ಎಲ್ಲಾ ಹೆತ್ತವರಿಗೂ ಅವರವರ ಮಕ್ಕಳೇ ಪ್ರಪಂಚ. ತಮ್ಮ ಜೀವದ ಕುಡಿಗಳಿಗಾಗಿ ಜೀವಮಾನದುದ್ದಕ್ಕೂ ಸರ್ವಸ್ವವನ್ನು ಧಾರೆಯೆರೆದು ಬದುಕುತ್ತಾರೆ. ಅವರಿಗಾಗಿ ಬದುಕಲ್ಲಿ ಎಂಥದ್ದೇ ನೋವುಗಳನ್ನು ಸೆರಗಂಚಿನಲ್ಲಿ ಮುಚ್ಚಿಟ್ಟು ಲವಲವಿಕೆಯಿಂದ ಬದುಕನ್ನು ಎದುರಿಸುತ್ತಿರುವವರೇ ಹೆತ್ತವರು. ಮಕ್ಕಳಿಗೆ ಬೇಕಾಗಿ ದಿನವಿಡೀ ಕೆಲಸ ಮಾಡುವವರೂ ಅವರೇ. ಹೀಗೆ ಹೆತ್ತವರ ಪ್ರೀತಿ, ಕಾಳಜಿ ಮತ್ತು ಮಮಕಾರವನ್ನು ವರ್ಣಿಸಲು ಪದಗಳೇ ವಿರಳ. ಮಕ್ಕಳ ಬದುಕಿನಲ್ಲೂ ತಂದೆ- ತಾಯಿಯರ ಸ್ಥಾನವನ್ನು ತುಂಬಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅವರನ್ನು ದೇವರ ಸ್ವರೂಪ ಎಂದೂ ಕರೆಯುತ್ತಾರೆ.
ಆದರೆ ಬದುಕಿನಲ್ಲಿ ಅದೆಷ್ಟೋ ಮಂದಿ ತಂದೆ- ತಾಯಿಯರ ಪ್ರೀತಿಯಿಂದ ವಂಚಿತರಾಗಿದ್ದಾರೆ. ಕೆಲವರು ಹೆತ್ತವರು ಕಣ್ಮುಂದೆ ಇಲ್ಲದೆ ನೊಂದುಕೊಂಡರೆ, ಇನ್ನೂ ಕೆಲವರು ಕಣ್ಮುಂದೆ ಇದ್ದೂ ಅವರ ಪ್ರೇಮಕ್ಕಾಗಿ, ಒಂದು ಬೆಚ್ಚಗಿನ ಅಪ್ಪುಗೆಗಾಗಿ ಚಡಪಡಿಸುತ್ತಿದ್ದಾರೆ.
ಇದನ್ನೂ ಓದಿ: ಗುರುವೆಂದರೆ ಜ್ಞಾನದ ಆಗರ
ಇಂದು ಸಮಾಜ ತುಂಬಾನೇ ಮುಂದುವರೆದಿದೆ. ಪ್ರೀತಿ ನೀಡಲು ಹಿಂದೆ ಮುಂದೆ ಯೋಚಿಸುವಷ್ಟರ ಮಟ್ಟಿಗೆ. ಮುಂಜಾನೆ ಬೇಗನೆ ಎದ್ದು ಕೆಲಸಕ್ಕೆ ಹೋಗಿ ರಾತ್ರಿ ಹೊತ್ತಲ್ಲಿ ಮನೆಗೆ ಹಿಂದುರುಗುತ್ತಾರೆ. ಈ ಹೊತ್ತಲ್ಲಿ ಮಕ್ಕಳು ಮನೆಯಲ್ಲಿ ಒಂಟಿಯಾಗಿ, ತಮ್ಮ ಹೆತ್ತವರ ಬರುವಿಕೆಗಾಗಿ ದಿನವಿಡೀ ಕಾಯುತ್ತಿರುತ್ತಾರೆ. ಅಂತೂ ಇಂತೂ ಮನೆಗೆ ಬಂದ ಹೆತ್ತವರ ಪ್ರೀತಿಗಾಗಿ ಅವರ ಹಿಂದೆಯೇ ಹೋದಾಗ, ಮಕ್ಕಳ ಕೈಯಲ್ಲಿ ಒಂದು ಮೊಬೈಲ್ ಫೋನ್ ಕೊಟ್ಟು ತಾವೂ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುತ್ತಾರೆ. ಆದರೆ ಆ ಪುಟ್ಟ ಹೃದಯ ಬಯಸುವ ನಿಜವಾದ ಸಂತೋಷವನ್ನು ಅವರ ಕೈಯಿಂದ ಕೊಡಲು ಸಾಧ್ಯವಾಗುತ್ತಿಲ್ಲ.
ಸ್ನೇಹಿತರೆ, ಮಕ್ಕಳಿಗೆ ಬೇಕಾದುದು ಪ್ರೀತಿ ಹಾಗೂ ನಿಮ್ಮ ಸನಿಹ. ದಯವಿಟ್ಟು ಅದನ್ನು ಅರ್ಥ ಮಾಡಿಕೊಳ್ಳಿ. ಸಾಮಾಜಿಕ ಜಾಲತಾಣಗಳಿಗೆ ಕೊಡುವ ಸಮಯವನ್ನು ನಿಮ್ಮ ಕಂದಮ್ಮಗಳಿಗೆ ಕೊಟ್ಟು ನೋಡಿ. ಆ ಕಂಗಳಲ್ಲಿ ಕಾಣುವ ನಿಜವಾದ ಸಂತೋಷವನ್ನು ಕಂಡು ಕಣ್ತುಂಬಿಸಿಕೊಳ್ಳಿ. ಮಕ್ಕಳಿಗೆ ಪ್ರೀತಿ ಮರೀಚಿಕೆಯಾಗದಿರಲಿ.
- ಸಂಶೀನ ಸೂರ್ಯ,
ಪ್ರಥಮ ಪತ್ರಿಕೋದ್ಯಮ,
ವಿವೇಕಾನಂದ ಕಾಲೇಜು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ