ಮಂಗಳೂರಿನ ಸಾಲು ಮರದ ಮಾಧವಣ್ಣ- 2.5 ಲಕ್ಷ ಮರಗಳ ಪೋಷಕರಿವರು

Upayuktha
0

ಬುದ್ದಿವಂತರ ಜಿಲ್ಲೆಯೆಂದೇ ಪ್ರಸಿದ್ದಿಯನ್ನು ಪಡೆದ ನಮ್ಮ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಾಹಿತ್ಯ, ಕಲೆ, ವಿಜ್ಞಾನ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ಪ್ರಗತಿಯ ಜೊತೆಗೆ ಹಲವು ಸಾಧಕರನ್ನು ಗುರುತಿಸಬಹುದಾದರೂ ಪ್ರಕೃತಿ ಪ್ರೇಮ, ಪರಿಸರ ಜಾಗೃತಿ, ಕೃಷಿ ಸಂಬಂಧಿತ ವಿಚಾರಗಳು ಬಂದಾಗ ನಾವು ಉಳಿದ ಜಿಲ್ಲೆಯವರಿಗಿಂತ ತುಸು ಹಿಂದುಳಿದು ಬಿಡುತ್ತೇವೆ. 


ಮೂವತ್ತೇಳು ವರ್ಷಗಳಿಂದ "ಮರಗಳೇ ತನ್ನ ಬದುಕು" ಎಂದು ಜೀವಿಸುತ್ತಿರುವ ಉಳ್ಳಾಲ ತಾಲೂಕಿನ ಕೋಡಿಯ ಮಾಧವ್ ರವರನ್ನು ನನ್ನ ಆತ್ಮೀಯರೊಬ್ಬರು ಪರಿಚಯಿಸಿದಾಗ ಇವರು ಕರಾವಳಿ ಜಿಲ್ಲೆಯ ಅಪರೂಪದ ಸಾಧಕರಲ್ಲಿ ಅಪರೂಪದವರೆನಿಸಿತು. 


ಎಲ್ಲರೊಡನೆ 'ಪನ್ಲೆಣ್ಣ', 'ಪನ್ಲೆಕ್ಕ' ಎಂದೇ ಆತ್ಮೀಯವಾಗಿ ಸಂವಹನದಲ್ಲಿ ತೊಡಗುವ ಮಾಧವ್ ರವರು ತುಳುನಾಡಿನಲ್ಲಿ "ಮಾಧವಣ್ಣ" ಎಂದೇ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದಾರೆ. ಉಳ್ಳಾಲದ ಭಾರತ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದ ಮಾಧವಣ್ಣನವರು ತಮ್ಮ ಜೀವನಾಧಾರಕ್ಕಾಗಿ ಪಿಗ್ಮಿ ಕಲೆಕ್ಷನ್ ವೃತ್ತಿಯನ್ನು ಆಯ್ದುಕೊಂಡರು. 


ಮಂಗಳೂರಿನ ಆಸುಪಾಸಿನ ಊರುಗಳಿಗೆ ನಡೆದುಕೊಂಡೇ ಹೋಗಿ ಪಿಗ್ಮಿ ಕಲೆಕ್ಷನ್ ಮಾಡುವಾಗ ಬಿಸಿಲಿನ ಬೇಗೆ ಜಾಸ್ತಿ ಇರುತ್ತಿದ್ದುದ್ದರಿಂದ ವಾತಾವರಣದ ತಾಪಮಾನವನ್ನು ಕಡಿಮೆ ಮಾಡಲು ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಿ ಉಳಿಸುವುದೊಂದೇ ಮಾರ್ಗವೆಂದು ಕಂಡುಕೊಂಡ ಇವರು ಅಂದಿನಿಂದ- ಇಂದಿಗೆ ಮಂದಿರ, ಮಸೀದಿ, ಚರ್ಚ್, ಸ್ಮಶಾನ ಮುಂತಾದ ಕಡೆಗಳಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಗಿಡಮರಗಳನ್ನು ಪೋಷಿಸಿ ಬೆಳೆಸಿದ್ದಾರೆ. ಹಾಗೆಯೇ ಮೂರುವರೆ ಲಕ್ಷಕ್ಕೂ  ಹೆಚ್ಚು ಸಸಿಗಳನ್ನು ವಿತರಿಸಿದ್ದಾರೆ.


ಕೋರೋನಾ ಸಮಯದಲ್ಲಿ ಮಂಗಳೂರಿನ ನಂತೂರಿನಿಂದ ತಲಪಾಡಿಯವರೆಗೆ ಅರಣ್ಯ ಇಲಾಖೆಯ ನೇತೃತ್ವದಲ್ಲಿ, ರೇಂಜರ್ ಶ್ರೀಧರ್ ರವರ ಸಹಕಾರದೊಂದಿಗೆ ಎರಡು ಸಾವಿರದ ಮುನ್ನೂರೈವತ್ತು ಗಿಡಗಳನ್ನು "ಬ್ರಹ್ಮಶ್ರೀ ನಾರಾಯಣ ಗುರು ಸಾಲು ಮರ" ಎಂಬ ಹೆಸರಿನಡಿಯಲ್ಲಿ ನೆಟ್ಟಿದ್ದಾರೆ. "ಮನೆಗೊಂದು ಮರ" ಕಾರ್ಯಕ್ರಮದಡಿಯಲ್ಲಿ ತಮ್ಮ ಊರಿನ ಜನರಲ್ಲಿ ಕೂಡ ಪ್ರಕೃತಿ ಪ್ರೇಮವನ್ನು ಬಿತ್ತರಿಸುವ ಕಾರ್ಯಮಾಡಿರುವುದು ವೃಕ್ಷ ರಾಜನ ವೃಕ್ಷ ಪ್ರೇಮಕ್ಕೆ ಸಲ್ಲಿಸಿರುವ ಇನ್ನೊಂದು ಕಾಣಿಕೆಯಾಗಿದೆ. 


ಮಂಗಳೂರು 'ಸ್ಮಾರ್ಟ್ ಸಿಟಿ' ಆಗ್ತಿದೆ. ನಿಮ್ಮ ಅಭಿಪ್ರಾಯವೇನು ಮಾಧವಣ್ಣ ಎಂದು ಕೇಳಿದರೆ, "ಸ್ಮಾರ್ಟ್ ಸಿಟಿ" ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗೆಂದು ನೂರಾರು ಮರಗಳನ್ನು ಕಡಿಯಲು ಸರ್ಕಾರ ಅವಕಾಶ ನೀಡಿದೆ. ಹಾಗೆಯೇ ಅಲ್ಲಿನ ಆಸುಪಾಸಿನ ಜಾಗಗಳಲ್ಲಿ ಸಸಿಗಳನ್ನು ನೆಡಲು ಕೂಡ  ಅವಕಾಶವನ್ನು  ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಮರಗಳನ್ನು ಎಲ್ಲೋ ಕಡಿದು ಸಸಿಗಳನ್ನು ಇನ್ನೆಲ್ಲೋ ನೆಟ್ಟರೆ ಸಿಟಿಯ ಜನರಿಗೆ ಉಪಯೋಗವಿಲ್ಲವೆಂದು ದಿಟವಾಗಿ ತಮ್ಮ  ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. 


ಇನ್ನೂ ಯುವಜನತೆ ಕುರಿತಂತೆ ಮಾಧವ್ ರವರು "ಯುವಜನತೆ ಪರಿಸರದ ಬಗ್ಗೆ ತಿಳಿಯಲು ಅನ್ಯಮನಸ್ಕರಾಗುತ್ತಿದ್ದಾರೆ. ಪ್ರಸ್ತುತವಾಗಿ ಬರುವ Environmental ಇಂಜಿನಿಯರ್ಸ್ "ಎಲೆಗಳೇ ಉದುರದಂಥ ಮರದ ಸಸಿಗಳನ್ನು ಬೆಳೆಸಿ" ಎಂದು ಹೇಳುತ್ತಾರೆ. ಹೀಗಿರುವಾಗ ಜನತೆಗೆ ಮೊದಲು ಪ್ರಕೃತಿಯ ಮಹತ್ವ ತಿಳಿಯಬೇಕು, ಹಸಿರು ಮನಸ್ಸು ಎಂಬುದು ಮೊದಲು ಯುವಜನರ ಮನದಲ್ಲಿ ನಿರ್ಮಾಣವಾಗಬೇಕೆಂದು" ವಿಷಾದದಿಂದ ಹೇಳುತ್ತಾರೆ. 


ನಿಸ್ವಾರ್ಥಿಯಾಗಿ ಕಳೆದ ಮೂವತ್ತೇಳು ವರ್ಷಗಳಿಂದ ವೃಕ್ಷಮಾತೆಯ ಸೇವೆಯನ್ನು ಗೈಯ್ಯುತ್ತಿರುವ ಮಾಧವ್ ರವರ ಸಮಾಜ ಸೇವೆಗೆ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ", "ರಾಜ್ಯ ಜೀವಿ ಮತ್ತು ಜೀವಶಾಸ್ತ್ರ ಪ್ರಶಸ್ತಿ" ಅರಣ್ಯ ಇಲಾಖೆಯ "ವೃಕ್ಷರಾಜ" ಹಾಗೂ "ವೃಕ್ಷ ಮಿತ್ರ" ಪ್ರಶಸ್ತಿ, ಪಬ್ಲಿಕ್ ಟಿ.ವಿ ಯ "ಪಬ್ಲಿಕ್ ಹೀರೋ", ಕನ್ನಡಪ್ರಭ ಪತ್ರಿಕೆಯ "ವರ್ಷದ ವ್ಯಕ್ತಿ" ಪ್ರಶಸ್ತಿ ಹೀಗೆ ಹತ್ತು-ಹಲವಾರು ಪ್ರಶಸ್ತಿ- ಪುರಸ್ಕಾರಗಳು ಇವರಿಗೆ ಲಭಿಸಿವೆ. ಪ್ರಸ್ತುತ ಸಾಲಿನ ವಿ.ಕ ಹೀರೋ ಪ್ರಶಸ್ತಿಗೆ ಕೂಡ ಮಾಧವ್ ರವರು ಆಯ್ಕೆಯಾಗಿರುವುದು ನಮ್ಮ ಹೆಮ್ಮೆ. 


ಪರಿಸರದ ಪರವಾಗಿ ದುಡಿಯುವ ಯಾರೊಬ್ಬನೂ ತನ್ನ ಸ್ವಂತಕ್ಕಾಗಿ, ತನ್ನ ಮನೆತನಕ್ಕಾಗಿ ದುಡಿಯುವುದಿಲ್ಲ. ಆತ ನಿಸರ್ಗದಲ್ಲಿರುವ ಪ್ರತಿಯೊಂದು ಜೀವಿಗಾಗಿ ಶ್ರಮಿಸುತ್ತಾನೆ. ಆದ್ದರಿಂದ ಮಾಧವ್ ರವರ ಪ್ರಕೃತಿ ಮನಸ್ಸು ಬಯಸುವುದು ಗಿಡಗಳನ್ನು ಪೋಷಿಸಿ ಬೆಳೆಸುವುದನ್ನೇ ಹೊರತು ಯಾವುದೇ ಪ್ರಶಸ್ತಿ ಪುರಸ್ಕಾರಗಳನ್ನಲ್ಲ.



- ವಿಧಿಶ್ರೀ 

ತೃತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ 

ವಿ.ವಿ. ಕಾಲೇಜು ಮಂಗಳೂರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top