ಪ್ರಾತಿನಿಧಿಕ ಫೋಟೋ
ಬದಿಯಡ್ಕ: ಏತಡ್ಕ-ಗಾಳಿಗೋಪುರ ರಸ್ತೆಯಲ್ಲಿ ಕಜಂಪಾಡಿ ಸಮೀಪ ಪೆರಿಯಾಲ್ ಎಂಬಲ್ಲಿ ಇಂದು (ಗುರುವಾರ) ಸಂಜೆ ದೊಡ್ಡ ಗಾತ್ರದ ಚಿರತೆಯೊಂದು ಕಂಡುಬಂದಿದೆ. ಸ್ವರ್ಗ ಸಮೀಪದ ನಿವಾಸಿಯೊಬ್ಬರು ರಾತ್ರಿ ಸುಮಾರು 8:30ರ ವೇಳೆಗೆ ಈ ರಸ್ತೆಯ ಮೂಲಕ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿರತೆಯೊಂದು ರಸ್ತೆ ದಾಟುತ್ತಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.
ಮಳೆಯ ಮಬ್ಬಿನಿಂದಾಗಿ ರಸ್ತೆಯಲ್ಲಿ ಸ್ಪಷ್ಟ ಗೋಚರತೆ ಇರಲಿಲ್ಲ. ಆದರೂ ಕಾರಿನ ಹೈಬೀಮ್ ಲೈಟ್ ಹಾಕಿ ನೋಡಿದಾಗ ಚಿರತೆಯೊಂದು ಪಕ್ಕದ ಗುಡ್ಡದಿಂದ ರಸ್ತೆಗೆ ಇಳಿದು ರಬ್ಬರ್ ತೋಟದ ಕಡೆಗೆ ಸಾಗಿ ಪೊದೆಯಲ್ಲಿ ಕುಳಿತಿರುವುದನ್ನು ಗಮನಿಸಿದ್ದಾಗಿ ಅವರು ತಿಳಿಸಿದ್ದಾರೆ. ರಾತ್ರಿಯಾಗಿರುವುದರಿಂದ ಚಿರತೆಯ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷವೂ ಈ ಭಾಗದಲ್ಲಿ ಚಿರತೆಯೊಂದು ಇರುವುದಾಗಿ ವದಂತಿಗಳು ಹಬ್ಬಿದ್ದವು. ಕೆಲವು ಮನೆಗಳಿಂದ ನಾಯಿಗಳನ್ನು ಬೇಟೆಯಾಡಿ ಯಾವುದೋ ಪ್ರಾಣಿ ತಿಂದು ಹಾಕಿರುವುದಾಗಿ ಊರವರು ಹೇಳುತ್ತಿದ್ದರು. ಆದರೆ ಚಿರತೆಯ ಪ್ರತ್ಯಕ್ಷದರ್ಶನ ಇದುವರೆಗೂ ಆಗಿರಲಿಲ್ಲ. ಇಂದು ಊರಿನ ನಿವಾಸಿಯೊಬ್ಬರು ಚಿರತೆಯನ್ನು ಕಂಡಿರುವುದಾಗಿ ಹೇಳಿರುವುದು ಊರಲ್ಲಿ ಕೌತುಕ, ಕಳವಳ ಸೃಷ್ಟಿಸಿದೆ.
ಅರಣ್ಯ ಇಲಾಖೆಯವರು ಚಿರತೆಯನ್ನು ಪತ್ತೆ ಮಾಡಿ ದೂರದ ಕಾಡಿಗೆ ಬಿಟ್ಟುಬರಬೇಕು ಎಂದು ಜನತೆ ಮಾತಾಡಿಕೊಳ್ಳುತ್ತಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ