ತುಳಸಿದಾಸರ ಹನುಮಾನ್ ಚಾಲೀಸಾ

Upayuktha
0


ದಿನಾರನೆಯ ಶತಮಾನದಲ್ಲಿ ಜೀವಿಸಿದ್ದ ತುಳಸಿದಾಸರು ಭಾರತ ಕಂಡ ಶ್ರೇಷ್ಠ ರಾಮಭಕ್ತರು ಹಾಗೂ ಸಂತರು.ಇವರ ಮೇರು ಕೃತಿ ರಾಮಚರಿತ ಮಾನಸ.ಇದು ಪ್ರಪಂಚದ ನಾನಾ ಭಾಷೆಗಳಿಗೆ ಅನುವಾದಗೊಂಡಿದೆ.ಇವರ ಪೂರ್ವದ ಹೆಸರು ತುಳಸಿರಾಮ.ಇವರು ಮೊಘಲ್ ಸಾಮ್ರಾಟ ಅಕ್ಬರನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಆತ್ಮಾರಾಮರ ಮಗ.ಆತ್ಮಾರಾಮರು ತಮ್ಮ ಮಗ ತುಳಸಿರಾಮ ಪ್ರಾಪ್ತ ವಯಸ್ಕನಾದಾಗ ಸುಶೀಲೆಯೂ,ರಾಮಭಕ್ತಿ ನಿಷ್ಠಳೂ ಆದ ಮಮತ ದೇವಿ ಎಂಬ ಸುಂದರ ಕನ್ಯೆಯೊಡನೆ ವಿವಾಹ ಮಾಡುತ್ತಾರೆ.ವಿವಾಹಿತನಾದ ತುಳಸಿರಾಮ ಪತ್ನಿ ಬಗ್ಗೆ ವಿಪರೀತ ವ್ಯಾಮೋಹಿಗಳಾಗಿರುತ್ತಾರೆ.ಅವಳನ್ನು ಬಿಟ್ಟು ಅರೆಕ್ಷಣವೂ ಇರದ ಮನಸ್ಥಿತಿ ಅವರದು!.ಒಮ್ಮೆ ಮಮತ ದೇವಿ ತನ್ನ ತವರಿಗೆ ಹೋಗಿರುತ್ತಾಳೆ.ಅವಳ ಅಗಲಿಕೆ  ಸಹಿಸದ ತುಳಸಿ ದಾಸರು ಮಳೆ ಬಿರುಗಾಳಿ ಲೆಕ್ಕಿಸದೆ ಪತ್ನಿಯ ಊರು ತಲುಪಲು ತುಂಬಿ‌ಹರಿಯುತ್ತಿದ್ದ ನದಿಗೆ ಬಿದ್ದು ಈಜಿ‌ ಗ್ರಾಮ ತಲುಪುತ್ತಾರೆ.ಆ ರಾತ್ರಿಯಲ್ಲಿ ತನಗಾಗಿ‌ ಪತಿ ಕೆಸರು ಮಣ್ಣು,ನೀರಿನಿಂದ ತೋಯ್ದು ನದಿ ಈಜಿ ಬಂದಿದ್ದ ಪತಿಯನ್ನು ಕಂಡು ಕೋಪಗೊಂಡು'ನೀವು  ನನಗಾಗಿ ಈ ರೀತಿ ಕಷ್ಟಪಡುವ ಕಾಲುಭಾಗವಾದರೂ ರಾಮನಿಗಾಗಿ ಕಷ್ಟಪಟ್ಟಿದ್ದರೆ,ನನ್ನ ಕ್ಷಣಿಕವಾದ ಈ ದೇಹವನ್ನು ಇಷ್ಟು ಮೋಹಿಸುವ ಬದಲು ರಾಮನಲ್ಲಿ ಭಕ್ತಿ ಇಟ್ಟಿದ್ದರೆ ನಿಮಗೆ ರಾಮದರ್ಶನವಾಗಿ ಮೋಕ್ಷಪಡೆಯುತ್ತಿದ್ದಿರಿ' ಎನ್ನುತ್ತಾಳೆ.ಪತ್ನಿಯ ಮಾತುಗಳು ಅವರಲ್ಲಿ ಗಾಢಪರಿಣಾಮವನ್ನುಂಟು ಮಾಡುತ್ತದೆ.ಆ ಕ್ಷಣವೇ ಅವರು ವಿರಾಗಿಯಾಗಿ ರಾಮಭಕ್ತನಾಗಿ ಪರಿವರ್ತನೆಗೊಳ್ಳುತ್ತಾರೆ.ತಮ್ಮ ಅಪಾರ ರಾಮಭಕ್ತಿಯಿಂದಾಗಿ 'ತುಳಸಿದಾಸ' ಎನಿಸುತ್ತಾರೆ.

ಒಮ್ಮೆ ಅವರ ಪ್ರಸಿದ್ಧಿಯನ್ನು ಮನಗಂಡ ಅಕ್ಬರ್ ಅವರನ್ನು ತಮ್ಮನ್ನು ಕಾಣಲು ಬರುವಂತೆ ಹೇಳಿ ಕಳುಹಿಸುತ್ತಾನೆ.ಆದರೆ ತಾನು ರಾಮನಿಗೆ ಮಾತ್ರ ದಾಸ ಎಂದು ತಿಳಿಸಿದ ತುಳಸಿದಾಸರು  ಅಕ್ಬರನನ್ನು‌‌ ಭೇಟಿಯಾಗಲು ನಿರಾಕರಿಸುತ್ತಾರೆ.ಇದರಿಂದ ಕುಪಿತಗೊಂಡ ಅಕ್ಬರ್ ಅವರನ್ನು ತನ್ನ ಸೈನಿಕರನ್ನು ಕಳುಹಿಸಿ ಬಲವಂತದಿಂದ ಬಂಧಿಸಿ ತನ್ನಲ್ಲಿಗೆ ಕರೆಸಿಕೊಳ್ಳುತ್ತಾನೆ.ಅವರನ್ನು ಕುರಿತು ನೀನು ನಿಜ ರಾಮಭಕ್ತನಾಗಿದ್ದರೆ ಪವಾಡ ಪ್ರದರ್ಶಿಸಬೇಕೆಂದು ಹೇಳುತ್ತಾನೆ.ಆಗ ತುಳಸಿದಾಸರು 'ನಾನು ರಾಮಭಕ್ತ,ಯಾವುದೇ ಪವಾಡ ಪ್ರದರ್ಶಿಸಲು ನಾನು ಜಾದೂಗಾರನಲ್ಲ'ಎನ್ನುತ್ತಾರೆ.ಅವರ ಮಾತುಗಳಿಂದ ಕುಪಿತಗೊಂಡ ಅಕ್ಬರ್ ಅವರನ್ನು ಸೆರೆಮನೆಗೆ ತಳ್ಳುತ್ತಾನೆ.ಇದರಿಂದ ನೊಂದ ತುಳಸಿದಾಸರು ಸೆರೆಮನೆಯಲ್ಲಿಯೇ ಭಕ್ತಿಯಿಂದ ಪ್ರಾರ್ಥಿಸಿ ಸಂಕಟ ನಿವಾರಣೆಗಾಗಿ ಹನುಮನನ್ನು ಸ್ತುತಿಸಿ ಹನುಮಾನ ಚಾಲೀಸಾ ಬರೆಯುತ್ತಾರೆ.ಇತ್ತ ತುಳಸಿದಾಸರನ್ನು ಬಂಧಿಸಿದ ಮಾರನೇ ದಿನದಿಂದಲೇ ಕಪಿಗಳ ದೊಡ್ಡ ಸೈನ್ಯ ಅಕ್ಬರನ ಕೆಂಪು ಕೋಟೆಯನ್ನು ಸುತ್ತುವರಿದು ಅತೀವ ಹಾವಳಿ ಸೃಷ್ಟಿ ಸುತ್ತವೆ.ಇದರಿಂದ ಕಂಗೆಟ್ಟ   ಅಕ್ಬರ್ ಇದಕ್ಕೆ ಕಾರಣವನ್ನು ತನ್ನ ಮಂತ್ರಿ ಬೀರಬಲ್ ನ ಹತ್ತಿರ ಕೇಳುತ್ತಾನೆ.ಆಗ ಬೀರಬಲ್ 'ಮಹಾಪ್ರಭು ನೀವು ರಾಮಮಹಿಮೆಯನ್ನು,ತುಳಸಿದಾಸರ ರಾಮಭಕ್ತಿಯ ಶ್ರೇಷ್ಠತೆಯನ್ನು ಕಣ್ಣಾರೆ ಕಾಣುತ್ತಿರುವಿರಿ'ಎಂದನಂತೆ.ತನಸಣ್ಣತನದ ಬಗ್ಗೆ ತಾನೇ ನಾಚಿಕೊಂಡ ಅಕ್ಬರ್ ತುಳಸಿದಾಸರನ್ನು ಬಿಡುಗಡೆಗೊಳಿಸಿ ಅವರಲ್ಲಿ ಕ್ಷಮೆ ಬೇಡಿ ಅವರನ್ನು ಸರ್ವ ರೀತಿಯಲ್ಲೂ ಗೌರವದಿಂದ ಆದರಿಸಿ ಮಥುರಾಗೆ ಕಳುಹಿಸಿಕೊಟ್ಟನು.


ಹೀಗೆ ಸಂಕಟದ ಸಮಯದಲ್ಲಿ, ನಿವಾರಣೆಗಾಗಿ ತುಳಸಿದಾಸರಿಂದ ರಚಿತವಾದ ಹನುಮಾನ್ ಚಾಲೀಸಾ ಸಂಕಟ ಮೋಚನ ಹನುಮಾನ್ ಚಾಲೀಸಾ ಎಂದೇ ಹೆಸರಾಗಿದೆ.ನಲವತ್ತು ಚೌಪದಿಗಳಲ್ಲಿರುವ ಇದು ಎಲ್ಲಾ ತರದ ಸಂಕಷ್ಟಗಳನ್ನು ನಿವಾರಿಸುತ್ತದೆಂದು ಪ್ರಸಿದ್ಧವಾಗಿದೆ.ವಿಶೇಷವಾಗಿ ಸಾಡೇ ಸಾತ್ ಶನಿಕಾಟದಿಂದ ಬಳಲುತ್ತಿರುವವರಿಗೆ ಇದು ವಿಶೇಷ ಪರಿಣಾಮವನ್ನುಂಟು ಮಾಡಿ ಅದರಿಂದಾಗುವ ಹಾನಿಗಳನ್ನು ನಿವಾರಿಸುತ್ತದೆಂದು ನಂಬಲಾಗಿದೆ.ಚಾಲೀಸಾದಲ್ಲೇ ಹೇಳಿರುವಂತೆ ಇದು ಧೈರ್ಯ ಆತ್ಮವಿಶ್ವಾಸ ವೃದ್ಧಿಸಿ ಗ್ರಹದೋಷ,ಭೂತಪ್ರೇತಗಳ ಭಾದೆ ನಿವಾರಿಸಿ ನೆಮ್ಮದಿ ಸುಖಶಾಂತಿಗಳನ್ನು ಕರುಣಿಸುತ್ತದೆಂದು ಹೇಳಲಾಗಿದೆ.


||ಜೈ ಶ್ರೀ ರಾಮ್||

||ಜೈ ಹನುಮಾನ್||

-ಎಸ್.ಎಲ್.ವರಲಕ್ಷ್ಮೀಮಂಜುನಾಥ್.                                      

                                                                


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top