ಹೊತ್ತು ಮುಳುಗಿ ಕತ್ತಲಾಗುವ ಸಮಯ ಸಮೀಪ. ಕಿಟಕಿಯಿಂದ ಮೆಲ್ಲನೆ ನುಗ್ಗಿ ಬಂದು ಮನೆ ತುಂಬಾ ಹಾರಾಡುತ ಇದ್ದ ನೀನು ಪುಸ್ತಕದ ಪುಟದ ಮೂಲೆಯಲ್ಲಿ ಬಂದು ಕುಳಿತು ಮಿರ ಮಿರನೇ ಹೊಳೆಯುತ್ತ ಓದಿನ ಮೌನ ರಾಗಕ್ಕೆ ಅಲಂಕಾರವಾಗಿದ್ದೆ. ಅಕ್ಷರಗಳ ಕಡೆಗಿದ್ದ ನನ್ನ ಕಣ್ಣುಗಳನ್ನು ನೀನು ಮತ್ತೆ ಮತ್ತೆ ನಿನ್ನತ್ತ ಸೆಳೆಯುತ್ತಿದ್ದು, ಪುಸ್ತಕದ ಪುಟಗಳನ್ನು ತಿರುವಿ ಹಾಕಿದಾಗ ಅದೆಲ್ಲಿ ಗಾಳಿಯಲ್ಲಿ ಮಾಯಾವಾಗಿ ಬಚ್ಚಿಟ್ಟು ಕೊಂಡಿಯೋ ನಾ ಕಾಣೆ. ನೀನು ನನ್ನ ಬಳಿ ಬಂದಾಗ ನನ್ನ ಗಮನ ನಿನ್ನತ್ತ ಸೆಳೆದು ಹೋಯಿತು. ನಿನ್ನನ್ನು ಹುಡುಕುತ್ತ ಕಿಟಕಿಯತ್ತ ಒಮ್ಮೆ ಕಣ್ಣರಲಿಸಿದಾಗ ಸಾವಿರಾರು ನಿನ್ನ ಗುಂಪಿನೊಂದಿಗೆ ಬೆರೆತು ಹೋಗಿ ಪೊದೆ, ಮರದ ಹಿಂದೆ ಕಣ್ಣಮುಚ್ಚಾಲೆಯ ಆಟವಾಡುತ್ತ ಮೋಡಿ ಮಾಡುವ ಕಳ್ಳಾಟ ನಿನ್ನದು. ಕತ್ತಲ ಪರದೆ ಮುಚ್ಚಿದ್ದರೂ ನಿನ್ನದೇ ಹಬ್ಬ ಅನ್ನುವ ರೀತಿ ಮೆರುಗು ನೀಡುವ ನೀನು ಅಬ್ಬಾ ಅದೆಂತ ಚಮತ್ಕಾರಿ ಆಗಿರಬಹುದು.
ಕಗ್ಗತ್ತಲಲ್ಲಿ ನಿನ್ನ ಹೊಳೆಯುವ ಗುಂಪನ್ನು ಕಂಡಾಗ ಚಂದಿರನೂರಿನ ತಾರೆಗಳು ಭೂಮಿಗೆ ಬಂದಿಳಿದಿದೆಯೇನೋ ಎಂದು ಅನಿಸಿತು. ತಂಪಾದ ವಾತಾವರಣದ ಕಾಡುಗಳೇ ನಿನ್ನ ವಾಸಸ್ಥಾನ ಅಲ್ಲವೇ. ಮಳೆಗಾಲದ ಸಮಯದಲ್ಲಿ ಅನೇಕ ಅತಿಥಿಗಳಲ್ಲಿ ನೀನು ಬಹಳ ಆಕರ್ಷಕವಾಗಿ ಸೆಳೆಯುವೆ. ನಿನ್ನನು ಹಿಡಿಯಲು ಸಾಹಸ ಮಾಡುವ ಮಕ್ಕಳ ಕೈಗೆ ಅಂತೂ ಸಿಕ್ಕರೆ ಅವರ ಕೈ ಮುಷ್ಟಿಯಲ್ಲಿ ಬಂಧಿಯಾಗಿ ಹೋಗಿ ಒದ್ದಾಡುವ ನಿನ್ನ ಪಜೀತಿ ನೋಡಿ ಅಯ್ಯೋ ಅನಿಸುವುದು. ಹಬ್ಬಿರುವ ಕಾಡುಗಳ ನಡುವೆ ನೀನು ಪೋಣಿಸಿದ ನಕ್ಷತ್ರಗಳ ಮಾಲೆಯಂತೆ ಕಂಗೊಳಿಸುತ ಹೊಳೆಯುವ ನೀನು ಬೆಳಕು ಚೆಲ್ಲುವುದರಿಂದ ಇತರ ಜೀವಿಗಳಿಗಿಂತ ವಿಶೇಷವೇ ಸರಿ.
ಈ ಜೀವಿಯ ಬಗ್ಗೆ ಮಳೆಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿ ತಿಳಿದಿರುತ್ತದೆ. ಇರುಳಲ್ಲಿ ಮಿರ ಮಿರ ಮಿಂಚುತ್ತ ಕಣ್ಣಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸುವ ಜಾದು ಜೀವಿ ಮಿಂಚು ಹುಳ. ಇದರಲ್ಲಿ ಅಚ್ಚರಿ ವಿಚಾರವೇನೆಂದರೆ ಮಿಂಚು ಹುಳವನ್ನು ಮುಟ್ಟಿದಾಗ ಅದು ತಣ್ಣನೆ ಆಗಿರುವ ಬೆಳಕನ್ನು ಬೀರುತ್ತದೆ ಎಂದು ತಿಳಿಯಬಹುದು. ಇಂತಹ ಅನೇಕ ಬೆರಗುಗೊಳಿಸುವ ವಿಚಾರಗಳನ್ನು ಪ್ರಕೃತಿಯು ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಿದೆ ಅನ್ನುವುದು ನಿಜಕ್ಕೂ ವಿಸ್ಮಯ. ಮಿಂಚುಹುಳಗಳು ಮಾತ್ರವಲ್ಲದೆ ಭೂಮಿಯಲ್ಲಿ ವಾಸಿಸುವ ಇತರ ಜೀವಿಗಳ ಜೀವನ ಕ್ರಮ ಮತ್ತು ಕಾರ್ಯಗಳು ವಿಭಿನ್ನವಾಗಿರುತ್ತದೆ. ಪ್ರಕೃತಿಯು ಹೊಸತನಕ್ಕೆ ತೆರೆದು ಕೊಂಡಾಗ ಬಹು ಅಚ್ಚರಿಯಾದ ವಿಷಯಗಳು ಬೆಳಕಿಗೆ ಬರುತ್ತದೆ.
-ವಿಜಯಲಕ್ಷ್ಮಿ. ಬಿ ಕೆಯ್ಯೂರು
ಪತ್ರಿಕೋದ್ಯಮ ವಿದ್ಯಾರ್ಥಿನಿ.
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ