ಅಕ್ಷರ ಆರಾಧನೆ- 20: ಶ್ರೀಕೃಷ್ಣನ ರಥದ ಮಹಿಮೆ

Upayuktha
0

 || ವಿವಸ್ವಾನಂತರ್ಗತ ಶ್ರೀ ತ್ರಿವಿಕ್ರಮಾಯ ನಮಃ ||



ಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರು ಉಪಯೋಗಿಸಿದ ರಥವು ಬಹಳ ಅದ್ಭುತವಾಗಿತ್ತು. ಕುರುಕ್ಷೇತ್ರ ರಣಾಂಗಣದಲ್ಲಿ ಪಾಂಡವರಿಗೆ ಜಯವ ತಂದಿತ್ತ ರಥ ಅದಾಗಿತ್ತು. 

ಮಹಾಭಾರತದ ಯುದ್ಧ ಮುಗಿದ ನಂತರ ಶ್ರೀಕೃಷ್ಣ ಮತ್ತು ಅರ್ಜುನರು ಹಸ್ತಿನಾವತಿಗೆ ಬಂದಿದ್ದಾರೆ. ಸಾಮಾನ್ಯವಾಗಿ ರಥದ ಸಾರಥಿ ಮೊದಲು ರಥದಿಂದ ಇಳಿಯುತ್ತಾನೆ. ಆನಂತರ ರಥದ ಯಜಮಾನ ಕೆಳಗೆ ಇಳಿಯುತ್ತಾನೆ. ಇದು ಸಂಪ್ರದಾಯವಾಗಿ ಬಂದಿದೆ. ಇಲ್ಲಿ ಸಾರಥಿಯಾಗಿದ್ದವ ಶ್ರೀಕೃಷ್ಣ. ಅರ್ಜುನನಿಗೆ ತಾನು ಯುದ್ಧವನ್ನು ಗೆದ್ದನೆಂಬ ಸ್ವಲ್ಪ ಮಮಕಾರ ಆತನಲ್ಲಿ ಮನೆಮಾಡಿತ್ತು. ಇದು ಕೃಷ್ಣನಿಗೆ ಅರಿವಾಗದೇ ಇದ್ದೀತೇ? 

ಶ್ರೀಕೃಷ್ಣ ''ಅರ್ಜುನಾ ನೀನು ರಥದಿಂದ ಮೊದಲು ಇಳಿ'' ಎಂದ. ಅರ್ಜುನ ಮನಸ್ಸಿಲ್ಲದ ಮನಸ್ಸಿನಿಂದ ಆಯಿತೆಂದು ರಥದಿಂದ ಇಳಿದನು. ಕೃಷ್ಣ ಏಕೆ ಹೀಗೆ ಹೇಳಿದ ಎಂಬುದು ಅವನ ಮನಸ್ಸನ್ನು ಕಾಡುತ್ತಿತ್ತು. ಅರ್ಜುನನು ರಥದಿಂದ ಇಳಿದ ನಂತರ ಕೆಲವೇ ಕ್ಷಣಗಳಲ್ಲಿ ಕೃಷ್ಣನೂ ರಥದಿಂದ ಇಳಿದನು. ಕೃಷ್ಣನು ರಥದಿಂದ ಇಳಿದ ಕೂಡಲೇ ಆ ರಥದಲ್ಲಿ ಅಸಾಧಾರಣ ಜ್ವಾಲೆ ಕಾಣಿಸಿಕೊಂಡು ಇಡೀ ರಥವೇ ಸುಟ್ಟು ಬೂದಿಯಾಯಿತು. ಅರ್ಜುನನಿಗೆ ಆಶ್ಚರ್ಯ ಮತ್ತು ಭಯವೂ ಆಯಿತು. ತಾನು ರಥದಿಂದ ಇಳಿಯುವುದು ತಡವಾಗಿದ್ದರೆ ಏನಾಗುತ್ತಿತ್ತು ಎಂದು ನೆನೆದು ಗಾಬರಿಯೂ ಆಯಿತು. ಇದನ್ನು ಕುರಿತು ಶ್ರೀಕೃಷ್ಣನಿಗೆ ಕೇಳಿದ. ಆಗ ಕೃಷ್ಣ ಹೀಗೆ ಉತ್ತರಿಸಿದ. 

''ಅರ್ಜುನ, ಈ ದಿವ್ಯ ರಥದ ಮಹಿಮೆ ನಿನಗೆ ತಿಳಿಯದು. ಈ ರಥದ ಕಾರ್ಯ ಇಂದಿನ ವಿಜಯದೊಂದಿಗೆ ಮುಕ್ತಾಯವಾಯಿತು. ನಿನ್ನ ಹಿತಕ್ಕಾಗಿಯೇ ನಿನ್ನನ್ನು ರಥದಿಂದ ಮೊದಲು ಇಳಿಸಿದೆ. ಭೀಷ್ಮ, ದ್ರೋಣ, ಕರ್ಣ ಮುಂತಾದ ಶೂರರು ನಿನ್ನ ಮೇಲೆ ಅದ್ಭುತವಾದ ಅಸ್ತ್ರಗಳನ್ನು ಪ್ರಯೋಗಿಸಿದ್ದರು. ಅವು ನಿನ್ನನ್ನು ತಲುಪುವ ಮೊದಲೇ ರಥವೇ ಅವುಗಳನ್ನು ನುಂಗುತ್ತಿತ್ತು. ಆ ಅಸ್ತ್ರಗಳೆಲ್ಲ ಅದೃಶ್ಯರೂಪದಲ್ಲಿ ಈ ರಥದಲ್ಲೇ ಇದ್ದವು. ನಾನು ಮೊದಲು ಇಳಿದಿದ್ದರೆ ಇಂದು ನಿನಗೆ ಅಪಾಯವಾಗುತ್ತಿತ್ತು. ರಥದೊಡನೆ ನೀನೂ ದಹಿಸಿ ಹೋಗುತ್ತಿದ್ದೆ, ನಾನು ಕುಳಿತಿರುವವರೆಗೂ ರಥಕ್ಕೆ ಮತ್ತು ನಿನಗೆ ಅಪಾಯವಿರಲಿಲ್ಲ. ನಾನು ಇಳಿಯುವುದರ ಮೂಲಕ ನನ್ನ ರಕ್ಷಣೆ ಕಾರ್ಯ ಮುಗಿಯಿತು. ರಥವೂ ಭಸ್ಮವಾಯಿತು.''

ಶ್ರೀಕೃಷ್ಣನು ಅರ್ಜುನನ್ನು ಕುರುಕ್ಷೇತ್ರ ಯುದ್ಧದ ಕೊನೆಯವರೆಗೂ ರಕ್ಷಿಸಿದನು. ಭಕ್ತರ ರಕ್ಷಕನಲ್ಲವೇ ನಮ್ಮ ಭಗವಂತ? ಶ್ರೀಕೃಷ್ಣನದು ಜೀವಮಾನವಿಡೀ ವಲಸೆ ಜೀವನ. ಆಧ್ಯಾತ್ಮಿಕವಾಗಿ ವೈಕುಂಠದಿಂದ ಭೂಮಿಗೆ ಇಳಿದುಬಂದವನು. ತನ್ನ ಲೀಲಾಮಾನುಷ ಜೀವನದಲ್ಲೂ ಅವನು ಭೂಮಿಯಲ್ಲಿ ನಿರ್ದಿಷ್ಟ ನೆಲೆಯನ್ನೇ ಕಾಣಲಿಲ್ಲ. ಅವನು ಹುಟ್ಟಿದ್ದು ಮಥುರಾನಗರದ ಕಾರಾಗೃಹದಲ್ಲಿ. ಹುಟ್ಟಿದ ಮರುಕ್ಷಣವೇ ಅವನ ತಂದೆಯು ಭಾರೀ ಮಳೆಯ ನಡುವೆ ನಡುರಾತ್ರಿಯಲ್ಲಿ ಅವನನ್ನು ಗೋಕುಲಕ್ಕೆ ಸಾಗಿಸಿದನು. ನಂದಗೋಪನು ಕಂಸನ ಭಯದ ಕಾರಣ ಕೃಷ್ಣನನ್ನು ಗೋಕುಲದಿಂದ ವ್ರಜಭೂಮಿ (ಗೋವ್ರಜ)ಕ್ಕೆ ಕರೆತಂದನು. ಕೃಷ್ಣನು ಗೋಪಾಲಕರೊಂದಿಗೆ ಗೋಪಾಲಕನಾಗಿ ಅಲ್ಲಿಯೇ ಬೆಳೆದು, ಆನಂತರ ಗೋಪರು ಮತ್ತು ಗೋವುಗಳ ಒಳಿತಿಗಾಗಿ ಗೋವ್ರಜವನ್ನು ಬಿಟ್ಟು ವೃಂದಾವನಕ್ಕೆ ಬಂದನು. ಕಂಸನ ಆಹ್ವಾನದ ಮೇರೆಗೆ ಕೃಷ್ಣನು ತನ್ನ ಜನ್ಮಸ್ಥಾನವಾದ ಮಥುರಾ ನಗರಕ್ಕೆ ಬಂದು ಮಾವ ಕಂಸನನ್ನು ಕೊಂದನು. ಬೇಕೆಂದರೆ ಕೃಷ್ಣನೇ ರಾಜನಾಗಬಹುದಿತ್ತು. ಆದರೆ ಯಯಾತಿಯ ಶಾಪವನ್ನು ನೆವವಾಗಿರಿಸಿ ಕೃಷ್ಣನು ಸಿಂಹಾಸನವನ್ನು ಏರಲಿಲ್ಲ. ಮಥುರಾದಲ್ಲಿ ಕೊಂಚಕಾಲ ನೆಲೆಸಿದನಾದರೂ ಕಾಲಯವನನ ಭಯದಿಂದ ಮಥುರಾನಗರವನ್ನು ತೊರೆಯುವುದು ಅನಿವಾರ್ಯವಾಯಿತು.

ಹಾಗಾಗಿ ಗರುಡನಿಂದ ಹೊಸ ನಗರಕ್ಕೆ ಸೂಕ್ತಸ್ಥಳವನ್ನು ಹುಡುಕಿಸಿ, ಕುಶಸ್ಥಲಿಯಲ್ಲಿ ದೇವಶಿಲ್ಪಿ ವಿಶ್ವಕರ್ಮನಿಂದ ದ್ವಾರಕಾನಗರವನ್ನು ನಿರ್ಮಿಸಿಕೊಂಡು ಅಲ್ಲಿಗೆ ಯಾದವರೊಂದಿಗೆ ವಲಸೆ ಬಂದನು. ಯಾದವರು ಬಹುಕಾಲ ಅಲ್ಲಿಯೇ ವಾಸ ಮಾಡಿದರು. ಕೊನೆಗೆ ಯಾದವರ ಅಂತಃಕಲಹ ಪ್ರಭಾಸಕ್ಷೇತ್ರದಲ್ಲಿ ನಡೆಯಿತು. ಕೃಷ್ಣನು ತನ್ನ ಅವತಾರಸಮಾಪ್ತಿಯ ಕಾಲದಲ್ಲಿ ದ್ವಾರಕೆಯಿಂದಾಚೆ ಒಂದು ವನಪ್ರದೇಶದ ಮರದ ಕೆಳಗೆ ಯೋಗಸಮಾಧಿಯಲ್ಲಿ ಅವತಾರಾಂತ್ಯ ಮಾಡಿಕೊಂಡು ತನ್ನ ಸ್ವಧಾಮವಾದ ವೈಕುಂಠಕ್ಕೆ ತೆರಳಿದನು. ದ್ವಾರಕೆಯು ಸಮುದ್ರದಲ್ಲಿ ಮುಳುಗಿಹೋಯಿತು. ಅಳಿದುಳಿದ ಯಾದವರು ಪಾಂಡವರು ರಕ್ಷಣೆಯಲ್ಲಿ ಇಂದ್ರಪ್ರಸ್ಥಕ್ಕೆ ಬಂದರು. ಹೀಗೆ ಲೋಕಕ್ಕೆ ನೆಲೆಯಾದ ಶ್ರೀಕೃಷ್ಣನಿಗೆ ಒಂದು ಖಚಿತ ನೆಲೆಯೇ ಸಿಗಲಿಲ್ಲ ಎಂಬುದು ಇತಿಹಾಸ.

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top