ವನಮಹೋತ್ಸವ : ನಿಸರ್ಗವೇ ಸತ್ಯ, ನಿಸರ್ಗವೇ ನಿತ್ಯ : ಅರಿತು ಬಾಳೋಣ
ಬದಲಾಗುತ್ತಿರುವ ಜಾಗತಿಕ ತಾಪಮಾನ ಏರಿಕೆಯ ಹಿನ್ನಲೆಯಲ್ಲಿ ನಮಗೆ ಆಗಿಂದಾಗ್ಯೆ ದಿನ ಪತ್ರಿಕೆಗಳು , ರೇಡಿಯೋ , ದೂರದರ್ಶನ , ಅಂತರ್ಜಾಲ , ಕಿರುಚಿತ್ರಗಳು ಮತ್ತು ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭೂಮಿ ಉಳಿಸಿ , ನೀರು ಉಳಿಸಿ , ಮಣ್ಣು ಉಳಿಸಿ , ಪರಿಸರ ರಕ್ಷಣೆ ನಮ್ಮ ಹೊಣೆ , ಮನೆಗೊಂದು ಗಿಡ - ಊರಿಗೊಂದು ವನ , ಕಾಡಿದ್ದರೆ ನಾಡು , ನಾಡಿದ್ದರೆ ನಾವು - ಹೀಗೆ ಅನೇಕ ಬಗೆಯ ಘೋಷ ವಾಕ್ಯಗಳನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಪ್ರಕೃತಿಯಲ್ಲಿ ಭೂ ಸಂಪತ್ತು , ಜಲ ಸಂಪತ್ತು , ಮಣ್ಣಿನ ಸಂಪತ್ತು , ವಾಯು ಸಂಪತ್ತು ಮತ್ತು ವನ ಸಂಪತ್ತು ಇವೆ. ಭೂಮಿಯ ಮೇಲಿನ ಪ್ರಾಕೃತಿಕ ವಿಶೇಷತೆಗಳಲ್ಲಿ ವನಸಂಪತ್ತು ಬಹಳ ಮುಖ್ಯವಾಗಿದೆ. ವನ ಸಂಪತ್ತನ್ನು ಬೆಳೆಸುವ ಮತ್ತು ಉಳಿಸುವ ಕಾರ್ಯದಲ್ಲಿ ವನ ಮಹೋತ್ಸವ ಕಾರ್ಯಕ್ರಮ ಬಹಳ ಮುಖ್ಯವಾಗಿದೆ.
ಭಾರತದಲ್ಲಿ ಜುಲೈ ತಿಂಗಳು ಬಂತೆಂದರೆ ಜಿಟಿಜಿಟಿ ಮಳೆಯ ಕಾಲ. ಕೆಲವೆಡೆ ಕಡಿಮೆ ಪ್ರಮಾಣದ ಮಳೆ, ಇನ್ನೂ ಕೆಲವೆಡೆ ಸಾಧಾರಣ ಮಳೆ ಹಾಗೂ ಮತ್ತೆ ಕೆಲವೆಡೆ ಹೆಚ್ಚು ಮಳೆ ಬೀಳುತ್ತಿರುತ್ತದೆ. ಭೂಮಿಯ ಮೇಲೆ ಬೀಳುವ ಮಳೆಗೆ ನೆಲದಲ್ಲಿ ಹುಲ್ಲು ಹಸಿರಾಗಿ ಬೆಳೆಯುತ್ತದೆ. ಕಾಡಿನಲ್ಲಿ ಮರಗಳು ದಟ್ಟ ಹಸಿರನ್ನು ಪಡೆಯುವ ಸಮಯ. ಚಳಿ ಮಿಶ್ರಿತ ತಂಪಾದ ಗಾಳಿ ಬೀಸುತ್ತದೆ. ಆಗಾಗ ಅಲ್ಲಲ್ಲಿ ಗುಡುಗು ಮಿಂಚು ಸಿಡಿಲುಗಳಿಂದ ಕೂಡಿದ ಮಳೆ ಇರುತ್ತದೆ. ರೈತರು ಗದ್ದೆಗಳಲ್ಲಿ ಮಳೆಯಲ್ಲಿ ನೆನೆಯುತ್ತಲೇ ನಾಟಿ ಮಾಡುತ್ತಿರುತ್ತಾರೆ. ಭೂತಾಯಿ ಮಳೆಯಿಂದ ತೋಯ್ದು ಮೃದುವಾದ ಮಣ್ಣಿನ ನೆಲವನ್ನು ಹೊಂದಿರುತ್ತಾಳೆ. ಎಲ್ಲೆಲ್ಲೂ ಹಸಿರ ಹಬ್ಬ ಆಚರಣೆಯಾಗುತ್ತಿರುತ್ತದೆ. ಗುಡ್ಡಬೆಟ್ಟಗಳ ಮೇಲೆ ನಿಂತು ಕಣಿವೆ ಪ್ರದೇಶಗಳಲ್ಲಿ ಬೀಳುವ ಮಳೆಯನ್ನು ಕಣ್ಣಾರೆ ನೋಡಿದರೆ ಒಂದು ಸುಂದರ ಅನುಭವ ನಮ್ಮ ಮನಸ್ಸಿಗೆ ಆಗುತ್ತದೆ. ಅಲ್ಲಿ ಮಳೆಯ ಹನಿಗಳ ನರ್ತನ, ನೀರಿನ ಹನಿಗಳ ಸಾಲು ಬಳುಕಾಡುವಂತೆ ಗೋಚರಿಸುತ್ತದೆ. ವನಸಿರಿ ಮನಸ್ಸಿಗೆ ಮುದ ನೀಡುತ್ತದೆ. ನೋಡುಗರ ಕಣ್ಣಿಗೆ ಇದೇ ಹಬ್ಬವೆನಿಸುತ್ತದೆ. ಭಾರತದ ವಾಯುಗುಣವು ಉಷ್ಣವಲಯದ ಮಾನ್ಸೂನ್ ವಾಯುಗುಣವಾಗಿದ್ದು ಜುಲೈ ತಿಂಗಳಲ್ಲಿ ಭಾರತವು ನೈರುತ್ಯ ಮಾನ್ಸೂನ್ ಮಾರುತಗಳಿಂದಾಗಿ ಅಧಿಕ ಮಳೆಯನ್ನು ಪಡೆಯುವ ಕಾಲವಾಗಿರುತ್ತದೆ. ಇದೇ ಸಮಯದಲ್ಲಿ ಎಲ್ಲೆಲ್ಲಿ ಅವಕಾಶಗಳಿವೆಯೋ ಅಲ್ಲಲ್ಲಿ ಗಿಡಗಳನ್ನು ನೆಟ್ಟು ಹಸಿರು ಹಬ್ಬ ಎನಿಸಿದ ವನಮಹೋತ್ಸವ ಕಾರ್ಯಕ್ರಮವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಒಂದು ಸಸಿ ನೆಟ್ಟು ಬೆಳೆಸುವುದು ಎಂದರೆ ಒಂದು ಆಮ್ಲಜನಕ ಉತ್ಪಾದನಾ ಕಾರ್ಖಾನೆಯನ್ನು ಸ್ಥಾಪಿಸಿದಂತೆ ಎನ್ನಬಹುದು.
ಭಾರತದಲ್ಲಿ ಜುಲೈ ತಿಂಗಳಲ್ಲಿ ಮಳೆಗಾಲ ವಾದ್ದರಿಂದ ವನಮಹೋತ್ಸವ ಸಪ್ತಾಹವನ್ನು (ಜುಲೈ 01 ರಿಂದ ಜುಲೈ 07 ರ ವರೆಗೆ ) ಆಚರಿಸುವ ವಾಡಿಕೆ ಇದೆ. ಈ ತಿಂಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಕಛೇರಿ, ಕಾರ್ಖಾನೆ, ದೇವಾಲಯಗಳು, ಮಂದಿರಗಳು, ಶಾಲಾ- ಕಾಲೇಜು, ವಿಶ್ವವಿದ್ಯಾಲಯ ಮೊದಲಾದ ಕಟ್ಟಡಗಳ ಮುಂದಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆದು ಪೋಷಿಸಿ ಬೆಳೆಸಿ ದೊಡ್ಡ ವೃಕ್ಷಗಳನ್ನಾಗಿಸಲು ಇದು ನಾಂದಿಯಾಗುತ್ತದೆ. ಪ್ರಕೃತಿ– ಪರಿಸರದ ರಕ್ಷಣೆಗೆ ಮಾನವನೇ ಮುಂದಾಗಬೇಕು. ಏಕೆಂದರೆ ಪ್ರಕೃತಿಯ ಉಳಿವು– ಮಾನವನ ಉಳಿವು ಆಗಿರುತ್ತದೆ. ಈ ಉದ್ದೇಶ ಮತ್ತು ಕಾರಣದಿಂದಲೇ ವನಮಹೋತ್ಸವ ಪ್ರಾರಂಭವಾದಾಗ ಮಹಾನ್ ಪರಿಸರವಾದಿ ಕನ್ಹಯ್ಯಲಾಲ್ ಮುನ್ಷಿಯವರು ಒಂದು ಘೋಷವಾಕ್ಯವನ್ನು ನೀಡಿದರು–" TREE IS WATER, WATER IS BREAD, BREAD IS LIFE." (ಮರವೇ ನೀರು, ನೀರೇ ಅನ್ನ, ಅನ್ನವೇ ಜೀವನ) ಇದನ್ನು ಅರ್ಥ ಮಾಡಿಕೊಂಡು ಇದರಿಂದ ಪ್ರೇರಿತರಾದ ಹಲವು ಸಮಾಜ ಸೇವಕರು, ಪರಿಸರ ಪ್ರೇಮಿಗಳು ಸ್ವಯಂ ಪ್ರೇರಿತರಾಗಿ, ಸಂಘಟನಾತ್ಮಕವಾಗಿ ಪರಿಸರದ ಸಂರಕ್ಷಣೆಗೆ ಮುಂದಾದ ಹಲವು ಉದಾಹರಣೆಗಳು ರಾಷ್ಟ್ರದ ಉದ್ದಗಲಕ್ಕೂ ಸಿಗುತ್ತವೆ. ಅಪ್ಪಿಕೊ ಚಳುವಳಿ, ಚಿಪ್ಕೊ ಚಳುವಳಿ ಮುಂತಾದವು ಉದಾಹರಣೆಯಾಗಿ ಈಗಲೂ ಸಕ್ರಿಯವಾಗಿವೆ. ವನಮಹೋತ್ಸವ ದಿನವನ್ನು ಆಚರಣೆಗೆ ತಂದವರು ಪರಿಸರವಾದಿ ಕನ್ಹಯ್ಯಲಾಲ್ ಮುನ್ಷಿ ಎಂಬ ವಿದ್ವಾಂಸರು. ವನಮಹೋತ್ಸವ ಕಾರ್ಯಕ್ರಮ ಆಚರಣೆಯು ಹಸಿರನ್ನು ಉಳಿಸುವ ಮೂಲಕ ಉಸಿರನ್ನು ಉಳಿಸುವಂತದ್ದಾಗಿದೆ. ಇಲ್ಲಿ ಮಾನವನ ಸ್ವಯಂ ಅರಿವು ಬಹಳ ಮುಖ್ಯವಾಗಿದೆ.
ನಮ್ಮ ಬದುಕಿನಲ್ಲಿ ಸಸ್ಯ ಸಂಪತ್ತು ವಹಿಸುವ ಪಾತ್ರ ಮಹತ್ತರವಾದುದು. ಭಾರತದಲ್ಲಿ ಬಹಳ ಹಿಂದೆ ಜನರು ಬಾಳಿ ಬದುಕಿದ್ದ ಅರಣ್ಯಗಳಲ್ಲಿನ ಸಸ್ಯಗಳ ನಡುವೆ ಋಷಿಮುನಿಗಳು ಆಶ್ರಮಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ವನಜೀವನ ಬಾಳಿಗೆ ತಂಪು ನೀಡುತ್ತಿತ್ತು. ಸಂಘ ಜೀವನವೂ ಸಾಧ್ಯವಾಯಿತು. ಮುಂದಿನ ಹಂತದಲ್ಲಿ ನಗರಗಳು ಹುಟ್ಟಿಕೊಂಡಂತೆ ಕಾಡುಗಳೂ, ಸಸ್ಯಗಳ ಬೆಳವಣಿಗೆಯೂ ಬಹುಪಾಲು ಕಡಿಮೆಯಾದವು. ಒಂದಾದರೂ ಗಿಡನೆಡಿ ಎನ್ನುವ ಹಿನ್ನಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಪ್ರಶಂಶನೀಯವಾದುದಾಗಿದೆ. ನಮ್ಮ ಪೂರ್ವಿಕರು, ಅಂದರೆ ಮಾನವನ ಬದುಕು ರೂಪುಗೊಳ್ಳುವ ಆರಂಭಿಕ ಹಂತದಲ್ಲಿ ಅವರು ನಿಸರ್ಗ ಆರಾಧಕರಾಗಿದ್ದರು. ಅವರಿಗೆ ಅರಿವಿಲ್ಲದಂತೆಯೇ ಗಾಳಿ, ನೀರು, ಮರ, ಬೆಳಕು, ಮಣ್ಣಿನ ಆರಾಧಕರಾಗಿದ್ದರು. ಇವೆಲ್ಲದರ ಮಹತ್ವ ಇಂದಿಗೂ ಮುಂದೆಯೂ ಎಂದೆಂದಿಗೂ ಇದ್ದೇ ಇರುತ್ತದೆ. ಏಕೆಂದರೆ ಇವು ಜೀವ ಪೋಷಕ–ಜೀವರಕ್ಷಕ ದ್ರವ್ಯಗಳಾಗಿವೆ. ಆದರೆ ಇದ್ದಕ್ಕಿದ್ದಂತೆ ಜನಸಂಖ್ಯಾ ಪ್ರಮಾಣ ಯಥೇಚ್ಛವಾಗಿ ಬೆಳೆಯಿತು. ನಗರೀಕರಣ ಮುಂದಾಯಿತು. ಬೃಹತ್ ಪ್ರಮಾಣದ ಕೈಗಾರಿಕೆಗಳ ಬೆಳವಣಿಗೆ ಹೆಚ್ಚಾಯಿತು. ಭಾರೀ ರಸ್ತೆಗಳ ನಿರ್ಮಾಣವಾಯಿತು. ಭಾರೀ ವಾಹನಗಳು ರಸ್ತೆಗಿಳಿದ ಪರಿಣಾಮ ಪರಿಸರ ಮಾಲಿನ್ಯ ಜಾಸ್ತಿಯಾಯಿತು. ಕಾಡುಗಳ ನಾಶವೂ ಜೊತೆ ಜೊತೆಗೆ ಅಧಿಕವಾಯಿತು. ವನ್ಯ ಸಂಕುಲವೂ ಕಡಿಮೆಯಾಗುತ್ತಾ ಹೋಯಿತು.
ನಮ್ಮ ಭಾರತ ಪ್ರಾಕೃತಿಕವಾಗಿ ಸಂಪದ್ಭರಿತವಾದ ದೇಶ. ಚಕ್ರವರ್ತಿ ಅಶೋಕ ಮಹಾಶಯ ವನಸಂಪತ್ತನ್ನು ಸಂರಕ್ಷಿಸಲು ಬಹಳಷ್ಟು ಒತ್ತು ನೀಡಿದ್ದನು. ಪ್ರಯಾಣಿಕರಿಗೆ ನೆರಳನ್ನು ನೀಡಲು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಮರಗಳನ್ನು ನೆಟ್ಟು ಪೋಪಣೆಗೆ ಕ್ರಮವಹಿಸಿದ್ದನು. ಬ್ರಿಟೀಷರ ಕಾಲದಿಂದಲೂ ನಮ್ಮ ನೈಸರ್ಗಿಕ ಸಂಪತ್ತನ್ನು ಧಾರಾಳವಾಗಿ ಬಳಸಲಾಗುತ್ತಿತ್ತು ಎಂಬ ಎಲ್ಲಾ ವಿಧವಾದ ಮಾಹಿತಿಗಳು ನಮಗೆ ಇತಿಹಾಸದಿಂದ ತಿಳಿದುಬರುತ್ತವೆ. ವಿಫುಲವಾದ ಈ ಅರಣ್ಯಸಂಪತ್ತು ಒಂದು ಕಾಲಕ್ಕೆ ಮುಗಿಯದ ಅಕ್ಷಯ ಪಾತ್ರೆಯಂತೆ ಇತ್ತು. ಇಂತಹ ಅಕ್ಷಯ ಭಂಡಾರ ‘ಕ್ಷಯವಾಗದಂತೆ ಮುಂದಿನ ಪೀಳಿಗೆಗೆ ಇದನ್ನು ಉಳಿಸುವ ಹಾಗೂ ಅರಣ್ಯ ಬೆಳೆಸಬಹುದಾದ ಪ್ರದೇಶಗಳಲ್ಲಿ ಹೊಸದಾಗಿ ಬೆಳೆಸುವ, ಹಳ್ಳಿ, ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ಗಿಡನೆಡುವ ತನ್ಮೂಲಕ ಶುದ್ಧಗಾಳಿ, ಪರಿಸರ ಸೌಂದರ್ಯ, ಪಶು–ಪಕ್ಷಿಗಳಿಗೆ ಆಹಾರ, ಆಶ್ರಯ ಹೀಗೆ... ವಿಭಿನ್ನ ಆಶಯಗಳೊಂದಿಗೆ ಹಾಗೂ ಮುಖ್ಯವಾಗಿ ಹೊಸ– ಯುವ ಪೀಳಿಗೆಗೆ ಗಿಡ– ಮರ– ಪರಿಸರ ತನ್ನದೆನ್ನುವ ಆತ್ಮೀಯ ಭಾವ– ಸ್ಪರ್ಶವನ್ನು ಬಿತ್ತುವ ಮಹೋದ್ದೇಶದಿಂದ ವನ ಮಹೋತ್ಸವದ ಆಚರಣೆ ಪ್ರಾರಂಭವಾಯಿತು. ಒಂದು ಸಸಿಯನ್ನು ನೆಟ್ಟು ನೀರೆರೆದು ಬೆಳೆಸಿದರೆ ಒಂದು ಜೀವ ಉಳಿಸಿದಂತೆ. ಒಂದು ಮರ ಕಡಿದು ನಾಶ ಮಾಡಿದರೆ ಹಲವು ಜೀವವನ್ನು ನಾಶ ಮಾಡಿದಂತೆ ಎಂಬುದು ಸತ್ಯದ ಮಾತು. " ಮನೆಗೊಂದು ಗಿಡ - ಊರಿಗೊಂದು ವನ " ಇದ್ದರೆ ಸಂತಸದಾಯಕ ವಾತಾವರಣವಿರುತ್ತದೆ.
ವನಮಹೋತ್ಸವ ಕಾರ್ಯಕ್ರಮದಿಂದ ನಿಸರ್ಗ ಹಾಗೂ ಮಾನವ ಸಮುದಾಯಕ್ಕೆ ಬಹಳಷ್ಟು ಪ್ರಯೋಜನಗಳಾಗುತ್ತವೆ. 1. ಸುಂದರ ಪರಿಸರದ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ. ಈ ಮೂಲಕ ಶುದ್ಧ ಗಾಳಿ, ಶುದ್ಧ ನೀರು, ಸ್ವಚ್ಛ ಪರಿಸರ ಪಡೆಯಬಹುದು. 2. ಜಾಗತಿಕ ತಾಪಮಾನದ ಹೆಚ್ಚಳವನ್ನು ಕಡಿಮೆಮಾಡಲು ಸಹಕಾರಿಯಾಗಿದೆ. 3. ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕವನ್ನು ಸಸಿನೆಟ್ಟು ಬೆಳೆಸುವ ಮೂಲಕ ಪಡೆಯಬಹುದು. 4. ವನಮಹೋತ್ಸವ ಕಾರ್ಯಕ್ರಮ ಆಚರಣೆಯಿಂದಾಗಿ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣಾ ಜಾಗೃತಿಯನ್ನು ಮೂಡಿಸಲು ಅನುಕೂಲವಾಗುತ್ತದೆ. 5. ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಣೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಪರಿಸರ ಮಹತ್ವದ ಕುರಿತು ಅರಿವು ಮೂಡಿಸಲು ಪ್ರಯೋಜನವಾಗುತ್ತದೆ. 6. ವನಮಹೋತ್ಸವ ದಿನದ ಆಚರಣೆಯ ಸಂದರ್ಭದಲ್ಲಿ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಪರಿಸರದ ಅಳಿವು - ಉಳಿವಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಸ್ಪರ್ಧೆಗಳಾದ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ,ಚರ್ಚಾ ಸ್ಪರ್ಧೆ, ಚಿತ್ರ ಕಲಾ ಸ್ಪರ್ಧೆ, ಕವನ ರಚನಾ ಸ್ಪರ್ಧೆ, ಕವನ ವಾಚನ ಸ್ಪರ್ಧೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರು ಹಾಗೂ ಭಾಗವಹಿಸಿದವರಲ್ಲಿ ಪರಿಸರ ಜಾಗೃತಿ ಉಂಟುಮಾಡಬಹುದು ಮತ್ತು ವಿಜೇತರನ್ನು ಸನ್ಮಾನಿಸುವ ಮೂಲಕ ಹಾಗೂ ಸಸಿಗಳನ್ನು ನೆನಪಿನ ಕಾಣಿಕೆಯಾಗಿ ನೀಡುವ ಮೂಲಕ ಪ್ರೋತ್ಸಾಹಿಸಬಹುದಾಗಿದೆ. ಅತಿಥಿ ಉಪನ್ಯಾಸಗಳ ಮೂಲಕವೂ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಬಹುದಾಗಿದೆ. 7. ವನಮಹೋತ್ಸವ ಕಾರ್ಯಕ್ರಮದಲ್ಲಿ ಔಷಧೀಯ ಸಸ್ಯಗಳನ್ನು ನೆಟ್ಟು ಬೆಳೆಸುವ ಮೂಲಕ ಆರೋಗ್ಯ ಸುಧಾರಣೆಯಲ್ಲಿಯೂ ಮಹತ್ವದ ಪಾತ್ರ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. 8. ಸಾಧ್ಯವಾದಷ್ಟು ಮಟ್ಟಿಗೆ ಮಳೆಯನ್ನು ಕಾಲಕಾಲಕ್ಕೆ ಬರುವಂತೆ ಮಾಡಲು ವನಮಹೋತ್ಸವ ಕಾರ್ಯಕ್ರಮ ಆಚರಣೆಯು ಸಹಾಯಕವಾಗಿದೆ. 9. ವನಮಹೋತ್ಸವ ಕಾರ್ಯಕ್ರಮ ಆಚರಣೆಯನ್ನು ಮಾಡುವ ಮೂಲಕ ಕೋಟ್ಯಂತರ ಸಸಿಗಳನ್ನು ನೆಟ್ಟು ಬೆಳೆಸಿ ಹಸಿರುಮನೆ ಪರಿಣಾಮದಲ್ಲಿ ಹೆಚ್ಚಾಗುವ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ತಗ್ಗಿಸಿ, ಆಮ್ಲಜನಕ ಕೊರತೆಯನ್ನು ನೀಗಿಸಬಹುದು. 10. ವನಮಹೋತ್ಸವ ಕಾರ್ಯಕ್ರಮ ಆಚರಣೆಯ ಮೂಲಕ ಪರಿಸರಕ್ಕೆ ಪೂರಕವಾದ ಮತ್ತು ಮಾರಕವಾದ ಅಂಶಗಳನ್ನು ಪಟ್ಟಿ ಮಾಡಿ ಪರಸ್ಪರ ವಿಚಾರ ವಿನಿಮಯಕ್ಕೆ ಅನುಕೂಲವಾಗುತ್ತದೆ. 11. ವನಮಹೋತ್ಸವ ಕಾರ್ಯಕ್ರಮ ಆಚರಣೆಯ ಮೂಲಕ ಪರಿಸರ ಮಾಲಿನ್ಯಗಳಾದ ಜಲಮಾಲಿನ್ಯ, ಭೂ ಮಾಲಿನ್ಯ, ವಾಯುಮಾಲಿನ್ಯ, ಶಬ್ದ ಮಾಲಿನ್ಯ ಮುಂತಾದ ಮಾಲಿನ್ಯಗಳನ್ನು ತಪ್ಪಿಸಲು ಅನುಕೂಲವಾಗುತ್ತದೆ. 12. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಪಠ್ಯದಲ್ಲಿರುವ ಪರಿಸರ ಸಂಬಂಧಿ ವಿಷಯಗಳನ್ನು ವನಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಒತ್ತು ನೀಡಿ ಹೇಳುವುದರಿಂದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿ ಭವಿಷ್ಯದ ಪೀಳಿಗೆಗೂ ವನ ಸಂರಕ್ಷಣೆಯ ಅರಿವು ಮೂಡಿಸಲು ಅನುಕೂಲವಾಗುತ್ತದೆ. 13. ಪರಿಸರ ವಾದಿಗಳಾದ ಸುಂದರ್ಲಾಲ್ ಬಹುಗುಣ, ಸಾಲುಮರದ ತಿಮ್ಮಕ್ಕ, ತುಳಸೀಗೌಡ, ಅಲ್ಮಿತ್ರಾ ಪಟೇಲ್, ಡಾ||ರಾಜೇಂದ್ರ ಕೆ. ಪಚೌರಿ, ರಾಹಿಬಾಯಿ ಪೊಪೆರೆ, ಲಿಸಿಪ್ರಿಯಾ ಕಂಗುಜಮ್, ಆದಿ ಚುಂಚನಗಿರಿ ಶ್ರೀ ಮಠದ ವೃಕ್ಷ ಸಂರಕ್ಷಕರಾದ ಬಾಲಗಂಗಾಧರನಾಥ ಸ್ವಾಮೀಜಿ, ಪರಿಸರವಾದಿ ಚ.ನಂ. ಅಶೋಕ್ ಮುಂತಾದವರ ಕಾರ್ಯವೈಖರಿ, ತತ್ವಾದರ್ಶಗಳನ್ನು ಸಾರ್ವಜನಿಕರಿಗೆ ತಿಳಿಸುವುದು. ಶಾಲಾ ಕಾಲೇಜುಗಳಲ್ಲಿ ಪಠ್ಯ ಬೋಧನಾ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಪರಿಸರವಾದಿಗಳ ಚಿಂತನೆಗಳನ್ನು ಬೋಧಿಸಲು ಈ ವನಮಹೋತ್ಸವ ಕಾರ್ಯಕ್ರಮವು ಅನುಕೂಲವಾಗಿದೆ. 14. ವನಮಹೋತ್ಸವ ಕಾರ್ಯಕ್ರಮದ ಮೂಲಕ ವಿಶ್ವ ಭೂ ದಿನ, ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನ , ವಿಶ್ವ ಸಾಗರ ದಿನ ಮುಂತಾದ ಮಹತ್ವದ ದಿನಗಳು ಪರಿಸರ ಸಂರಕ್ಷಣೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿತು.
ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ವನಸಂಪತ್ತಿನ ಪಾತ್ರ ಮಹತ್ತರವೆನಿಸಿದೆ. ಈಗಾಗಲೇ ಭಾರತದಲ್ಲಿ ಕಾಡುಗಳನ್ನು ವಿವಿಧ ಕಾರಣಗಳಿಗಾಗಿ ಕಡಿದು ಒಂದು ರಾಷ್ಟ್ರದಲ್ಲಿ ಎಷ್ಟು ಪ್ರಮಾಣದ ಅರಣ್ಯ ಪ್ರದೇಶ ಇರಬೇಕೋ, ಅಷ್ಟು ಪ್ರಮಾಣದ ಅರಣ್ಯ ಪ್ರದೇಶ ಇಲ್ಲವೆಂಬುದು ಬಹಳಷ್ಟು ಅಧ್ಯಯನಗಳಿಂದ ತಿಳಿದುಬಂದಿರುತ್ತದೆ. ಈಗಲಾದರೂ ನಾವೆಲ್ಲರೂ ಅರ್ಥಮಾಡಿಕೊಂಡು ಸಸ್ಯ ಸಂಪತ್ತನ್ನು ಸಂರಕ್ಷಣೆ ಮಾಡೋಣ. ವನ್ಯಜೀವಿಗಳನ್ನು ಸಂರಕ್ಷಿಸೋಣ. ಮಳೆಯು ಕಾಲಕಾಲಕ್ಕೆ ಸರಿಯಾಗಿ ಬರುವಂತೆ ಮುಂಜಾಗ್ರತೆ ವಹಿಸೋಣ. ಮಳೆ, ಕಾಡು, ಭೂಮಿ, ಗಾಳಿ, ನೀರು ಇವೆಲ್ಲವೂ ಚೆನ್ನಾಗಿದ್ದರೇನೆ ನಮ್ಮೆಲ್ಲರ ಜೀವನ ಚೆನ್ನಾಗಿರುತ್ತದೆ ಎಂದು ತಿಳಿಯೋಣ ಹಾಗೆಯೇ ವನಮಹೋತ್ಸವ ಕಾರ್ಯಕ್ರಮ ಎಲ್ಲೆಡೆಯಲ್ಲೂ ಆಚರಿಸೋಣ. ನಿಸರ್ಗವೇ ಸತ್ಯ, ನಿಸರ್ಗವೇ ನಿತ್ಯ ಎಂಬುದನ್ನು ನಾವೆಲ್ಲರೂ ಅರಿತು ಬದುಕೋಣ.
-ಕೆ.ಎನ್.ಚಿದಾನಂದ. ಸಾಹಿತಿ. ಹಾಸನ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ