ಗತ ಕಾಲದ ಆಟಿಯ ಕಷ್ಟಗಳು ಈಗಿನವರಿಗೆ ಕಲ್ಪನಾತೀತ: ಡಾ.ಮಂಜುಳಾ ಶೆಟ್ಟಿ

Upayuktha
0

ಮುಡಿಪು ಶ್ರೀ ಭಾರತೀ ಶಾಲೆಯಲ್ಲಿ ಆಟಿದ ಅರಗಣೆ, ಮೆಸ್ಕಾಂ ಪವರ್ ಮ್ಯಾನ್‌ಗಳಿಗೆ ಅಮೃತ ಮಹೋತ್ಸವ ಸಮಿತಿ ಸನ್ಮಾನ


ಮುಡಿಪು: ಹಿಂದೆ ಸುಗ್ಗಿ ಸಮೃದ್ಧಿ ಸಂಕೇತವಾಗಿದ್ದರೆ, ಆಟಿ ಅನಿಷ್ಠದ ತಿಂಗಳೆಂಬ ಕಲ್ಪನೆ ಇತ್ತು. ಆದರೆ, ಆನ್ ಲೈನ್ ಮೂಲಕ ತಿಂಡಿ ತರಿಸಿ ತಿನ್ನುವ ಈ ದಿನಗಳಲ್ಲಿ ಹಿಂದಿನ ಕಾಲದ ಆಟಿಯ ದಿನಗಳ ಆಹಾರದ ಅಭಾವ ಹಾಗೂ ಕಷ್ಟದ ದಿನಗಳನ್ನು ಈಗಿನವರಿಗೆ ಕಲ್ಪಿಸಲೂ ಕಷ್ಟ, ಈಗ ಆಟಿಯ ಆಚರಣೆ ಸಂಭ್ರಮವಾಗಿ ಮಾರ್ಪಟ್ಟಿದೆ ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಡಾ. ಮಂಜುಳಾ ಶೆಟ್ಟಿ ಹೇಳಿದರು.


ಉಳ್ಳಾಲ ತಾಲೂಕು ಮುಡಿಪು ಶ್ರೀ ಭಾರತೀ ಶಾಲೆಯ ಅಮೃತ ಮಹೋತ್ಸವ ಸಮಿತಿಯು ಶಾಲಾಡಳಿತ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಜು.23 ಆದಿತ್ಯವಾರ ಆಚರಿಸಿದ ಆಟಿದ ಅರಗಣೆ ಸಮಾರಂಭದಲ್ಲಿ ಅವರು "ಆಟಿದ ಉದಿಪನ" ನೀಡಿ, ಆಷಾಢ ಮಾಸದ ವಿಶೇಷತೆ ವಿವರಿಸಿದರು.


ಆಟಿದ ತಿಂಗಳಿನಲ್ಲಿ ಹೊಸದಾಗಿ ಮದುವೆಯಾದ ಮಹಿಳೆ ತವರು ಮನೆಗೆ ಬರುವುದು, ಆ ಅವಧಿಯಲ್ಲಿ ಸಾವು, ಹುಡುಗಿ ಪ್ರಥಮ ಬಾರಿಗೆ ಋತುಮತಿ ಆಗುವುದು ಇತ್ಯಾದಿಗಳು ಸಂಭವಿಸಬಾರದು ಎಂಬ ನಂಬಿಕೆ ಇತ್ತು. ಕಳೆಂಜ ಬಂದು ಜನರ ಭಯ ಹೋಗಲಾಡಿಸುತ್ತಿದ್ದ. ಆಟಿಯ ಒಂದು ತಿಂಗಳ ಕಾಲ ದೈವಗಳು ಗುಂಡದಲ್ಲಿ ಕೂರುತ್ತವೆ ಎಂಬ ನಂಬಿಕೆ ಇದೆ. ಆಟಿ ತಿಂಗಳಿನಲ್ಲಿ ಗತಿಸಿದ ಹಿರಿಯರಿಗೆ ಎಡೆ ಇಡುವುದು ಅಥವಾ ಅಗೇಲ್ ಬಡಿಸುವುದು, ಕುಲೆಕ್ ಬಡಸುನ ಇತ್ಯಾದಿ ಆಚರಣೆಗಳು ನಡೆಯುತ್ತವೆ ಎಂದು ಅವರು ವಿವರಿಸಿದರು.


ಸಮಾರಂಭ ಉದ್ಘಾಟಿಸಿದ ಮಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ನರಸಿಂಹ ಹೆಗ್ಡೆ ಮಾತನಾಡಿ, ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಣ ಎಂಬ ಭೇದ ಭಾವ ಇರಬಾರದು, ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಕಲಿಕೆಯಲ್ಲಿ ಇರಬೇಕು. ಶಿಕ್ಷಕರು ಮಕ್ಕಳ ಔನ್ನತ್ಯಕ್ಕೆ ಕಾರಣೀಕರ್ತರಾಗಬೇಕು ಎಂದರು.


ಮುಖ್ಯ ಅತಿಥಿ, ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ನಿಕಟಪೂರ್ವಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಮಾತನಾಡಿ, ಆಟಿಯ ಆಚರಣೆಗಳಿಗೆ ತನ್ನದೇ ಪರಂಪರೆ ಇದೆ ಎಂದರು.


ಕುರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಶಾಂತ ಕಾಜವ ಮಾತನಾಡಿ, ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಹೆತ್ತವರು ಉತ್ತಮ ಶಿಕ್ಷಣ ನೀಡಬೇಕು. ಎಲ್ಲ ಜಾತಿ, ವರ್ಗದವರು ಸೇರಿ ಆಚರಿಸಿದ ಆಟಿದ ಅರಗಣೆ ವಿಶಿಷ್ಟ ಕಾರ್ಯಕ್ರಮ ಎಂದರು. ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಸ್ಥಳೀಯ ಸಂಸ್ಥ ಮುಡಿಪು ಇದರ ಅಧ್ಯಕ್ಷ ರಮೇಶ್ ಶೇಣವ ಅಧ್ಯಕ್ಷತೆ ವಹಿಸಿದರು.


ಮಂಗಳೂರು ಎಂಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ್ ಗಟ್ಟಿ, ಮುಡಿಪು ಕುರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಅರುಣ್ ಡಿಸೋಜ, ಸಾಂಬಾರ್ ತೋಟದ ಎಸ್.ಕೆ.ಟಿಂಬರ್ಸ್ ನ ಎಸ್.ಕೆ.ಖಾದರ್ ಹಾಜಿ, ಒಡಿಯೂರು ಗ್ರಾಮ ವಿಕಾಸ ಯೋಜನೆ ಸೇವಾ ಪ್ರತಿನಿಧಿ ಶಶಿಪ್ರಭಾ, ಶ್ರೀ ಭಾರತಿ ಎಜುಕೇಶನ್ ಟ್ರಸ್ಟ್ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್ ಅತಿಥಿಗಳಾಗಿ ಪಾಲ್ಗೊಂಡರು. ಕವಿ ಅಬೂಬಕರ್ ಹೂಹಾಕುವ ಕಲ್ಲು ಅವರ ಆಟಿದ ಕವನವನ್ನು ಶಿಕ್ಷಕಿ ಸುರೇಖಾ ವಾಚಿಸಿದರು. ಸಾಹಿತಿ, ಹಳೆ ವಿದ್ಯಾರ್ಥಿ ಚಂದ್ರಹಾಸ ಕಣಂತೂರು ಎದುರು ಕತೆಗಳು, ರಸಪ್ರಶ್ನೆಗಳನ್ನು ನಡೆಸಿ ಕೊಟ್ಟರು.


ಬಾಲಚಂದ್ರ ಕಣಂತೂರು ಪ್ರಾರ್ಥಿಸಿದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್.ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ ವಂದಿಸಿದರು. ಹಳೆ ವಿದ್ಯಾರ್ಥಿ ಮೋಹನ್ ಕುರ್ನಾಡು ನಿರೂಪಿಸಿದರು. 


ಒಡಿಯೂರು ಗ್ರಾಮ ವಿಕಾಸ ಯೋಜನೆ ಸದಸ್ಯರಿಂದ ಶಾಲೆಯ ಆವರಣದಲ್ಲಿ ಕೈತೋಟ ನಿರ್ಮಾಣ ಕಾರ್ಯಕ್ರಮಗಳಿಗೆ ರಮೇಶ ಶೇಣವ ಸಾಂಕೇತಿಕ ಚಾಲನೆ ನೀಡಿದರು. ಮುಡಿಪು ಭಾಗದ ಮೆಸ್ಕಾಂನ ಪವರ್ ಮ್ಯಾನ್ ಗಳನ್ನು ಹಾಗೂ ಶಾಲೆಯ ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. 


ಆಟಿಯ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಬಿಸಿ ಬಿಸಿ ಹೋಳಿಗೆ, ಒಂಭತ್ತು ಬಗೆಯ ಚಹಾ, ಪುಂಡಿ ಗಸಿ, ಸುಟ್ಟೇವು, ಸೇಮೆದಡ್ಯೆ ಸಹಿತ ವಿಶಿಷ್ಟ ಉಪಾಹಾರ, ಅಪರಾಹ್ನ ಆಟಿಯ ವಿವಿಧ ಖಾದ್ಯಗಳೊಂದಿಗೆ ಸಹ ಭೋಜನ ಏರ್ಪಡಿಸಲಾಗಿತ್ತು. ಅತಿಥಿಗಳು ಚೆನ್ನೆಮಣೆಯಲ್ಲಿ ಆಡುವ ಮೂಲಕ ಆಟಿದ ತಿನಿಸ್ ಗಳನ್ನು ಅನಾವರಣಗೊಳಿಸಲಾಯಿತು. ಪವನ್ ಹಾಗೂ ಬಾಬು ತಂಡದವರು ಪ್ರಸ್ತುತ ಪಡಿಸಿದ ಆಟಿ ಕಳಂಜನ ಪ್ರಾತ್ಯಕ್ಷಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು

ಶಾಲೆಯ ವಿದ್ಯಾರ್ಥಿಗಳು ವಿವಿಧ ನೃತ್ಯಗಳನ್ನು ಪ್ರದರ್ಶಿದರು. ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಶಕುಂತಳಾ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top