ಸಾಧನೆಯ ಶಿಖರವನ್ನೇರುತ್ತಿರುವ ಹೇಮಸ್ವಾತಿ

Upayuktha
0

ಲ್ಲಿ ಹುಟ್ಟಬೇಕು ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ, ಆದರೆ ಎಲ್ಲಿ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿರುತ್ತದೆ ಎಂಬ ಮಾತಿದೆ. ಅದರಂತೆ ಯಾವುದೇ ಒಬ್ಬ ಕಲಾವಿದ ತನ್ನ ಸಾಧನೆಯನ್ನು ಮಾಡಬೇಕಾದರೆ ಅವನಲ್ಲಿ ಹುಮ್ಮಸ್ಸು ಎಂಬುದಿರಬೇಕು. ಹೀಗಿದ್ದರೆ ಮಾತ್ರ ಅವನು ತನ್ನ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಹೀಗೆ ತನ್ನ ಸಣ್ಣ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿಕೊಂಡು ಬಂದ ಇವರು ಬೆಳ್ಳಾರೆಯ ಹತ್ತಿರದ ಕುರಿಯಾಜೆ ಉದಯಶಂಕರ್.ಕೆ ಹಾಗೂ ವಸಂತಲಕ್ಷ್ಮೀಯರ ಪುತ್ರಿ ಹೇಮಸ್ವಾತಿ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ, ಕಾಣಿಯೂರು ಇಲ್ಲಿ ಮುಗಿಸಿದ್ದು, ಪ್ರೌಢಶಾಲೆಯನ್ನು ಸರ್ಕಾರಿ ಶಾಲೆ, ಬೆಳ್ಳಾರೆಯಲ್ಲಿ ಪೂರ್ಣಗೊಳಿಸಿದ ಇವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಪೂರೈಸಿ ಇದೀಗ ಅದೇ ಸಂಸ್ಥೆಯಲ್ಲಿ ಪದವಿ  ಶಿಕ್ಷಣವನ್ನು ಕಲಿಯುತ್ತಿರುತ್ತಾರೆ.


ಸಕಲಕಲಾವಲ್ಲಭೆ ಹೇಮಸ್ವಾತಿ: ಸಾಧನೆ ಮಾಡಬೇಕೆಂದಿದ್ದರೆ ಹೇಗೆ ಬೇಕಾದರೂ ಮಾಡಬಹುದು ಎಂದು ಇವರನ್ನು ನೋಡಿ ತಿಳಿಯಬೇಕು. ಏಕೆಂದರೆ ಇವರು ಚಿಕ್ಕ ವಯಸ್ಸಿನಿಂದಲೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಭರತನಾಟ್ಯ, ಭಾಗವತಿಕೆ, ಯಕ್ಷಗಾನ ನಾಟ್ಯ, ನಾಟಕ, ಸಂಗೀತ ಹಾಗೂ ಎನ್.ಸಿ.ಸಿ ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ಆರ್.ಡಿ.ಸಿ- ಗಣರಾಜ್ಯೋತ್ಸವದ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ, ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ ಪ್ರತಿನಿಧಿಸಿ ಸಾಂಸ್ಕೃತಿಕ ತಂಡದಲ್ಲಿ ಪ್ರದರ್ಶನ, ಪ್ರಧಾನಮಂತ್ರಿ ಪಥಸಂಚನದಲ್ಲಿ ಭಾಗವಹಿಸಿ ತಮ್ಮ ಕಾಲೇಜಿಗೆ ಹೆಸರನ್ನು ತಂದಿದ್ದಾರೆ. 2021 ರ ಫೈರಿಂಗ್ ಕ್ಯಾಂಪ್, 7ನೇ ತರಗತಿಯಲ್ಲಿ ದೆಹಲಿಯಲ್ಲಿ ನಡೆದ 'ಇನ್ಸ್ಪೈರ್  ಅವಾರ್ಡ್ ಅನ್ನು ತನ್ನದಾಗಿಸಿಕೊಂಡವರು. ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಭಾಗಿ, 9ನೇ ತರಗತಿಯಲ್ಲಿ ನಾಟಕದಲ್ಲಿ ರಾಜ್ಯಕ್ಕೆ ದ್ವಿತೀಯ, 10ನೇ ತರಗತಿಯಲ್ಲಿ ಏಕ ವ್ಯಕ್ತಿ ಯಕ್ಷಗಾನದಲ್ಲಿ ಜಿಲ್ಲೆಗೆ ಪ್ರಥಮ, 10 ವರ್ಷಗಳಿಂದ ಭರತನಾಟ್ಯ ಅಭ್ಯಾಸವನ್ನು ಮಾಡುತ್ತಿದ್ದಾರೆ ಹಾಗೂ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಪಡೆದಿದ್ದು ಮತ್ತು ಅನೇಕ ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡ ಹೆಗ್ಗಳಿಕೆ ಇವರದು.


ಸಾಧನೆ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಸಾಧಿಸುತ್ತೇನೆ ಎಂಬ ಛಲ ಪಟ್ಟು ಶ್ರಮದಿಂದ ಕೆಲಸ ಮಾಡಿದರೆ ಎಲ್ಲರಿಂದಲೂ ಸಾಧ್ಯ. ಅದೇ ಮಾತಿನಂತೆ ಇವರು ಕಲಿಕೆಯಲ್ಲೂ ಮೇಲುಗೈ. ಹಾಗೇಯೇ ಭಾಗವತಿಕೆ, ಯಕ್ಷಗಾನದಲ್ಲೂ ಹೆಸರು ಪಡೆದುಕೊಂಡು, 100ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಭಾಗವತಿಕೆಗೆಂದೇ ಅನೇಕ ಅಭಿಮಾನಿಗಳಿದ್ದಾರೆ. ಇವರು ತನ್ನ ಯಕ್ಷಗಾನ ಕಲಿಕೆಯನ್ನು ವಾಸುದೇವ ರೈ ಬೆಳ್ಳಾರೆ ಇವರ ಆಶ್ರಯದಲ್ಲಿ ಅಭ್ಯಾಸ ಮಾಡಿದ್ದು, ಭಾಗವತಿಕೆಯನ್ನು ದಿ. ಪದ್ಯಾಣ ಗಣಪತಿ ಭಟ್ ಅವರಲ್ಲಿ, ಭರತನಾಟ್ಯವನ್ನು ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಅವರಲ್ಲಿ ಕಲಿತಿರುತ್ತಾರೆ. ವಿದ್ವತ್ ಪರೀಕ್ಷೆಯ ಪಾಠವೂ ಆರಂಭವಾಗಿದ್ದು, ಇದನ್ನು ಪ್ರಣತಿ ಚೈತನ್ಯ ಪದ್ಯಾಣ ಇವರಲ್ಲಿ ಅಭ್ಯಾಸ ಮಾಡಿ, ಸಂಗೀತವನ್ನು ವಿದುಷಿ ಎಂ.ಟಿ. ವೀಣಾ ಇವರ ಆಶ್ರಯದಲ್ಲಿ 5 ವರ್ಷಗಳ ಕಾಲ ಅಭ್ಯಾಸ ಮಾಡಿ, ಜೂನಿಯರ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.


ಇವರು ಗೋಡೆ ಚಿತ್ರ, ಸ್ಟೋನ್ ಆರ್ಟ್, ಗಿಟಾರ್, ಡಿಜೆಂಬೆ ವಾದ್ಯಗಳನ್ನು ನುಡಿಸುವ ಹವ್ಯಾಸವನ್ನು ಹೊಂದಿದ್ದಾರೆ. ಇವರು ಜೀವನದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡುವಂತಾಗಲಿ,ಅವರ ಜೀವನ ಇನ್ನಷ್ಟು ಉಜ್ವಲವಾಗಲಿ ಹಾಗೇಯೇ ತನ್ನ ಹೆತ್ತವರಿಗೂ, ಕಾಲೇಜಿಗೂ ಕೀರ್ತಿಯನ್ನು ತಂದುಕೊಡುವಂತಾಗಲಿ ಎಂದು ಹಾರೈಸೋಣ.


-ಧನ್ಯಶ್ರೀ

ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ ಮತ್ತು             

ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top