ಶ್ರೀ ಕೃಷ್ಣ ಎಂದರೆ ಎಲ್ಲರನ್ನೂ ಸೆಳೆಯುವವನು. ಆಕರ್ಷಣೆಯ ಒಂದು ಕೇಂದ್ರ ಬಿಂದುವಿನಂತೆ. ಸಂಸಾರವೆಂಬ ನಿದ್ರೆಯಿಂದ ಎಚ್ಚರಿಸುವವನು. ಶ್ರೀಕೃಷ್ಣನು ಸಾಮಾನ್ಯ ಜನರೊಂದಿಗೆ ಬೆರೆತು ಬೀದಿಗಳಲ್ಲಿ ನಡೆದಾಡಿ ಸ್ನೇಹಿತನಂತೆ ಕಂಡ. ತನ್ನನ್ನು ಬಯಸುವವರ ಅಂಕು ಡೊಂಕುಗಳನ್ನು ಅವರಿಗರಿವಿಲ್ಲದಂತೆಯೇ ತಿದ್ದಿದ್ದ. ದೇಹದ ಮಡಿಗಿಂತ ಮನಸ್ಸಿನ ಮಡಿ ಶ್ರೇಷ್ಠ ಎಂಬುದನ್ನು ಶ್ರೀಕೃಷ್ಣನು ತೋರಿಸಿದ.
ಧರ್ಮ ಕೇವಲ ಕೆಲವರ ಸ್ವತ್ತಲ್ಲ. ಅದು ಬಯಸುವವರೆಲ್ಲರ ಆಸ್ತಿ ಎಂಬುದನ್ನು ಅರಿಯುವಂತೆ ಮಾಡಿದನು. ಕೃಷ್ಣ ಇಂದಿಗೂ ಅನೇಕರಿಗೆ ರಹಸ್ಯವಾಗಿಯೇ ಉಳಿದಿದ್ದಾನೆ. ಅವನನ್ನು ತಿಳಿಯ ಹೊರಟವರು ವಿಸ್ಮಿತರಾಗುತ್ತಾರೆ. ಒಂದು ದೃಷ್ಟಿಯಿಂದ ಈತ ಲೋಕದಲ್ಲಿ ಅತೀ ಸಾಮಾನ್ಯನೆನಿಸಿದ. ಎಲ್ಲರಿಗೂ ಎಟುಕು ವಂತೆ ಕಂಡರೆ ಇನ್ನು ಕೆಲವರಿಗೆ ಲೋಕಾತೀತ ಅದ್ಭುತ ಶಕ್ತಿಯೆನಿಸಿದನು.
ಕೃಷ್ಣ ಎಂದರೆ ಕಪ್ಪು. ಕಪ್ಪನ್ನು, ಕತ್ತಲನ್ನು ಅರಿಯಲು ಬೆಳಕೇ ಬೇಕು. ಈತನನ್ನು ಅರಿಯಲು ಜ್ಞಾನವೆಂಬ ಬೆಳಕು ಬೇಕು. ಭಗವದ್ರಹಸ್ಯವೂ ಅಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿಯೂ ಸ್ಪಷ್ಟತೆ ಬರಬೇಕಾದರೆ ಜ್ಞಾನದ ಬೆಳಕು ಬೇಕು. ಅರಿತರೆ ಅರುಣೋದಯ, ಅರಿಯದಿದ್ದರೆ ಗಾಢಾಂಧಕಾರ. ಅರಿಯುವವರಿಗೆ ಮೆಟ್ಟಿಲು ಗಳಂತೆ ಕಂಡ. ಸುಲಭವಾಗಿ ಏರಿಹೋಗಬಹುದು. ಅರಿಯದ ವರಿಗೆ ಪರ್ವತಪ್ರಾಯನಾಗಿ ಕಂಡ. ಅದರಾಚೆಯದು ಗೋಚರಿಸಲೇ ಇಲ್ಲ. ಈ ಕಲಿಯುಗದಲ್ಲಿ ಉದ್ಧಾರ ಬಯಸುವವರಿಗೆ ಶ್ರೀಕೃಷ್ಣನೇ ಒಂದು ದೊಡ್ಡ ಕೊಡುಗೆ. ಅದ್ಭುತ ಅವಕಾಶವೇ ದೊರೆಯಿತು. ಮೋಕ್ಷ ಸಾಧಕರಿಗೆ ಒಂದು ದೊಡ್ಡ ಬಾಗಿಲೇ ತೆರೆದಂತಾಯಿತು. ಇದಕ್ಕೆ ಪ್ರತಿಯಾಗಿ ಶ್ರೀಕೃಷ್ಣ ನಮ್ಮಿಂದ ಏನು ಅಪೇಕ್ಷಿಸಿದ? ಏನೂ ಇಲ್ಲ. ಅವನಿಗೂ ಅಪೇಕ್ಷೆಗಳು ಇದ್ದಿದ್ದರೆ, ಅವನು ಸಾಮಾನ್ಯ ನಾಗುತ್ತಿದ್ದ. ಅದಕ್ಕೆ ಹಾಗಾಗಲಿಲ್ಲ.
ಶ್ರೀಕೃಷ್ಣನು ಲೋಕಾತೀತನಾದನು. ಪಕ್ಷಾತೀತನಾಗಿ ತೋರಿದನು. ಪ್ರಶ್ನಾತೀತನಾಗಿ ಬೆಳೆದು ತೋರಿಸಿದನು. ಮಾನವರಾಗಿ ಹುಟ್ಟಿದವರೆಲ್ಲರೂ ಸಾಧನೆ ಮಾಡಬಹುದು, ಮುಕ್ತಿಯನ್ನು ಪಡೆಯ ಬಹುದೆಂಬುದನ್ನು ಶ್ರೀಕೃಷ್ಣ ತಿಳಿಸಿದ ಮತ್ತು ತೋರಿಸಿದನು. ಇನ್ನು ಈ ಜೀವನದಲ್ಲಿ ಸಾಧನೆಯನ್ನು ಮಾಡಿ ಭಗವಂತನನ್ನು ಮೆಚ್ಚಿಸುವುದು, ಬಿಡುವುದು ನಮಗೇ ಬಿಟ್ಟಿದ್ದು. ಒಂದೇ ಮಾತಲ್ಲಿ ಹೇಳಬೇಕಾದರೆ- 'ಎಲ್ಲರಂತಲ್ಲ ನಮ್ಮ ಈ ಶ್ರೀಕೃಷ್ಣ' ಕೃಷ್ಣ ಮಾನ್ಯ ಮತ್ತು ಅಸಾಮಾನ್ಯ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ