“ಪ್ರಯಾಣ ಯಾವಾಗಲೂ ಸುಂದರವಾಗಿರುವುದಿಲ್ಲ. ಇದು ಯಾವಾಗಲೂ ಆರಾಮದಾಯಕವಲ್ಲ. ಕೆಲವೊಮ್ಮೆ ಅದು ನೋವುಂಟು ಮಾಡುತ್ತದೆ, ಅದು ನಿಮ್ಮ ಹೃದಯವನ್ನು ಸಹ ಒಡೆಯುತ್ತದೆ. ಆದರೆ ಪರವಾಗಿಲ್ಲ. ಪ್ರಯಾಣವು ನಿಮ್ಮನ್ನು ಬದಲಾಯಿಸುತ್ತದೆ; ಅದು ನಿಮ್ಮನ್ನು ಬದಲಾಯಿಸಬೇಕು. ಇದು ನಿಮ್ಮ ಸ್ಮರಣೆಯ ಮೇಲೆ, ನಿಮ್ಮ ಪ್ರಜ್ಞೆಯ ಮೇಲೆ, ನಿಮ್ಮ ಹೃದಯದ ಮೇಲೆ ಮತ್ತು ನಿಮ್ಮ ದೇಹದ ಮೇಲೆ ಗುರುತುಗಳನ್ನು ಬಿಡುತ್ತದೆ. ನೀವು ನಿಮ್ಮೊಂದಿಗೆ ಏನನ್ನಾದರೂ ತೆಗೆದುಕೊಂಡು ಹೋಗುತ್ತೀರಿ. ಆಶಾದಾಯಕವಾಗಿ, ನೀವು ಏನಾದರೂ ಒಳ್ಳೆಯದನ್ನು ಬಿಟ್ಟುಬಿಡುತ್ತೀರಿ.”ಎಂಬ ಮಾತಿನಂತೆಯೇ ಈ ಬಾರಿ ರಜೆಯಲ್ಲಿನ ನನ್ನ ಪ್ರವಾಸಗಳು ಹಾಗೂ ಅವುಗಳ ಅನುಭವಗಳು..
ಹೊಸ ಹೊಸ ಜಾಗಗಳನ್ನು,ಹೊಸ ಹೊಸ ಊರುಗಳನ್ನು ಸುತ್ತುವುದು ಎಂದರೆ ನನಗೆ ನೆಚ್ಚಿನ ಕೆಲಸ. ಆದರೆ ಈ ಹವ್ಯಾಸವೇನೂ ನನಗೆ ಬಹಳ ಚಿಕ್ಕ ವಯಸ್ಸಿನಿಂದಲೇ ಬಂದಿದ್ದಲ್ಲ. ಕೋರೋಣ ಬರುವದರ ಜೊತೆಗೆ ನನ್ನಲ್ಲಿ ಇಂತಹದ್ದೊಂದು ಹೊಸ ಹವ್ಯಾಸವೂ ಬೆಳಕಿಗೆ ಬಂದಿದ್ದು. ಐದಾರು ವರ್ಷಗಳ ಹಿಂದೆ ಶಾಲೆಗಲ್ಲದೇ ಬೇರೆಲ್ಲೂ ಮನೆಯಿಂದ ಹೊರಗಡೆ ಕಾಲಿಡದ ನಾನು ಇದೀಗ ಮೂರು ವರ್ಷಗಳಿಂದ ಪ್ರವಾಸ ಪ್ರಿಯೆ.ಈ ಮೂರು ವರ್ಷದಲ್ಲಿ ಅನಿಸಿದ್ದುಂಟು,“ ಆವಾಗೆಲ್ಲಾ ಎಲ್ಲೂ ಸುತ್ತಾಡದೆ ಸುಮ್ಮನೆ ಸಮಯ ವ್ಯರ್ಥ ಮಾಡಿದೆ ” ಎಂದು.
ನನ್ನ ಪ್ಲಸ್ ಟು ಪರೀಕ್ಷೆಗಳು ಮಾರ್ಚ್ ತಿಂಗಳ ಕೊನೆಯಲ್ಲಿ ಮುಗಿದು, ಅಲ್ಲಿಂದ ನನ್ನ ರಜಾ ದಿನಗಳು ಪ್ರಾರಂಭವಾಗಿತ್ತು. moದಲ ತಿಂಗಳ ರಜೆಯಂತೂ ಮುಂದಿನ ಡಿಗ್ರಿ ಕಾಲೇಜ್ ನ ಪ್ರವೇಶ ಪ್ರಕ್ರಿಯೆಗಳು ಎಂದೋ ಮುಗಿದು ಹೋಗಿದ್ದು ತಿಳಿಯಲೇ ಇಲ್ಲ. ಮೇ ತಿಂಗಳಲ್ಲಿ ನಮ್ಮ ಪ್ಲಸ್ ಟು ಪರೀಕ್ಷೆಯ ಫಲಿತಾಂಶ ನಿರೀಕ್ಷೆಯಲ್ಲಿದ್ದ ನನಗೆ ಮೇ ತಿಂಗಳ 25ರಂದು ಬಿಡುಗಡೆಯಾದ ಫಲಿತಾಂಶದಲ್ಲಿ ಬಹಳ ಉತ್ತಮ ಅಂಕಗಳೇ ಬಂದಿದ್ದವು. ಎರಡು ವರ್ಷಗಳ ಪ್ರಯತ್ನಕ್ಕೆ ಸಿಕ್ಕ ಫಲ ತಕ್ಕುದಾಗಿತ್ತು.
ಮೇ ತಿಂಗಳ ಕೊನೆಯಲ್ಲಿ ರಿಸಲ್ಟ್ ನ ಚಿಂತೆ, ಹೊಸ ಕಾಲೇಜ್ ಪ್ರವೇಶದ ಪ್ರಕ್ರಿಯೆ ಎಲ್ಲಾ ಕೊನೆಯಾಗಿ ನಿಜವಾದ ರಜಾ ದಿನಗಳು ಪ್ರಾರಂಭವಾಯಿತು.
ಗೋಕರ್ಣ, ಶೃಂಗೇರಿ, ಮಂತ್ರಾಲಯ, ಹಂಪಿ, ಅಂಜನಾದ್ರಿ, ಹೀಗೇ ಹಲವಾರು ಜಾಗಗಳಿಗೆ ನಾನು ಈ ರಜೆಯಲ್ಲಿ ತೆರಳಿದ್ದೆ. ಗೋಕರ್ಣ ನನಗೆ ಹೊಸದಲ್ಲ. ಹೇಗಾದರೂ ವರ್ಷದಲ್ಲಿ ಒಂದು ಬಾರಿಯಾದರೂ ಗೋಕರ್ಣ ಮಹಾಬಲೇಶ್ವರ, ಹಾಗೂ ಮಲ್ಲಿಕಾರ್ಜುನ ದೇವರನ್ನು ದರ್ಶನ ಮಾಡಲು ತೆರಳಿಯೇ ತೆರಳುತ್ತೇವೆ. ಆದರೆ ಈ ಬಾರಿ ನಾನು ನನ್ನ ಕುಟುಂಬದ ಜೊತೆ ಹೋಗಿದ್ದಲ್ಲ ಬದಲಾಗಿ ಬೇಸಿಗೆ ರಜೆಯ ಸಂದರ್ಭದಲ್ಲಿ ನಮ್ಮ ಊರಿನಲ್ಲಿ ನಾಲ್ಕು ದಿನಗಳ ಕಾಲ ಜರಗಿದ ಜೀವನ ಬೋಧ ಎಂಬ ಶಿಬಿರದಲ್ಲಿ ನಾನು ಮೆಂಟರ್ ಆಗಿ ಭಾಗವಹಿಸಿದ್ದೆ, ಅವರ ಜೊತೆ ನಾನು ಗೋಕರ್ಣಕ್ಕೆ ತೆರಳಿದ್ದು ಒಂದು ರೀತಿ ಬೇರೆಯೇ ಖುಷಿಯನ್ನೇ ನೀಡಿತ್ತು.
ಗೋಕರ್ಣಕ್ಕೆ ಹೋಗಿ ಬಂದ ನಂತರ ಮುಂದಿನ ವಾರ ನಾನು ಮತ್ತು ನನ್ನ ಅಕ್ಕ ಬೆಂಗಳೂರಿಗೆ ತೆರಳುವ ಯೋಚನೆಯಲ್ಲಿದೆವು. ಆದರೆ ಅದಕ್ಕಿಂತ ಮೊದಲೇ ನಿರೀಕ್ಷಿಸಿಯೇ ಇಲ್ಲದೆ ನಾನು ಶೃಂಗೇರಿ, ಮಂತ್ರಾಲಯ, ಹಂಪಿ, ಅಂಜನಾದ್ರಿ ಆಂಜನೇಯನ ದರ್ಶನವನ್ನು ಮುಗಿಸಿಬಂದಿದ್ದೆ. ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ತೊಡಕು ಬಾರದಂತೆ ಶ್ರೀ ಶಾರದಾಂಬೆಯಲ್ಲಿ ಪ್ರಾರ್ಥನೆ ಮಾಡಿ, ತುಂಗಭದ್ರಾ ತಟದಲ್ಲಿರುವ ಮಂತ್ರಾಲಯದಲ್ಲಿ ರಾಯರ ದರ್ಶನ ಮಾಡಿ, ಮಾರನೇ ದಿವಸ ಅಂಜನಾದ್ರಿ ಆಂಜನೇಯನ ಗುಡಿಯಲ್ಲಿ ಆಂಜನೇಯನ ದರ್ಶನ ಮಾಡಿ,ಹಂಪಿ ವಿರೂಪಾಕ್ಷ ಹಾಗೂ ಇತರ ಅಲ್ಲಿರುವ ವಸ್ತು ಶಿಲ್ಪಗಳನ್ನು ವೀಕ್ಷಣೆ ಮಾಡಿ ಮತ್ತೆ ನಮ್ಮೂರ ದಾರಿ ಹಿಡಿದಿದ್ದು. ಈ ಪ್ರವಾಸದಲ್ಲಿ ನನ್ನ ಜೊತೆಯಲ್ಲಿ ನನಗೆ ಮೊದಲೇ ಪರಿಯಚ ಎಂಬವರು ಯಾರು ಇದ್ದಿರಲಿಲ್ಲ... ಆದರೆ ನಾಲ್ಕು ದಿನಗಳ ಪ್ರವಾಸದಲ್ಲಿ ಎಲ್ಲರೂ ಉತ್ತಮ ಸ್ನೇಹಿತರಾದರು.
ಮಾಯಾನಗರಿ ಬೆಂಗಳೂರು ಎಲ್ಲರನ್ನೂ ಅದರತ್ತ ಸೆಳೆಯುತ್ತದೆ. ಆದರೆ ಕಾರಣ ಏನೂ ತಿಳಿದಿರಲಿಲ್ಲ. ನಮ್ಮ ಊರಿನಲ್ಲಿ ಇಲ್ಲದ್ದು ಬೆಂಗಳೂರಿನಲ್ಲಿ ಏನಿದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಅಲ್ಲಿ ಹೋಗಿ ಕೇವಲ ಎಂಟು ದಿನಗಳಲ್ಲಿ ಅಲ್ಲಿನ ಜೀವನ ಶೈಲಿ ನೋಡಿಯೇ ಅರ್ಥವಾಯಿತು. ನಮ್ಮ ಊರಿನಲ್ಲಿ ಎಲ್ಲಿಯೂ ಇಲ್ಲದ ದೊಡ್ಡ ಬದಲಾವಣೆ ಅಲ್ಲಿದೆ ಎಂದು. ಹೊಟ್ಟೆ ಪಾಡಿಗಾಗಿ ಬೆಂಗಳೂರನ್ನು ಆಯ್ದುಕೊಂಡವರು ಹಲವಾರು ಮಂದಿ. ಆದರೆ ಎಲ್ಲರ ಹೊಟ್ಟೆ ಪಾಡಿನ ಕೆಲಸಗಳು ಮಾತ್ರ ಬೇರೆ ಬೇರೆ. ಹಲವಾರು ಐಟಿ ಉದ್ಯೋಗಿಗಳದರೆ ಇನ್ನೂ ಹಲವರು ಕೂಲಿ ಕಾರ್ಮಿಕರು, ದಿನದ ಸಂಬಳದಲ್ಲಿ ಹೊಟ್ಟೆ ತುಂಬಿಸುವ ಜನರು. ಎಲ್ಲರನ್ನೂ ಒಂದೇ ಊರಲ್ಲಿ ಕಾಣಬಹುದು ಎಂದರೆ ಬಹುಶಃ ಅದುವೇ ಬೆಂಗಳೂರು. ಎಲ್ಲಾ ತರಹದ ಜನರೂ ಕೂಡ ಬೆಂಗಳೂರಿನಲ್ಲಿದ್ದಾರೆ. ಎಲ್ಲಾ ತರಹದ ವಿಧ್ಯಾಭ್ಯಾಸ ಹೊಂದಿ, ಉತ್ತಮ ಕೆಲಸದಲ್ಲಿರುವವರು, ಏನೂ ವಿದ್ಯೆಯಿಲ್ಲದೇ ಇರುವ ವ್ಯಕ್ತಿಗಳು, ಸಾಮಾನ್ಯ ಜ್ಞಾನ ಹೊಂದಿದ ಜನರು, ಅತಿಯಾದ ಪಾಶ್ಚಾತ್ಯ ದೇಶಗಳ ಉಡುಗೆ ತೊಡುಗೆಗಳನ್ನು ಆರಧಿಸುವವರು, ಭಾರತೀಯ ಬಟ್ಟೆಬರೆಯನ್ನು ತೊಡುವವರು ಹೇಗೆ ಬೇರೆ ಬೇರೆ ಹಲವು ರೀತಿಯಲ್ಲಿರುವ ಜನರನ್ನು ಬೆಂಗಳೂರು ಒಳಗೊಂಡಿದೆ. ನಮಗೆ ಯಾವ ರೀತಿಯ ಜೀವನ ರೀತಿ ಇಷ್ಟವೋ ಅದೇ ರೀತಿ ನಾವು ಬದುಕಬಹುದು. ಆದರೆ ಇಲ್ಲಿ ಯಾರೂ ಯಾಕೆ? ಎಂದು ಪ್ರಶ್ನೆ ಮಾಡುವುದಿಲ್ಲ. ಆದರೆ ನಮ್ಮ ಊರಿನಲ್ಲಿ ಹಾಗಲ್ಲ... ನಮ್ಮಲ್ಲಿ ಸಾವಿರ ಪ್ರಶ್ನೆ ಮಾಡುವ ಮಂದಿ ಹಲವರಿದ್ದಾರೆ. ಆದರೆ ಅದು ತಪ್ಪು ಅಥವಾ ಸರಿ ಎಂದು ನಾನು ಹೇಳುವುದಿಲ್ಲ. ಅವುಗಳು ಅವರವರಿಗೆ ಬಿಟ್ಟಿರುವ ವಿಷಯಗಳು. ಇದೆ ಕಾರಣಕ್ಕಾಗಿ ಹಲವಾರು ಮಂದಿ ಊರನ್ನು ತೊರೆದು ಬೆಂಗಳೂರನ್ನು ಸೇರಿದ್ದು ಇರಬಹುದು.
ಇಷ್ಟು ವರ್ಷಗಳ ರಜಾ ದಿನಗಳಲ್ಲಿ ನನಗೆ ಅತಿ ಹೆಚ್ಚು ಪ್ರಿಯವಾಗಿದ್ದು ಎಂದರೆ ಖಂಡಿತವಾಗಿಯೂ ಅದು ಈ ಬಾರಿ ನಾನು ಕಳೆದ ರಜಾ ದಿನಗಳು. ಇನ್ನು ಮುಂದೆಯೂ ಕೂಡಾ ರಜಾ ದಿನಗಳಲ್ಲಿ ಬೇಟಿ ನೀಡದೆ ಇರುವಂತಹ ಹಲವಾರು ಜಾಗಗಳಿಗೆ ಭೇಟಿ ನೀಡಿ ಅಲ್ಲಿನ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ನನ್ನ ಕನಸು. ವರ್ಷ ಪೂರ್ತಿ ದುಡಿಯುವುದು, ಓದುವುದು ಹೇಗೂ ಇದ್ದೇ ಇದೆ. ಆದರೆ ಅವುಗಳ ಮಧ್ಯದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ವರ್ಷದಲ್ಲಿ ಒಂದು ಬಾರಿಯಾದರೂ ಕನಿಷ್ಟ ಒಂದು ವಾರದ ವಿರಾಮ ನಮಗೆ ಬೇಕು. ಅದು ಇಂತಹ ಪ್ರವಾಸಗಳಾಗಿರಲಿ ಎಂಬುವುದು ನನ್ನ ಆಶಯ. ಯಾಕೆಂದರೆ, ಹೊಸ ಹೊಸ ಜಾಗಗಳಿಗೆ ಬೇಟಿ ನೀಡುವುದರಿಂದ ಅಲ್ಲಿನ ಜನರು, ಅಲ್ಲಿನ ಅವರ ಜೀವನ ಶೈಲಿ, ಮುಂತಾದವುಗಳ ಬಗ್ಗೆ ನಮಗೆ ಹಲವಾರು ಮಾಹಿತಿಗಳು ಲಭಿಸುತ್ತದೆ. ಇವುಗಳು ನಮ್ಮ ಜೀವನದಲ್ಲಿ ಮುಂದೆ ನಮಗೆ ಹಾಲವು ಬಾರಿ ಉಪಯೋಗಕ್ಕೆ ಬರಲೂ ಬಹುದು.
-ಶ್ರೇಯಾ ಮಿಂಚಿನಡ್ಕ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ