ಎಸ್.ಡಿ.ಎಂ ಪಿಜಿ ಸೆಂಟರ್ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳ ಔದ್ಯೋಗಿಕ ಅವಕಾಶ

Chandrashekhara Kulamarva
0

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿಜ್ಞಾನ, ವಾಣಿಜ್ಯ ಮತ್ತು ಮಾನವಿಕ ನಿಕಾಯಗಳ ವ್ಯಾಸಂಗ ನಿರತರಾಗಿ ಅಧ್ಯಯನ ಪೂರ್ಣಗೊಳಿಸಲಿರುವ ಐವತ್ತು ವಿದ್ಯಾರ್ಥಿಗಳು ಖಾಸಗಿ ವಲಯದ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ವೃತ್ತಿಪರ ಅವಕಾಶವನ್ನು ಪಡೆದಿದ್ದಾರೆ.


ಕಳೆದ ಮತ್ತು ಪ್ರಸಕ್ತ ವರ್ಷದ ಅವಧಿಯಲ್ಲಿ ಖಾಸಗಿ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲು  ಕ್ಯಾಂಪಸ್ ಸಂದರ್ಶನ ನಡೆಸಿದ್ದವು. ಈ ಆಯ್ಕೆ ಪ್ರಕ್ರಿಯೆಯ ವಿವಿಧ ಹಂತಗಳ ಪರೀಕ್ಷೆಗಳಲ್ಲಿ ಉತ್ತಮ ಬೌದ್ಧಿಕ ಸಾಮಥ್ರ್ಯ ಮತ್ತು ಪ್ರತಿಭಾ ಕೌಶಲ್ಯ ನಿರೂಪಿಸಿದ ಕೇಂದ್ರದ ವಿದ್ಯಾರ್ಥಿಗಳು ಔದ್ಯೋಗಿಕ ಅವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಪ್ರತಿಷ್ಠಿತ ಸಂಸ್ಥೆಗಳು ಮೂರು ಲಕ್ಷಕ್ಕೂ ಅಧಿಕ ವಾರ್ಷಿಕ ವೇತನಶ್ರೇಣಿಯೊಂದಿಗೆ ವಿದ್ಯಾರ್ಥಿಗಳಿಗೆ ವೃತ್ತಿಪರ ಅವಕಾಶಗಳನ್ನು ಒದಗಿಸಿಕೊಟ್ಟಿವೆ. ಸಿಂಜೆಂಟಾ ಬಯೋಸೈನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ನಾಲ್ಕು ಲಕ್ಷಕ್ಕೂ ಅಧಿಕ ವಾರ್ಷಿಕ ವೇತನಶ್ರೇಣಿಯೊಂದಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ.


ರಸಾಯನ ಶಾಸ್ತ್ರ ವಿಭಾಗದ 10 ವಿದ್ಯಾರ್ಥಿಗಳು ಹೈದ್ರಾಬಾದ್‍ನ ಸಿಂಜಿನ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ರಿಸರ್ಚ್ ಅಸೋಸಿಯೇಟ್ ಟ್ರೈನಿಯಾಗಿ ಆಯ್ಕೆಯಾಗಿದ್ದಾರೆ. ಇದೇ ವಿಭಾಗದ ಮೂವರು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಆ್ಯಂಥಮ್ ಬಯೋಸೈನ್ಸ್ ಪ್ರೈ. ಲಿಮಿಡೆಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿದೆ. 


ಜೈವಿಕ ರಸಾಯನಶಾಸ್ತ್ರದ ಎಂಟು ವಿದ್ಯಾರ್ಥಿಗಳು ಹೈದ್ರಾಬಾದ್‍ನ ಸಿಂಜಿನ್ ಇಂಟರ್‍ನ್ಯಾಷನಲ್ ಪ್ರೈ.  ಲಿಮಿಟೆಡ್ ಕಂಪನಿಗೆ ರಿಸರ್ಚ್ ಅಸೋಸಿಯೇಟ್ ಟ್ರೈನಿಯಾಗಿ, ಐವರು ಬೆಂಗಳೂರಿನ ಆ್ಯಂಥಮ್ ಬಯೋಸೈನ್ಸ್ ಪ್ರೈ. ಲಿಮಿಡೆಡ್ ಕಂಪನಿಗೆ ರಿಸರ್ಚ್ ಸೈಂಟಿಸ್ಟ್, ಇಬ್ಬರು ವಿದ್ಯಾರ್ಥಿಗಳು ಗೋವಾದ ಸಿಂಜೆಂಟಾ ಬಯೋಸೈನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. 


ಜೈವಿಕ ತಂತ್ರಜ್ಞಾನ ವಿಭಾಗದ 10 ವಿದ್ಯಾರ್ಥಿಗಳು ತುಮಕೂರಿನ ಲೌರಸ್ ಬಯೋಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಟ್ರೈನಿ ಪ್ರೊಡಕ್ಷನ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಭೌತಶಾಸ್ತ್ರ ವಿಭಾಗದ ಮೂವರು ಮತ್ತು ಸಮಾಜಕಾರ್ಯ ವಿಭಾಗದ ಮೂವರು ವಿದ್ಯಾರ್ಥಿಗಳು ಅಜೀಂ ಪ್ರೇಮ್‍ಜಿ ಫೌಂಡೇಷನ್‍ನ ಅಸೋಸಿಯೇಟ್ ಫೀಲ್ಡ್ ಇನ್ಸ್ಟಿಟ್ಯೂಟ್‍ನ ಮಹತ್ವದ ಹುದ್ದೆಗಳಿಗಾಗಿ ಕಾರ್ಯನಿರ್ವಹಿಸಲಿದ್ದಾರೆ. ವಾಣಿಜ್ಯ ಶಾಸ್ತ್ರ ವಿಭಾಗದ ಐವರು ವಿದ್ಯಾರ್ಥಿಗಳು ಬೆಂಗಳೂರಿನ ನಂದಿ ಟೊಯೊಟಾ ಸಂಸ್ಥೆಯ ಸೇಲ್ಸ್ ಆಫೀಸರಾಗಿ   ವಿವಿಧ ಹುದ್ದೆಗಳಿಗಾಗಿ ಆಯ್ಕೆಯಾಗಿದ್ದಾರೆ.


ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮೂವರು ಮತ್ತು ಇಂಗ್ಲಿಷ್ ವಿಭಾಗದ ಓರ್ವ ವಿದ್ಯಾರ್ಥಿ ರಾಜ್ಯಮಟ್ಟದ ದಿನಪತ್ರಿಕೆಯೊಂದರ ಉಪಸಂಪಾದಕ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಮಾಧ್ಯಮ ಸಂಸ್ಥೆಗಳು ಇತ್ತೀಚೆಗೆ ನಡೆಸಿದ ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ಈ ಎರಡೂ ವಿಭಾಗಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹಂತದ ಉದ್ಯೋಗಾವಕಾಶಗಳನ್ನು ಪಡೆದಿರುವುದು ಪ್ರಶಂಸನೀಯ. ಉನ್ನತ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ವೃತ್ತಿಪರ ಬದುಕಿನಲ್ಲಿ ನಿರಂತರ ಯಶಸ್ಸು ಸಿಗಲಿ ಎಂದು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಶುಭ ಹಾರೈಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
To Top