ಗುರು ನಮನ: ಸರಳತೆಗೆ ಅನ್ವರ್ಥರು ಶ್ರೀ ವಿಶ್ವೇಶತೀರ್ಥ ಗುರುಗಳು...

Upayuktha
0

ಶುದ್ಧ ಖಾದಿ- ಖಾವಿ ವಸ್ತ್ರಧಾರಿ. ಹಿತ ಮಿತ ಆಹಾರ- ನಿದ್ರೆ (ಬೆಕ್ಕಿನೂಟ ಕೋಳಿ ನಿದ್ದೆ ಎಂಬ ಆಡುಮಾತಿನಂತೆ), ರಾಜಿಯೇ ಇಲ್ಲದ ಅಧ್ಯಯನ‌ ಅಧ್ಯಾಪನ,

ಯತಿ ಜೀವನದ ವಿಧಿ ನಿಷೇಧಗಳ ನಿತ್ಯಾನುಷ್ಠಾನ, ದಣಿವರಿಯದ ನಿತ್ಯ ಸಂಚಾರಿ, ಕಾಷ್ಠ ಶಿಲ್ಪ ಪ್ರಭಾವಳಿಯುಕ್ತ ಆಸನಗಳ ಗೊಡವೆಯೇ ಇಲ್ಲ; ಕೇವಲ ಒಂದು ಸಾಮಾನ್ಯ ಮಣೆ; ಸಭಾವೇದಿಕೆಯಾದರೆ ಒಂದು ತೀರಾ ಸಾಮಾನ್ಯ ಕುರ್ಚಿಯೂ ಅದೀತು. ತಪಸ್ಸ್ವಾಧ್ಯಾಯ ಶುಶ್ರೂಷೆಗಳೇ ಪ್ರಭಾವಳಿಯಾಗಿ ಕೋಟ್ಯಂತರ ಭಕ್ತರ ಹೃದಯ ಸಿಂಹಾಸನ ವಿರಾಜಮಾನರಾದ ಪರಮಗುರುಗಳು ಶ್ರೀ ಶ್ರೀ ವಿಶ್ವೇಶತೀರ್ಥರು. ಸರಳತೆಯೇ ಸೊಬಗೆಂಬ ನುಡಿಗೆ ಅನ್ವರ್ಥರು.


ಎಂಥಾ ಕಟುಮಾತುಗಳಿಂದ ಟೀಕಿಸಿದವರನ್ನೂ, ವಿರೋಧಿಗಳನ್ನೂ ಕರೆದು ಸವಿನಗು ಮೃದು ವಿನಯ ಮಾತುಗಳಿಂದ ಆದರಿಸಿ ಪ್ರೀತಿ ಕರುಣೆಗಳ ಹಾರತೊಡಿಸಿ ಕಳುಹಿಸುತ್ತಿದ್ದ ಮಹಾಚೇತನ.


ಟೀಕೆ ಕುಹಕ ಅಪವಾದಗಳನ್ನು ಮೈಗೆ ಹೊದ್ದುಕೊಂಡು ಅದನ್ನೇ ಸಾದರಪೂರ್ವಕ ಸ್ಫೂರ್ತಿಯಾಗಿಸಿ ಸಮಾಜಸುಧಾರಣೆಯ ಕರ್ತವ್ಯಗಳಿಗೆ ದಿಟ್ಟ ಹೆಜ್ಜೆ ಇಡುತ್ತಲೇ 80 ವರ್ಷಗಳ ಸುದೀರ್ಘ ಸಾರ್ಥಕ ಸನ್ಯಾಸ ಜೀವನವನ್ನು ಸವೆಸಿ ಸಮಾಜವನ್ನು ಬೆರಗುಗೊಳಿಸಿದ ಮಹಾಗುರುಗಳು ಶ್ರೀ ವಿಶ್ವೇಶತೀರ್ಥ ಗುರುಗಳು.


ಸಕಲ ಜೀವರಾಶಿಗಳ ಮೇಲೆ ದಯೆ ಅನುಕಂಪದ ಮಹಾಪೂರವನ್ನೇ ಹರಿಸಿ ಅಹಿಂಸೆ ಸತ್ಯ ಸರ್ವಭೂತದಯೆ ಜ್ಞಾನ ತಪ ಕ್ರಿಯೆ ಧ್ಯಾನ ಎಂಬ ಅಷ್ಟ ಕುಸುಮಗಳಿಂದ ಮಧ್ವವಲ್ಲಭ ಶ್ರೀ ಕೃಷ್ಣನ ಆರಾಧನೆ ನಡೆಸಿ, ಹೃದ್ಯವಾದ ಅಮೃತಸಂದೇಶಗಳು ಹತ್ತಾರು ಮೌಲಿಕ ಕೃತಿಕುಸುಮಗಳಿಂದ ಸತ್ಪಥದ ದಿಶೆ ತೋರಿಸಿದ ಧೀಮಂತ ಸದ್ಗುರು ಶ್ರೀ ವಿಶ್ವೇಶತೀರ್ಥ ಗುರುಗಳು.


ಬದರಿಯಿಂದ ರಾಮೇಶ್ವರದ ತನಕ ನೂರಾರು ಕಡೆ ಶ್ರೀಕೃಷ್ಣ ಮಂದಿರಗಳು, ಶ್ರೀ ಪೇಜಾವರ ಮಠದ ಶಾಖೆ, ಅನೇಕ ಶಿಕ್ಷಣ ಆರೋಗ್ಯ ಸಂಸ್ಕೃತ ಸಂಸ್ಥೆಗಳು ವಿದ್ಯಾಪೀಠಗಳನ್ನು ಅನನ್ಯ ಶ್ರಮ‌ಸಾಹಸದಿಂದ ಸ್ಥಾಪಿಸಿ ಪೋಷಿಸಿ ಜನಸೇವೆ ಎನ್ನುವುದು ಜನಾರ್ದನನಿಗೆ ಕಟ್ಟಲೇಬೇಕಾದ ತೆರಿಗೆ ಎಂಬ ಮಧ್ವವಚನವನ್ನು ಶಿರೋಧಾರ್ಯವೆಂಬಂತೆ ಪಾಲಿಸಿ ಸಹಸ್ರ ಸಹಸ್ರ ಜನರಿಗೆ ಆಶ್ರಯದಾತರಾಗಿ, ಶಿಷ್ಯವತ್ಸಲರೆನಿಸಿ 5 ಅಪೂರ್ವವೂ ದಾಖಲೆಯೂ ಆದ ಶ್ರೀ ಕೃಷ್ಣ ಪೂಜಾ ಪರ್ಯಾಯಗಳನ್ನು ನಡೆಸಿ ಉಡುಪಿಯ ಇತಿಹಾಸದಲ್ಲಿ ಅಮರರಾದ ದಿವ್ಯ ಚೇತನ ಶ್ರೀ ವಿಶ್ವೇಶತೀರ್ಥ ಗುರುಗಳು.


ತಪಃ ಸ್ವಾಧ್ಯಾಯ ಶುಶ್ರೂಷಾ ಕೃಷ್ಣಪೂಜಾರತಂ ಮುನಿಂ|

ವಿಶ್ವೇಶಂ ಇಷ್ಟದಂ ವಂದೇ ಪರಿವ್ರಾಟ್ ಚಕ್ರವರ್ತಿನಂ ||


-ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top