ಪ್ರಪಂಚದ ಭೌಗೋಳಿಕ ಪ್ರದೇಶಗಳು ಸ್ವಾಭಾವಿಕವಾಗಿಯೆ ವೈವಿಧ್ಯತೆಯಿಂದ ಕೂಡಿವೆ. ಜೀವ ವೈವಿಧ್ಯತೆ ಮಾತ್ರ ಮಿಕ್ಕ ಎಲ್ಲಾ ವೈವಿಧ್ಯತೆಗಳಿಗಿಂತ ವಿಭಿನ್ನ ಹಾಗೂ ವೈಶಿಷ್ಯವೆನಿಸಿದೆ. ಜೀವ ವೈವಿಧ್ಯತೆಯಲ್ಲಿ ಪ್ರಾಣಿವರ್ಗ ಮತ್ತು ಸಸ್ಯವರ್ಗಗಳು ವಿಶೇಷವೆನಿಸಿವೆ. ಜೀವವೈವಿಧ್ಯತೆ ಎಂದಾಕ್ಷಣ ಸಣ್ಣ ಸಣ್ಣ ಇರುವೆಗಳಿಂದ ಹಿಡಿದು ದೊಡ್ಡ ದೊಡ್ಡ ಆನೆಗಳು , ಡೈನೋಸರ್ ಗಳು , ತಿಮಿಂಗಿಲಗಳವರೆಗೂ ಸೇರಿಕೊಳ್ಳುತ್ತವೆ. ಪ್ರಾಣಿ ಪ್ರಭೇಧಗಳಲ್ಲಿ ಬೆಕ್ಕು , ನಾಯಿ, ಕುರಿ, ಹಸು, ಎಮ್ಮೆ, ಎತ್ತು , ಕೋಣ, ಕುದುರೆ, ಜಿಂಕೆ, ಮೀನು, ಆಮೆ, ಒಂಟೆ, ನರಿ, ತೋಳ, ಕರಡಿ , ಚಿರತೆ, ಹುಲಿ, ಸಿಂಹ, ಆನೆ ಇತ್ಯಾದಿಗಳಿವೆ. ಗಿಳಿ , ಕೋಗಿಲೆ, ಕಾಗೆ, ಗುಬ್ಬಿ, ನವಿಲು, ಹದ್ದು , ಗರುಡ, ಮರಕುಟಿಗ ಇತ್ಯಾದಿ ಪಕ್ತಿ ಪ್ರಬೇಧಗಳೂ ಇವೆ. ಪ್ರಾಣಿ, ಪಕ್ಷಿ ಮತ್ತು ಸಸ್ಯಪ್ರಬೇಧಗಳ ಜೀವ ವೈವಿಧ್ಯತೆಯನ್ನು ರಕ್ಷಿಸುವಲ್ಲಿ ಹುಲಿಗಳ ಪಾತ್ರ ಮಹತ್ವವೆನಿಸಿದೆ. ಹುಲಿಗಳ ಸಂರಕ್ಷಣೆಯ ಮೂಲಕ ಇಡೀ ಪರಿಸರ ವ್ಯವಸ್ಥೆಯ ಉಳಿವಿಗೆ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ವರ್ಷದ ಒಂದು ವಿಶೇಷ ದಿನವನ್ನು ಅಂದರೆ ಜುಲೈ 29 ನ್ನು ಕಾಯ್ದಿರಿಸಿ ವಿಶ್ವ ಹುಲಿ ದಿನವೆಂದು ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಅಳಿವಿನ ಸಮೀಪದಲ್ಲಿರುವ ಪ್ರಾಣಿಗಳ ಪ್ರಭೇದಗಳಲ್ಲಿ ಹುಲಿಗಳೂ ಒಂದು. ಆದ್ದರಿಂದ, ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು, ಅಂತಾರಾಷ್ಟ್ರೀಯ ಹುಲಿ ದಿನ ಅಥವಾ ಜಾಗತಿಕ ಹುಲಿ ದಿನವನ್ನು ಪ್ರತಿವರ್ಷ ಜುಲೈ 29 ರಂದು ಆಚರಿಸಲಾಗುತ್ತದೆ.
ಜುಲೈ 29 ರ ದಿನಾಂಕವು ಐತಿಹಾಸಿಕವಾದುದು. ಏಕೆಂದರೆ ಈ ದಿನದಂದು ಹಲವಾರು ದೇಶಗಳು 2010 ರಲ್ಲಿ ರಷ್ಯಾದಲ್ಲಿ ನಡೆದ ಸೇಂಟ್ ಪೀಟರ್ಸ್‌ಬರ್ಗ್ ಟೈಗರ್ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. ಜಾಗತಿಕವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹುಲಿಗಳ ನೈಸರ್ಗಿಕ ಆವಾಸಸ್ಥಾನವನ್ನು ಕಾಪಾಡುವುದು ಈ ಒಪ್ಪಂದದ ಪ್ರಮುಖ ಉದ್ದೇಶ.
ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಇದು ರಾಜಗಾಂಭೀರ್ಯವಾದ ನಡಿಗೆಯುಳ್ಳ ಮತ್ತು ಭವ್ಯವಾದ ಪ್ರಾಣಿ. ಹುಲಿಯು ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಅಗ್ರ ಪರಭಕ್ಷಕ ಮತ್ತು ಆಹಾರ ಸರಪಳಿಯ ತುದಿಯಲ್ಲಿರುತ್ತದೆ. ಕಾಡಿನ ಸಸ್ತನಿ ಪ್ರಾಣಿಗಳ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಹುಲಿಗಳು ಕೊಡುಗೆ ನೀಡುತ್ತವೆ. ಏಕೆಂದರೆ ಬೇಟೆಯಾಡುವ ಸಸ್ಯಹಾರಿಗಳ ಸಮತೋಲನ ಮತ್ತು ಅವು ಆಹಾರ ನೀಡುವ ಸಸ್ಯವರ್ಗವನ್ನು ಕಾಪಾಡಿಕೊಳ್ಳುತ್ತವೆ. ಹುಲಿಗಳ ಸಂಖ್ಯೆ ಕುಸಿತವಾಗುತ್ತಿರುವುದಕ್ಕೆ ಕಾರಣಗಳು ಹೀಗಿವೆ. ಮರಗಳನ್ನು ಕಡಿಯುವುದರಿಂದ ಆವಾಸಸ್ಥಾನಗಳ ನಷ್ಟ, ಬೇಟೆ ಮತ್ತು ಹುಲಿಯ ದೇಹದ ಭಾಗಗಳ ಅಕ್ರಮ ವ್ಯಾಪಾರ ಮುಂತಾದವು ಪ್ರಮುಖ ಅಂಶಗಳಾಗಿದೆ.
ಹುಲಿ ಇದರ ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್ ಎಂದು. ಪ್ರಾಣಿಶಾಸ್ತ್ರದ ಪ್ರಕಾರ ಹುಲಿಯು ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ. ಪ್ಯಾಂಥೆರಾ ವಂಶಕ್ಕೆ ಸೇರಿದ ನಾಲ್ಕು ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ ಎಂದು ಅಧ್ಯಯನಗಳಿಂದ ತಿಳಿದು ಬರುತ್ತವೆ. ಇಂದು ವಿಶ್ವದಲ್ಲಿರುವ ಎಲ್ಲಾ ಹುಲಿ ಪ್ರಭೇದಗಳು ಸಂರಕ್ಷಣೆಗೊಳಪಟ್ಟಿದ್ದರೂ ಸಹ ಹುಲಿಗಳ ಕಳ್ಳಬೇಟೆ ಮುಂದುವರಿದೇ ಇದೆ.ತನ್ನ ಆಕರ್ಷಕ ರೂಪ, ಬಲ ಮತ್ತು ಸಾಹಸಪ್ರವೃತ್ತಿಗಳಿಂದಾಗಿ ಹುಲಿ ವನ್ಯಜೀವಿಗಳ ಪೈಕಿ ಮಾನವನಿಂದ ಅತಿ ಹೆಚ್ಚು ಗೌರವಿಸಲ್ಪಟ್ಟಿದೆ. ಹುಲಿಯು ಅನೇಕ ಧ್ವಜಗಳಲ್ಲಿ ಕಾಣಬರುತ್ತದೆ. ಅಲ್ಲದೆ ಏಷ್ಯಾದ ಹಲವು ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿ ಎಂಬ ಸ್ಥಾನವನ್ನು ಸಹ ಪಡೆದಿದೆ.
ಭಾರತವು ವಿಶ್ವದ ಅತಿ ದೊಡ್ಡ ಸಂಖ್ಯೆಯ ಕಾಡಿನ ಹುಲಿಗಳನ್ನು ಹೊಂದಿದೆ. ಹುಲಿಗಳನ್ನು ಸಂರಕ್ಷಿಸಿಕೊಳ್ಳಲು 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ದೇಶದಾದ್ಯಂತ ಇರುವ ಹುಲಿಗಳನ್ನು ಸಂರಕ್ಷಣೆಗೆ ಒಳಪಡಿಸಲಾಗಿದೆ. ಇಂದು ವಿಶ್ವದಲ್ಲಿರುವ ಎಲ್ಲಾ ಹುಲಿ ಪ್ರಭೇದಗಳು ಸಂರಕ್ಷಣೆಗೊಳಪಟ್ಟಿದ್ದರೂ ಸಹ ಹುಲಿಗಳ ಕಳ್ಳಬೇಟೆ ಮುಂದುವರಿದೇ ಇದೆ.ತನ್ನ ಆಕರ್ಷಕ ರೂಪ, ಬಲ ಮತ್ತು ಸಾಹಸ ಪ್ರವೃತ್ತಿಗಳಿಂದಾಗಿ ಹುಲಿ ವನ್ಯಜೀವಿಗಳ ಪೈಕಿ ಮಾನವನಿಂದ ಅತಿ ಹೆಚ್ಚು ಗೌರವಿಸಲ್ಪಟ್ಟಿದೆ. ಹುಲಿ ಮಾತ್ರವಲ್ಲದೆ ವಿಶ್ವದ ಎಲ್ಲಾ ಪ್ರಾಣಿ ಪ್ರಭೇಧಗಳನ್ನು ಸಂರಕ್ಷಿಸುವ ಮೂಲಕ ನಮ್ಮ ಜೈವಿಕ ಪರಿಸರವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕಾಗಿದೆ. ಆ ಮೂಲಕ ಸಂಪೂರ್ಣ ಪ್ರಕೃತಿಯ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
-ಕೆ. ಎನ್. ಚಿದಾನಂದ . ಸಾಹಿತಿ . ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ