"ಸಭಾಧ್ಯಕ್ಷರೆ, ಮಾಜಿ ವಿದ್ಯಾಮಂತ್ರಿ ನನ್ನ ಪುಸ್ತಕ ಹರಿದು ಹಾಕಿದ್ದಾರೆ" ಈಗಿನ ಕಂದಾಯ ಸಚಿವರ ಆರೋಪ!!
"ಸಭಾಧ್ಯಕ್ಷರೆ, ಅವರು ತುಂಬ ಗಲಾಟೆ ಮಾಡ್ತಾ ಇದ್ದರು, ಅದಕ್ಕೆ ನಾಲ್ಕು ಜನ ಸೇರಿ ಅವರನ್ನು ಎತ್ತಿಕೊಂಡು ಹೋಗಿ ಹೊರಗಡೆ ಹಾಕಿದಿವಿ. ಅಷ್ಟೇ ಅಲ್ಲ ಸಭಾಧ್ಯಕ್ಷರೆ, ಮುಂದಿನ ಎರಡು ದಿನ ಓಳಗಡೆ ಬರದಂತೆ ಸಸ್ಪೆಂಡ್ ಮಾಡಿದ್ದೇವೆ. ಸಕತ್ ಹಾರಾಡ್ತಾ ಇದ್ದರು" ತಿಂಗಳ ಹಿಂದೆ ಗೃಹ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿದ್ದ ಪ್ರತಿನಿಧಿ, ಆಕ್ಷೇಪಣೆ ಸಮರ್ಥನೆಗಳನ್ನು ಒಟ್ಟು ಮಾಡಿ ಹೇಳಿದರು!!
"ಸರ್, ವಿರೋಧ ಪಕ್ಷದ ಯಾರೂ ಇವತ್ತು ಒಳಗಡೆ ಬಂದಿಲ್ಲ, ಎಲ್ಲರೂ ಧ್ವಜದ ಕಟ್ಟೆಯ ಬಳಿ ಗಾಂಧಿ ಫೋಟೋ ಇಟ್ಕೊಂಡು ದಿಕ್ಕಾರ ಕೂಗ್ತಾ ಇದಾರೆ ಸರ್. ನಾವು ಕಲಾಪ ಮುಂದುವರಿಸಿ ಬಿಲ್ ಪಾಸ್ ಮಾಡಿದ್ವಿ"
"ಸಭಾಧ್ಯಕ್ಷರೆ, ಆ ಮೂರ್ ಜನ ಸಿಸ್ಟರ್ಸ್, ಸ್ಕೂಲ್ ಒಳಗಡೆ... ಸಾರಿ, ಸಾರಿ.. ಸದನದೊಳಗಡೆ ಮೊಬೈಲ್ ತರಬಾರದು ಅಂತ ಗೊತ್ತಿದ್ರೂ ತಗೊಂಡ್‌ಬಂದು, ಮುಂದುಗಡೆ ಕುಳಿತ ಆರೋಗ್ಯ ಮಂತ್ರಿಯ ಕಿವಿ ಮೇಲಿದ್ದ ಕಜ್ಜಿಯ ಫೋಟೋ ತೆಗೆದಿದಾರೆ ಸಭಾಧ್ಯಕ್ಷರೆ. ಫೋನ್ ಕಿತ್ಕೊಂಡು, ಎಲ್ಲ ಡಿಲೀಟ್ ಮಾಡಿದಿವಿ ಸಭಾಧ್ಯಕ್ಷರೆ"
"ನಿಲ್ಲಿಸಿ" ಎಂದು ಹೇಳಿದ ಸೋಶಿಯಲ್ ಸ್ಟಡೀಸ್ ಟೀಚರ್ ಗೌರಿ ಸುಭಾಶ್‌ರವರು, ಪ್ರಹಸನ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು, "ಮಂತ್ರಿ ಮಂಡಲವನ್ನು ವಿಸರ್ಜನೆ ಮಾಡಲಾಗಿದೆ, ನಾಳೆಯಿಂದ ಮಂತ್ರಿ ಮಂಡಲ ಇರೋದಿಲ್ಲ. ಎಲ್ಲ ನಿಮ್ಮ ನಿಮ್ಮ ತರಗತಿಗಳಿಗೆ ಹೋಗಿ" ಎಂದು ಹೇಳಿ ಕಳಿಸಿದರು.
ವಿಷಯ ಅಲ್ಲಿಗೆ ಮುಗಿಯಲಿಲ್ಲ, ಹೆಡ್ ಮಾಸ್ಟರ್ ಸತ್ಯನಾರಾಯಣ ಸೋಶಿಯಲ್ ಸ್ಟಡೀಸ್ ಟೀಚರ್ ಗೌರಿ ಸುಭಾಶ್‌ರವರನ್ನು ಕರೆದು "ಯಾಕ್ರಿ? ಶಾಲೆ ಮಂತ್ರಿ ಮಂಡಲವನ್ನು ವಿಸರ್ಜನೆ ಮಾಡಿದ್ರಿ? ಮಕ್ಕಳಿಗೆ ಪ್ರಜಾಪ್ರಭುತ್ವದ ಜ್ಞಾನ ಇರಬೇಕು ಅಂತ ಮೊನ್ನೆ ವಿಧಾನ ಸಭೆಗೆ ಮಕ್ಕಳನ್ನು ಕರ್ಕೊಂಡು ಹೋದವರೂ ನೀವೆ, ನಂತರ ಮಕ್ಕಳನ್ನೆಲ್ಲ ಸೇರಿಸಿ ಶಾಲೆಯಲ್ಲಿ 'ಮಂತ್ರಿ ಮಂಡಲ, ಸಭಾಧ್ಯಕ್ಷರು, ವಿರೋಧ ಪಕ್ಷ' ಅಂತೆಲ್ಲ ಮಾಡಿದವರೂ ನೀವೆ, ಇವತ್ತು ಅದನ್ನು ವಿಸರ್ಜನೆಯನ್ನೂ ಮಾಡಿದ್ರಿ ಅಂತ ಹುಡುಗರು ಹೇಳ್ತಿದಾರೆ? ಏನಾಯ್ತು?"
"ಇಲ್ಲ ಸರ್, ಮೊನ್ನೆ ವಿಧಾನ ಸಭೆಗೆ ಮಕ್ಕಳನ್ನು ಕರ್ಕೊಂಡು ಹೋಗಬಾರದಾಗಿತ್ತು, ಪ್ರಜಾ ಪ್ರಭುತ್ವ, ಪೌರ ನೀತಿಗಳೆಲ್ಲ ಪಾಠ ಮಾಡೋಕೆ ಮಾತ್ರ ಸರಿ. ವರ್ತಮಾನದ ಪ್ರಜಾಪ್ರಭುತ್ವದ ಚಿತ್ರಣಗಳನ್ನು ಮಕ್ಕಳಿಗೆ ಪರಿಚಯಿಸೋದು ಒಳ್ಳೇದಲ್ಲ ಅನಿಸುತ್ತೆ" ಮಕ್ಕಳ ಮಂತ್ರಿ ಮಂಡಲದ ಪ್ರಾಕ್ಟಿಕಲ್ ಪ್ರಹಸನದ ಕತೆಯನ್ನು ವಿಸ್ತಾತವಾಗಿ ತಿಳಿಸಿದ ಸೋಶಿಯಲ್ ಸ್ಟಡೀಸ್ ಟೀಚರ್ ಗೌರಿ ಸುಭಾಶ್‌ರವರು, ಮಕ್ಕಳ ಮಂತ್ರಿ ಮಂಡಲ ರದ್ದು ಮಾಡಿದ್ದಕ್ಕೆ ಕಾರಣವನ್ನೂ ಹೇಳಿದರು.
ಈಗ ಆ ಶಾಲೆಯಲ್ಲಿ ಪ್ರತೀ ವರ್ಷ ಇರುತ್ತಿದ್ದ 'ಮಂತ್ರಿ ಮಂಡಲ' ಇಲ್ಲ!!
ಇದಕ್ಕೆಲ್ಲ ಕಾರಣ ಸೋಶಿಯಲ್ ಸ್ಟಡೀಸ್ ಟೀಚರ್ ಗೌರಿ ಸುಭಾಶ್‌ರವರು ಮಕ್ಕಳನ್ನು ವಿಧಾನ ಸಭೆಗೆ ಕರ್ಕೊಂಡು ಹೋಗಿದ್ದು, ನಂತರ ಅಣಕು ಮಂತ್ರಿ ಮಂಡಲದ ವಿಧಾನ ಸಭೆ ಕಲಾಪ ನೆಡೆಸಿದ್ದು!!
ಕಾಲ್ಪನಿಕ ಪ್ರಹಸನ ಇಲ್ಲಿಗೆ ಮುಕ್ತಾಯ!!
**
ಸುಮಾರು 25 ವರ್ಷಗಳ ಹಿಂದೆ ಪತ್ರಕರ್ತರಿಗೆ ಸಿಗುವ ಪಾಸ್ ಸಿಕ್ಕಿ ನಾನು ವಿಧಾನ ಸೌಧದ ಒಳಗಡೆ ಹೋಗಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸಭೆ ನೆಡೆಯುತ್ತಿರುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೆಲ ಸಮಯ ಕುಳಿತು ಬಂದಿದ್ದೆ. ಸರಿಯಾಗಿ ನೆನಪಿಲ್ಲ, ಬಹುಶಃ ರಾಜಕಾರಣಿ ಶ್ರೀಮತಿ ರಾಣಿ ಸತೀಶ್‌ರವರು ಅವತ್ತು ಮಾತಾಡ್ತಾ ಇದ್ದುದನ್ನು ಗಮನಿಸಿದ ನೆನಪು.
ಅದಾದ ಮೇಲೆ ಮೊನ್ನೆ ಅಡಿಕೆ ಬೆಳೆಗಾರರ ಪರವಾಗಿ ಸಂಬಂಧಿತ ಸಚಿವರನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಅಡಿಕೆ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸುವ ನಿಯೋಗದಲ್ಲಿ ನನ್ನನ್ನೂ ಬೆಳೆಗಾರರ ಸಂಘ ಸೇರಿಸಿದ್ದರಿಂದ, ವಿಧಾನ ಸೌಧ, ವಿಕಾಸ ಸೌಧಗಳ ಒಳ ಮನೆಯವರೆಗೂ ಹೋಗಿ ಬರುವ ಅವಕಾಶವಾಯಿತು.
ಸದನ ನೆಡೆಯುತ್ತಿದ್ದ ಎರಡು ದಿನಗಳ ಕಾಲ ಸೌಧಗಳ ಕಾರಿಡಾರ್‌ನಲ್ಲೂ, ಸುಮಾರು ಕಾಲು ಗಂಟೆ ಕಲಾಪ ನೆಡೆಯುವಾಗ ಪ್ರೇಕ್ಷಕರ ಗ್ಯಾಲರಿಯಲ್ಲೂ ಇದ್ದು ಬರುವ ವಿಶಿಷ್ಟ ಅನುಭವವೂ ಆಯಿತು.
ನಾವಿದ್ದ ಎರಡು ದಿನದಲ್ಲಿ, ಮೊದಲ ದಿನ ವಿರೋಧ ಪಕ್ಷದವರು ಸದನದ ಬಾವಿಗಿಳಿದು ಕೈಯಲ್ಲಿದ್ದ ಪತ್ರಗಳನ್ನೆಲ್ಲ ಹರಿದು ಆಡಳಿತ ಪಕ್ಷದವರ ಕಡೆಗೆ ಬಿಸಾಡಿದ್ದನ್ನು ಅನುಚಿತ ವರ್ತನೆ ಎಂದು ಸಭಾಧ್ಯಕ್ಷರು ನಿರ್ಧರಿಸಿ, ವಿರೋಧ ಪಕ್ಷದ ಶಾಸಕರನ್ನು ಸದನದಿಂದ ಹೊರಗಡೆ ಹೋಗುವಂತೆ ಸೂಚಿಸಿದರೂ, ಸದನದ ಬಾವಿಯಲ್ಲೇ ಪ್ರತಿಭಟನೆ ಮುಂದುವರಿಸಿದಾಗ, ಸಭಾಧ್ಯಕ್ಷರ ಸೂಚನೆ ಮೇರೆಗೆ ಸದನದ ರಕ್ಷಣಾಧಿಕಾರಿಗಳು ಕೆಲವು ವಿರೋಧ ಪಕ್ಷದ ಶಾಸಕರನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿ ಹೊರಗೆ ಬಿಟ್ಟಿದ್ದು, ಹೊರಗಡೆ ಗೌಜು ಗದ್ದಲ ಶುರುವಾಗಿದ್ದು, ಉಳಿದ ವಿರೋದ ಪಕ್ಷದ ಶಾಸಕರು ಸಭಾತ್ಯಾಗ ಮಾಡಿ ಸದನದಿಂದ ಎದ್ದು ಬಂದಿದ್ದು ಎಲ್ಲವನ್ನು ವಿಧಾನ ಸೌಧದಲ್ಲಿದ್ದ ನಾವುಗಳು ಸದನದ ಹೊರಗಡೆ ಇದ್ದ CC ಟಿವಿಯಲ್ಲಿ ನೋಡಿ ಕಣ್ತುಂಬಿ ಕೊಂಡೆವು.
ಎರಡನೆ ದಿನ ಸದನದ ಕಲಾಪ ನೆಡೆಯುವಾಗ ವಿರೋಧ ಪಕ್ಷದ ಎಲ್ಲರೂ ವಿಧಾನ ಸೌಧದ ಹೊರಗಡೆ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮುಂದುವರೆಸಿದರೆ, ಆಡಳಿತ ಪಕ್ಷ ಸದನದ ಒಳಗೆ ಯಾವುದೇ ಚರ್ಚೆ ಇಲ್ಲದೆ ಅನೇಕ ಬಿಲ್ಲುಗಳನ್ನು ಪಾಸ್ ಮಾಡಿತು.
ವಿಷಯ ಇದ್ಯಾವುದೂ ಅಲ್ಲ....!!!
ಇವಿಷ್ಟು ವಿಷಯಗಳನ್ನು ಮನೆಯಲ್ಲಿ ಕುಳಿತ ರಾಜಕೀಯ ಆಸಕ್ತರು ನೇರ ಪ್ರಸಾರದಲ್ಲೂ ನೋಡಿರುತ್ತಾರೆ, ನಾವು ಸದನದ ಒಳ ಭಾಗದ ಪ್ರೇಕ್ಷಕರ ಗ್ಯಾಲರಿಯಲ್ಲಿ, ಸೌಧದ ಕಾರಿಡಾರ್‌ನಲ್ಲಿ ಹತ್ತಿರದಿಂದ ಕೆಲ ನಿಮಿಷಗಳು ನೋಡಿದೆವು ಅಷ್ಟೆ.
ವಿಶೇಷ ಅನಿಸಿದ್ದು, ಕುತೂಹಲದಿಂದ ಸದನದ ಕಲಾಪಗಳನ್ನು ನೋಡಲು ಬಂದಿದ್ದ ಹತ್ತಾರು ಶಾಲೆಗಳ ಸಾವಿರಾರು ವಿದ್ಯಾರ್ಥಿಗಳನ್ನು ಕಂಡಾಗ. ವಿಧಾನ ಸೌಧದ ಸುತ್ತ ಎಲ್ಲಿ ನೋಡಿದರೂ ಬೇರೆ ಬೇರೆ ಸಮವಸ್ತ್ರದ ಮಕ್ಕಳ ಸಾಲು ಸಾಲು!! ವಿಧಾನ ಸೌಧದ ಕಾರಿಡಾರ್ ಒಳಗಡೆ, ಸದನದ ಒಳ ಹೋಗುವುದಕ್ಕೆ ಸಮಯಾವಕಾಶದಿಂದ ಕಾದು ಕುಳಿತ ಕುತೂಹಲ ಭರಿತ ಆ ವಿದ್ಯಾರ್ಥಿಗಳ ಕಣ್ಣುಗಳು!!!
ನಾವು ಕಲಾಪ ನೆಡೆಯುವಾಗ ಪ್ರೇಕ್ಷಕರ ಗ್ಯಾಲರಿಗೆ ಹೋದಾಗಲೂ, ಗ್ಯಾಲರಿ ನೂರಾರು ವಿದ್ಯಾರ್ಥಿಗಳಿಂದ ತುಂಬಿತ್ತು. ಪ್ರತೀ ವಿದ್ಯಾರ್ಥಿ ಗುಂಪಿಗೂ 10 ನಿಮಿಷ ಸದನದಲ್ಲಿ ಭಾಗವಹಿಸುವ ಅವಕಾಶ!!
ಆ ಮಕ್ಕಳ ಒಂದೆರಡು ಫೋಟೋ ತೆಗೆಯುವ ಮನಸ್ಸಾಗಿ, ಮೊಬೈಲ್‌ನಲ್ಲಿ ಫೋಟೋ ತೆಗೆದಿಟ್ಟುಕೊಂಡಿದ್ದೂ ಆಯ್ತು.
***
ಇವತ್ತು ಆ ಫೋಟೋಗಳನ್ನೆಲ್ಲ ನೋಡುವಾಗ, ಮೇಲಿನ ಪ್ರಹಸನ ಕಲ್ಪನೆಗೆ ಬಂತು!!!
ವಿಧಾನ ಸೌಧದಲ್ಲಿ ನೆಡೆದ ಕಲಾಪಗಳನ್ನು ನೋಡಿದ ಶಾಲಾ ಮಕ್ಕಳು, ಮರುದಿನ ಶಾಲೆಗೆ ಹೋದಾಗ ಹೀಗೊಂದು ಪ್ರಹಸನ ಮಾಡಿರಬಹುದಾ?!!
ಮಕ್ಕಳಾಟ ಶಬ್ದ ಸೌಂಡ್ ಮಾಡುತ್ತಿರುವ ಇವತ್ತಿನ ದಿನಗಳಲ್ಲಿ, ಯಾವುದು ಮಕ್ಕಳಾಟ ಅನ್ನುವುದು ಒಂದು ಗೊಂದಲ!!
ಮಕ್ಕಳು ಶಾಲೆಯಲ್ಲಿ ಮಾಡಿದ ಪ್ರಹಸನ ಮಕ್ಕಳಾಟವಾ? ಸದನದೊಳಗೆ ಪಕ್ಷಗಳು ನೆಡೆಸುವ ಮನರಂಜನೆಯ ಕಲಾಪ ಮಕ್ಕಳಾಟವಾ? ಅದನ್ನೆಲ್ಲ ನೋಡುವುದಕ್ಕೆ ಮಕ್ಕಳನ್ನು ಕರ್ಕೊಂಡು ಹೋದ ಟೀಚರ್‌ಗಳದ್ದು ಮಕ್ಕಳಾಟವಾ?
ಅಥವಾ...
ಅಥವಾ...
ವಿಧಾನ ಸೌಧದಲ್ಲಿ ಕಲಾಪ ವೀಕ್ಷಣೆಯ ಸರದಿಗೆ ಕಾಯುತ್ತ ಕುಳಿತ ಮಕ್ಕಳ ಫೋಟೋ ತೆಗೆದು, ಇಷ್ಟು ಅಕ್ಷರಗಳನ್ನು ಈಗ ಹೀಗೆ ಜೋಡಿಸಿ, ಪ್ರಹಸನ ಕಲ್ಪಿಸಿದ್ದು ಮಕ್ಕಳಾಟವಾ!!?
-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ