ಮಳೆ ಎಂಬ ಶಬ್ದ ಕೇಳಿದರೆ ಏನೋ ಹರುಷ!ಎನ್ನಬಹುದು. ಬಾಲ್ಯ ಜೀವನದಲ್ಲಿ ಇರುವಾಗ ಅಮ್ಮ ಎಷ್ಟೇ ಹೇಳಿದರೂ ಮಳೆ ಯೊಂದಿನ ಆಟ, ಮಳೆಯ ನೀರು ಬಿದ್ದು ಪಾಚಿಗೊಂಡ ನೆಲದ ಮೇಲೆ ಕಾದು ಇಟ್ಟು ಜಾರಿ ಬಿದ್ದ ಕ್ಷಣಗಳು, ಮಳೆ ನೀರು ಹರಿಯುವಲ್ಲಿ ಕಾಗದದ ದೋಣಿ ಮಾಡಿ ನೀರಿನಲ್ಲಿ ಬಿಟ್ಟ ನೆನಪುಗಳು, ಅಧಿಕ ಮಳೆ ಎಂದು ಜಿಲ್ಲಾಧಿಕಾರಿಗಳು ರಜೆ ನೀಡಿದಾಗ ಆ ದಿನ ಮಳೆ ಬಾರದೆ ಮೈದಾನದಲ್ಲಿ ಕ್ರಿಕೆಟ್ ಆಟದಲ್ಲಿ ಹೊಡೆದ ಸಿಕ್ಸರ್ ಗಳು, ಶಾಲೆಗೆ ನಡೆದುಕೊಂಡು ಹೋಗುವಾಗ ಮಳೆ ನೀರಿನಿಂದ ಅಂಗಿ,ಬ್ಯಾಗ್ ಗಳು ಒದ್ದೆಯಾದ ಘಳಿಗೆ,ತರಗತಿನ ಬೆಂಚಿನಲ್ಲಿ ಒದ್ದೆ ಬಟ್ಟೆಯಲ್ಲಿ ನಡುಕ ಕೊಂಡು ಕುಳಿತಕ್ಷಣಗಳು, ಒಮ್ಮೆ ಬರಬಾರದೆ ಎಣಿಸುತ್ತದೆ.
ಮಳೆಯಲ್ಲಿ ನೆನೆದು ಜ್ವರ, ಶೀತ, ಕೆಮ್ಮು ಬಂದಾಗ ಅಮ್ಮ ಮಳೆಯಲ್ಲಿ ನೆನೆಬೇಡ ಎಂದು ಹೇಳಿದರೂ ಕೇಳದೆ ಹೋದ ಮಾತುಗಳು ಇಂದು ಮಳೆ ಬಂದಾಗ ಮರುಕಳಿಸಿತು.
ಮಳೆಗಾಲದಲ್ಲಿ ಮಾಡುವ ತಿಂಡಿಗಳಾದ ಪತ್ರೊಡೆ, ತೋಜಕ್ ನ ಪಲ್ಯ, ಪೆಜಕಾಯಿ ಚಟ್ನಿ, ಎಳೆಯ ಬಿದಿರಿನ ಪಲ್ಯ ಮಾಡಿದಾಗ, ಅಮ್ಮನಿಗೆ ಬೇಡ ಎಂದು ಹೇಳಿದ್ದು,ಅಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ ಕ್ಷಣಗಳು ಎಂದು ಕೇವಲ ನೆನಪಾಗಿ ಉಳಿದಿದೆ.ಹಲಸಿನ ಹಣ್ಣಿನ ಗಟ್ಟಿಯನ್ನು ಮಾಡಲು ಎಲೆಯನ್ನು ತೆಗೆಯಲು ಮರವನ್ನು ಹತ್ತಿದ ನೆನಪು,ಇಂದು ಮಳೆಗಾಲದಲ್ಲಿ ಛತ್ರಿಯನ್ನು ಹಿಡಿದು ಸಂಚರಿಸುವ ವೇಳೆಯಲ್ಲಿ ಹಲಸಿನ ಮರವನ್ನು ನೋಡಿದಾಗ ದೃಶ್ಯಗಳು ಕಣ್ಣಿನ ಮುಂದೆ ಹರಿದಂತಾಯಿತು.
ಮಳೆಗಾಲ ಆರಂಭವಾಗುವಗ ಕೃಷಿಯನ್ನು ಮಾಡುವ ಪ್ರಕ್ರಿಯೆಗಳು ಆರಂಭಗೊಳ್ಳುತ್ತದೆ. ಹಾಗೆಯೇ ಈ ಮಳೆಗಾಲದಲ್ಲಿ ಕೃಷಿ ಮಾಡುವ ಹೊಲಗಳಲ್ಲಿ ಸಿಗುವ ನರ್ತೆಗಳನ್ನು( ಶಂಕು ರೂಪದ ಚಿಪ್ಪುವಿನ ಜೀವಿ )ಹಿಡಿದದ್ದು, ಹಿಡಿಯುವಾಗ ಸ್ನೇಹಿತರೊಂದಿಗೆ ನಾನು ಹೆಚ್ಚು ಹಿಡಿದೆ ಎಂಬ ಗೆಲುವಿನ ಮಾತುಗಳು, ಎರಡು ದಿನಗಳ ನಂತರ ನರ್ತೆಯನ್ನು ಪಲ್ಯ ಮಾಡಿದರೆ ಅಥವಾ ಸಾರು ಮಾಡಿದರೆ, ಎಂದು ಸ್ನೇಹಿತರಲ್ಲಿ ಕೇಳುವ ಬಗೆ ,ಮತ್ತೊಮ್ಮೆ ಬಾರದೆ ಹೋಗಿದೆ ಏಕೆಂದರೆ ಸ್ನೇಹಿತರು ಅವರ ವೃತ್ತಿಯಲ್ಲಿ ಅಧಿಕವಾಗಿ ತೊಡಗಿರುವುದು ಕಾರಣವಾಗಿರಬಹುದು.
ಮಳೆಗಾಲದಲ್ಲಿ ಮಳೆಯ ನೀರಿನಲ್ಲಿ ಬರುವ ಮೀನುಗಳನ್ನು ಹಿಡಿಯುವುದು, ಮೀನುಗಳನ್ನು ಡಬ್ಬದಲ್ಲಿ ಹಾಕುವಾಗ ಅವುಗಳು ತಪ್ಪಿಸಿಕೊಂಡು ಹೋದಾಗ ಗೆಳೆಯ ಬೈದ ಸಂಗತಿಗಳು ಹಾಗೂ ಆ ಮೀನುಗಳನ್ನು ಬಾವಿಯ ನೀರಿಗೆ ಬಿಡುವುದು ಒಮ್ಮೆ ನೆನೆದ ಕ್ಷಣಗಳು ದೃಷ್ಟಿ ಕರಣ ಗೊಳ್ಳುತ್ತದೆ. ಏನೇ ಹೇಳಿದರೂ ಬಾಲ್ಯಯು ಕಳೆದು ಹೋಗುತ್ತದೆ. ಆದರೆ ನೆನಪುಗಳು ಮಾತ್ರ ಜೀವನ ಪರ್ಯಂತವಾಗಿರುತ್ತದೆ.
- ದೇವಿಶ್ರೀ ಶಂಕರಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ