ಗೋಕರ್ಣ: ಹರಿ- ಸಿರಿಗಳೆರಡೂ ಇದ್ದರೆ ಬದುಕು ಸುಂದರ. ಹರಿ ಎಂದರೆ ಧರ್ಮ, ಸಿರಿ ಎಂದರೆ ಸಂಪತ್ತು. ಧರ್ಮ ಮಾರ್ಗವನ್ನು ಅನುಸರಿಸಿ ಸಂಪಾದಿಸುವ ಸಂಪತ್ತು ಶ್ರೇಷ್ಠ. ಹೀಗೆ ಬಂದ ಸಂಪತ್ತನ್ನು ಮತ್ತೆ ಧರ್ಮ ಕಾರ್ಯಗಳಿಗೆ ವಿನಿಯೋಗಿಸಿ ಬದುಕು ಸಾರ್ಥಕಪಡಿಸಿಕೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸಂಘಟನಾ ಚಾತುರ್ಮಾಸ್ಯ ಕೈಗೊಂಡಿರುವ ಪರಮಪೂಜ್ಯರು ಶನಿವಾರ ಶ್ರೀಸಂದೇಶ ನೀಡಿ, "ಧರ್ಮ ಇದ್ದಲ್ಲಿ ಅರ್ಥ ತಾನಾಗಿಯೇ ಬರುತ್ತದೆ. ಹರಿ- ಸಿರಿಗಳು ಸತಿ ಪತಿಗಳು. ಹರಿಯ ಉಪಾಸನೆ ನಡೆದಲ್ಲಿ ಸಿರಿ ತಾನಾಗಿಯೇ ಒಲಿದು ಬರುತ್ತಾಳೆ. ಹರಿಗೆ ದಶಾವತಾರಿಯಾದರೆ ಸಿರಿಗೆ ಸಹಸ್ರ ಅವತಾರ. ಹರಿಯನ್ನು ಮರೆತು ಸಿರಿಯ ಹಿಂದೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ" ಎಂದು ವಿಶ್ಲೇಷಿಸಿದರು.
ಇಂದಿನ ಸಮಾಜ ಹಣದ ಹಿಂದೆ ಓಡುತ್ತಿದೆ. ಉಳಿದೆಲ್ಲ ತಮ್ಮ ಕರ್ತವ್ಯಗಳನ್ನು ಮರೆತು ವಯಸ್ಸು ಇದ್ದಷ್ಟೂ ದಿನ ಅರ್ಥ ಸಂಪಾದನೆಗೇ ಗಮನ ಹರಿಸುತ್ತಾರೆ. ಕೊನೆಗೊಂದು ದಿನ ಎಷ್ಟೇ ಹಣ ಇದ್ದರೂ ನೆಮ್ಮದಿ- ಆರೋಗ್ಯ ಇಲ್ಲ ಎಂಬ ಕಾರಣಕ್ಕೆ ಆರೋಗ್ಯ ಹಾಗೂ ನೆಮ್ಮದಿಗಾಗಿ ಇರುವ ಸಂಪತ್ತೆಲ್ಲವನ್ನೂ ವ್ಯಯಿಸುತ್ತಾರೆ. ಹೀಗೆ ಮಾಡದೇ, ಧರ್ಮಮಾರ್ಗದಲ್ಲಿ ಅರ್ಥವನ್ನು ಸಂಪಾದಿಸಿ, ಮತ್ತೆ ಧರ್ಮಕ್ಕಾಗಿ ಅದನ್ನು ವ್ಯಯಿಸಬೇಕು ಎಂದು ಸಲಹೆ ಮಾಡಿದರು.
ಬದುಕಿನಲ್ಲಿ ಕೆಲವರು ಹರಿಯ ಹಿಂದೆ ಓಡಿದರೆ ಮತ್ತೆ ಕೆಲವರು ಸಿರಿಯ ಹಿಂದೆ ಓಡುತ್ತಾರೆ. ಹರಿ ಎಂದರೆ ಸಂತೋಷ; ಸಿರಿ ಎಂದರೆ ಸಂಪತ್ತು; ಬದುಕಿನಲ್ಲಿ ಇವೆರಡೂ ಬೇಕು. ಸಂಪತ್ತು ಇರುವವರಿಗೆ ಚೋರಭಯ, ರಾಜ್ಯದ ತೆರಿಗೆ ಭಯ, ಒಡಹುಟ್ಟಿದವರು ಪಾಲು ಕೇಳುವ ಭಯ ಎಲ್ಲವೂ ಇರುತ್ತದೆ. ಆದರೆ ಹರಿಯ ನಾಮ ಎದೆಯಲ್ಲಿರಿಸಿಕೊಂಡವರಿಗೆ ಯಾವ ಭಯವೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಅನಂತಮೂರ್ತಿ ಎಂ.ಹೆಗಡೆ ಅವರು ವಿವಿವಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ ನಿರ್ಮಿಸಿಕೊಡುವುದಾಗಿ ಈ ಸಂದರ್ಭದಲ್ಲಿ ಪ್ರಕಟಿಸಿದರು. ಉದ್ಯಮಿ ಎನ್.ಎಚ್.ಇಲ್ಲೂರ, ನಿವೃತ್ತ ಎಸ್ಪಿ ಎನ್.ಟಿ.ಪ್ರಮೋದ್, ಗಣ್ಯರಾದ ಶಶಿಕಾಂತ್, ರಾಜೀವ ಗಾಂವ್ಕರ್, ಆನಂದ್ ಕೌರ್ ಮತ್ತಿತರರು ಶ್ರೀಸಂಸ್ಥಾನದವರಿಂದ ಆಶೀರ್ವಾದ ಪಡೆದರು.
ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಅಧ್ಯಕ್ಷ ಯು.ಎಸ್. ಗಣಪತಿ ಭಟ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ್ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ, ವಿವಿವಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ, ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಸುವಸ್ತು ವಿಭಾಗದ ರಾಮಚಂದ್ರ ಅಜ್ಜಕಾನ, ವಸತಿ ವಿಭಾಗದ ಮೋಹನ ಪಳ್ಳತ್ತಡ್ಕ, ಅರವಿಂದ ದರ್ಬೆ ಉಪಸ್ಥಿತರಿದ್ದರು. ಸುಬ್ರಾಯ ಅಗ್ನಿಹೋತ್ರಿಯವರು ಕಾರ್ಯಕ್ರಮ ನಿರೂಪಿಸಿದರು.
ರಸಾಯನಶಾಸ್ತ್ರ ಎಂಎಸ್ಸಿಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆಯಾದ ಆತ್ರೇಯಿ ಕೃಷ್ಣಾ, ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ ಹಿತಾ ಕಜೆ, ಅನಿರುದ್ಧ ಯು.ಎಸ್, ಶ್ರುತಿ ಟಿ, ಶಾರದಾ ಎನ್.ಕೆ, ರೂಪಶ್ರೀ, ಸುಶ್ಮಿತಾ ಬಿ.ಆರ್ ಮತ್ತು ಮಹತಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ