ಮಳೆ ಎಂಬ ಮಹಾ ಪ್ರವಾಹದ ಅವಾಂತರಗಳು

Upayuktha
0

ಳೆ ಮಳೆ ಮಳೆ.... ಎಲ್ಲ ಕಡೆ ಮಳೆಯ ಅಬ್ಬರ.

ಈ ಮಳೆಯಂತೂ ವಿಚಿತ್ರ. ಬೇಕಾದಾಗ ಬಾರದಿರುವ ಬೇಡದೆ ಹೋದಾಗ ಒಂದೇ ಸಮನೆ ಬರುವ ಮಳೆ ಮಾಡುವ ಉಪಕಾರಕ್ಕಿಂತ ಅನಾಹುತಗಳೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕಾರಣಗಳೇನೆ ಇರಲಿ, ಮಳೆಯ ಅನಾಹುತಗಳಿಂದ ಪೆಟ್ಟು ತಿನ್ನುವವರು ರೈತರು ಎಂಬುದು ಸುಳ್ಳಲ್ಲ.


ಮೊದಲ ಮಳೆ ಬೀಳುವ ಮುನ್ನ ಹೊಲವನ್ನು ಹದಗೊಳಿಸುವ ರೈತ ಭೂಮಿ ತೋಯುವಷ್ಟು ಮೊದಲ ಮಳೆ ಸುರಿದಾಗ ಹೊಲದಲ್ಲಿ  ಬೀಜಗಳನ್ನು ಬಿತ್ತುತ್ತಾನೆ. ನಾಲ್ಕೈದು ದಿನಗಳ ಅಂತರದಲ್ಲಿ ಮತ್ತೊಂದು ಮಳೆ ಸುರಿದಾಗ ಬೀಜ ಅಂಕುರವಾಗಿ ಮೊಳಕೆಯೊಡೆದು ಮೆಲ್ಲನೆ ಸಸಿಗಳು ಭೂಮಿಯ ಒಡಲನ್ನು ಸೀಳಿ ಹೊರ ಬರುತ್ತವೆ. ಮತ್ತೊಂದಷ್ಟು ಮಳೆ ಸುರಿದರೆ ಸಸಿ ಫೈರಾಗಿ ಮತ್ತೆ ಮಳೆ ಸುರಿದಾಗ ಧಾನ್ಯಗಳನ್ನು ಹೊತ್ತ ತೆನೆಗಳ ಭಾರಕ್ಕೆ ತಲೆದೂಗುತ್ತಾ ನೋಡುಗರ ಕಣ್ಮನ ಸೆಳೆಯುತ್ತದೆ. ಕಾಲ ಕಾಲಕ್ಕೆ ಮಳೆಯಾಗುವುದರಿಂದ ಉತ್ತಮ ಬೆಳೆ ಬೆಳೆಯುವ ರೈತ ನಿಶ್ಚಿಂತೆಯಿಂದ ಬದುಕಬಹುದು.


ಕಳೆದ ಹಲವಾರು ದಿನಗಳಿಂದ ರಾಜ್ಯದಲ್ಲೆಡೆ ಒಂದೇ ಸಮನೆ ಸುರಿಯುತ್ತಿರುವ ಮಳೆ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಉಳ್ಳವರು ಸುರಿಯುತ್ತಿರುವ ಮಳೆಯನ್ನು ಮನೆಯ ಬಾಲ್ಕನಿಗಳಲ್ಲಿ ಕುಳಿತು ಬಿಸಿ ಬಿಸಿಯಾದ ಕಾಫಿ ಸವಿಯುತ್ತಾ ಹುರಿಗಾಳು ಚಿಪ್ಸ್ ಗಳ ಸೇವನೆ ಮಾಡುತ್ತಾ ನೋಡುತ್ತಿದ್ದರೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ, ರಸ್ತೆ ಬದಿ ವ್ಯಾಪಾರ ಮಾಡುವ ಹೂವು, ಹಣ್ಣು, ತರಕಾರಿ ಅಂಗಡಿಗಳವರು, ಅಂದಂದಿನ ಕೂಲಿಯಿಂದಲೇ ಜೀವನ ಸವೆಸಬೇಕಾದಂತಹ ದಿನಗೂಲಿ ಕೆಲಸಗಾರರು ಮಳೆಯಿಂದ ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಕೂರುವಂತಾಗಿದೆ. ಇರುವ ಒಂದೆರಡು ಜೊತೆ ಬಟ್ಟೆಗಳನ್ನು ಒಣ ಹಾಕಲು ಜಾಗವಿಲ್ಲದೆ ಅಡುಗೆ ಮಾಡಿಕೊಳ್ಳಲು ದಿನಸಿ ಪದಾರ್ಥಗಳಿಲ್ಲದೆ ಸೋರುತ್ತಿರುವ ಮನೆಯ ಅಲ್ಲೊಂದು ಇಲ್ಲೊಂದು ಮೂಲೆಗಳಲ್ಲಿ ಪಾತ್ರೆಗಳನ್ನು ಇಟ್ಟು ಬೆಚ್ಚಗಿನ ಯಾವುದೋ ಒಂದು ಭಾಗದಲ್ಲಿ ಇರುವ ಸ್ವಲ್ಪ ಹಾಲಿನಲ್ಲಿ ಕರಿ ನೀರಿನಂತಹ ಚಹಾ ಮಾಡಿಕೊಂಡು ಕುಡಿಯುತ್ತಿರುವ ಆ ಮೂಲಕ ಮೈಯನ್ನು ಬೆಚ್ಚಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಸಾವಿರಾರು ಕುಟುಂಬಗಳು ಮಳೆಯ ಅಬ್ಬರಕ್ಕೆ ತತ್ತರಿಸಿವೆ.


ಆದರೆ ಈ ಮಳೆಯು ತನಗೆ ಬೇಕಾದಾಗ ಸುರಿದು ಬೇಡವಾದಾಗ ತಿಂಗಳುಗಟ್ಟಲೆ ಬಾರದೆ ಹೋಗುವ ಕಣ್ಣ ಮುಚ್ಚಾಲೆ ಆಟ ಆಡುತ್ತಿದ್ದು ಇತ್ತೀಚಿನ ಕೆಲ ವರ್ಷಗಳಲ್ಲಿ ಮಳೆಯ ಅವಾಂತರ ಇನ್ನೂ ಹೆಚ್ಚಾಗಿದೆ.


ಕೆಲ ವರ್ಷಗಳ ಹಿಂದೆ ಉತ್ತರಾಖಂಡ್ ರಾಜ್ಯದಲ್ಲಿ ಮೋಡಗಳು ಪರ್ವತಗಳ ಮಧ್ಯ ಸಿಲುಕಿ ಮೇಘಸ್ಫೋಟವಾಗಿ ಸುರಿದ ಮಳೆಯಿಂದಾಗಿ ಇಡೀ ರಾಜ್ಯವೇ ಜಲಪ್ರಳಯವನ್ನು ಕಂಡಿತ್ತು ಭಾರತ ದೇಶದ ಪವಿತ್ರ ತೀರ್ಥಕ್ಷೇತ್ರಗಳಾದ ಚಾರ್ ಧಾಮಗಳಲ್ಲಿ ಒಂದಾದ ಪವಿತ್ರ ಕೇದಾರನಾಥ ಕ್ಷೇತ್ರವು ಸಂಪೂರ್ಣವಾಗಿ ಮುಳುಗಿ ಹೋಗಿದ್ದು ಜಲ ಪ್ರವಾಹಕ್ಕೆ ಸಿಲುಕಿ ನೂರಾರು ಜನ ಸಾವನ್ನಪ್ಪಿದರು. ಲಕ್ಷಾಂತರ ಜನ ನಿರ್ವಸಿತರಾದರು. ತಮ್ಮ ಬದುಕಿನ ಆಸರೆ ಕಳೆದುಕೊಂಡವರು ಸಾವಿರಾರು ಜನ.ಪ್ರತಿ ವರ್ಷವೂ ಉತ್ತರ ಭಾರತದಲ್ಲಿ ಮಳೆಗಾಲ ಎಂದರೆ ಅದೊಂದು ಅನಾಹುತಗಳ ಸರಮಾಲೆಯನ್ನೇ ಹೊತ್ತು ತರುವ ಸಂದಿಗ್ಧ ಪರಿಸ್ಥಿತಿಯ ಕಾಲ. ಅಲ್ಲಿನ ಜನರು ನಿಶ್ಚಿಂತರಾಗಿ ಬದುಕುವ ಭರವಸೆಗಳೆ ಇಲ್ಲ. ಸದಾ ಆತಂಕದ ನಡುವೆ ಬದುಕುವ ಅನಿಶ್ಚಿತ ಬಾಳು ಅವರದು.


ಜೋರಾಗಿ ರಪ ರಪನೆ ಸುರಿವ ಮಳೆ ಒಂದು ಹಂತದವರೆಗು ಒಳ್ಳೆಯದೇ. ಆದರೆ ಒಂದೇ ಸಮನೆ ರಚ್ಚೆ ಹಿಡಿದ ಮಗುವಿನಂತೆ ಬರುವ ಜಿಟಿ ಜಿಟಿ ಮಳೆಯು ಅನಾಹುತಗಳಿಗೆ ಕಾರಣವಾಗುತ್ತದೆ. ಹಳೆಯ ಶಿಥಿಲಾವಸ್ಥೆಯಲ್ಲಿರುವ ಮನೆಗಳು ಈ ರೀತಿಯ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದು ಹೋಗಿ ಜೀವ ಮತ್ತು ಆಸ್ತಿಪಾಸ್ತಿಗಳ ಹಾನಿಗೆ ಕಾರಣವಾಗುತ್ತದೆ.


ಇಷ್ಟಕ್ಕೂ ಅನಾದಿಕಾಲದಿಂದಲೂ ಮಳೆಯಾಶ್ರಿತರಾಗಿದ್ದ ನಾವೇ ಮಳೆಯಿಂದ ಆಗುವ ಇಂದಿನ ದುಷ್ಪರಿಣಾಮಗಳಿಗೆ ಕಾರಣರಾಗಿದ್ದೇವೆ. ನಮ್ಮ ಸ್ವಾರ್ಥಕ್ಕೆ ಕಾಡನ್ನು ಕಡಿದು ನಾಡನ್ನು ಮಾಡಿರುವ ನಾವು ವನ್ಯಪ್ರಾಣಿಗಳನ್ನು ನಿರಾಶ್ರಿತರನ್ನಾಗಿಸಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಮಗಾರಿಗಳನ್ನು ಕೈಗೊಂಡು ಬೆಟ್ಟ ಗುಡ್ಡಗಳನ್ನು ಕಡಿದು ರಸ್ತೆ ಮಾಡಿದ್ದೇವೆ. ಭೂಮಿಯ ಆಳದಲ್ಲಿ ಸಾವಿರಾರು ಲಕ್ಷಾಂತರ ಗುಂಡಿ ತೋಡಿ ಅಂತರ್ಜಲದ ಮಟ್ಟವನ್ನು ಕುಸಿಯುವಂತೆ ಮಾಡಿದ್ದೇವೆ. ಪ್ರತಿ ಓಣಿಗಳಲ್ಲಿನ ಚಿಕ್ಕಪುಟ್ಟ ರಸ್ತೆಗಳನ್ನು ಕೂಡ ರಸ್ತೆಗಳನ್ನು ಸಿಸಿ ರೋಡ್ ಗಳನ್ನಾಗಿ ಮಾಡುವ ಭರದಲ್ಲಿ ಮಳೆಯಿಂದ ಸಂಗ್ರಹವಾದ ನೀರು ಇಂಗಲು ಅವಕಾಶವಿಲ್ಲದಂತೆ ಮಾಡಿದ್ದೇವೆ. ಪ್ರಕೃತಿಜನ್ಯವಾದ ವಸ್ತುಗಳನ್ನು ಬಳಸುತ್ತಿದ್ದಾಗ ಕೊರತೆಯನ್ನು ಅನುಭವಿಸದ ನಾವು ಇದೀಗ ಅಭಿವೃದ್ಧಿಯ ಹೆಸರಿನಲ್ಲಿ ಮುರಿಯಲಾರದ, ಹರಿಯಲಾರದ, ಕೆಡಲಾರದ ಪ್ಲಾಸ್ಟಿಕ್ ಫೈಬರ್ ಗಳ ಮೊರೆ ಹೋಗಿದ್ದೇವೆ.


ಹಾಗಾದರೆ ಅಭಿವೃದ್ಧಿ ತಪ್ಪೆ ಎಂದು ನೀವು ಪ್ರಶ್ನಿಸಬಹುದು. ಖಂಡಿತ ತಪ್ಪಲ್ಲ..... ಕೇದಾರನಾಥ ದೇವಾಲಯ ಮತ್ತು ಅದರ ಸುತ್ತಲಿನ ಪ್ರದೇಶವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅಲ್ಲಿರುವುದು ಸೆಡೆಮೆಂಟರಿ ಎಂದು ಕರೆಯಲ್ಪಡುವ ಟೊಳ್ಳಾದ ಕಲ್ಲು ಗುಡ್ಡಗಳು. ಅಂತಹ ಜಾಗದಲ್ಲಿ ನೂರಾರು ರಸ್ತೆ ಕಾಮಗಾರಿಗಳನ್ನು ಕೈಗೊಂಡಿದ್ದು ಹಲವಾರು ಜಲಾಶಯಗಳನ್ನು ನಿರ್ಮಿಸಿದ್ದಾರೆ. ಈ ರಸ್ತೆ ಕಾಮಗಾರಿ ಮತ್ತು ಜಲಾಶಯಗಳಿಗೆ ಬೇಕಾಗುವ ನಿರ್ಮಾಣ ವಸ್ತುಗಳನ್ನು ತರಲು ದೊಡ್ಡ ಗಾತ್ರದ ಜೆಸಿಬಿಗಳನ್ನು ಕ್ರೇನ್ ಗಳನ್ನು ಬಳಸಿ ಗುಡ್ಡವನ್ನೇ ಕಡಿದು ರಸ್ತೆಗಳನ್ನು ಮಾಡಿದ್ದಾರೆ. ಇದರ ಪರಿಣಾಮವೇ ಆ ಭಾಗದ ಭೂಮಿಯಲ್ಲಿ ಸಡಿಲಿಕೆ ಉಂಟಾಗಿದ್ದು ಯಾವಾಗ ಬೇಕಾದರೂ ಭೂಕುಸಿತ ಸಂಭವಿಸುವ ಆಪತ್ತು ಕತ್ತಿಯ ಅಲುಗಿನಂತೆ ತಲೆಯ ಮೇಲೆ ತೂಗುತ್ತಿತ್ತು. ಇದೇ ಸಮಯದಲ್ಲಿ ಮೇಘಸ್ಪೋಟವಾಗಿ ಎಲ್ಲೆ ಮೀರಿ ಹರಿದ ಮಳೆ ನೀರಿನ ಪ್ರವಾಹದಿಂದ ಭೂಮಿ ಬಿರಿದು ಬೆಟ್ಟ ಗುಡ್ಡಗಳು ಕುಸಿದು ಮನೆಗಳು, ಬಹು ಮಹಡಿ ಕಟ್ಟಡಗಳು, ಅಂಗಡಿ ಮುಂಗಟ್ಟುಗಳು ಇನ್ನಿಲ್ಲದಂತೆ  ಧರಾಶಾಯಿಗಳಾಗಿ ಜನರು ಬಿರುಗಾಳಿಗೆ ಸಿಕ್ಕಿದ ತರಗೆಲೆಗಳಂತೆ ದೂರ ದೂರ ಚಿಮ್ಮಲ್ಪಟ್ಟು ಕಾಣೆಯಾದರು.ತಪ್ಪಾಗಿದ್ದು ನಾವು ಅಭಿವೃದ್ಧಿಪಡಿಸಲು ಹೊರಟ ಭೂಮಿ ಮತ್ತು ಸುತ್ತಮುತ್ತಲಿನ ಪರಿಸರದ ಕುರಿತ ವಿಸ್ತೃತ ಅಧ್ಯಯನದ ಅಗತ್ಯತೆಯ ಕೊರತೆ. ವಿನಾಶದತ್ತ ಕರೆದೊಯ್ಯುವ ಪ್ರಗತಿಯ ಅವಶ್ಯಕತೆ ನಮಗಿದೆಯೇ ಎಂಬುದರ ಅವಲೋಕನ ಮಾಡುವ ಜವಾಬ್ದಾರಿ ನಮ್ಮ ಮುಂದಿದೆ.

ಗರ್ಭಿಣಿ ಹೆಂಗಸು ಅದೆಷ್ಟೇ ಬಳಲಿದರು ಸುಸೂತ್ರ ಹೆರಿಗೆಯಾಗಲಿ ಎಂದು ಬಯಸುವಂತೆ... ಯಾವುದೇ ಅನಾಹುತಗಳಾಗದಂತೆ ಈ ಮಳೆಗಾಲ ಸರಿದು ಹೋಗಲಿ ಎಂಬ ಆಶಯ ಎಲ್ಲ ಜನರದು.

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್ 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top