ವಿದ್ಯಾಗಿರಿ: ಇಲ್ಲಿನ ಕಂಪ್ಯೂಟರ್ ಪ್ರಯೋಗಾಲಯವು ನಾನು ನೋಡಿದ ಪಿಯು ಕಾಲೇಜುಗಳ ಪೈಕಿ ಅತ್ಯಾಧುನಿಕ ಸೌಲಭ್ಯ ಹೊಂದಿದ ‘ಹೈ ಎಂಡ್ ಕಂಪ್ಯೂಟರ್ ಪ್ರಯೋಗಾಲಯ’ ಎಂದು ಸುರತ್ಕಲ್ ಎನ್‍ಐಟಿಕೆ ಪ್ರಾಧ್ಯಾಪಕ ಡಾ.ಮೋಹಿತ್ ಪಿ. ಶ್ಲಾಘಿಸಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.
ಸ್ಥಿರತೆ, ಸಮರ್ಪಕ ಯೋಜನೆ ಹಾಗೂ ಜೀವನ ಪರ್ಯಂತ ಕಲಿಕೆಯು ಯಶಸ್ಸಿನ ಸೂತ್ರ ಎಂದರು.
ಬದುಕಿನಲ್ಲಿ ಸ್ಥಿರತೆಯು ಬಹುಮುಖ್ಯ. ನಾವು ಮಾಡುವ ಯಾವುದೇ ಕಾರ್ಯದಲ್ಲಿ ಸ್ಥಿರತೆ ಇದ್ದಾಗ ಮಾತ್ರ ಪರಿಪೂರ್ಣತೆ ಸಾಧಿಸಲು ಸಾಧ್ಯ. ವಾರದ ಕೊನೆಗೆ ಐದು ಗಂಟೆ ಕೆಲಸ ಮಾಡುವ ಬದಲು ಪ್ರತಿನಿತ್ಯ ಅರ್ಧಗಂಟೆ ಕೆಲಸ ಮಾಡಿ. ಡೆಡ್‍ಲೈನ್ ವೇಳೆಯಲ್ಲಿ ಕೆಲಸ ಮಾಡಲು ಯತ್ನಿಸಿದರೆ, ಒತ್ತಡ ಹೆಚ್ಚಾಗುತ್ತದೆ. ಅಲ್ಲದೇ, ಡೆಡ್‍ಲೈನ್ ತಪ್ಪಿದರೆ ತಪ್ಪು ದ್ವಿಗುಣಗೊಳ್ಳುತ್ತದೆ ಎಂದರು.
ಅಂಕ ಕಡಿತಗೊಳಿಸುವಾಗ ಉಪನ್ಯಾಸಕರ ಮನಸ್ಸಿಗೂ ನೋವಾಗುತ್ತದೆ. ಆದರೆ, ನೀವು ಇನ್ನಷ್ಟು ಪ್ರಗತಿ ಹೊಂದಬೇಕು ಎಂದು ಅಂಕ ಕಡಿತ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದರು.
ಪಿಯುಸಿಯಲ್ಲಿ ನೀವೇ ಕಪ್ತಾನರು. ನಿಮ್ಮ ವಿವಿಧ ಪಠ್ಯಗಳೇ ತಂಡದ ಸದಸ್ಯರು. ಆ ಸದಸ್ಯರಿಗೆ ಸಮರ್ಪಕ ಆದ್ಯತೆ ನೀಡಿ, ಉತ್ತಮ ಫಲಿತಾಂಶ ಪಡೆಯುವುದು ನಿಮ್ಮ ಮುಂದಿರುವ ಸವಾಲು. ಅದಕ್ಕೆ ಸಮರ್ಪಕÀ ಯೋಜನೆ ಬೇಕು. ಯೋಜನೆ ರೂಪಿಸುವಾಗ, ಹೆಚ್ಚುವರಿ ಸಮಯವನ್ನು ಕಾಯ್ದಿರಿಸಬೇಕು ಎಂದರು.
ಮಾನವೀಯತೆಯೇ ಕಲಿಕೆ. ಈ ಕಲಿಕೆಯು ನಿರಂತರ. ಜೀವನ ಪರ್ಯಂತ ಕಲಿಯುತ್ತಿರಬೇಕು. ಇನ್ನೊಬ್ಬರ ಮುಖದಲ್ಲಿ ಮಂದಹಾಸ ಮೂಡಿಸಿದಾಗ ನಿಮ್ಮ ಕಲಿಕೆ ಸಾರ್ಥಕವಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಕಂಪ್ಯೂಟರ್ ಪ್ರಯೋಗಾಲಯವನ್ನು ಉದ್ಧಾಟಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಕೇವಲ ಕೋರ್ಸ್ ಪೂರೈಸಿದರೆ ಸಾಲದು, ನಿಮ್ಮ ಪರಿಶ್ರಮದ ಮೇಲೆ ಫಲಿತಾಂಶ ಅವಲಂಬಿತವಾಗಿದೆ. ಸಾಧನೆಯು ಫಲಿತಾಂಶದಲ್ಲಿ ಬಿಂಬಿತವಾಗುತ್ತದೆ’ ಎಂದರು. ‘ಜೀವನದ ಪ್ರತಿ ಹಂತದಲ್ಲೂ ವಿಜ್ಞಾನ ಮಿಳಿತವಾಗಿದೆ ಎಂದರು.
200 ಹೈಎಂಡ್ ಕಂಪ್ಯೂಟರ್‍ನ್ನು ಒಳಗೊಂಡ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಇರುವ ಎರಡು ವಿಶಾಲವಾದ ಕಂಪ್ಯೂಟರ್ ಲ್ಯಾಬ್ ವಿದ್ಯಾರ್ಥಿಗಳ ಬಳಕೆಗೆ ಇನ್ನು ಮುಂದೆ ಲಭ್ಯವಾಗಲಿದೆ.
ಪ್ರಾಚಾರ್ಯ ಪ್ರೋ. ಎಂ. ಸದಾಕತ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಯೋಜಕ ವಿಖ್ಯಾತ್ ಭಟ್ ಅತಿಥಿಯನ್ನು ಪರಿಚಯಿಸಿದರು. ಉಪ ಪ್ರಾಂಶುಪಾಲೆ ಝಾನ್ಸಿ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಹೊಳ್ಳ ಇದ್ದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ