ತಡೆಯೋಣ ಪರಿಸರ ಮಾಲಿನ್ಯ, ಉಳಿಸೋಣ ಜೀವ ವೈವಿಧ್ಯ

Upayuktha
0

ನುಷ್ಯನೆಂಬ ಪ್ರಾಣಿ ಈ ಜಗತ್ತಿನಲ್ಲಿ ಯಾವಾಗ ಹುಟ್ಟಿದನೋ ಅಲ್ಲಿಂದಲೇ ಪರಿಸರದ ಮಾಲಿನ್ಯವೂ ಹುಟ್ಟಿಕೊಂಡಿತು. ನಾಗರಿಕತೆಯ ಹಾದಿಯಲ್ಲಿ ನಾನಾ ಮಜಲುಗಳನ್ನು ದಾಟಿ ಬಂದಿರುವ ಆಧುನಿಕ ಮಾನವನಂತೂ ತಾನೊಬ್ಬನೇ ಈ ಭೂಮಿಯ ಮೇಲೆ ಬದುಕಿದರೆ ಸಾಕೆಂದು ಭಾವಿಸಿ, ಜೀವ ವೈವಿಧ್ಯಗಳನ್ನೆಲ್ಲ ನಾಶಪಡಿಸುತ್ತಲೇ ಬಂದಿದ್ದಾನೆ. ಹಾಗೆಯೇ ಮಾಲಿನ್ಯವೂ ಏರುತ್ತ ಹೋಗಿ ಇದೀಗ ಜೀವ ಜಗತ್ತಿಗೆ ಅಪಾಯಕಾರಿ ಎನಿಸುವ ಮಟ್ಟಕ್ಕೆ ಬಂದಿದೆ. ಇಂತಹ ಸನ್ನಿವೇಶದಲ್ಲಿ ನಮ್ಮ ನಾಗರಿಕತೆಗೆ ಸರಿಯಾದ ಅರ್ಥ ಬರಬೇಕಾದರೆ, ಮಾಲಿನ್ಯ ಸೃಷ್ಟಿಯಾಗುವ ಸನ್ನಿವೇಶಗಳನ್ನೆಲ್ಲ ಬದಲಾಯಿಸಿಕೊಂಡು ಪ್ರಕೃತಿ ಮಾತೆಗೆ ಶರಣಾಗಿ ಪರಿಶುದ್ಧ ಬಾಳನ್ನು ಬದುಕಲು ಕಲಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಅವಲೋಕನ ಇಲ್ಲಿದೆ.


ನೆಲ:

ನಮ್ಮ ಸುತ್ತಮುತ್ತಲೂ ನಾವು ಎಸೆಯುವ ಪ್ಲಾಸ್ಟಿಕ್‌ನ ವಿವಿಧ ವಸ್ತುಗಳು ಮಣ್ಣನ್ನು ವಿಷಮಯ ಮಾಡುತ್ತದೆ. ಸಮಯ ಮೀರಿದ ಔಷಧಗಳು, ವಿವಿಧ ರಾಸಾಯನಿಕ  ಸಂರಕ್ಷಕಗಳು, ವಿವಿಧ ಕ್ರಿಮಿನಾಶಕಗಳು, ನಿತ್ಯ ಮನೆಗಳಲ್ಲಿ ಉಪಯೋಗಿಸುವ ವಿವಿಧ ರಾಸಾಯನಿಕ ದ್ರವಗಳಾದ ಹಾರ್ಪಿಕ್, ಮ್ಯಾಜಿಕ್, ಲೈಸೋಲ್, ಹಿಟ್, ಡೈಯೋಡರೆಂಟ್‌ಗಳು ಮಣ್ಣಿಗೆ ಸೇರಿದಾಗ ಮಣ್ಣು ಕಲುಷಿತವಾಗುತ್ತದೆ. ಅದರ ಜೀವಸತ್ವ ನಾಶವಾಗುತ್ತದೆ. ಅಂತಹ ಮಣ್ಣಿನಲ್ಲಿ ಬೆಳೆಯುವ ಅಥವಾ ಬೆಳೆಸಿದ ಸಸ್ಯ ಉತ್ಪನ್ನಗಳು ಕೂಡ ದೀರ್ಘಕಾಲದ ಉಪಯೋಗದಿಂದ ಮಾನವ ಪ್ರಾಣಹಾನಿ, ಅಂಗವೖೆಕಲ್ಯ ಮುಂತಾದ ರೋಗಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ಮಣ್ಣಿನ ಸಂರಕ್ಷಣೆ ಅತೀ ಅಗತ್ಯ. ನಾವು ಮಾಡಬೇಕಾದ್ದಿಷ್ಟೇ ಸಾಧ್ಯವಾದಷ್ಟು ಮೇಲೆ ಸೂಚಿಸಿದ ವಿಷಯದ ಕುರಿತು ಗಮನಕೊಟ್ಟು ಅವುಗಳ ಉಪಯೋಗ ಅತೀ ಕಡಿಮೆ ಮಾಡುವುದು.


ಜಲ: 

ಜೀವಜಲ ಎಂದು ಕರೆಯಲ್ಪಡುವ ಈ ನಿಸರ್ಗದತ್ತ ನೀರು ನಿಜವಾಗಿಯೂ ಪ್ರಾಣಜಲವಾಗಿದೆ. ನೀರಿಲ್ಲದೆ ಬದುಕಿಲ್ಲ. ಬದುಕು ಆರೋಗ್ಯಪೂರ್ಣವಾಗಿ ಇರಬೇಕಾದರೆ ಜಲ ಮಾಲಿನ್ಯ ಸಲ್ಲದು. ಹರಿಯುವ ನೀರಂತೂ ಮನುಷ್ಯನು ತಾನಾಗಿ ಸೇರಿಸುವ ಅಶುದ್ಧ ವಸ್ತುಗಳ ಕಾರಣದಿಂದಾಗಿಯೇ ಪ್ರಾಕೃತಿಕ ನೀರು ಮಲಿನವಾಗುತ್ತದೆ. ಏಳೆಂಟು ದಶಕಗಳ ಹಿಂದೆ ನಮ್ಮ ಸುತ್ತಮುತ್ತ ಇರುವ ಹೆಚ್ಚಿನ ಮನೆಗಳಿಗೆ ಬಾವಿಯ ಸುರಂಗದ ಸ್ಪಟಿಕ ಶುದ್ಧ ನೀರು ನಿರಂತರ ಮನೆ ಉಪಯೋಗಕ್ಕೆ ಅರ್ಥಾತ್ ಸೇವೆಗೆ ದೊರಕುತ್ತಿತ್ತು. ನೈಸರ್ಗಿಕ ಕೃಷಿಯ ಬದಲಾಗಿ ಏಕ ಪ್ರಭೇದದ ಸಸ್ಯಗಳ ಕಾರಣವಾಗಿ ಸಸ್ಯ ವೈವಿಧ್ಯ ನಾಶವಾದದ್ದು ಮಾತ್ರವಲ್ಲದೇ ಮಳೆಯ ನೀರಿನ ಹಿಂಗುವಿಕೆಯಲ್ಲಿ ಇರುವ ತಾರತಮ್ಯ ಜಲಕ್ಷಾಮಕ್ಕೆ ಕಾರಣವಾಯಿತು. ಆಗ ಅನಿವಾರ್ಯತೆಯ ಕಾರಣ ಒಡ್ಡಿ ಭೂಗರ್ಭದೊಳಗಿನ ನೀರನ್ನು ಮೇಲೆತ್ತಲು ಕೊಳವೆ ಬಾವಿಗಳು ಹಾಗೂ ಪಂಪುಗಳು ಧಾರಾಳ ಉಪಯೋಗಕ್ಕೆ ಬಂದವು. ಈ ಕಾರಣದಿಂದಾಗಿ ಮೂಲೆಗುಂಪಾದ ಕೆರೆ, ತೊರೆ, ಬಾವಿಗಳು ಉಪಯೋಗ ಶೂನ್ಯವಾಗತೊಡಗಿದವು. ಆಧುನಿಕ ಯಂತ್ರೋಪಕರಣಗಳಾದ ಜಿಸಿಬಿ, ಬುಲ್ಡೋಜರ್ ಇತ್ಯಾದಿಗಳ ಕಾರಣದಿಂದ ಗುಡ್ಡದ ತುದಿಗಳಲ್ಲೂ ಕೂಡ ಸಮತಟ್ಟು ಮಾಡುವ, ಅಲ್ಲಿಗೆ ವಿವಿಧ ದಿಕ್ಕುಗಳಿಂದ ಮಾರ್ಗಗಳ ಅಗತ್ಯವೆಂದು ಕಾರಣ ಕೊಡುವ ಮಣ್ಣಿನ ಸವೆತಕ್ಕೆ ನೈಜ ಕಾರಣವಾಗುವ ಘಟನೆಗಳು ಎಡೆಯಿಲ್ಲದೆ ನಡೆಯುತ್ತಿವೆ. ತೋಡು, ನದಿಗಳ ನೆರೆಗೆ ಇದೂ ಒಂದು ಕಾರಣವಾಗುತ್ತದೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಮತ್ತು ಸ್ನಾನ ಗೃಹ, ಶೌಚಾಲಯ, ಬಟ್ಟೆ ಒಗಿಯುವ ಯಂತ್ರ ಇತ್ಯಾದಿಗಳ ಉಪಯೋಗದಲ್ಲಿ ನಿಯಂತ್ರಣವಿಲ್ಲದಿದ್ದಲ್ಲಿ ಜೀವ ಜಲ ಪ್ರಾಣಜಲಗಳ ಲಭ್ಯತೆ ಇಲ್ಲದೆ ಆಗುವ ಪರಿಸ್ಥಿತಿಯ ಬಗ್ಗೆ ಏನು ಹೇಳಬಹುದು.


ಉಷ್ಣ: 

ವರ್ಷದಿಂದ ವರ್ಷಕ್ಕೆ ಏರುತ್ತಿರುವ ತಾಪಮಾನ ಅದರ ಪರಿಣಾಮ ಹೀಗೆ ಎಲ್ಲರಿಗೂ ಯೋಚಿಸದಿದ್ದರೂ ಅನುಭವಕ್ಕೆ ಬರುವಂತದ್ದೇ. 35°c ಗಿಂತ ಅಧಿಕ ತಾಪಮಾನವಿದ್ದಲ್ಲಿ ತೆಂಗು, ಕಂಗು, ಮಾವು, ಹಲಸು ಇತ್ಯಾದಿ ಕೃಷಿ ಉತ್ಪನ್ನಗಳು ಕೈಗೆ ಎಟಕದಂತಹ ಸ್ಥಿತಿಗೆ ಬರುವುದಕ್ಕೆ ಕಾರಣವೂ ಆಗಬಹುದು. ಈ ತಾಪಮಾನವು ಪರಾಗಸಂಪರ್ಕ ಮತ್ತು ಫಲದೀಕರಣಗಳಿಗೆ ಸೂಕ್ತವಲ್ಲದ ವಿದ್ಯಮಾನವಾಗಿದೆ. ಹೀಗೆ ಉಷ್ಣತೆ ಹೆಚ್ಚಾದಲ್ಲಿ ಬರ ಮಾತ್ರವಲ್ಲ ಆಹಾರಕ್ಕೂ ಕೊರತೆ ಆಗುವುದಂತೂ ನಿಶ್ಚಯ. ಇದನ್ನು ತಡೆಗಟ್ಟಲು ಅತೀ ಮುಖ್ಯವಾಗಿ ಮಾಡಬೇಕಾಗಿರುವುದು ವಾತಾವರಣಕ್ಕೆ ಅಧಿಕ ಅಂಗಾರಾಮ್ಲವನ್ನು ಸೇರಿಸುವುದನ್ನು ತಪ್ಪಿಸುವುದು.  ಟಿ.ವಿ, ಫ್ರಿಡ್ಜ್, ಏ.ಸಿ, ಮೋಟಾರ್ ವಾಹನಗಳ ಬಳಕೆ ಕಡಿಮೆಗೊಳಿಸುವ ಪ್ರಯತ್ನ ಆಗಬೇಕಾಗಿದೆ. 


ವಾಯು: 

ಮನೆಯಲ್ಲಿ ಇರುವ ಪ್ರೌಢ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಮನೆಗಳಲ್ಲಿ ವಾಹನಗಳ ಸಂಗ್ರಹವನ್ನು ಕಾಣಬಹುದು. ಹತ್ತು ಹೆಜ್ಜೆಗಿಂತ ಒಂದು ಹೆಜ್ಜೆ ಹೆಚ್ಚಾದರೂ ನಡೆಯುವುದರ ಬದಲಿಗೆ ವಾಹನದ ಉಪಯೋಗ ಕಂಡುಬರುತ್ತದೆ. ಪೆಟ್ರೋಲ್, ಡೀಸೆಲ್ ಇತ್ಯಾದಿಗಳ ಉರಿಯುವಿಕೆ ವಾಯುವನ್ನು ಮಲಿನಗೊಳಿಸುತ್ತದೆ. ಸಸ್ಯ ಬೆಳೆಗಳ ಸಂರಕ್ಷಣೆಗೆಂದು ರೋಗ ಪ್ರತಿರೋಧಕವಾಗಿ ಉಪಯೋಗಿಸುವ ಕೀಟನಾಶಕಗಳ ಸಿಂಪಡಿಸುವಿಕೆಯಿಂದ ಗಾಳಿ ವಿಷಪೂರ್ಣವಾಗುತ್ತದೆ. ನಾನಾತರದ ಕಾಯಿಲೆಗಳನ್ನು ಗುಣಪಡಿಸುವ ನಿಮಿತ್ತದ ಆಸ್ಪತ್ರೆಗಳಲ್ಲಿ ಹೊರಹಾಕಬಹುದಾದ ಎಲ್ಲಾ ತರದ ತ್ಯಾಜ್ಯಗಳ ಸರಿಯಾದ ವ್ಯವಸ್ಥಿತ ವಿನಿಯೋಗ ಮಾಡದೇ ಇದ್ದಾಗ ಅದು ವಾತಾವರಣಕ್ಕೆ, ಬಲು ದೊಡ್ಡ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. 


ಪರಿಸರ ಮಾಲಿನ್ಯ ಇಲ್ಲದಂತೆ ಮಾಡಿ ಸಾಧ್ಯವಾದಷ್ಟು ಮಟ್ಟಿಗೆ ಸಾಮೂಹಿಕವಾಗಿ ಪ್ರತಿಯೊಬ್ಬರೂ ಅವರವರ ನೆಲೆಯಲ್ಲಿ ತನ್ನ ಆದ್ಯ ಕರ್ತವ್ಯವೆಂದು ಭಾವಿಸಿ, ಪ್ರಯತ್ನಪಟ್ಟಲ್ಲಿ ಈಗಲೇ ಕಲಿಯುಗದ ಅಂತ್ಯವನ್ನು ಕಾಣಬೇಕಾಗಿಲ್ಲ. ಸನಿಹದ ಭವಿಷ್ಯದಲ್ಲಿ ನಾವೆಲ್ಲರೂ ಸಹನೀಯ ಬದುಕನ್ನು ಬಾಳುವಂತೆ ಮಾನವ ಜನಾಂಗದ ಉಳಿವಿಗೆ ಅಳಿಲ ಸೇವೆಯನ್ನಾದರೂ ಮಾಡೋಣ.




-ಶ್ರಾವ್ಯಾ ಭಟ್

ದ್ವಿತೀಯ ಬಿ.ಎ

ಅಂಬಿಕಾ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top