ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ’ ರಾಜ್ಯಮಟ್ಟದ ವಿಚಾರ ಸಂಕಿರಣ
ಉಜಿರೆ: ಪ್ರಸ್ತುತ ದಿನಮಾನಗಳಲ್ಲಿ ಕುವೆಂಪು ಅವರ ವಿಚಾರದೃಷ್ಟಿ, ವಿಶ್ವಮಾನವ ಸಂದೇಶ, ಸಾಹಿತ್ಯಗಳಲ್ಲಿನ ವೈಚಾರಿಕತೆ ಮತ್ತು ಸೂಕ್ಷ್ಮತೆಗಳನ್ನು ಹೊಸ ತಲೆಮಾರಿನ ಯುವ ಸಮೂಹ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಇಂದು ಕನ್ನಡ ವಿಭಾಗದ ಕನ್ನಡ ಸಂಘ ಹಾಗೂ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ’ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಸಾಹಿತ್ಯಗಳಲ್ಲಿನ ಸೂಕ್ಷ್ಮತೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮೌಢ್ಯ, ಜಾತಿ, ಮತ ಸಂಕೋಲೆಗಳ ಅಡ್ಡಿಗಳಿರಬಾರದು ಎಂದು ಕುವೆಂಪು ಆಲೋಚಿಸಿದ್ದರು. ಅವರ “ಗುಡಿ, ಚರ್ಚು, ಮಸೀದಿಗಳಿಂದ ಹೊರಬನ್ನಿ..” ಎಂಬ ವಾಕ್ಯದಿಂದ ಕುವೆಂಪು ಅವರನ್ನು ನಾಸ್ತಿಕ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಅದರ ಸೂಕ್ಷ್ಮತೆ ಅರಿತುಕೊಂಡಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಹೊಸ ತಲೆಮಾರಿನ ಯುವ ಸಮೂಹಕ್ಕೆ ಕುವೆಂಪು ವೈಚಾರಿಕ ಸಾಹಿತ್ಯ ಓದಿನ ಅಗತ್ಯವಿದೆ. ಶ್ರೇಷ್ಠ ಸಂದೇಶ, ಸಾಹಿತ್ಯ ಓದಿನ ಮೂಲಕ ವೈಚಾರಿಕತೆಯನ್ನು ಜಾಗೃತಗೊಳಿಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., “ಇಂದಿನ ಶೈಕ್ಷಣಿಕ ಯುಗದಲ್ಲಿ ಪಠ್ಯ ಹಾಗೂ ಪಠ್ಯೇತರದ ಜತೆಗೆ ಕುವೆಂಪು ಅವರ ವ್ಯಕ್ತಿತ್ವ ಪರಿಚಯವಾಗಬೇಕು” ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಅವರು, ವಿಶಾಲ ಸಾಹಿತ್ಯ ಓದಿನಿಂದ ಹೊಸ ವಿಚಾರಗಳು ಅನುಷ್ಠಾನಗೊಳ್ಳುತ್ತವೆ. ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ರೂಪುಗೊಳ್ಳುತ್ತಾನೆ ಎಂದು ಹೇಳಿದರು.
ಅತಿಥಿ, ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್., ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ್ ಹಳೆಮನೆ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕ ಮಹೇಶ್ ನಿರೂಪಿಸಿದರು. ಪ್ರಣಮ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಜಯಶ್ರೀ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ