ಅಕ್ಷರ ಆರಾಧನೆ- 22: ಭಕ್ತವತ್ಸಲ ಶ್ರೀಕೃಷ್ಣ

Upayuktha
0

 || ಪೂಷಾಂತರ್ಗತ ಶ್ರೀ ಜಗದ್ಯೋನಯೇ ನಮಃ ||


ಪಾಂಡವರು ಮತ್ತು ಕೌರವರಲ್ಲಿ ಪಗಡೆಯಾಟ ನಡೆಯಿತು. ದುರ್ಯೋಧನ ಮತ್ತು ಧರ್ಮರಾಜ ಪ್ರಾರಂಭಿಸಿದ ಆಟದಲ್ಲಿ ಪಾಂಡವರಿಗೆ ಸೋಲಾಯಿತು. ಮೋಸದಲ್ಲಿ ನಿಷ್ಣಾತನಾದ ಶಕುನಿಯ ಸಹಾಯದಿಂದ ಆಟದಲ್ಲಿ ದುರ್ಯೋಧನ ಗೆದ್ದ. ಪಂದ್ಯದಲ್ಲಿ ಆದ ಕರಾರಿನಂತೆ ಪಾಂಡವರು ವನವಾಸಕ್ಕೆ ಹೋದರು. ಶ್ರೀಕೃಷ್ಣನು ಪಾಂಡವರನ್ನು ನೋಡಿಕೊಂಡು ಬರವುದಕ್ಕಾಗಿ ಅರಣ್ಯಕ್ಕೆ ಬಂದ. ಆಗ ಶ್ರೀಕೃಷ್ಣ ಸ್ನಾನಕ್ಕೆ ಬಿಸಿನೀರನ್ನು ಸಿದ್ಧಪಡಿಸಲು ದ್ರೌಪದಿಗೆ ಹೇಳಿದ. ದ್ರೌಪದಿ ಒಲೆ ಹೊತ್ತಿಸಿ ಪಾತ್ರೆಗೆ ನೀರು ಸುರಿದು ಕಾಯಿಸಲು ಇಟ್ಟಳು. ಎಷ್ಟೋ ಸಮಯದ ನಂತರ ನೋಡಿದರೂ ನೀರೇ ಇನ್ನು ಕಾಯ್ದಿರಲಿಲ್ಲ. ಮತ್ತಷ್ಟು ಉರಿಹಾಕಿದರೂ ನೀರು ಕಾಯಲೇ ಇಲ್ಲ. ದ್ರೌಪದಿ ಈ ವಿಷಯವನ್ನು ಪಾಂಡವರಿಗೆ ತಿಳಿಸಿದಳು. ಆಗ ಪಾಂಡವರೂ ಪರೀಕ್ಷಿಸಿ ನೋಡಿದಾಗ ಅವರಿಗೂ ಆಶ್ಚರ್ಯವಾಯಿತು.


ಅವರು ಇದಕ್ಕೆ ಕಾರಣವೆನೆಂದು ಕೃಷ್ಣನನ್ನೇ ಕೇಳಿದರು. ಪಾತ್ರೆಯಲ್ಲಿಯ ಎಲ್ಲ ನೀರನ್ನೂ ಹೊರಚೆಲ್ಲಿ ಬೇರೆ ಹೊಸ ನೀರು ಹಾಕಿ ಮತ್ತೆ ಕಾಯಿಸಿರೆಂದು ಕೃಷ್ಣ ಹೇಳಿದನು. ಕೃಷ್ಣನ ಮಾತುಕೇಳಿ ಪಾಂಡವರಿಗೆ ಆಶ್ಚರ್ಯವೆನಿಸಿದರೂ ಪಾತ್ರೆಯ ನೀರನ್ನು ಹೊರಚೆಲ್ಲಿದರು. ಆಗ ಪಾತ್ರೆಯ ತಳದಲ್ಲಿ ಒಂದು ಪುಟ್ಟ ಕಪ್ಪೆಯನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಪಾಂಡವರು ಕೃಷ್ಣನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದರು. ಆಗ ಕೃಷ್ಣ ಹೇಳಿದ- "ಪಾತ್ರೆಯಲ್ಲಿಯ ಕಪ್ಪೆಯು ನನ್ನನ್ನು ಕಾಪಾಡು" ಎಂದು ಮೊರೆಯಿಟ್ಟಿತು. ಅದಕ್ಕೆ ನನಗೆ ಆ ಕಪ್ಪೆಯನ್ನು ಕಾಪಾಡಬೇಕಾಯಿತು. ಹೀಗಾಗಿ ಪಾತ್ರೆಯಲ್ಲಿಯ ನೀರು ಎಷ್ಟೇ ಉರಿಹಾಕಿದರೂ ಬಿಸಿಯಾಗಲಿಲ್ಲ. ಈ ಮಾತುಗಳನ್ನು ಕೇಳಿ ಪಾಂಡವರಿಗೆ ಆಶ್ಚರ್ಯವಾಗಿ ಕೃಷ್ಣನ ಮೇಲಿನ ಅವರ ಭಕ್ತಿ ಮತ್ತಷ್ಟು ಗಾಢವಾಯಿತು.


ನಮ್ಮನ್ನು ನಾಶ ಮಾಡುವವನಿಗಿಂತ ರಕ್ಷಿಸುವವನು ದೊಡ್ಡವನು. ರಕ್ಷಣೆಗಾಗಿ ಮೊರೆಯಿಟ್ಟಾಗ ಸೃಷ್ಟಿಕರ್ತ ಹೇಗೆ ರಕ್ಷಿಸುತ್ತಾನೆಂಬುದಕ್ಕೆ ಇದೊಂದು ಉದಾಹರಣೆ ಮಾತ್ರ. ಭಗವಂತ ಸರ್ವವ್ಯಾಪಿಯಾಗಿದ್ದಾನೆ. ಆತನಿಲ್ಲದೆ ಏನೂ ಇಲ್ಲ. ಅದಕ್ಕೇ ಹೇಳುತ್ತಾರೆ- `ತೇನವಿನಾ ತೃಣಮಪಿ ನ ಚಲತಿ". ಶ್ರೀಕೃಷ್ಣನು ಸರ್ವಶಕ್ತನಾಗಿದ್ದಾನೆ. ಸರ್ವೇಶ್ವರನಾಗಿದ್ದಾನೆ. ಆದರೂ ಮಾನವರಂತೆ ಅಮೋಘ ನಟನೆಯನ್ನು ಮಾಡಿದ್ದಾನೆ. ಇದೆಲ್ಲವೂ ಲೋಕಶಿಕ್ಷಣಕ್ಕಾಗಿಯೇ. ಜ್ಞಾನದಿಂದ ಪರತತ್ವದ ಸಾಕ್ಷಾತ್ಕಾರ ಎಂಬುದನ್ನು ತೋರಿಸಲು ತಾನೂ ಗುರುಗಳಲ್ಲಿ ಶಿಕ್ಷಣ ಪಡೆದಂತೆ ತೋರಿಸುತ್ತಾನೆ. ಸಾಂದೀಪನಿ ಗುರುಗಳ ಹತ್ತಿರ ಬಲರಾಮನ ಜೊತೆ ಅಭ್ಯಾಸದ ಕಾರ್ಯವನ್ನು ಶ್ರೀಕೃಷ್ಣ ಮಾಡಿದ್ದಾನೆ. ಗುರುವನ್ನು ಪ್ರಸನ್ನಗೊಳಿಸಬೇಕು, ಗುರುವಿನ ಮುಖಾಂತರ ಪರಮಾತ್ಮನ ಬಗ್ಗೆ ಜ್ಞಾನವನ್ನು ಪಡೆಯಬೇಕು, ಇದನ್ನು ಕೃಷ್ಣ ಲೋಕಕ್ಕೆ ತೋರಿಸಿಕೊಟ್ಟಿದ್ದಾನೆ.


ಗುರುಕುಲವಾಸದ ನಂತರ ಗುರುಪುತ್ರನ ಬದುಕಿಸಿ ಅಮೂಲ್ಯವಾದ ಗುರುದಕ್ಷಿಣೆಯನ್ನೂ ಶ್ರೀಕೃಷ್ಣ ಕೊಡುತ್ತಾನೆ. ಲೋಕದಲ್ಲಿ ಯಾರಿಂದಲೂ ಅಸಾಧ್ಯವಾದ ಗುರುದಕ್ಷಿಣೆಯನ್ನು ಕೃಷ್ಣನು ಕೊಟ್ಟಿದ್ದಾನೆ. ಗುರುಕುಲವಾಸ, ಗುರುಶುಶ್ರೂಷೆ, ಗುರುದಕ್ಷಿಣೆ ಇವು ಜ್ಞಾನವನ್ನು ಪಡೆಯುವ ಮೂರು ಮೆಟ್ಟಿಲುಗಳು. ಈ ಮೂರು ಮೆಟ್ಟಿಲುಗಳನ್ನು ಏರಿದಾಗ ನಮಗೆ ದೊರೆಯುವುದೇ– ಗುರುಕೃಪೆ. ಗುರುಕೃಪೆಯಾದರೆ ಯಾವುದು ಅಸಾಧ್ಯ? ಹರಿಕರುಣೆಯೂ ನಮಗೆ ಶೀಘ್ರದಲ್ಲೇ ದೊರೆಯುತ್ತದೆ. ಈ ಆತ್ಮೋದ್ಧಾರದ ಸಾಧನೆಯ ಕ್ರಮವನ್ನು ಶ್ರೀಕೃಷ್ಣನು ಬಹಳ ಸುಂದರವಾಗಿ ತಿಳಿಸಿದ್ದಾನೆ. ಶ್ರೀಕೃಷ್ಣನು ಸಾಂದೀಪನಿ ಗುರುಗಳ ಹತ್ತಿರ ಕಲಿಯಲು ಗುರುಕುಲದಲ್ಲಿದ್ದ. ಆಗ ಸುಧಾಮನೂ ಅಲ್ಲಿ ಕಲಿಯಲು ಬಂದಿದ್ದ. ಒಂದು ದಿನ ಕೃಷ್ಣ ಮತ್ತು ಸುಧಾಮ ಉರವಲನ್ನು ತರಲು ಕಾಡಿಗೆ ಹೋಗಿದ್ದರು. ಸ್ವಲ್ಪ ಸಮಯದ ನಂತರ ಕೃಷ್ಣನಿಗೆ ಹಸಿವೆಯಾಯಿತು. ತಿನ್ನಲು ಏನನ್ನಾದರೂ ಕೊಡು ಎಂದು ಕೃಷ್ಣನು ಸುಧಾಮನಿಗೆ ಕೇಳಿದ. ಸ್ವಲ್ಪ ಕಾಲ ವಿಶ್ರಾಂತಿ ಪಡೆ ಎಂದು ಸುಧಾಮನು ಹೇಳಿದನು. ಕೃಷ್ಣನು ಸುಧಾಮನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ. ಆಗ ಸುಧಾಮನು ತಾನು ತಂದ ಕಡಲೇಕಾಯಿಯನ್ನು ತಾನೊಬ್ಬನೇ ತಿನ್ನಲು ಪ್ರಾರಂಭಿಸಿದನು. ಕೃಷ್ಣನಿಗೆ ಎಚ್ಚರವಾಗಿ `ಏನು ತಿನ್ನುತ್ತಿರುವೆ’ ಎಂದು ಕೇಳಿದನು. ಆಗ ಸುಧಾಮ, `ತಿನ್ನವುದಕ್ಕೇನು ಇದೆ. ಚಳಿಯಲ್ಲಿ ನಡುಗುತ್ತಿರುವೆ’ ಎಂದ. ಸರ್ವಜ್ಞ ಕೃಷ್ಣನಿಗೆ ಎಲ್ಲ ಅರ್ಥವಾಯಿತು. ಆಗ ಕೃಷ್ಣ ಸುಧಾಮನಿಗೆ ಹೀಗೆ ಹೇಳಿದನು - `ನಾನೊಂದು ಕನಸು ಕಂಡೆ. ಅಲ್ಲಿ ಒಬ್ಬ ವ್ಯಕ್ತಿ ಯಾರಿಗೂ ತಿಳಿಯದಂತೆ ಏನೋ ತಿನ್ನುತ್ತಿದ್ದ. ಅವನನ್ನು ವಿಚಾರಿಸಿದಾಗ ಏನಿದೆ ಮಣ್ಣು ತಿನ್ನುವುದಕ್ಕೆ ಎಂದು ಉತ್ತರಿಸಿದ. ಅದಕ್ಕೆ ಅಲ್ಲಿದ್ದ ಇನ್ನೊಬ್ಬನು `ತಥಾಸ್ತು’ ಎಂದು ಬಿಟ್ಟನಂತೆ’ ಎಂದಾಗ ಸುಧಾಮನ ಮುಖ ಕಪ್ಪಿಟ್ಟಿತು. "ನೀನು ನನ್ನನ್ನು ಬಿಟ್ಟು ಏನೂ ತಿನ್ನುವುದಿಲ್ಲ”. ನನ್ನ ಕನಸಿನ ವಿಚಾರ ನಿನ್ನ ಬಳಿ ಹೇಳಿದೆ" ಎಂದ ಶ್ರೀಕೃಷ್ಣ.


ಸುಧಾಮ ಕೃಷ್ಣನ ಆಪ್ತ ಗೆಳೆಯನಾಗಿದ್ದರೂ ಆತನ ಮಹಿಮೆಯು ತಿಳಿಯಲಿಲ್ಲ. ಮುಂದೆ ಇದೇ ಸುಧಾಮ ಕೃಷ್ಣನಿಗೆ ಭಕ್ತಿಯಿಂದ ಹಿಡಿ ಅಲವಕ್ಕಿಯನ್ನು ಅರ್ಪಿಸಿದನು. ಅದಕ್ಕೆ ಶ್ರೀಕೃಷ್ಣ ಮೆಚ್ಚಿ ಅವನಿಗೆ ಅಷ್ಟೈಶ್ವರ್ಯಗಳನ್ನು ಕರುಣಿಸುತ್ತಾನೆ. ದೇವರ ಕರುಣೆ ಸಿಕ್ಕರೆ ಏನಾಗುತ್ತದೆಂಬುದಕ್ಕೆ ಇದೊಂದು ನಿದರ್ಶನ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top