತ್ರ ರಂಗದಲ್ಲಿ ಶಾಂ ಬೆನಗಲ್ ಅವರ ನಿರ್ದೇಶನದಲ್ಲಿ ಅಂಕುರ್, ನಿಶಾಂತ್, ಮಂಥನ್, ಭೂಮಿಕಾ ಮತ್ತು ಕಲಿಯುಗ್ ಚಿತ್ರಗಳಲ್ಲಿ ಅನಂತ್ ನಟಿಸಿದರು. ಜಿ.ವಿ. ಅಯ್ಯರ್ ಅವರ ಹಂಸಗೀತೆ ಚಿತ್ರದಲ್ಲಿ ಕರ್ನಾಟಕ ಗಾಯನ ಮಾಡುವ ಶಿಷ್ಯನ ಪಾತ್ರ ವಹಿಸಿದ್ದರು. ಈ ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿತ್ತು.
ಅನಂತ್ ನಾಗ್ ಅವರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದು ಅವರ ಸಹೋದರ ಶಂಕರ್ ನಾಗ್ ನಿರ್ದೇಶನದ, ಖ್ಯಾತ ಬರಹಗಾರರಾದ ಆರ್ ಕೆ ನಾರಾಯಣ್ ವಿರಚಿತ ಮಾಲ್ಗುಡಿ ಡೇಸ್ ಧಾರಾವಾಹಿಯ ಮೂಲಕ. ಸುಮಾರು 200ಕ್ಕು ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಅನಂತನಾಗ್ ಅವರ ಪಾತ್ರಗಳು ವಿಶಿಷ್ಟವಾಗಿದ್ದವು. ಅವರ ಪಾತ್ರ ಪೋಷಣೆ ಗಟ್ಟಿತನದಿಂದ ಕೂಡಿದ್ದು, ಅವರು ಲೀಲಾ ಜಾಲವಾಗಿ ಅಭಿನಯಿಸುತ್ತಿದ್ದರು. ದಕ್ಷಿಣ ಭಾರತದ ಪ್ರಮುಖ ನಟಿಯರಾದ ಲಕ್ಷ್ಮಿ, ಗಾಯತ್ರಿ, ಗೀತಾ, ಅಂಬಿಕಾ, ರೂಪದೇವಿ, ಮಾಧವಿ, ಸರಿತಾ ಹೀಗೆ ಎಲ್ಲರೊಂದಿಗೆ ನಟಿಸಿದ್ದಾರೆ ಅನಂತನಾಗ್.
ಪ್ರಾರಂಭದಲ್ಲಿ ಗಂಭೀರ ಸಾಫ್ಟ್ ಕ್ಯಾರೆಕ್ಟರ್ ಗಳಲ್ಲಿ ಅಭಿನಯಿಸಿದ ಅವರು ಹಲವಾರು ಚಿತ್ರಗಳಲ್ಲಿ ಪೌರಾಣಿಕ ಪಾತ್ರಗಳಲ್ಲಿ ಕೂಡ ವಿಶೇಷವಾಗಿ ನಾರದನ ಪಾತ್ರಗಳಲ್ಲಿ ಅಭಿನಯಿಸಿದ್ದರು. ಒಂದೊಮ್ಮೆ ಹೆಲಿಕಾಪ್ಟರ್ನಲ್ಲಿ ಪ್ರೇಯಸಿಯನ್ನು ಹುಡುಕಿಕೊಂಡು ಬರುವ, ಮಗದೊಮ್ಮೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ, ವಕೀಲನಾಗಿ ಹೀಗೆ ಬಹುತೇಕ ಎಲ್ಲ ಪಾತ್ರಗಳಿಗೂ ಅವರು ಬಣ್ಣ ಹಚ್ಚಿದರು. ಭಾರತ ದೇಶ ಕಂಡ ಅದ್ಭುತ ನಟ ಎಂಬ ಹೆಸರಾದ ಅನಂತನಾಗ್ ಮುಂದೆ ಫಣಿ ರಾಮಚಂದ್ರ ಅವರ ನಿರ್ದೇಶನದಲ್ಲಿ ಹಾಸ್ಯ ಚಲನಚಿತ್ರಗಳಲ್ಲಿ ನಟಿಸಿದರು.
ಇದುವರೆಗೂ ಗಂಭೀರ ಪಾತ್ರಗಳಲ್ಲಿ ನೋಡಿದ ಜನ ಅನಂತನಾಗ ಅವರ ಅಭಿನಯದ ಮತ್ತೊಂದು ಅದ್ಭುತ ಮಗ್ಗುಲನ್ನು ನೋಡಿದರು.
ಕನ್ನಡ ಚಲನಚಿತ್ರ ರಂಗದ ಬಹುತೇಕ ದಿಗ್ಗಜ ನಟರೊಂದಿಗೆ ಸಹ ನಟರಾಗಿ ಗುರುತಿಸಿಕೊಂಡ ಅನಂತನಾಗ್ ಅಂದಿನಿಂದ ಇಂದಿನವರೆಗೆ ಹಲವಾರು ಯುವನಟರ ಚಿತ್ರಗಳಲ್ಲಿ ಅಭಿನಯಿಸಿ ಜೀವ ತುಂಬಿದ್ದಾರೆ.
ರಕ್ಷಿತ್ ಶೆಟ್ಟಿ ಅಭಿನಯದ 'ಗೋದಿ ಬಣ್ಣ ಸಾಧಾರಣ ಮೈಕಟ್ಟು' ಎಂಬ ಚಲನಚಿತ್ರದಲ್ಲಿ ಅಲಜೈಮರ್ ಕಾಯಿಲೆಯಿಂದ ಬಳಲುವ ವ್ಯಕ್ತಿಯಾಗಿ ಅಮೋಘ ಪಾತ್ರ ಪೋಷಣೆ ಮಾಡಿದ ಅನಂತನಾಗ್ ಅಭಿನಯ ಪ್ರಶಂಸೆಗೆ ಪಾತ್ರವಾಗಿದೆ.
ಅನಂತ್ ನಾಗ್ ಅವರು ಚಲನಚಿತ್ರ ನಟಿ ಗಾಯತ್ರಿ ಅವರನ್ನು ಮದುವೆಯಾಗಿದ್ದಾರೆ ಅವರಿಗೆ ಅದಿತಿ ಎಂಬ ಮಗಳು ಇದ್ದಾಳೆ. ಸಹೋದರ ಶಂಕರ ನಾಗ್ ಅವರ ಅಕಾಲಿಕ ಅಗಲಿಕೆ ಅನಂತ್ ನಾಗ್ ಅವರನ್ನು ಬಹಳಷ್ಟು ಕಾಲ ವಿಚಲಿತಗೊಳಿಸಿತ್ತು.
ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದ ಅನಂತನಾಗ್ ಜೆ.ಎಚ್. ಪಟೇಲ್ ಅವರ ಸರ್ಕಾರದಲ್ಲಿ ಶಾಸಕರಾಗಿ, ಎಂಎಲ್ಸಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಚಿವರಾಗಿ ಕಾರ್ಯನಿರ್ವಹಿಸಿದರು. 2004ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಘಟಾನುಘಟಿ ರಾಜಕಾರಣಿಗಳಾದ ಎಸ್.ಎಮ್. ಕೃಷ್ಣ ಮತ್ತು ಚಲನಚಿತ್ರ ರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರ ವಿರುದ್ಧ ಅನಂತನಾಗ್ ಕಣಕ್ಕಿಳಿದಿದ್ದು ವಿಫಲರಾಗಿದ್ದರು.
ಮಿಂಚಿನ ಓಟ, ಹೊಸ ನೀರು, ಅವಸ್ಥೆ, ಗಂಗವ್ವ ಗಂಗಾಮಾಯಿ ಚಿತ್ರಗಳಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದ ಅನಂತನಾಗ್ ಅವರು ಜೀವಮಾನದ ಸಾಧನೆಗಾಗಿ 2011-12 ರಲ್ಲಿ ವಿಷ್ಣುವರ್ಧನ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪ್ರೇಮಲೋಕಲು, ನಾ ನಿನ್ನ ಬಿಡಲಾರೆ, ಬಾರಾ, ಹೆಂಡ್ತಿಗೆ ಹೇಳಬೇಡಿ, ಉದ್ಭವ, ಗೌರಿ ಗಣೇಶ, ಗೋಧಿ ಬಣ್ಣ ಸಾಧಾರಣ ಮೈಕಟ್ಟು- ಚಲನಚಿತ್ರಗಳಿಗೆ ದಕ್ಷಿಣ ಭಾರತದ ಅತ್ಯುತ್ತಮ ನಟ ಎಂದು ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ತಾಜ್ ಮಹಲ್, ವಾಸ್ತು ಪ್ರಕಾರ, ಅರಮನೆ ಚಿತ್ರಗಳಿಗೆ ಕೂಡ ಅತ್ಯುತ್ತಮ ಪೋಷಕ ನಟ ಎಂದು ಫಿಲಂ ಫೇರ್ ನಿಂದ ನಾಮ ನಿರ್ದೇಶನಗೊಂಡಿದ್ದರು ಅನಂತ್ ನಾಗ್. ಗಾಳಿಪಟ 2 ಚಿತ್ರದಲ್ಲಿ ಚಿತ್ರನಟ ಗಣೇಶ್ ಅವರ ಶಿಕ್ಷಕನ ಪಾತ್ರಧಾರಿಯಾಗಿ ಅಮೋಘ ಅಭಿನಯ ನೀಡಿದ ಅನಂತನಾಗ್ ಇದೀಗ ತಮ್ಮ ಚಿತ್ರ ಜೀವನದ 50ನೇ ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಅನಂತ್ ನಾಗ್ ಒಳ್ಳೆಯ ವಾಗ್ಮಿಯು ಹೌದು ಇಂದಿಗೂ ಕೂಡ ಸ್ಪಷ್ಟವಾಗಿ ಮಂತ್ರೋಚ್ಛಾರ ಮಾಡುವ, ಶ್ಲೋಕಗಳನ್ನು ಹೇಳುವ, ವಾದ್ಯಗಳನ್ನು ನುಡಿಸುವ ಅನಂತ್ ನಾಗ್ ಬಹುಮುಖ ಪ್ರತಿಭೆ.
75ರ ಇಳಿ ವಯಸ್ಸಿನಲ್ಲಿಯೂ ಕೂಡ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅನಂತ್ ನಾಗ್ ಅವರು ಇನ್ನೂ ಹೆಚ್ಚಿನ ಆಯುರಾರೋಗ್ಯವನ್ನು ಹೊಂದಲಿ ಎಂದು ಆಶಿಸುತ್ತಾ ಅವರು ಚಲನಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು ಅವರಿಗೆ ಸಮಸ್ತ ಕನ್ನಡ ಚಲನಚಿತ್ರ ರಂಗದ ಅಭಿಮಾನಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸೋಣ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ