ಮಂಗಳೂರು ವಿವಿ ಕಾಲೇಜಿನಲ್ಲಿ ಸ್ನಾತಕೋತ್ತರ ದಿನಾಚರಣೆ
ಮಂಗಳೂರು: ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಂದ ಸಮಾಜ ಹೆಚ್ಚಿನದನ್ನುನಿರೀಕ್ಷಿಸುತ್ತದೆ. ಹಾಗಾಗಿ ಸಂಪ್ರದಾಯವನ್ನು ಪ್ರಗತಿ ಪರವಾಗಿಸಿ, ಸಮಾಜದ ಓರೆಕೋರೆಗಳನ್ನು ತಿದ್ದಿ ತಮ್ಮ ಕಿರಿಯರಿಗೆ ವಿದ್ಯಾರ್ಥಿಗಳು ಮಾದರಿಯಾಗಬೇಕು, ಎಂದು ದಕ್ಷಿಣಕನ್ನಡ ಜಿಲ್ಲೆಯ ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ಮುಕುಲ್ ಜೈನ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ, ಸ್ನಾತಕೋತ್ತರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜ ಲಿಂಗಬೇಧ ಮುಕ್ತವಾಗಬೇಕು. ವಿದ್ಯಾರ್ಥಿನಿಯರು ಸಿಗುವ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಬನೆಯ ಜೀವನ ರೂಪಿಸಿಕೊಂಡರೆ ಅದು ಇತರರಿಗೂ ಸ್ಪೂರ್ತಿಯಾಗುತ್ತದೆ, ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್ ಅಮೀನ್, “ಗುಣಮಟ್ಟದ ಶಿಕ್ಷಣ, ಕೌಶಲ್ಯ, ಮೌಲ್ಯಗಳಿಂದ ವಿವಿ ಕಾಲೇಜು ಆಕರ್ಷಕ ಸಂಸ್ಥೆಯಾಗಿ ಬೆಳೆದಿರುವುದು ಅಭಿನಂದನಾರ್ಹ. ಈ ಕಾಲೇಜಿನ ವಾತಾವರಣ ಎಲ್ಲಾ ರೀತಿಯ ಸಿದ್ದಾಂತಗಳಿವೆ, ಮುಕ್ತ ಮನಸ್ಸಿನ ವಿದ್ಯಾರ್ಥಿಗಳಿದ್ದಾರೆ. ಇದರಿಂದ ಈ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ,” ಎಂದರು. ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಕಾಲೇಜಿನ ಎಲ್ಲಾ ಆರು ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿರುವುದು ಪ್ರಾಧ್ಯಾಪಕರ ಬದ್ಧತೆಗೆ ಕೈಗನ್ನಡಿ, ಎಂದು ಶ್ಲಾಘಿಸಿದರು.
ನೆಟ್ ಪರೀಕ್ಷೆಯಲ್ಲಿ ಜೆ.ಆರ್. ಎಫ್ ನೊಂದಿಗೆ ತೇರ್ಗಡೆಯಾಗಿರುವ ಐ. ಪ್ರಿಯದರ್ಶಿನಿ ಮತ್ತು ಆಷ್ಮಾ ಡಿʼಸೋಜ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಸಾಯಿಸೂರ್ಯ (ಇತಿಹಾಸ ಮತ್ತು ಪುರಾತತ್ವವಿಭಾಗ), ಪ್ರಜ್ಞಾ ಪಿ ನಾಯಕ್ (ಅರ್ಥಶಾಸ್ತ್ರ), ಡಿಂಪಲ್ ಮಿಷಲ್ ಟೌರೊ (ಹಿಂದಿ), ಅಶ್ವಿನಿ ಜಿ (ರಸಾಯನಶಾಸ್ತ್ರ) ಮತ್ತು ವಾಣಿಶ್ರೀ (ವಾಣಿಜ್ಯಶಾಸ್ತ್ರ) ಅವರನ್ನೂ ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳ ವಿಜೇತರಿಗೂ ಬಹುಮಾನ ವಿತರಿಸಲಾಯಿತು.
ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಪ್ರೊ. ರಾಮಕೃಷ್ಣ ಬಿ ಎಂ ಅತಿಥಿಗಳನ್ನು ಸ್ವಾಗತಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪ್ರೊ. ಎ ಸಿದ್ಧಿಕ್ ವಾರ್ಷಿಕ ವರದಿ ವಾಚಿಸಿದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ನಾಗರತ್ನ ಎನ್ ರಾವ್, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಮಧುರಾ, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಸಂಯೋಜಕ ಡಾ. ಸಂಜಯ್ ಅಣ್ಣಾರಾವ್ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಸ್ನಾತಕೋತ್ತರ ಇತಿಹಾಸ ವಿಭಾಗದ ಸಂಯೋಜಕಿ ಡಾ.ಮೀನಾಕ್ಷಿ ಎಂ ಎಂ ಧನ್ಯವಾದ ಸಮರ್ಪಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಶಮಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಸಾಂಸ್ಕೃತಿಕ ವೈವಿಧ್ಯ ಗಮನ ಸೆಳೆಯುವಂತಿತ್ತು.
ಕನ್ನಡದಲ್ಲಿ ಮಾತನಾಡಿದ ರಾಜಸ್ಥಾನದ ಅಧಿಕಾರಿ!
ರಾಜಸ್ಥಾನ ಮೂಲದ ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ಮುಕುಲ್ ಜೈನ್ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿ ಅಚ್ಚರಿ ಮೂಡಿಸಿದರು. “ಮಂಗಳೂರಿಗೆ ಬಂದ ಕೆಲವೇ ದಿನಗಳಲ್ಲಿ ಎರಡನೇ ಬಾರಿಗೆ ಕಾಲೇಜಿಗೆ ಬಂದಿರುವುದು ನನ್ನ ಪಾಲಿಗೆ ದೊರೆತಿರುವ ಅಪೂರ್ವ ಅವಕಾಶ. ಕನ್ನಡ ಗೊತ್ತಿಲ್ಲದಿದ್ದರೂ ಕಲಿತು ಮಾತನಾಡುವ ಪ್ರಯತ್ನ ಮಾಡಿದ್ದೇನೆ. ವಿದ್ಯಾರ್ಥಿಗಳೇ ಇರುವುದರಿಂದ ನನಗೂ ವಿದ್ಯಾರ್ಥಿಯೆಂಬ ಭಾವನೆ ಬರುತ್ತಿದೆ. ಕನ್ನಡ ಭಾಷಣದಲ್ಲಿ ತಪ್ಪುಗಳಿದ್ದರೆ ಕ್ಷಮಿಸಿ,” ಎಂದು ಸುಮಾರು 20 ನಿಮಿಷಗಳ ಕಾಲ ಕನ್ನಡಲ್ಲೇ ಮಾತನಾಡಿದ ಯುವಅಧಿಕಾರಿ ವಿದ್ಯಾರ್ಥಿಗಳಿಂದ ಭರ್ಜರಿ ಚಪ್ಪಾಳೆಗಿಟ್ಟಿಸಿಕೊಂಡರು. ಮಂಗಳೂರು ವಿವಿಯ ಕುಲಪತಿ, ಕಾಲೇಜಿನ ಪ್ರಾಂಶುಪಾಲರೂ ತಮ್ಮ ಮಾತಿನಲ್ಲಿ ಅಧಿಕಾರಿಯ ಬದ್ಧತೆ ವಿದ್ಯಾರ್ಥಿಗಳಿಗೆ ಮಾದರಿ ಎಂದು ಕೊಂಡಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ