ಬದುಕಿನ ಈ ಪಯಣದಲ್ಲಿ ಎದ್ದು, ಬಿದ್ದು ನಡೆದಿರುತ್ತೇವೆ. ಸೋಲು ಗೆಲುವುಗಳನ್ನು ನೋಡಿರುತ್ತೇವೆ. ಜನರ ಹೊಗಳಿಕೆ, ತೆಗಳಿಕೆಗಳನ್ನು ಕೇಳಿಸಿಕೊಂಡಿರುತ್ತೇವೆ. ಈ ವ್ಯವಹಾರಿಕ ಬದುಕಿನಲ್ಲಿ ಲಾಭ ನಷ್ಟದ ಲೆಕ್ಕಾಚಾರ ಮಾಡಿರುತ್ತೇವೆ.
ಈ ಜೀವನ ನಾಟಕದಲ್ಲಿ ಮುಖವಾಡ ಧರಿಸಿ ಅಭಿನಯಿಸಿರುತ್ತೇವೆ. ಅವರಿವರಿಗೆ ಸಲ್ಲಬೇಕೆಂದು ನಮ್ಮತನವನ್ನೇ ಕಳೆದುಕೊಂಡಿರುತ್ತೇವೆ. ವಯಸ್ಸಾಗುತ್ತದೆ. ಕೈಕಾಲುಗಳಲ್ಲಿ ಶಕ್ತಿ ಇರುವುದಿಲ್ಲ. ಸುಮ್ಮನೆ ಕೂರಬೇಕಾದಾಗ ಹಿಂದಿನದೆಲ್ಲಾ ನೆನಪಾಗುತ್ತದೆ. ನಡೆದು ಬಂದ ಹಾದಿಯ ಪರಾಮರ್ಶೆ ಮಾಡುತ್ತೇವೆ. ಆದರೆ ಇದರಿಂದ ಪ್ರಯೋಜನವಾದರೂ ಏನು?...
ತಪ್ಪು ಮಾಡಿದಾಗ ಬೇಗ ತಿದ್ದಿಕೊಂಡು ಬಿಡಬೇಕು. ಯಾರಿಗಾದರೂ ಮೋಸ ಮಾಡಿದ್ದರೆ, ಅಪಮಾನ ಮಾಡಿದ್ದರೆ, ನೋವು ನೀಡಿದ್ದರೆ, ಅದೆಲ್ಲಾ ನಮ್ಮನ್ನು ಕಾಡುತ್ತದೆ. ಆಗಲೇ ಅವರ ಕ್ಷಮೆಯಾಚಿಸಬೇಕಿತ್ತು ಅನಿಸುತ್ತದೆ. ನಾವು ಯಾರಿಗೆ ಸಹಾಯ ಮಾಡಬೇಕಿತ್ತೋ, ಯಾರಿಗೆ ಕರುಣೆ ತೋರಿಸಬೇಕಿತ್ತೋ, ಯಾರನ್ನು ಪ್ರೀತಿಯಿಂದ ಪೋಷಿಸಬೇಕಿತ್ತೋ ಅವರೇ ಇಲ್ಲದಾಗ ಈಗ ಅವರ ನೆನೆದು ಮರುಗಿದರೆ ಅದು ವ್ಯರ್ಥವಾದ ಆಲಾಪವಾಗುವುದಿಲ್ಲವೆ?
ಆ ಹೆಣ್ಣುಮಗಳು ಸವಿತಾಳೊಂದಿಗೆ ಮಾತಾಡುತ್ತಿದ್ದರು. "ಅವರು ನಮಗಾಗಿ ಹಗಲಿರುಳು ಎನ್ನದೆ ದುಡಿದರು. ಆದರೆ ನನಗೆ ತೃಪ್ತಿ ಎನ್ನುವುದೇ ಇರಲಿಲ್ಲ. ಮನೆ ಆಯ್ತು, ಕಾರು ಬೇಕೆನಿಸಿತು. ಬಂಗಾರದ ಆಭರಣಗಳನ್ನು ಮಾಡಿಸಿಕೊಂಡು, ಹಾಕಿಕೊಂಡು ಮೆರೆದೆ. ನಮಗಿದ್ದ ಇಬ್ಬರು ಮಕ್ಕಳು ಬಿಇ ಮಾಡಿ, ಇಂಜಿನಿಯರ್ ಗಳಾಗಿದ್ದಾರೆ. ಆದರೆ ಅವರಿಗೆ ಸರಿಯಾದ ಸಂಸ್ಕಾರ ಕೊಡಲಿಲ್ಲ. ಇದಕ್ಕೆ ನಾನೇ ಕಾರಣ. ಮಕ್ಕಳಿಗೂ, ನಮಗೂ ಸರಿಬರಲಿಲ್ಲ. ಅವರು ಬೇರೆ ಹೋದರು. ಎಲ್ಲಾ ಇದ್ದು ನೆಮ್ಮದಿ ಇಲ್ಲದ ಬದುಕು ನಮ್ಮದಾಯ್ತು. ಅವರಿಗೆ ಮಧುಮೇಹ, ಹೃದಯ ಸಂಬಂಧಿತ ಕಾಯಿಲೆಗಳು ಜೊತೆಯಾದವು. ಕಳೆದ ತಿಂಗಳು ಹೃದಯಾಘಾತದಿಂದ ಅಸುನೀಗಿದರು. ಅವರಿಗಿನ್ನೂ ಅರವತ್ತು ತುಂಬಿರಲಿಲ್ಲ. ಮಕ್ಕಳಿಗೆ ನಾನೀಗ ಬೇಡವಾಗಿದ್ದೇನೆ. ಒಂಟಿಯಾಗಿದ್ದೇನೆ. ಅವರನ್ನೊಂದಿಷ್ಟು ಕಾಳಜಿಯಿಂದ ನೋಡಿಕೊಂಡಿದ್ದರೆ ಅವರಿಗೆ ಇಷ್ಟು ಬೇಗ ಸಾವು ಬರುತ್ತಿರಲಿಲ್ಲ. ಇದ್ದಾಗ ಅವರ ಮಹತ್ವ ಅರಿಯದಾದೆ..." ಎಂದೆಲ್ಲಾ ಹೇಳುತ್ತಿದ್ದರು.
ಅಜ್ಜ, ಅಜ್ಜಿಯರಿದ್ದಾಗ ಅವರ ಉಪದೇಶ, ಕಾಳಜಿಯನ್ನು ತಾತ್ಸಾರ ಮಾಡುತ್ತೇವೆ. ತಂದೆ ತಾಯಂದಿರು ನಮಗಾಗಿ ದುಡಿದದ್ದನ್ನು ಸ್ಮರಿಸಿ ಪ್ರತಿಯಾಗಿ ಏನೂ ಕೊಡುವುದೇ ಇಲ್ಲ. ಉಪಕಾರ ಮಾಡಿದವರನ್ನು ಮರೆತು ಬಿಡುತ್ತೇವೆ. ಇನ್ನು ನಮ್ಮಿಂದ ಏನೂ ಆಗುವುದಿಲ್ಲ ಎಂದು ಮೂಲೆ ಸೇರಿದ ಮೇಲೆ ಹಾಗಿರಬೇಕಿತ್ತು, ಹೀಗೆ ಇರಬೇಕಿತ್ತು ಎಂದು ಚಿಂತೆ ಮಾಡುತ್ತೇವೆ. ಒಮ್ಮೊಮ್ಮೆ ಬದುಕು ಬೇಸರವೆನಿಸುತ್ತದೆ. ಸುತ್ತಲೂ ಕತ್ತಲು ಕವಿದಂತೆ ಅನಿಸಿಬಿಡುತ್ತದೆ. ಆಗ ನಡೆಯಲು ಬೆಳಕು ಬೇಕು. ಆ ಬೆಳಕಿಗಾಗಿ ಪ್ರಾರ್ಥಿಸಬೇಕು.
~~~~~~~~~~~~~~
ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ;
ಮನೆ ದೂರ; ಕನಿಕರಿಸಿ,
ಕೈ ಹಿಡಿದು ನಡೆಸೆನ್ನನು
ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು
ಕೇಳೆನೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನೆ ಇಂತಿರದಾದೆ; ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು
ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು; ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ
ದಿವ್ಯ ಮುಖ ನಗುತ?
-ಬಿ ಎಂ ಶ್ರೀ
~~~~~~~~~~~~~~
- ಎಂ ಎಸ್ ಶಿವಕುಮಾರ್
ಉಪನ್ಯಾಸಕರು, ವಿಜಯ ಕಾಲೇಜು. ಬೆಂಗಳೂರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ