ಸಾಧು ಸಜ್ಜನರ ಸಹವಾಸವೇ ಆದರ್ಶ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಧಾನ ಸಾಧನ

Upayuktha
0

ಸಂಸ್ಕೃತದ ಸುಭಾಷಿತವೊಂದು ಹೀಗೆ ಹೇಳುತ್ತದೆ : " ನಾವು ಯಾವುದರಿಂದ ಸುಖ, ಸಂತೋಷ, ನೆಮ್ಮದಿ, ತೃಪ್ತಿಗಳು ಸಿಗುತ್ತವೆ ಎಂದು ಭಾವಿಸಿಕೊಂಡಿದ್ದೇವೋ ಅವುಗಳಿಂದ ನಿಜವಾಗಿಯೂ ಸಿಗದು ; ಸಜ್ಜನರ ಸಾಮೀಪ್ಯವೇ ನಮಗೆ ಹೆಚ್ಚಿನ ಸುಖವನ್ನೂ , ನೆಮ್ಮದಿಯನ್ನೂ , ತೃಪ್ತಿಯನ್ನೂ ಹಾಗೂ ಸಂತೋಷವನ್ನೂ ನೀಡುವಂಥದ್ದು " ಇದನ್ನು ಪುಷ್ಠೀಕರಿಸಿ ಸರ್ವಜ್ಞನ ತ್ರಿಪದಿಯೊಂದು ಹೀಗೆ ಹೇಳಿದೆ :

'’ ಸಜ್ಜನರ ಸಂಗವದು | ಹೆಜ್ಜೇನ ಸವಿದಂತೆ |

ದುರ್ಜನರ ಸಂಗ ಬಚ್ಚಲ |

ಕೊಚ್ಚೆಯಂತಿಹದು ಸರ್ವಜ್ಞ II "

" ಬಲ್ಲವರ ಒಡನಾಟ | ಬೆಲ್ಲವನು ಮೆದ್ದಂತೆ | ಅಲ್ಲದಹುದೆಂಬ ಅಜ್ಞಾನಿಯೊಡನಾಟ | ಕಲ್ಲು ಹಾದಂತೆ ಸರ್ವಜ್ಞ || "

ಈ ಮೇಲಿನ ಸುಭಾಷಿತ ಮತ್ತು ತ್ರಿಪದಿಯ ಬ್ರಹ್ಮ ಸರ್ವಜ್ಞ ಮಹಾಕವಿಯ ಎರಡೂ ವಚನಗಳು ಈ ಸಮಾಜಕ್ಕೆ ತಿಳಿ ಹೇಳಿದ ಪರಿಯಾಗಿದೆ. ದುಷ್ಟರನ್ನು ಕಂಡರೆ ದೂರವಿರು ಎಂಬ ಗಾದೆ ಮಾತಿನಂತೆ ನಾವು ದುಷ್ಟರಿಂದ ದೂರವಿದ್ದು , ಸಾಧು ಸಜ್ಜನರ ಸಹವಾಸದಲ್ಲಿರುವಂತೆ ನಮ್ಮನ್ನು ನಾವೇ ನೋಡಿಕೊಳ್ಳಬೇಕು. ಏಕೆಂದರೆ ಸ್ವಾಮಿ ವಿವೇಕಾನಂದರು ಹೇಳುವಂತೆ " ನಿನ್ನ ಏಳ್ಗೆಗೆ ನೀನೇ ಶಿಲ್ಪಿ , ಬೇರಾರೂ ನಿನ್ನನ್ನು ಕೆತ್ತಲಾರರು ಎಚ್ಚೆತ್ತುಕೋ ಈಗಲೇ " ಎಂದಿದ್ದಾರೆ. " CHOOSE YOUR FRIENDS WISELY ; OTHERWISE YOU WILL SUFFER " ಎಂಬ ಅನುಭವಿ ಮೇಧಾವಿಗಳು ಹೇಳಿರುವ ನೀತಿಯೂ ಈ ಮೇಲಿನ ವಚನಗಳಿಗೆ ಸಮೀಪವೆನನಿಸಿದೆ.


ಸಜ್ಜನರ ಸಹವಾಸ ನಮಗೆ ಬಹಳ ಒಳ್ಳೆಯದು ಎಂಬುದಕ್ಕೆ ಎರಡು ಕಥೆಗಳ ಮೂಲಕ ನಿದರ್ಶನಗಳನ್ನು ನೀಡ ಬಯಸುತ್ತೇನೆ.

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಕನ್ನಡ ಪಠ್ಯದಲ್ಲಿದ್ದ ನೀತಿ ಕಥೆಯನ್ನು ಉದಾಹರಿಸಲು ಬಯಸುತ್ತೇನೆ. ಒಂದಾನೊಂದು ಹಳ್ಳಿಯ ಸಮೀಪ ಒಂದು ದೊಡ್ಡ ಆಲದ ಮರವಿತ್ತು. ಪ್ರತಿ ನಿತ್ಯ ಈ ಮರದ ಬುಡದಲ್ಲಿ ದನ ಕಾಯುವ ಹುಡುಗರು ಆಟವಾಡುತ್ತಿದ್ದರು. ಆಟದ ನೆಪದಲ್ಲಿ ಮರವನ್ನು ಕಲ್ಲಿನಿಂದ ಕುಟ್ಟುತ್ತಿದ್ದರು, ರಂಬೆಕೊಂಬೆಗಳನ್ನು ಕಡಿಯುತ್ತಿದ್ದರು, ತೊಗಟೆಗಳನ್ನು ಕೆತ್ತುತ್ತಿದ್ದರು. ಹೀಗೆ ಮರಕ್ಕೆ ಒಂದಲ್ಲಾ ಒಂದು ರೀತಿಯ ಹಿಂಸೆ ನೀಡುತ್ತಿದ್ದರು. ಮರವು ತನಗಾದ ದುಸ್ಥಿತಿ ಕಂಡು ಕಣ್ಣೀರಿಡತೊಡಗಿತು. 'ನನ್ನ ಸಹಾಯಕ್ಕೆ ಯಾರೂ ಬರುವುದಿಲ್ಲವೇ?' ಎಂದು ರೋದಿಸುತ್ತಿತ್ತು. ಅದೇ ಮರದ ತುದಿಯಲ್ಲಿ ಗೂಡು ಕಟ್ಟಿಕೊಂಡಿದ್ದ ಎರಡು ಕಾಗೆಗಳಿಗೆ ಮರದ ರೋದನ ಕೇಳಿಸಿತು. ಕೂಡಲೆ ಅರ್ಥ ಮಾಡಿಕೊಂಡ ಕಾಗೆಗಳು ಮರವಿದ್ದ ಜಾಗದಿಂದ ಸ್ಮಶಾನವೊಂದರ ಬಳಿ ಬಂದು ಅಲ್ಲಲ್ಲಿ ಬಿದ್ದಿದ್ದ ಮೂಳೆಗಳು ತಲೆಬುರುಡೆಗಳನ್ನು ತಂದು ಆಲದ ಮರದ ತುಂಬಾ ತೂಗು ಹಾಕಿದವು. ಮಾರನೇ ದಿನ ಮರದ ಬಳಿ ಬಂದ ದನ ಕಾಯುವ ಹುಡುಗರು ಮರದ ರೆಂಬೆ-ಕೊಂಬೆಗಳಲ್ಲಿ ಜೋತು ಬಿದ್ದಿದ್ದ ತಲೆಬುರುಡೆ ಎಲುಬುಗಳನ್ನು ಕಂಡು ಭಯಪಟ್ಟು ಅಲ್ಲಿಂದ ಓಟ ಕಿತ್ತರು. ಈ ಘಟನೆಯ ನಂತರ ಮರದ ಬಗ್ಗೆ ಭಯ ಉಂಟಾಗಿ ಯಾರೂ ಹತ್ತಿರ ಸುಳಿಯುತ್ತಿರಲಿಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ ಮರದ ತುಂಬಾ ಹಸಿರೆಲೆ ತುಂಬಿ, ಸುಂದರವಾಗಿ ಕಾಣ ತೊಡಗಿತು. ಇದೇ ವೇಳೆ ಹೆಣ್ಣು ಕಾಗೆ ಗೂಡಿನಲ್ಲಿ ಮೊಟ್ಟೆ ಇಟ್ಟಿತು. ಒಂದು ದಿನ ಆಹಾರಕ್ಕಾಗಿ ಎರಡೂ ಕಾಗೆಗಳು ಹೊರಗೆ ಹೋಗುವ ಸಂದರ್ಭ ಬಂತು. ಆಗ ಮರದ ಬಳಿ ಬಂದ ಕಾಗೆಗಳು 'ನಾವು ಆಹಾರ ಹುಡುಕುತ್ತಾ ಹೊರಗೆ ಹೋಗುತ್ತಿದ್ದೇವೆ. ಗೂಡಿನಲ್ಲಿ ಮೊಟ್ಟೆಗಳಿವೆ. ಜೋಪಾನ, ಹತ್ತಿರದಲ್ಲೇ ವಿಷಕಾರಿ ಹಾವೊಂದು ಸುಳಿಯುತ್ತಿದೆ' ಎಂದು ಮನವಿ ಮಾಡಿಕೊಂಡವು. ಇದಕ್ಕೆ ಒಪ್ಪಿದ ಮರ, ಹೋಗಿ ಬನ್ನಿ ಎಂದು ಹೇಳಿ ಕಳಿಸಿಕೊಟ್ಟಿತು. ಕಾಗೆಗಳು ಹಾರಿ ಹೋಗಿದ್ದನ್ನು ನೋಡಿದ ಹಾವು, ತಕ್ಷಣವೆ ಮರದ ಬಳಿ ಬಂದು 'ಓ ಮರವೆ, ನಾನು ನಿನ್ನ ಸ್ನೇಹ ಬಯಸಿದ್ದೇನೆ, ನನಗೆ ಬಹಳ ದಿನಗಳಿಂದ ಆಹಾರ ಸಿಗದೆ ತುಂಬಾ ಹಸಿವಾಗಿದೆ. ಮರದಲ್ಲಿರುವ ಮೊಟ್ಟೆಗಳನ್ನು ತಿನ್ನಲು ಬಿಡು' ಎಂದಿತು. ಮರವು ಒಪ್ಪಲಿಲ್ಲ. ಮಾತು ಮುಂದುವರೆಸಿದ ಹಾವು, 'ನೀನು ಕಾಗೆಗಳ ಗೆಳೆಯನಾಗಿದ್ದೀಯ, ಅದು ನನಗೆ ಗೊತ್ತಿದೆ. ಆದರೆ ನನಗೆ ಕಾಗೆಗಳಿಗಿಂತ ಹೆಚ್ಚು ಶಕ್ತಿಯಿದೆ. ಮರದಲ್ಲಿ ಹಾವಿದೆ ಎಂದರೆ ಮರದ ಬಳಿ ಯಾರೂ ಬರೋದಿಲ್ಲ ಎಂಬುದು ನಿನಗೆ ಗೊತ್ತಿರಲಿ, ನಿನ್ನನ್ನು ನಾನು ಕಾಪಾಡುತ್ತೇನೆ' ಎಂದು ಮಾತಿನಲ್ಲಿ ಮರಳು ಮಾಡಿತು, ಹಾವಿನ ಮಾತಿಗೆ ಒಪ್ಪಿದ ಮರವು ಕಾಗೆಯ ಮೊಟ್ಟೆಗಳನ್ನು ತಿನ್ನಲು ಅನುಮತಿ ನೀಡಿ, ಹಾವಿನ ಸ್ನೇಹ ಬೆಳೆಸಿತು, ಗೂಡಿಗೆ ಹಿಂತಿರುಗಿದ ಕಾಗೆಗಳಿಗೆ ಮೊಟ್ಟೆಗಳು ಇಲ್ಲದಿರುವುದು ಕಂಡು ಗಾಬರಿಯಾಯಿತು. ಸ್ನೇಹಿತ ಎಂದು ನಂಬಿದ್ದ ಮರವು ಹಾವಿನ ಗೆಳೆತನ ಮಾಡಿರುವುದು ಗೊತ್ತಾಯಿತು. ನಂಬಿಕೆ ದ್ರೋಹ ಮಾಡಿದ್ದನ್ನು ತಿಳಿದು ದುಃಖಿಸಿದವು. ಮರದ ಬಗ್ಗೆ ತಿರಸ್ಕಾರ ಮೂಡಿ, ಕೃತಘ್ನ ಮರವನ್ನು ಬಿಟ್ಟು ದೂರ ಹೋದವು. ಕೆಲವು ದಿನಗಳ ನಂತರ ಹಾವಿನ ಜೊತೆ ಗೆಳೆತನ ಗಟ್ಟಿ ಮಾಡಿಕೊಂಡ ಮರವು, ಮರದಲ್ಲೆ ವಾಸಿಸಲು ಹಾವಿಗೆ ಸ್ಥಳ ನೀಡಿತು. ಇದರಿಂದಾಗಿ ಮರದ ಬಳಿ ಯಾರೂ ಸುಳಿಯ ದಂತೆ ಮಾಡಲು ಹಾವು ನಿರ್ಧರಿಸಿತು. ಮರದ ನೆರಳಿನಲ್ಲಿ ಸುಮ್ಮನೆ ಕುಳಿತವರನ್ನು ಕಚ್ಚ ತೊಡಗಿತು. ಸಾವು-ನೋವುಗಳು ಹೆಚ್ಚಾಗಿ, ಊರಿನ ಮುಖಂಡರಿಗೆ ದೂರು ಹೋಯಿತು. ಹಾವು ಮರದಲ್ಲಿ ವಾಸವಿರುವುದರಿಂದ ಅದನ್ನು ಹಿಡಿಯುವುದು ಕಷ್ಟ, ಸುತ್ತಲು ಇರುವ ಪೊದೆ, ಒಣಗಿದ ಹುಲ್ಲಿನ ರಾಶಿಗೆ ಬೆಂಕಿ ಹಾಕಿ ಕೊಲ್ಲೋಣ ಎಂದು ಎಲ್ಲರೂ ನಿರ್ಧರಿಸಿದರು ಮತ್ತು ಹಾಗೆಯೇ ಮಾಡಿದರು. ಅದರಂತೆ, ದುಷ್ಟ ಹಾವು ಕೂಡಾ ಬೆಂಕಿಗೆ ಬಿದ್ದು ಪ್ರಾಣ ಬಿಟ್ಟಿತು. ಆದರೆ ಬೆಂಕಿಯ ಜ್ವಾಲೆ ಹೆಚ್ಚಾಗ ತೊಡಗಿತು. ಹಾವು ಸತ್ತದ್ದನ್ನು ಖಚಿತಪಡಿಸಿ ಕೊಂಡ ಹಳ್ಳಿಗರು ಮರದ ಬಗ್ಗೆ ಚಿಂತಿಸದೆ ಅಲ್ಲಿಂದ ಹೊರಟರು, ಹಾವನ್ನು ಕೊಲ್ಲಲು ಹಾಕಿದ್ದ ಬೆಂಕಿ ನಿಧಾನವಾಗಿ ಮರಕ್ಕೂ ತಗುಲಿ, ಮರವು ಕೂಡಾ ಸುಟ್ಟು ಹೋಯಿತು. ದುಷ್ಟ ಹಾವಿನ ಸಹವಾಸ ಮಾಡಿದ್ದಕ್ಕಾಗಿ ಮರವೂ ಕೂಡಾ ಸಾಯಬೇಕಾಯಿತು. ಈ ಕಥೆ ನಮ್ಮ ನಿತ್ಯ ಬದುಕಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಲು ಅಡಿಗಡಿಗೂ ನೆನಪಿಸುತ್ತದೆ.


ಇದರ ಹಾಗೆಯೇ ಮತ್ತೊಂದು ಕಥೆಯ ನಿದರ್ಶನವೂ ಬಹಳ ಸ್ವಾರಸ್ಯಕರವಾಗಿದೆ.

ದೇವನಗರಿ ಎಂಬ ಊರೊಂದು ಇತ್ತು. ಆ ಊರಿನಲ್ಲಿ ಒಬ್ಬ ಕಳ್ಳನಿದ್ದನು. ಜನರನ್ನು ಹೊಡೆದು, ಬಡಿದು ಅವರ ಹಣ, ಆಭರಣ ದೋಚುವುದೆ ಅವನ ಕೆಲಸವಾಗಿತ್ತು. ಅವನು ಮಾಡಿದ ಪಾಪಗಳಿಗೆ ಲೆಕ್ಕವೇ ಇರಲಿಲ್ಲ. ಒಮ್ಮೆ ಅವನಿಗೆ ಪ್ರವಚನ ಹಾಗೂ ಪುಣ್ಯಕಥೆ ಹೇಳುತ್ತಿದ್ದ ಸಾಧು ಪುರುಷರು ಕಣ್ಣಿಗೆ ಬಿದ್ದರು. ಕುತೂಹಲದಿಂದ ಅವನು ಅಲ್ಲಿಗೆ ಹೋದನು. ಅದೇ ವೇಳೆಯಲ್ಲಿ ಶ್ರೀಮಂತರೂ ಅಲ್ಲಿಗೆ ಪ್ರವಚನ ಕೇಳಲು ಆಗಮಿಸಿದ್ದರು. ಕಳ್ಳ ಯೋಚಿಸಿದ, ಈ ಪುಣ್ಯಕಥೆ ಹೇಳುವ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಸಾಕಷ್ಟು ರಾತ್ರಿ ಆಗುತ್ತದೆ. ಆಗ ಇಲ್ಲಿಗೆ ಬಂದಿರುವ ಶ್ರೀಮಂತರಲ್ಲಿ ಯಾವನಾದರೂ ಒಬ್ಬನ ಮೇಲೆ ಧಾಳಿ ಮಾಡಬೇಕು ಎಂದು ಕೊಂಡನು. ಆದರೆ ದೈವೇಚ್ಚೆ ಬೇರೆಯೇ ಇತ್ತು. ಒಂದೆಡೆ ಪುಣ್ಯಕತೆ, ಮತ್ತೊಂದೆಡೆ ಅಲ್ಪ ಕಾಲವಾದರೂ ಸಜ್ಜನರ ಸಂಗ ಇವುಗಳ ಪರಿಣಾಮ ಪ್ರಭಾವವು ಆತನ ಹೃದಯಕ್ಕೆ ತಾಕಿತು. ಕಳ್ಳನಿಗೆ ಸಾಧುಗಳ ವರ್ತನೆ ಅವರ ಹಾವಭಾವ ನೋಡಿ ಬಹಳ ಭಯವುಂಟಾಯಿತು. ಅವನು ಎಲ್ಲಾ ಜನಗಳು ಹೋದ ಮೇಲೆ ಸಾಧುಗಳನ್ನು ಸಮೀಪಿಸಿ ಕೇಳಿದ. " ಮುನಿವರ್ಯ ನಾನು ಒಬ್ಬ ಕಳ್ಳನು, ಕಳ್ಳತನವೇ ನನ್ನ ವೃತ್ತಿ ಆದ್ದರಿಂದ ಕಳ್ಳತನ ಮಾಡುವುದನ್ನು ಬಿಡುವುದು ನನ್ನಿಂದ ಸಾಧ್ಯವಾಗದು. ಇಂಥವನಾದ ನನಗೆ ಉದ್ಧಾರದ ದಾರಿಯೇನಾದರು ಇದೆಯೇ '' ಎಂದು ಕೇಳಿದನು. ಸಾಧುಗಳು ಸ್ವಲ್ಪ ಹೊತ್ತು ಯೋಚಿಸಿ " ಏಕಿಲ್ಲ? ಇದ್ದೇ ಇದೆ. ಸುಳ್ಳು ಹೇಳುವುದನ್ನು ನಿಲ್ಲಿಸಿದರೆ ಸಾಕು " ಎಂದರು. ಆಗ ಕಳ್ಳನು "ಓಹೋ ಆಗಬಹುದು " ಎಂದು ಒಪ್ಪಿಕೊಂಡು ಸಾಧುಗಳ ಕಾಲಿಗೆ ಬಿದ್ದು ಅಲ್ಲಿಂದ ಮುಂದೆ ಸಾಗಿದನು. ಅಷ್ಟು ಹೊತ್ತಿಗೆ ಪ್ರವಚನಕ್ಕೆ ಬಂದವರೆಲ್ಲ ತಮ್ಮ ತಮ್ಮ ಮನೆ ಸೇರಿದ್ದರು. ಕಳ್ಳನು ಏನು ಮಾಡಬೇಕು ಎಂದು ಯೋಚಿಸಿ ಕೊನೆಗೆ ಅರಮನೆಯಲ್ಲಿ ಕಳ್ಳತನ ಮಾಡುವ ನಿರ್ಧಾರಕ್ಕೆ ಬಂದು ತಕ್ಷಣವೇ ಅರಮನೆಯ ದಾರಿ ಹಿಡಿದನು. ಅರಮನೆ ಸಮೀಪಿಸಿದಾಗ ಅಲ್ಲಿಯ ಕಾವಲುಗಾರ ಅವನನ್ನು ತಡೆದು "ಯಾರು ನೀನು? " ಎಂದು ಕೇಳಿದನು. ಅದಕ್ಕೆ ಕಳ್ಳನು ಸುಳ್ಳು ಹೇಳುವುದನ್ನು ಆಗಲೇ ಬಿಟ್ಟಾಗಿದ್ದರಿಂದ " ನಾನು ಕಳ್ಳ '' ಎಂದು ನಿಜ ಹೇಳಿದನು. ಅದನ್ನು ಕೇಳಿ ಅವಕ್ಕಾದ ಕಾವಲುಗಾರ ಇವನು ಯಾರೋ ಅರಮನೆಗೆ ಸಂಬಂಧಿಸಿದವನೆ ಇರಬೇಕು. ಯಾರೆಂದು ಕೇಳಿದ್ದಕ್ಕೆ ಅಸಮಾಧಾನದಿಂದ ಹಾಗೆ ಹೇಳುತ್ತಿದ್ದಾನೆ ಎಂದು ತಿಳಿದು ಅವನಿಗೆ ಒಳಗೆ ಹೋಗಲು ದಾರಿ ಬಿಟ್ಟನು. ಕಳ್ಳನು ನೇರವಾಗಿ ಒಳ ಹೊಕ್ಕು ಒಂದು ದೊಡ್ಡ ಪೆಟ್ಟಿಗೆಯನ್ನು ತಲೆಯ ಮೇಲೆ ಹೊತ್ತುಕೊಂಡು ಹೊರಗೆ ಹೊರಟನು. ಕಾವಲುಗಾರ ಪುನಃ ಅವನನ್ನು ತಡೆದು ಕೇಳಿದ. "ಏನನ್ನು ಒಯ್ಯುತ್ತಿದ್ದೀರಿ?" "ಆಭರಣಗಳ ಪೆಟ್ಟಿಗೆ" ಕಳ್ಳ ಉತ್ತರಿಸಿದ. "ಯಾರನ್ನು ಕೇಳಿ ಒಯ್ಯುತ್ತಿದ್ದೀರಿ " ಕಾವಲುಗಾರ ಕೇಳಿದ. ಕಳ್ಳನಿಗೆ ಸುಳ್ಳು ಹೇಳಲು ಸಾಧ್ಯವಿರಲಿಲ್ಲ. ಆಗಲೇ ಸತ್ಯದ ಪ್ರಭಾವ ಅರಿತಿದ್ದ. ಇಲ್ಲದಿದ್ದರೆ ಕಾವಲುಗಾರ ತನ್ನನ್ನು ಒಳಗೆ ಬಿಡುತ್ತಿರಲಿಲ್ಲ ಎಂದು ಆತ ಭಾವಿಸಿದ. ಅದಕ್ಕೆ ಅವನು ಹೆದರದೆ ಸತ್ಯದ ಪ್ರಭಾವದ ಮೇಲೆ ನಂಬಿಕೆ ಇಟ್ಟು" ಕಳ್ತನ ಮಾಡಿ ಒಯ್ಯುತ್ತಿದ್ದೇನೆ " ಎಂದು ಹೇಳಿದ. ಇದನ್ನು ಕೇಳಿ ಕಾವಲುಗಾರ ನಾನು ಹೀಗೆ ಕೇಳಿದ್ದಕ್ಕೆ ಸಿಟ್ಟಾಗಿ ಅವನು ಹಾಗೆ ಹೇಳಿರಬೇಕು, ಇವನು ಸ್ವಲ್ಪ ಸಿಡುಕಿನ ವ್ಯಕ್ತಿ ಇರಬೇಕು ಎಂದು ಅವನಿಗೆ ಹೋಗಲು ದಾರಿಬಿಟ್ಟನು. ಬೆಳಗಾಗುವುದರಲ್ಲಿ ಅರಮನೆಯಲ್ಲಿ ಗೊಂದಲವೇ ಗೊಂದಲ ! ಆಭರಣಗಳ ಪೆಟ್ಟಿಗೆ ಮಾಯವಾಗಿಬಿಟ್ಟಿದೆ ! ಅರಮನೆಯ ಕಾವಲುಗಾರನನ್ನು ಮಹಾರಾಜರು ಕರೆದು ಕೇಳಿದಾಗ ಕಾವಲುಗಾರ ನಿಜಸಂಗತಿಯನ್ನು ಬಿತ್ತರಿಸಿದನು. ತಕ್ಷಣವೇ ಮಹಾರಾಜರು ಸಿಪಾಯಿಗಳಿಗೆ . ಆಜ್ಞೆ ಮಾಡಿ ಆ ಕಳ್ಳನನ್ನು ಹಿಡಿದು ತರಿಸಿದರು. ಕಳ್ಳನು ಸವಿಸ್ತಾರವಾಗಿ ಎಲ್ಲವನ್ನೂ ಮಹಾರಾಜರಿಗೆ ವಿವರಿಸಿದನು. ಆ ಕಳ್ಳನ ಸತ್ಯವಂತಿಕೆಯನ್ನು ಅರಸರು ಬಹಳ ಮೆಚ್ಚಿಕೊಂಡರು. ಅವನನ್ನು ತಮ್ಮ ಅರಮನೆಯ ಪ್ರಮುಖ ಕಾವಲುಗಾರನನ್ನಾಗಿ ನೇಮಿಸಿದರು. ಮುಂದೆ ಆ ಕಳ್ಳನಿಗೆ ಎಂದಿಗೂ ಕಳ್ಳತನ ಮಾಡುವ ಅವಶ್ಯಕತೆಯೇ ಬೀಳಲಿಲ್ಲ.


ಈ ಮೇಲಿನ ಎರಡೂ ನಿದರ್ಶನಗಳು ನಮಗೆ ಜೀವನ ಪಾಠವನ್ನು ಹೇಳುತ್ತವೆ. ನಾವು ಯಾರೊಂದಿಗೆ ಸಹವಾಸ ಮಾಡಿದರೆ ಒಳಿತು ಎಂಬುದನ್ನು ಸಾಬೀತು ಪಡಿಸುತ್ತವೆ. ಈ ಸಮಾಜದಲ್ಲಿ ನಮ್ಮೊಂದಿಗೆ ಒಳ್ಳೆಯವರೂ ಮತ್ತು ಕೆಟ್ಟವರು ಇಬ್ಬರೂ ಇದ್ದಾರೆ. ಒಳ್ಳೆಯವರು ಮತ್ತು ಕೆಟ್ಟವರನ್ನು ಕಂಡು ಹಿಡಿಯುವುದು ಬಹಳ ಕಷ್ಟದ ಕೆಲಸವೇ ಆಗಿದೆ. ಹೀಗಿರುವಲ್ಲಿ ನಮಗೆ ಬೇಕಾಗಿರುವುದು ಸಂಯಮ, ತಾಳ್ಮೆಯಿಂದ ನಿಧಾನವಾಗಿ ಆಲೋಚಿಸಿ ಗೆಳೆತನ ಮಾಡಬೇಕಾಗುತ್ತದೆ. ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎಂಬ ಗಾದೆ ಮಾತನ್ನು ಅನ್ವಯಿಸಿಕೊಳ್ಳ ಬೇಕಾಗುತ್ತದೆ. ಸಾಧು ಸಜ್ಜನರ ಸಂಗವೇ ಮುಕ್ತಿಗೆ ಪ್ರಧಾನ ಸಾಧನ ಎಂಬುದನ್ನು ಅರಿತು ಒಳ್ಳೆಯವರ ಸ್ನೇಹ ಮಾಡೋಣ, ಒಳ್ಳೆಯ ಆಲೋಚನೆಗಳೊಂದಿಗೆ ಸಮಾಜಮುಖಿ, ಪ್ರಗತಿಪರ ಕೆಲಸಗಳತ್ತ ನಮ್ಮ ಚಿತ್ತವನ್ನು ಕೇಂದ್ರೀಕರಿಸಿ ವೃಷ್ಠಿಯಿಂದ ಸಮಷ್ಠಿಯೆಡೆಗೆ ಸಾಗುತ್ತಾ ವಿಶಾಲ ಮನೋಭಾವವುಳ್ಳವ ರಾಗೋಣ. ರಾಷ್ಟ್ರದ ಮತ್ತು ವಿಶ್ವದ ಮುನ್ನಡೆಗೆ ಸದಾ ಶ್ರಮಿಸೋಣ.

-ಕೆ.ಎನ್. ಚಿದಾನಂದ. ಹಾಸನ.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top