ಜುಲೈ 01:ರಾಷ್ಟ್ರೀಯ ವೈದ್ಯರ ದಿನ
ಭೂಮಿಗೆ ಬಂದ ಭಗವಂತ ಎಂದರೆ ತಾಯಿ, ತಂದೆ ಮತ್ತು ಗುರುವಿನ ರೂಪದಲ್ಲಿ. ಇವರನ್ನು ಬಿಟ್ಟರೆ ನಂತರದ ಸ್ಥಾನವೇ ನಮ್ಮ ಆರೋಗ್ಯವನ್ನು ಕಾಪಾಡಲು ಬಂದ ದೇವರು ಅಂದರೆ ವೈದ್ಯರು. ಇಂದಿನ ಆಧುನಿಕ ಮನುಷ್ಯನ ಬದುಕು ಸಂಪೂರ್ಣ ಒತ್ತಡಮಯವಾಗಿದೆ. ಮನಷ್ಯ ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಒಂದಲ್ಲಾ ಒಂದು ಒತ್ತಡಕ್ಕೆ ಸಿಲುಕಿಕೊಂಡಿರುತ್ತಾನೆ. ವಿಭಿನ್ನ ಒತ್ತಡಗಳಿಂದ ಕೂಡಿದ ಬದಕು ವಿಭಿನ್ನ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಇಂತಹ ಒತ್ತಡಗಳಿಂದಾಗಿ ಮನುಷ್ಯ ದೈಹಿಕವಾಗಿ ಬಳಲಿರುತ್ತಾನೆ. ಮಾನಸಿಕ ಶಾಂತಿಯನ್ನು ಕಳೆದುಕೊಂಡಿರುತ್ತಾನೆ. ಇದೇ ನಿತ್ಯದ ನಿರಂತರ ಬದುಕಾದಾಗ ಒಂದು ದಿನ ಖಾಯಿಲೆಗೆ ತುತ್ತಾಗುತ್ತಾನೆ. ಅಥವಾ ಇದ್ದಕ್ಕಿದ್ದಂತೆ ರಸ್ತೆಯ ಅಪಘಾತಕ್ಕೆ ಒಳಗಾಗುತ್ತಾನೆ. ಅವನನ್ನೇ ನಂಬಿ ಬದುಕುತ್ತಿರುವ ಇಡೀ ಕುಟುಂಬಕ್ಕೆ ಮತ್ತಷ್ಟು ಒತ್ತಡವನ್ನು ಉಂಟು ಮಾಡುತ್ತಾನೆ. ಖಾಯಿಲೆ ಗೋ ಅಥವಾ ಅಪಘಾತಕ್ಕೋ ಈಡಾದ ವ್ಯಕ್ತಿ ಇನ್ನೇನು ಬದುಕಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಮನೆಯವರೆಲ್ಲಾ ಬರುವ ಸಂದರ್ಭದಲ್ಲಿ ಒಂದು ಕೊನೆಯ ಆಶಾಕಿರಣವಾಗಿ ಉಸಿರನ್ನು ಉಳಿಸುವ ಭರವಸೆ ನೀಡಲು ಬರುವ ಸಾಕ್ಷಾತ್ ಪರಮಾತ್ಮನೇ ವೈದ್ಯ ಅಥವಾ ಡಾಕ್ಟರ್.
" ವೈದ್ಯೋ ನಾರಾಯಣೋ ಹರಿಃ " ಅಂದರೆ ವೈದ್ಯರು ದೇವರ ಸಮಾನ. ನಮ್ಮೆಲ್ಲರ ಆರೋಗ್ಯ ಸುಧಾರಣೆಯಲ್ಲಿ ವೈದ್ಯರ ಪಾತ್ರ ಮಹತ್ತರವಾಗಿದೆ. ಪ್ರಸ್ತುತ ಕೊರೋನಾದ ವಿಭಿನ್ನ ಅಲೆಗಳ ಆಗಮನದ ಸಾಂಕ್ರಾಮಿಕ ಸನ್ನಿವೇಶದಲ್ಲಿ ವೈದ್ಯಕೀಯ ಕ್ಷೇತ್ರವು ಬಿಡುವಿಲ್ಲದಂತಿದೆ. ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ವೈದ್ಯರ ಪಾತ್ರ ಮಹೋನ್ನತವಾಗಿದೆ. ಆದ್ದರಿಂದಲೇ ಎಲ್ಲಾ ವೈದ್ಯರ ಸೇವೆಯನ್ನು ಶ್ಲಾಘಿಸುವ ಗೌರವಿಸುವ ವಿಶೇಷ ದಿನ ಜುಲೈ 1. ಇದನ್ನು ಭಾರತದಲ್ಲಿ ಪ್ರತೀ ವರ್ಷವೂ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆಗೈದ ವೈದ್ಯರು, ರಾಜಕೀಯ, ವಿಜ್ಞಾನ, ಮನಶಾಸ್ತ್ರ, ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡ ವೈದ್ಯಕೀಯ ಲೋಕದ ಚಿರ ಧ್ರುವತಾರೆ ಹಾಗೂ ಮಹಾನ್ ಚೇತನ ಡಾ|| ಬಿ.ಸಿ.ರಾಯ್ ರವರ ಜನ್ಮದಿನವಾಗಿದೆ.
ಬಿಧನ್ ಚಂದ್ರರಾಯ್ ಎಂಬುದು ಬಿ.ಸಿ.ರಾಯ್ ರವರ ಪೂರ್ಣ ಹೆಸರು. ಇವರು 1882 ಜುಲೈ 1 ರಂದು ಬಿಹಾರದ ಪಾಟ್ನಾದಲ್ಲಿನ ಬಂಕಿಪುರದಲ್ಲಿ ಜನಿಸಿದರು. ಇವರ ತಂದೆ ಪ್ರಕಾಶಚಂದ್ರ ಓರ್ವ ಸುಂಕಾಧಿಕಾರಿಯಾಗಿದ್ದರು. ಹದಿನಾಲ್ಕನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಬಿಧನ್ ನ ಬದುಕಿನಲ್ಲಿ ಅವರ ತಂದೆಯೇ ತಂದೆ, ತಾಯಿ, ಗುರು ಎಲ್ಲವೂ ಆಗಿದ್ದರು. ಐದು ಮಕ್ಕಳಲ್ಲಿ ರಾಯ್ ರವರು ಕಿರಿಯಮಗ ನಾಗಿದ್ದು, ತನ್ನ ತಂದೆ ತಾಯಿಯ ಸರಳತೆ, ಶಿಸ್ತು ಮತ್ತು ಕಾರುಣ್ಯತೆಯಿಂದ ಪ್ರಭಾವಿತರಾಗಿದ್ದರು. ಬಹಳಷ್ಟು ಪರಿಶ್ರಮದದಿಂದ ವಿದ್ಯಾಭ್ಯಾಸವನ್ನು ಮಾಡಿದ್ದು, ಅವರ ಜೀವನಾನುಭವ ಮುಂದಿನ ಸಮಾಜಸೇವೆಗೆ ಪ್ರೇರಣೆ ನೀಡಿತು. ಗಣಿತ ಶಾಸ್ತ್ರದಲ್ಲಿ ಪದವಿ ಪಡೆದ ಬಿಧನ್ ಚಂದ್ರ ರಾಯ್ 1901 ರಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದರು. ವೈದ್ಯಕೀಯ ಪದವಿ ಪಡೆದ ನಂತರ ಕೆಲವು ವರ್ಷ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಈ ಮಧ್ಯೆ ವಿರಾಮ ಸಮಯದಲ್ಲಿ ಖಾಸಗಿಯಾಗಿ ಕೇವಲ ಎರಡು ರೂಪಾಯಿಗಳಿಗೆ ರೋಗಿಗಳನ್ನು ಪರೀಕ್ಷಿಸುವ ಮೂಲಕ ಅತ್ಯಂತ ಜನಪ್ರಿಯ ವೈದ್ಯರೆಂದು ಪ್ರಸಿದ್ಧರಾದರು. ಮತ್ತು ಬಿ.ಸಿ.ರಾಯ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ವಿದ್ಯಾರ್ಥಿ ದೆಸೆಯಿಂದಲೇ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಡಾ||ಬಿ.ಸಿ.ರಾಯ್ ರವರು, ಭಾರತೀಯರು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾದರೆ ಮಾತ್ರ ಸ್ವರಾಜ್ಯ ಭಾರತದ ಕಲ್ಪನೆ ಸಾಧ್ಯವೆಂದು ನಂಬಿದ್ದರು. ಈ ಕಾರಣಕ್ಕಾಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲು ಪ್ರಯತ್ನಿಸಿದರು. ಜಾಧವಪುರ ಕ್ಷಯರೋಗ ಆಸ್ಪತ್ರೆ, ಚಿತ್ತರಂಜನ ಸೇವಾಸದನ, ಆರ್.ಜಿ.ಖಾರ್ ವೈದ್ಯಕೀಯ ಕಾಲೇಜು, ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಚಿತ್ತರಂಜನ ಕ್ಯಾನ್ಸರ್ ಆಸ್ಪತ್ರೆ ಹೀಗೆ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದರು. ಮಹಿಳೆಯರು ಮತ್ತು ಮಕ್ಕಳಿಗಾಗಿ 1926 ರಲ್ಲಿ ಪ್ರತ್ಯೇಕ ಆಸ್ಪತ್ರೆಯನ್ನೇ ತೆರೆದರು. ಡಾ|| ಬಿ.ಸಿ.ರಾಯ್ ರವರು 1928 ರಲ್ಲಿ 'ಭಾರತೀಯ ವೈದ್ಯಕೀಯ ಮಂಡಳಿ'ಯನ್ನು ಸ್ಥಾಪಿಸುವುದರ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದರು. ದೇಶದ ಅತಿ ದೊಡ್ಡ ವೃತ್ತಿಪರ ಸಂಘಟನೆಯಾದ ಈ ಮಂಡಳಿಯಲ್ಲಿ ಅನೇಕ ಹುದ್ಧೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಎರಡು ಅವಧಿಗೆ 'ಭಾರತೀಯ ವೈದ್ಯಕೀಯ ಮಂಡಳಿ'ಯ ಅಧ್ಯಕ್ಷರಾದ ಹೆಗ್ಗಳಿಕೆ ಅವರದು. ಈ ಮಂಡಳಿಯ ಮೂಲಕ ಭಾರತದ ವೈದ್ಯಕೀಯ ಶಿಕ್ಷಣದಲ್ಲಿ ಗಮನಾರ್ಹವಾದ ಬದಲಾವಣೆಗಳಿಗೆ ಕಾರಣರಾದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವೈದ್ಯರನ್ನು ಗುರುತಿಸುವಂತಾಗಲು ಅಗತ್ಯವಾದ ಶೈಕ್ಷಣಿಕ ತಳಹದಿಯನ್ನು ಭದ್ರಗೊಳಿಸಿದ ಕೀರ್ತಿ ಡಾ|| ಬಿ.ಸಿ.ರಾಯ್ ಅವರಿಗೆ ಸಲ್ಲುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸನಿಹವರ್ತಿಯಾಗಿದ್ದ ಡಾ||ಬಿ.ಸಿ.ರಾಯ್ ರವರು ಗಾಂಧೀಜಿಯವರ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಉಪವಾಸ ಸತ್ಯಾಗ್ರಹಗಳಲ್ಲಿ ಅವರೊಂದಿಗೆ ತಾವೂ ಭಾಗವಹಿಸುತ್ತಿದ್ದರು. ಗಾಂಧೀಜಿ ಅವರೊಂದಿಗಿನ ಈ ಒಡನಾಟವೇ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವಂತೆ ಮಾಡಿತು. ಭಾರತದ ಸ್ವಾತಂತ್ರ್ಯಾ ನಂತರ ಗಾಂಧೀಜಿಯವರ ಸಲಹೆಯ ಮೇರೆಗೆ ಡಾ.ಬಿ.ಸಿ.ರಾಯ್ 1948 ಜನವರಿ 23 ರಂದು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಗಳಾಗಿ ಅಧಿಕಾರ ಸ್ವೀಕರಿಸಿದರು. ಡಾ||ಬಿ.ಸಿ.ರಾಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ, ಪಶ್ಚಿಮ ಬಂಗಾಳದಲ್ಲಿ ಕೋಮು ಗಲಭೆ, ಆಹಾರದ ಕೊರತೆ, ನಿರುದ್ಯೋಗ, ಪೂರ್ವ ಪಾಕಿಸ್ತಾನದಿಂದ ವಲಸೆ ಬರುವ ನಿರಾಶ್ರಿತರು ಹೀಗೆ ಅನೇಕ ಸಮಸ್ಯೆಗಳು ರಾಜ್ಯವನ್ನು ಕಾಡುತ್ತಿದ್ದವು. ಕಠಿಣ ನಿರ್ಧಾರಗಳ ಮೂಲಕ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಈ ಎಲ್ಲ ಸಮಸ್ಯೆಗಳನ್ನು ಹತ್ತಿಕ್ಕಿ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದರು. ಅನೇಕ ಯಶಸ್ವಿ ಕಾರ್ಯಯೋಜನೆಗಳ ಮೂಲಕ ಜನಪ್ರಿಯ ಮುಖ್ಯಮಂತ್ರಿ ಎಂದು ಖ್ಯಾತರಾದರು. ಈ ಕಾರಣದಿಂದಲೇ ಡಾ|| ಬಿ.ಸಿ.ರಾಯ್ ಅವರು 1948 ರಿಂದ ತಮ್ಮ ಬದುಕಿನ ಕೊನೆಯ ದಿನಗಳವರೆಗೆ ಸುಮಾರು 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ 1961 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು ತಮ್ಮ 80 ನೇ ವಯಸ್ಸಿನಲ್ಲಿ ಅಂದರೆ ಜುಲೈ 1, 1962 ರಲ್ಲಿ ನಿಧನರಾದರು. 1976ರಲ್ಲಿ ಡಾ|| ರಾಯ್ ಹೆಸರಿನಲ್ಲಿ ‘ಡಾ|| ಬಿ.ಸಿ.ರಾಯ್ ಪ್ರಶಸ್ತಿ’ ಆರಂಭವಾಯಿತು. ವೈದ್ಯ ವೃತ್ತಿಯಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಭಾರತದ ವೈದ್ಯಕೀಯ ಮಂಡಳಿ ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ. ರಾಜಕೀಯ, ವಿಜ್ಞಾನ, ಮನಶಾಸ್ತ್ರ, ಸಾಹಿತ್ಯ, ಮತ್ತು ಕಲೆಗಳಲ್ಲಿ ಸಾಧನೆ ತೋರಿದವರಿಗಾಗಿ ಯೂ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಡಾ|| ಬಿ.ಸಿ. ರಾಯ್‌ರವರು ಒಬ್ಬ ಆದರ್ಶ ವೈದ್ಯರಾಗಿದ್ದರು. ಭಾರತದ ಬಡಜನರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆಗಳು ನೀಡುತ್ತಿದ್ದರು. ಆರೋಗ್ಯವೇ ಭಾಗ್ಯ ಎಂಬುವಂತೆ ಎಷ್ಟೇ ಸಂಪತ್ತು ಇದ್ದರೂ ಮನುಷ್ಯನಿಗೆ ಆರೋಗ್ಯವಿಲ್ಲದಿದ್ದರೆ ಬದುಕು ವ್ಯರ್ಥ. ಅಸ್ವಸ್ಥತೆಯಿಂದ ಮನುಷ್ಯನಿಗೆ ನಿಶ್ಯಕ್ತಿಯಾಗಿ ಏನೂ ಮಾಡಲಾರದವನಾಗಿಬಿಡುತ್ತಾನೆ. ವೈದ್ಯರ ದಿನದಂದು ಅನೇಕ ವೈದ್ಯಕೀಯ ಸಂಸ್ಥೆಗಳು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತವೆ. ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ, ದಂತ ಪರೀಕ್ಷೆ, ಮಧುಮೇಹ ಶಿಬಿರ, ಇತ್ಯಾದಿ ಸೇವಾ ಚಟುವಟಿಕೆಗಳು ನಗರದ ವಿವಿಧೆಡೆ ನಡೆಯುತ್ತವೆ. ವೈದ್ಯರು ಪ್ರತಿ ಅನಾರೋಗ್ಯ ವ್ಯಕ್ತಿಗೆ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯ ಉಂಟುಮಾಡಲು ಶ್ರಮಿಸಬೇಕು. ಉತ್ತಮ ಸೇವೆ ಸಲ್ಲಿಸಿದ ವೈದ್ಯರಿಗೆ ಪ್ರಶಸ್ತಿ-ಸನ್ಮಾನಗಳನ್ನು ನೀಡುವ ಕೆಲಸವೂ ಮಾಡಲಾಗುತ್ತದೆ. ವೈದರು ಎಂಥಹ ಸನ್ನಿವೇಶವೇ ಇರಲಿ ರೋಗಿಯ ಸೇವೆ ಮಾಡುವುದಕ್ಕಾಗಿ ಸಂಕಲ್ಪ ಮಾಡುತ್ತಾರೆ.
ಇಂದು ಭಾರತ ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಲೋಕದಲ್ಲಿ ಬಹಳಷ್ಟು ಸುಧಾರಣೆಗಳನ್ನು ಕಂಡಿದೆ. ನುರಿತ ಅನುಭವಿ ವೈದ್ಯರ ತಂಡ ಭಾರತೀಯರ ಆರೋಗ್ಯ ಸುಧಾರಣೆಯಲ್ಲಿ ಮಹೋನ್ನತ ಪಾತ್ರ ನಿರ್ವಹಿಸುತ್ತಿದೆ. ಖಾಸಗಿವಲಯದ ಆಸ್ಪತ್ರೆಗಳು ಮತ್ತು ಸಾರ್ವಜನಿಕವಲಯದ ಆಸ್ಪತ್ರೆಗಳಲ್ಲೂ ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆ ಕಂಡುಬರುತ್ತಿದೆ. ಉನ್ನತ ವ್ಯಾಸಂಗಕ್ಕೆ ಭಾರತದಲ್ಲಿಯೇ ಅವಕಾಶಗಳನ್ನೂ ಕಲ್ಪಿಸಲಾಗಿದೆ. ಮಾನವ ದೇಹದ ಪ್ರತೀ ಭಾಗಕ್ಕೂ ಪ್ರತ್ಯೇಕ ವೈದ್ಯರಿದ್ದಾರೆ. ಅತೀ ಸೂಕ್ಷ್ಮ ಅಧ್ಯಯನವನ್ನು ಮಾಡಿರುವ ಅನುಭವಿ ವೈದ್ಯರು ಸೇವೆ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ಹಣವೇ ಪ್ರಧಾನವಲ್ಲ ಎಂಬುದನ್ನು ಅರಿತ ಅದೆಷ್ಟೋ ವೈದ್ಯರು ವೈದ್ಯಕೀಯ ರಂಗದಲ್ಲಿ ಸೇವೆ ಮಾಡುತ್ತಾ ಲೆಕ್ಕವಿಲ್ಲದಷ್ಟು ರೋಗಿಗಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ನಿತ್ಯ ನಿರಂತರ ಸೇವೆ ಮಾಡುತ್ತಿದ್ದಾರೆ. ಇಂತಹ ವೈದ್ಯರನ್ನು ಗೌರವಿಸುವ ಮೂಲಕ ವೈದ್ಯ ಲೋಕಕ್ಕೆ ನಮ್ಮ ಹೃತ್ಪೂರ್ವಕ ನಮನಗಳನ್ನು ಸಲ್ಲಿಸೋಣ. ನಮ್ಮ ಡಾಕ್ಟರ್ ನಮ್ಮ ಹೆಮ್ಮೆ ಎನ್ನುತ್ತಾ ನಮಗೆ ಆರೋಗ್ಯವನ್ನು ಭಾಗ್ಯವನ್ನಾಗಿ ನೀಡುವ ಜಗತ್ತಿನ ಎಲ್ಲಾ ವೈದ್ಯರಿಗೂ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು.
-ಕೆ.ಎನ್.ಚಿದಾನಂದ.ಹಾಸನ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ