ಧರ್ಮಸ್ಥಳದಲ್ಲಿ 52ನೆ ವರ್ಷದ ಪುರಾಣಕಾವ್ಯ ವಾಚನ-ಪ್ರವಚನ: ಉದ್ಘಾಟನಾ ಸಮಾರಂಭ, ಕೃತಿ ಬಿಡುಗಡೆ

Upayuktha
0

ಸಾಹಿತ್ಯ ಮತ್ತು ಪುರಾಣ ಗ್ರಂಥಗಳ ಆಳವಾದ ಅಧ್ಯಯನ ಮಾಡಿದ ವಿದ್ವಾಂಸರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳ ಮಾನ್ಯತೆ ದೊರಕಬೇಕು: ಡಿ. ವೀರೇಂದ್ರ ಹೆಗ್ಗಡೆ

ಉಜಿರೆ: ಪುರಾಣ ವಾಚನ - ಪ್ರವಚನದಿಂದ ಸಮಯದ ಸದುಪಯೋಗವಾಗಿ ಆಧ್ಯಾತ್ಮಿಕ ಉನ್ನತಿಯೊಂದಿಗೆ ಧರ್ಮಪ್ರಭಾವನೆಯಾಗುತ್ತದೆ. ಸಾಹಿತ್ಯ ಮತ್ತು ಪುರಾಣ ಗ್ರಂಥಗಳ ಆಳವಾದ ಅಧ್ಯಯನ ಮಾಡಿದ ವಿದ್ವಾಂಸರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳ ಮಾನ್ಯತೆ ದೊರಕಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಸೋಮವಾರ ಧರ್ಮಸ್ಥಳದಲ್ಲಿ ಐವತ್ತೆರಡನೆ ವರ್ಷದ ಪುರಾಣಕಾವ್ಯ ವಾಚನ-ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ವಿದ್ವಾನ್ ಬಿ.ಎಲ್. ನಾಗರಾಜು ವಿರಚಿತ ``ಶ್ರೀಮದಾದಿತ್ಯ ದರ್ಶನಂ’’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.


ಪ್ರತಿವರ್ಷ ಧರ್ಮಸ್ಥಳದಲ್ಲಿ ಎರಡು ತಿಂಗಳ ಕಾಲ ಪ್ರತಿ ದಿನ ಸಂಜೆ ಪುರಾಣ ವಾಚನ - ಪ್ರವಚನ ಕಾರ್ಯಕ್ರಮವನ್ನು ಆಕರ್ಷಕವಾಗಿ ಮತ್ತು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಕ್ರಿಯ ಸಹಕಾರವನ್ನು ಹೆಗ್ಗಡೆಯವರು ಸ್ಮರಿಸಿದರು. ಖ್ಯಾತ ವಿದ್ವಾಂಸರಾದ ಬಿ.ಎಲ್. ನಾಗರಾಜು ವಿರಚಿತ ``ಶ್ರೀಮದಾದಿತ್ಯ ದರ್ಶನಂ’’ ಕೃತಿಯಲ್ಲಿ 36 ಸಂಧಿಗಳಲ್ಲಿ ಸಂಕ್ಷಿಪ್ತ ಪರಿಚಯವನ್ನು ಸರಳವಾಗಿ ಮತ್ತು ಸುಲಭಗ್ರಾಹ್ಯವಾಗಿ ವಿವರಿಸಿದ್ದಾರೆ. ಸಾತ್ವಿಕತೆ ಇದ್ದವರಿಗೆ ಸಂತೃಪ್ತಿ ಸಿಗುತ್ತದೆ ಮೊದಲಾದ ಸಾರ್ಥಕ ಬದುಕಿಗೆ ಉಪಯುಕ್ತ ಸಂದೇಶವನ್ನು ಗ್ರಂಥದಲ್ಲಿ ನೀಡಲಾಗಿದೆ. ಕೃತಿಯು ಕುತೂಹಲ ಮತ್ತು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಅಂದವಾದ ಮುದ್ರಣ ಮತ್ತು ಆಕರ್ಷಕ ಚಿತ್ರಗಳು ಗ್ರಂಥದ ಸೊಗಡನ್ನು ಹೆಚ್ಚಿಸಿವೆ. ಪ್ರಕಾಶಕರು ಮತ್ತು ಚಿತ್ರಕಲಾವಿದರನ್ನು ಹೆಗ್ಗಡೆಯವರು ಅಭಿನಂದಿಸಿದರು. ಪ್ರತಿಯೊಬ್ಬರೂ  ಇದನ್ನು ಸ್ವಾಧ್ಯಾಯ ಮಾಡಿ ಚಿಂತನ – ಮಂಥನ ಮಾಡಬೇಕಾದ ಅಮೂಲ್ಯ ಗ್ರಂಥವಾಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.


ಯಕ್ಷಗಾನದ ಹಿರಿಯ ಹಾಸ್ಯಕಲಾವಿದ ಪೆರುವಡಿ ನಾರಾಯಣ ಭಟ್ ಪುರಾಣ ಕಾವ್ಯ ವಾಚನ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಅವಕಾಶದಿಂದ ತಾನು ಮಹಾಭಾಗ್ಯಶಾಲಿ ಆಗಿದ್ದೇನೆ ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.


ಡಾ. ಪಾದೇಕಲ್ಲು ವಿಷ್ಣುಭಟ್ ಕೃತಿಯ ಪರಿಚಯ ಮಾಡಿದರು. ಗ್ರಂಥದ ರಚನೆಯಲ್ಲಿ ಲೇಖಕರು ಮತ್ತು ಕುಟುಂಬದವರ  ಭಗೀರಥ ಪ್ರಯತ್ನವನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.  

ಹರಿಕೃಷ್ಣ ಪುನರೂರು, ವಿದ್ವಾನ್ ಬಿ.ಎಲ್. ನಾಗರಾಜು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.


ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದ ಸಲ್ಲಿಸಿದರು.

ಬಳಿಕ ಪದ್ಯಾಣ ಗಣಪತಿ ಭಟ್ ಕುಮಾರ ವಾಲ್ಮೀಕಿ ವಿರಚಿತ ``ತೊರವೆ ರಾಮಾಯಣ’’ದ ವಾಚನ ಮಾಡಿದರು. ಉಜಿರೆ ಅಶೋಕ ಭಟ್ ಪ್ರವಚನ ನೀಡಿದರು.


ಎರಡು ತಿಂಗಳ ಕಾಲ ಪ್ರತಿದಿನ ಸಂಜೆ ಗಂಟೆ 6.30 ರಿಂದ 8.00 ರ ವರೆಗೆ ಪುರಾಣ ಕಾವ್ಯ ವಾಚನ ಪ್ರವಚನ ನಡೆಯಲಿದೆ.    

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top