ಸುಶಿಕ್ಷಿತ, ಆರೋಗ್ಯವಂತ ಮಾನವ ಸಂಪನ್ಮೂಲ ದೇಶದ ಅಮೂಲ್ಯ ಸಂಪತ್ತು: ದಿನೇಶ್ ಗುಂಡೂರಾವ್

Upayuktha
0
ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ 29ನೇ ಘಟಿಕೋತ್ಸವ

ಉಜಿರೆ: ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನದ ಪದವೀಧರರು ನಮ್ಮ ಪ್ರಾಚೀನ ವೈದ್ಯಕೀಯ ಪದ್ಧತಿಯ ಪ್ರಚಾರದ ರಾಯಭಾರಿಗಳಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


ಅವರು ಶನಿವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ 29ನೇ ಪದವಿ ಪ್ರದಾನ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.


ಸುಶಿಕ್ಷಿತ ಮತ್ತು ಆರೋಗ್ಯವಂತ ಮಾನವ ಸಂಪನ್ಮೂಲ ದೇಶದ ಅಮೂಲ್ಯ ಸಂಪತ್ತು ಆಗಿದೆ. ಇತರ ಎಲ್ಲಾ ಲೌಕಿಕ ಸಂಪತ್ತಿಗಿಂತ ಆರೋಗ್ಯವಂತ, ಸುಶಿಕ್ಷಿತ ಹಾಗೂ ಸಭ್ಯ ನಾಗರಿಕರೆ ದೇಶದ ಪ್ರಗತಿಗೆ ಪ್ರೇರಕರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.


ಪ್ರಕೃತಿಚಿಕಿತ್ಸೆ, ಆಯುರ್ವೇದ, ಹೋಮಿಯೊಪತಿ, ಯೋಗಾಭ್ಯಾಸ ಮೊದಲಾದ ಪ್ರಾಚೀನ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಿಗೆ ಸರ್ಕಾರ ಕೂಡಾ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದರು.


ಸಂಸ್ಥೆಯ ಶಿಸ್ತು, ಸ್ವಚ್ಛತೆ, ಸಮಾರಂಭದ ಅಚ್ಚುಕಟ್ಟುತನವನ್ನು ಸಚಿವರು ಶ್ಲಾಘಿಸಿ ಅಭಿನಂದಿಸಿದರು. ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆಯಾಮಗಳಲ್ಲಿ ಸದೃಢವಾಗಿರುವುದೇ ಆರೋಗ್ಯವಂತರ ಲಕ್ಷಣವಾಗಿದೆ. ಆರೋಗ್ಯವಂತ ಸದೃಢ ಸಮಾಜದಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ಅವರು ಹೇಳಿದರು. ಆಧುನಿಕ ಜೀವನಶೈಲಿ, ಆಹಾರ ಪದ್ಧತಿ, ಒತ್ತಡದ ಜೀವನ ಮೊದಲಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಕೃತಿಚಿಕಿತ್ಸೆ ಮತ್ತು ಯೋಗಾಭ್ಯಾಸ ಉತ್ತಮ ಕ್ರಮವಾಗಿದೆ ಎಂದು ಅವರು ಹೇಳಿದರು.


ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ನೂತನ ಪದವೀಧರರು ಜನರಿಗೆ ಪ್ರಕೃತಿಚಿಕಿತ್ಸಾ ಪದ್ಧತಿಯಲ್ಲಿ ನಂಬಿಕೆ, ವಿಶ್ವಾಸ ಮತ್ತು ಗೌರವ ಬರುವಂತೆ ಸಾಧಕರ ಶುಶ್ರೂಷೆ ಮಾಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ಇಂದು ದೈಹಿಕ ಶ್ರಮ ಹಾಗೂ ವ್ಯಾಯಾಮ ಕಡಿಮೆಯಾಗಿ ಜನರು ಬೇಗನೆ ರೋಗ ರುಜಿನಗಳಿಗೆ ಒಳಗಾಗುತ್ತಾರೆ. ಪದವಿ ಹಾಗೂ ಪದಕ ಗಳಿಸುವುದಕ್ಕಿಂತಲೂ ಮಾನವೀಯತೆಯ ಸೇವೆಯೊಂದಿಗೆ ಯಶಸ್ವಿ ವೈದ್ಯರಾಗಬೇಕು. ಸೇವಾಕಾರ್ಯದಲ್ಲಿ ಯಶಸ್ವಿಯಾಗುವುದೇ ವೈದ್ಯರ ಗುರಿಯಾಗಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.


ಡಾ. ಬಿಂದು ಕಾಲೇಜಿನ ವಾರ್ಷಿಕ ಸಾಧನೆ ಮತ್ತು ಚಟುವಟಿಕೆಗಳ ವರದಿ ಸಾದರ ಪಡಿಸಿದರು. ಡಾ. ಸುಜಾತ, ಕೆ.ಜೆ. ಪ್ರತಿಜ್ಞಾವಿಧಿ ಬೋಧಿಸಿದರು. ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮತ್ತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಡಾ. ಶಿವಪ್ರಸಾದ, ಕೆ. ಧನ್ಯವಾದವಿತ್ತರು. ಡಾ. ಸಂದೇಶ್ ಪಾಟೀಲ್ ಮತ್ತು ಕುಮಾರಿ ಅನನ್ಯ ಕಾರ್ಯಕ್ರಮ ನಿರ್ವಹಿಸಿದರು.

********

2 ನೇ ವರ್ಷ ಒಟ್ಟಾರೆ ಟಾಪರ್‍‌ಗಳ ವಿವರ:

ಪ್ರತೀಕ್ಷಾ ಎಚ್ 1090/1300, 2ನೇ ಟಾಪರ್,  ಪೂಜಾ ಅಗರ್ವಾಲ್ 1087/1300

ರೋಗಶಾಸ್ತ್ರ: ಅರ್ಘ್ಯ  164/200 ಪೂಜಾ ಅಗರ್ವಾಲ್ 164/200

ಮೈಕ್ರೋಬಯಾಲಜಿ: ದರ್ಶನ 180/200

ಸಮುದಾಯ ಔಷಧ: ಪ್ರತೀಕ್ಷಾ 179/200

ಯೋಗ ತತ್ವಶಾಸ್ತ್ರ: ಜಾಧವ್ ಕಾಜಲ್ 176/200

ಬೇಸಿಕ್ ಫಾರ್ಮಕಾಲಜಿ: ದರ್ಶನ 128/150

ಕಲರ್ ಥೆರಪಿ ಮತ್ತು ಮ್ಯಾಗ್ನೆಟೋ ಬಯಾಲಜಿ: ಅರ್ಘ್ಯ ಶೆಟ್ಟಿ ಪಿ 168/200

ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ: ಶಿಲ್ಪಾ ವೈ 126/150, ಯಾನಿತಾ ಗೌಚನ್ 126/150


ಪ್ರತಿ ವಿಷಯಗಳಿಗೆ ದ್ವಿತೀಯ, ತೃತೀಯ, ನಾಲ್ಕನೇ ಸ್ಥಾನ ಪಡೆದವರು:

ಮಿನ್ನು, ನವ್ಯಾ, ಪ್ರಪುಲ್ಲಾ, ಜಿಗ್ಯಾಶಾ, ಅಮ್ಮು, ಬಾಶಿನಿ, ಅನನ್ಯಾ, ಐಶ್ವರ್ಯ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top