ಯಕ್ಷಗಾನದಲ್ಲಿ ಪುರಾಣ ಪ್ರಸಂಗಗಳು ಚಿರನೂತನ: ಪೆರ್ಣಂಕಿಲ ಹರಿದಾಸ ಭಟ್

Upayuktha
0

ಅಜೆಕಾರು ಕಲಾಭಿಮಾನಿ ಬಳಗ ಸರಣಿ ತಾಳಮದ್ದಳೆ ಉದ್ಘಾಟನೆ



ಮುಂಬಯಿ: 'ಭಾರತೀಯ ಕಾವ್ಯ- ಪುರಾಣಗಳ ತತ್ವ ಸಂದೇಶಗಳನ್ನು ಯಕ್ಷಗಾನ ತಾಳಮದ್ದಳೆಗಳ ಮೂಲಕ ಊರಿನ ನಾಮಾಂಕಿತ ಕಲಾವಿದರು ತಮ್ಮ ಪ್ರಬುದ್ಧ ಅರ್ಥಗಾರಿಕೆಯಿಂದ ಜನಮಾನಸಕ್ಕೆ ತಲುಪಿಸುತ್ತಾರೆ. ರಾಮಾಯಣ, ಮಹಾಭಾರತ, ಭಾಗವತ ಪುರಾಣಗಳ ಆಧಾರದಲ್ಲಿ ರಚಿಸಲಾದ ವಿವಿಧ ಯಕ್ಷಗಾನ ಪ್ರಸಂಗಗಳ ಮೂಲಕ ಅದು ಸಾಧ್ಯವಾಗಿದೆ. ಇಂತಹ  ಪೌರಾಣಿಕ ಪ್ರಸಂಗಗಳನ್ನು ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆನಿಸುತ್ತದೆ. ಅವು ಎಂದಿಗೂ ಚಿರನೂತನವಾಗಿ ಉಳಿಯುತ್ತವೆ' ಎಂದು ವಿದ್ಯಾ ವಿಹಾರ್ ಪಶ್ಚಿಮದ ಕಲಾಯಿ ವಿಲೇಜ್ ಶ್ರೀ ಗಾಮ್ ದೇವಿ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾ ಗಣಪತಿ ದೇವಸ್ಥಾನದ ಪ್ರಧಾನಾರ್ಚಕ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ ಹೇಳಿದ್ದಾರೆ.


ಅಜೆಕಾರ್ ಕಲಾಭಿಮಾನಿ ಬಳಗದ 2023ನೇ ಸಾಲಿನ ಯಕ್ಷಗಾನ ತಾಳಮದ್ದಳೆ ಸರಣಿಯನ್ನು ಶ್ರೀ ಕ್ಷೇತ್ರದಲ್ಲಿ ಉದ್ಘಾಟಿಸಿ ಅವರು ಆಶೀರ್ವಚನವಿತ್ತರು. ಮುಖ್ಯ ಅತಿಥಿಗಳಾಗಿದ್ದ ಊರಿನ ಪ್ರಸಿದ್ಧ ಅರ್ಥಧಾರಿ ಹಾಗೂ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಮಾಜಿ ಸದಸ್ಯ ಪ್ರೊ‌.ಭಾಸ್ಕರ ರೈ ಕುಕ್ಕುವಳ್ಳಿ  ಶುಭ ಹಾರೈಸಿದರು.


ಬಾಲಕೃಷ್ಣ ಶೆಟ್ಟರ ಸಾಧನೆ:

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಂಬೈಯ ಹಿರಿಯ ಅರ್ಥಧಾರಿ ಕೆ.ಕೆ.ಶೆಟ್ಟಿ ಅವರು ಮಾತನಾಡಿ 'ಮುಂಬೈ ಮಹಾನಗರದಲ್ಲಿ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಗಳಿಗೆ ಶ್ರೇಷ್ಠ ಪರಂಪರೆಯಿದೆ. ಅದನ್ನು ಮುಂದುವರಿಸಿ ಹೊಸ ತಲೆಮಾರನ್ನು ಸೆಳೆಯುವಲ್ಲಿ ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟರ ಸಾಧನೆ ದೊಡ್ಡದು. ಕಳೆದ 20 ವರ್ಷಗಳಿಂದ ಊರಿನ ಹೆಸರಾಂತ ಅರ್ಥಧಾರಿಗಳನ್ನು ಕರೆಸಿ ತಾಳಮದ್ದಳೆ ಕಲಾ ಪ್ರಕಾರವನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ರಂಗದಲ್ಲಿ ಖ್ಯಾತರಾದ ಹಲವು ಹಿರಿಯ ಅರ್ಥಧಾರಿಗಳು, ಭಾಗವತರು ಮತ್ತು ಉದಯೋನ್ಮುಖರನ್ನು ಮುಂಬೈ ಕಲಾಭಿಮಾನಿಗಳಿಗೆ ಅವರು ಪರಿಚಯಿಸಿದ್ದಾರೆ' ಎಂದರು.


ದೇವಸ್ಥಾನದ ಟ್ರಸ್ಟಿ ಹರಿದಾಸ್ ಗೋಪಾಲ್ ಶೆಟ್ಟಿ ಮತ್ತು ಅರ್ಚಕ ಪೆರ್ಣಂಕಿಲ ಶ್ರೀವತ್ಸ ಹರಿದಾಸ ಭಟ್ ಅವರನ್ನು ಬಳಗದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಂಗನಿರ್ದೇಶಕರಾದ ಉಮೇಶ್ ಶೆಟ್ಟಿ, ಕಲಾಪೋಷಕ ಕೃಷ್ಣಶೆಟ್ಟಿ ಉಪಸ್ಥಿತರಿದ್ದರು.


ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಸಾಹಿತಿ ಮತ್ತು ಸಂಘಟಕ ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


'ಜ್ವಾಲಾ ಪ್ರತಾಪ' ತಾಳಮದ್ದಳೆ:

ಉದ್ಘಾಟನಾ ಸಮಾರಂಭದ ಬಳಿಕ ಸರಣಿ ತಾಳಮದ್ದಳೆಯ ಪ್ರಥಮ ಕಾರ್ಯಕ್ರಮವಾಗಿ 'ಜ್ವಾಲಾ ಪ್ರತಾಪ' ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ದೇವಿ ಪ್ರಸಾದ್ ಆಳ್ವ ತಲಪಾಡಿ ಮತ್ತು ಚಂಡೆಮದ್ದಳೆ ವಾದಕರಾಗಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಿದರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ ಮತ್ತು ಹರಿರಾಜ ಗೋಳಿಜಾರ ಅರ್ಥಧಾರಿಗಳಾಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top