ಮುಳ್ಳೇರಿಯ ಹವ್ಯಕ ಮಂಡಲದ ವತಿಯಿಂದ ಸನ್ಮಾನ
ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕಮಂಡಲದ ವತಿಯಿಂದ ದೇಶೀಯ ಮಟ್ಟದಲ್ಲಿ ಒಂದನೇ ರ್‍ಯಾಂಕ್ ಪಡೆದ ಕಿಳಿಂಗಾರು ಯಶಸ್ವಿನಿಯನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಿಳಿಂಗಾರು ವೇದಮೂರ್ತಿ ಶಿವಶಂಕರ ಭಟ್ ಹಾಗೂ ಶಶಿಪ್ರಭಾ ದಂಪತಿಗಳ ಪುತ್ರಿಯಾದ ಈಕೆ ಐಐಐಟಿ (ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ) ಹೈದರಾಬಾದ್ ಪದವಿಪೂರ್ವ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 1ನೇ ರ್‍ಯಾಂಕ್ ಪಡೆದಿರುತ್ತಾಳೆ.
ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳಿಗೆ ಎಳವೆಯಲ್ಲಿ ಸರಿಯಾದ ಮಾರ್ಗದರ್ಶನ ಲಭಿಸಿದಾಗ ಅವರು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಿದೆ. ಇದೀಗ ದೇಶೀಯ ಮಟ್ಟದಲ್ಲಿಯೇ ಸಾಧನೆಯನ್ನು ಮಾಡಿದ ಯಶಸ್ವಿನಿಗೆ ಉತ್ತಮ ಭವಿಷ್ಯವಿದೆ ಎಂದು ಹಾರೈಸಿದರು.
ನೀರ್ಚಾಲು ವಲಯ ಅಧ್ಯಕ್ಷ ಜಯದೇವ ಖಂಡಿಗೆ, ಮಂಡಲ ಉಪಾಧ್ಯಕ್ಷ ಕುಸುಮ ಪೆರ್ಮುಖ, ಕೋಶಾಧಿಕಾರಿ ಹರಿಪ್ರಸಾದ ಪೆರ್ಮುಖ, ಮಹಾಮಂಡಲ ಮಾರ್ಗದರ್ಶಕ ಡಾ. ವೈ.ವಿ.ಕೃಷ್ಣಮೂರ್ತಿ, ಗುರಿಕ್ಕಾರ ಮಹಾಲಿಂಗೇಶ್ವರ ಭಟ್ಟ ಈಂದುಗುಳಿ, ಶ್ರೀಧರ ಭಟ್ಟ ಬೇಳ, ವಿಷ್ಣುಶರ್ಮ ಮಿಂಚಿನಡ್ಕ, ಈಶ್ವರ ಭಟ್ಟ ಹಳೆಮನೆ, ಗಣಪತಿ ಪ್ರಸಾದ ಕುಳಮರ್ವ, ಗೋಪಾಲಕೃಷ್ಣ ಶಿಮಲಡ್ಕ, ಶ್ರೇಯಾ ಮಿಂಚಿನಡ್ಕ, ವೇದಮೂರ್ತಿ ಶಿವಶಂಕರ ಭಟ್ ದಂಪತಿಗಳು, ಗುಂಪೆ ವಲಯ ಕಾರ್ಯದರ್ಶಿ ಕೇಶವಪ್ರಸಾದ ಎಡೆಕ್ಕಾನ ಉಪಸ್ಥಿತರಿದ್ದರು. ನೀರ್ಚಾಲು ವಲಯ ಕಾರ್ಯದರ್ಶಿ ಮಹೇಶ ಸರಳಿ ಸ್ವಾಗತಿಸಿ, ಗುರಿಕ್ಕಾರ ಶ್ರೀಧರ ಭಟ್ ಬೇಳ ವಂದಿಸಿದರು.
ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣವನ್ನು ನೀಡುವಲ್ಲಿ ಹೆತ್ತವರು ಮುತುವರ್ಜಿ ವಹಿಸಿದಾಗ ಅವರಿಗೆ ಉತ್ತಮ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಿದೆ. ನನ್ನ ಪುತ್ರಿ ಯಶಸ್ವಿನಿ ಬಾಲ್ಯದಲ್ಲಿಯೇ ವಿಜ್ಞಾನದಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿರುವುದನ್ನು ಗಮನಿಸಿರುತ್ತೇನೆ. ಆಕೆ ಈ ತನಕ ಬರೆದ ಎಲ್ಲಾ ಪರೀಕ್ಷೆಗಳಲ್ಲೂ ಗಮನಾರ್ಹ ಸಾಧನೆಯನ್ನು ಮಾಡಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ.
- ವೇದಮೂರ್ತಿ ಶಿವಶಂಕರ ಭಟ್, ಕಿಳಿಂಗಾರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ