ಅಜೀರ್ಣ...ಖಾಯಿಲೆಯಲ್ಲದ ಖಾಯಿಲೆ

Upayuktha
0

ಧುನಿಕ ಜಗತ್ತಿನಲ್ಲಿ ಹೊಟ್ಟೆ ಹಸಿವಿನಿಂದ ಒದ್ದಾಡುವವರಿಗಿಂತಲೂ  ಬೇಕಾದ್ದು ಬೇಡವಾದದ್ದನ್ನು ಅತಿಯಾಗಿ ತಿಂದು ತೇಗಿ ಒದ್ದಾಡುವವರೇ ಹೆಚ್ಚಾಗಿದ್ದಾರೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಹಾರಕ್ಕೆ ದೈವೀ ಸ್ವರೂಪವನ್ನು ಕಲ್ಪಿಸಿ ಪ್ರಸಾದ ಎಂದು ಹೇಳಿದ್ದಾರೆ. ಅನ್ನವನ್ನು ಪರಬ್ರಹ್ಮಸ್ವರೂಪ ಎಂದು ಹೇಳಿದ್ದಾರೆ. ಆಹಾರ ಧಾನ್ಯಗಳನ್ನು, ಕಾಳು ಕಡಿಗಳನ್ನು ಬೆಳೆಯುವ ನೆಲವನ್ನು ಭೂಮಿತಾಯಿ ಎಂದು ಪೂಜಿಸುವ ನಾವು ರೈತನನ್ನು ಅನ್ನದಾತ ಎಂದು ಗೌರವಿಸುತ್ತೇವೆ.

ಆಯುರ್ವೇದದಲ್ಲಂತೂ ಆಹಾರವನ್ನು ಜೀವ ಸಂಜೀವಿನಿ ಎಂದು ಹೇಳುತ್ತಾರೆ. ಜೊತೆಗೆ ಆಹಾರ ಸೇವಿಸಲು ಇರುವ ಹಲವಾರು ನಿಯಮಗಳನ್ನು ಕೂಡ ಹೇಳುತ್ತಾರೆ.


ಆದರೆ ಆಧುನಿಕತೆಯ ಸೋಗಿನಲ್ಲಿ ನಮ್ಮದಲ್ಲದ ಆಹಾರ ಪದ್ಧತಿಯನ್ನು ನಮ್ಮದಾಗಿಸಿಕೊಂಡ ನಾವುಗಳು ಅಜೀರ್ಣ, ಹುಳಿತೇಗು, ಅಸಿಡಿಟಿ, ಹೊಟ್ಟೆ ಉಬ್ಬರ ಮುಂತಾದ ತೊಂದರೆಗಳಿಗೆ ಒಳಗಾಗುತ್ತೇವೆ. ಹಿಂದೆಲ್ಲ ಹಬ್ಬ ಹುಣ್ಣಿಮೆಗಳಲ್ಲಿ ಮಾಡುತ್ತಿದ್ದ ಸೇರುಗಟ್ಟಲೆ ಬೇಳೆಯ ಹೋಳಿಗೆಗಳನ್ನು ಸೇವಿಸಿ ಅರಗಿಸಿಕೊಂಡ ಜನರು ಇದ್ದರು. ಈಗ ಒಂದೆರಡು ಹೋಳಿಗೆಗೆ ಸುಸ್ತಾಗಿ ಹೋಗುತ್ತಾರೆ. ಇದಕ್ಕೆಲ್ಲ ಕಾರಣ ಅವರ ದೇಹದ ಚಯಾಪಚಯ ಕ್ರಿಯೆಯಲ್ಲಿನ ವ್ಯತ್ಯಾಸಗಳು ಮತ್ತು ಅಜೀರ್ಣ.

ಅಜೀರ್ಣ ಎಂದರೆ ನಾವು ತಿಂದ ಆಹಾರವು ನಮಗೆ ದಕ್ಕದೆ ಹೋಗುವುದು ಇಲ್ಲವೇ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದು. ಅಜೀರ್ಣಕ್ಕೆ ಹಲವಾರು ಕಾರಣಗಳು ಉಂಟು. ಅವುಗಳೆಂದರೆ

* ಅತಿಯಾದ ಆಹಾರ ಸೇವನೆ, ಮಸಾಲೆಯುಕ್ತವಾದ ಆಹಾರ ಸೇವನೆ ಮತ್ತು ಉಪವಾಸದ ನಂತರ ಹೆಚ್ಚು ಆಹಾರ ಸೇವನೆಗಳು ಅಜೀರ್ಣಕ್ಕೆ ಕಾರಣವಾಗುತ್ತದೆ. ಆಹಾರವನ್ನು ದೇಹದ ಅವಶ್ಯಕತೆಗೆ ಬೇಕಾದಷ್ಟು ಸೇವಿಸಿದರೆ ಅದು ಅಮೃತವಾಗಿಯೂ,ಅತಿಯಾಗಿ ಸೇವಿಸಿದರೆ ಅದು ವಿಷವಾಗಿಯೂ ಪರಿಣಮಿಸುತ್ತದೆ.

* ಅತಿಯಾದ ಧೂಮಪಾನ ಮತ್ತು ಮಧ್ಯಪಾನಗಳು ಕೂಡ ಅಜೀರ್ಣಕ್ಕೆ ಕಾರಣವಾಗುತ್ತದೆ. ಮಧ್ಯಪಾನ ಮಾಡುವ ವ್ಯಕ್ತಿಯಲ್ಲಿ ವಚನ ಶಕ್ತಿ ಕಡಿಮೆಯಾಗುತ್ತದೆ.

*ಚಹ, ಕಾಫಿಯಂತಹ ಕೆಫೀನುಗಳ ಅತಿಯಾದ ಸೇವನೆಯಿಂದ ವ್ಯಕ್ತಿಯಲ್ಲಿ ಅಜೀರ್ಣತೆ ಉಂಟಾಗುತ್ತದೆ.

*ಮಸಾಲೆ ಭರಿತ, ಕೊಬ್ಬು ಹೆಚ್ಚಿರುವ ಚೀಸ್ ಗಳು, ವನಸ್ಪತಿ ಕೊಬ್ಬುಗಳು ಮತ್ತು ಕಲುಷಿತ ಎಣ್ಣೆಯನ್ನು ಹೊಂದಿರುವ,ಈಗಾಗಲೇ ಕರಿಯಲು ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸುವುದು ಅಜೀರ್ಣಕ್ಕೆ ಕಾರಣವಾಗುತ್ತದೆ.

*ಅತಿಯಾದ ದಣಿವು ಆಯಾಸ ಮತ್ತು ಸರಿಯಾದ ಪ್ರಮಾಣದಲ್ಲಿ ನಿದ್ರೆ ಆಗದೇ ಇದ್ದಾಗ ವ್ಯಕ್ತಿಯು ಅಜೀರ್ಣ ಸಮಸ್ಯೆಯಿಂದ ಬಳಲುತ್ತಾನೆ.

* ಉದ್ವೇಗ ಮತ್ತು ಖಿನ್ನತೆಯ ರೋಗಗಳಿಂದ ಬಳಲುತ್ತಿರುವ ಮತ್ತು ಆ ಲಕ್ಷಣಗಳನ್ನು ಹೊಂದಿರುವವರಲ್ಲಿಯೂ ಕೂಡ ಅಜೀರ್ಣಕ್ಕೆ ಕಾರಣವಾಗುತ್ತದೆ.

* ಬಸಿರಿನ ಸಮಯದಲ್ಲಿ ಹೆಣ್ಣು ಮಕ್ಕಳಲ್ಲಿ ಅಜೀರ್ಣ ಸಮಸ್ಯೆ ಹೆಚ್ಚು. ಬಯಕೆ ಎಂದು ಹೆಣ್ಣು ಮಕ್ಕಳು ತುಸು ಹೆಚ್ಚೇ ಉಪ್ಪು, ಹುಳಿ, ಖಾರದ ಪದಾರ್ಥಗಳನ್ನು ತಿನ್ನುವುದು ಮತ್ತು ಆ ಸಮಯದಲ್ಲಿ ವ್ಯಾಯಾಮ, ನಡಿಗೆಗಳನ್ನು ಮಾಡದಿರುವುದು, ರಾತ್ರಿಯಲ್ಲಿ ಅಜೀರ್ಣದಿಂದಾಗಿ ನಿದ್ದೆ ಇಲ್ಲದೆ ಒದ್ದಾಡುವುದು ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿರುತ್ತದೆ

* ವ್ಯಾಯಾಮ ರಹಿತ, ಆಲಸಿ ಜೀವನ ಶೈಲಿಯನ್ನು ಹೊಂದಿರುವುದು.

* ಖಾಯಿಲೆಗಳಿಂದ ಬಳಲುತ್ತಿರುವಾಗ ನಿವಾರಣೆಗೆ ಬಳಸುತ್ತಿರುವ ಕೆಲ ಔಷಧಿಗಳು ಕೂಡ ವ್ಯಕ್ತಿಯಲ್ಲಿ ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ.

ಅಜೀರ್ಣ ಸಮಸ್ಯೆ ಇಂದು ನಿನ್ನೆಯದಲ್ಲ..... ಕಾರಣ, ಪರಿಹಾರ ಎಲ್ಲವೂ ಎಲ್ಲರಿಗೂ ಗೊತ್ತು. ಆದರೆ ಅವುಗಳನ್ನು ಪಾಲಿಸುವವರು ಇಲ್ಲವೇ ಇಲ್ಲ ಎಂದು ಹೇಳಬಹುದು.

ನಮ್ಮ ಪ್ರಾಚೀನ ಪರಂಪರೆಯ ಮೂಲವಿರುವುದೇ ಆಯುರ್ವೇದದಲ್ಲಿ. ಆಯುರ್ವೇದದಲ್ಲಿ ಎಲ್ಲಾ ರೋಗಗಳಿಗೆ ಮೊದಲ ಪರಿಹಾರವಾಗಿ ಹೇಳುವುದು *ಲಂಘನಂ ಪರಮೌಷಧಂ* ಎಂದು.

ಕಣ್ಣಿನ ಮುಂದೆ ಇರುವ ಮಾಂಸದ ರಾಶಿಯು ಮೃಷ್ಟಾನ್ನ ಭೋಜನದಂತೆ ತೋರಿದರು ಯಾವುದೇ ಪ್ರಾಣಿಗಳು ಹೊಟ್ಟೆ ತುಂಬಿದ ಮೇಲೆ ಅದರತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಮತ್ತೆ ಹಸಿವಾಗುವವರೆಗೂ ಆಹಾರದ ಬಗ್ಗೆ ಯೋಚಿಸುವುದಿಲ್ಲ. ಈ ರೀತಿ ಪ್ರಾಣಿ ಪಕ್ಷಿಗಳು ಕಾಳಜಿ ಮಾಡಿಕೊಳ್ಳುತ್ತವೆ ಅಥವಾ ಅದೇ ಅವುಗಳ ಜೀವನ ಶೈಲಿ.

ಅದಕ್ಕೆ ತದ್ವಿರುದ್ಧವಾದ ಜೀವನ ಶೈಲಿಯನ್ನು ಮನುಷ್ಯ ಹೊಂದಿದ್ದಾನೆ. ಕಣ್ಣಿಗೆ ಕಾಣುವ ಬಣ್ಣ ಬಣ್ಣದ ಎಲ್ಲ ಆಹಾರ ಪದಾರ್ಥಗಳು ಆತನಿಗೆ ಬೇಕು. ಪದೇ ಪದೇ ಪ್ರಸಾರವಾಗುವ ಕಣ್ಸೆಳೆಯುವ ಜಾಹೀರಾತುಗಳಲ್ಲಿ ತೋರಿಸುವ ಎಲ್ಲಾ ಆಹಾರ ಪದಾರ್ಥಗಳು ಒಂದು ಫೋನ್ ಕರೆಯಲ್ಲಿ ದೊರೆಯುತ್ತಿರುವಾಗ, ಮನೆಗೆ ಬಂದು ಮುಟ್ಟುತ್ತಿರುವಾಗ ಮನುಷ್ಯ ಮತ್ತಷ್ಟು ಆಲಸಿಯಾಗುತ್ತಿದಾನೆ. ಎಲ್ಲವೂ ಕೈಗೆಟಕುವ ದರದಲ್ಲಿ ಇಲ್ಲವೇ ಕಂಪನಿಗಳು ಕೊಡ ಮಾಡುವ ಕೂಪನ್ಗಳ ಮೂಲಕ, ತಮ್ಮ ಉಳಿಯುವಿಕೆಗಾಗಿ ಕಂಪನಿಗಳನ್ನು ಆಮಿಷಕ್ಕೊಡ್ಡುವ, ಕಂಪನಿಗಳಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿರುವ ದೊಡ್ಡ ದೊಡ್ಡ ಆಹಾರ ತಯಾರಿಕಾ ಉದ್ಯಮಗಳು ಒಂದೇ ಎರಡೇ ಮನುಷ್ಯನ ಲಾಲಸೆಗೆ. ಲಾಭದ ಆಸೆಗೆ ಕಡಿಮೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಉಪಯೋಗಿಸಿ ರುಚಿಯನ್ನು ಹೆಚ್ಚಿಸಲು ವಿಧವಿಧದ ಟೇಸ್ಟಿಂಗ್ ಪೌಡರ್ ಗಳನ್ನು ಬಳಸುವ ಆಹಾರ ಉದ್ಯಮಗಳು ನೋಡುವುದು ಗ್ರಾಹಕನ ಜೇಬಲ್ಲಿರುವ ದುಡ್ಡನ್ನೇ ಹೊರತು ಆರೋಗ್ಯವನ್ನಲ್ಲ ಎಂಬುದನ್ನು ಅರಿತಿದ್ದರು ಹಗಲು ಕಂಡ ಬಾವಿಗೆ ಇರುಳು ಬೀಳುತ್ತಿರುವ ಜನರು ಇರುವವರೆಗೂ ಈ ಉದ್ಯಮಗಳು ಮತ್ತೆ ಮತ್ತೆ ಬೇರೆ ಬೇರೆ ಅವತಾರಗಳಲ್ಲಿ ಹುಟ್ಟುತ್ತಲೇ ಇರುತ್ತವೆ.


ದೈಹಿಕ ಅನಾರೋಗ್ಯ, ಕಿರಿಕಿರಿಗಳು ಮಾನಸಿಕ ತೊಂದರೆಯನ್ನು ಉಂಟುಮಾಡುವುದರಿಂದ ನಾವು ಶತಾಯಗತಾಯ ನಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಲೇಬೇಕು. ಆ ನಿಟ್ಟಿನಲ್ಲಿ ಸ್ವಸ್ಥ ಆರೋಗ್ಯಕರ ಹವ್ಯಾಸಗಳನ್ನು ನಮ್ಮದಾಗಿಸಿಕೊಳ್ಳಬೇಕು.


ಅಜೀರ್ಣಕ್ಕೆ ಪರಿಹಾರಗಳು... ನಮ್ಮ ಪ್ರಾಚೀನ ಆರೋಗ್ಯ ಪದ್ಧತಿಯಂತೆ.... ಹಿತ ಭುಕ್,ಮಿತ ಭುಕ್, ಋತು ಭುಕ್ ಅಂದರೆ ಋತುಗಳಿಗನುಸಾರವಾಗಿ ಹಿತವಾದ ಮತ್ತು ಮಿತವಾದ ಆಹಾರವನ್ನು ಸೇವಿಸುವುದು.

ಬೇಸಿಗೆಯ ಸಮಯದಲ್ಲಿ ಬಾಯಾರಿಕೆ ಹೆಚ್ಚಾಗಿರುತ್ತದೆ. ಆಹಾರ ಸೇವನೆಯ ಪ್ರಮಾಣ ಕಡಿಮೆಯಾಗುತ್ತದೆ. ಅದೇ ಚಳಿಗಾಲದಲ್ಲಿ ದೇಹದಲ್ಲಿ ಚಯಾಪಚಯ ಕ್ರಿಯೆಗಳು 

ಹೆಚ್ಚಾಗುವುದರಿಂದ ಪದೇಪದೇ ಹಸಿವೆಯಾಗುತ್ತದೆ. ಆಗ ಆಹಾರ ಸೇವನೆಯ ಪ್ರಮಾಣ ಹೆಚ್ಚು. 


ಇನ್ನು ತಾಲೂಕು ಕೇಂದ್ರಗಳು, ಜಿಲ್ಲಾ ಕೇಂದ್ರಗಳು ಮೆಟ್ರೋ ಸಿಟಿಗಳಲ್ಲಿ ಹೆಜ್ಜೆಗೊಂದರಂತೆ ಇರುವ ಪಿಜ್ಜಾ ಸೆಂಟರ್ಗಳು, ಪಾನಿಪುರಿ ಸ್ಟಾಲ್ಗಳು ಸಿದ್ದ ಆಹಾರಗಳ ಸ್ಟಾಲ್ಗಳು, ದೋಸಾ ಸೆಂಟರ್ಗಳು, ಖಾನಾವಳಿಗಳು ನಮ್ಮ ಜಿಹ್ವಾಚಾಪಲ್ಯಕ್ಕೆ ನೀರೆರೆಯುತ್ತವೆ. ಇವತ್ತೊಂದು ದಿನ ತಿಂದುಬಿಡುತ್ತೇನೆ ನಾಳೆಯಿಂದ ಕಟ್ಟುನಿಟ್ಟಾಗಿ ಡಯಟ್ ಪಾಲಿಸುತ್ತೇನೆ ಎಂಬ ಆಶಯ ನಾಳೆಗಳಲ್ಲಿಯೇ ಉಳಿದುಬಿಡುತ್ತದೆ. ಆದ್ದರಿಂದ ನೋ ಎಂಬುದರ ಅರ್ಥ ಬೇಡ ಎಂಬುದು ಮಾತ್ರ ಎಂಬುದನ್ನು ಅರಿತು ಕಡ್ಡಾಯವಾಗಿ ಇಲ್ಲವೇ ತಿಂಗಳಿಗೊಮ್ಮೆ ಮಾತ್ರ ಎಂದು ನಮಗೆ ನಾವೇ ಕಡಿವಾಣ ಹಾಕಿಕೊಳ್ಳಬೇಕು. ಈ ಮೂಲಕ ಅಜೀರ್ಣಕ್ಕೆ ತೆರೆ ಎಳೆಯಬೇಕು.

ಕಾಯಿಲೆಗಳಿಗೆ ಮದ್ದು ಹುಡುಕಬಹುದು ಆದರೆ ಖಾಯಿಲೆಗಳಲ್ಲದ ಕಾಯಿಲೆಗಳು ನಮ್ಮನ್ನು ಇನ್ನಿಲ್ಲದಂತೆ ಹಿಂಡಿ ಹಿಪ್ಪೆ ಮಾಡುತ್ತವೆ.ಅಜೀರ್ಣವೂ ಕೂಡ ಅಂತಹದೇ ಕಾಯಿಲೆಯಲ್ಲದ ಕಾಯಿಲೆ.... ಅಜೀರ್ಣವನ್ನು ಮಟ್ಟಕ್ಕೆ ತರಲು ಹೊಟ್ಟೆಗೆ ನಿಯಮಿತ ಆಹಾರ ಸೇವನೆ, ಶುಚಿ ರುಚಿಯಾದ ಮನೆಯ ಆಹಾರ ಸೇವನೆಯ ಪದ್ಧತಿಗಳನ್ನು ಹಾಕಿಕೊಳ್ಳಬೇಕು.

ಇತ್ತೀಚಿಗೆ ಟ್ರೆಂಡಿಂಗ್ ಆಗಿರುವ ಈಟ ಎಟ್ ಏಟ್ ಅಂದರೆ ರಾತ್ರಿ ಎಂಟಕ್ಕೆ ಊಟ ಮುಗಿಸಿ ಎಂಬುದನ್ನು ಸಾವಿರಾರು ವರ್ಷಗಳ ಹಿಂದೆಯೇ ಪಾಲಿಸುತ್ತಿದ್ದ ಭಾರತ ಭೂಮಿ ನಮ್ಮದು. ಒಟ್ಟು ದಿನದ 24 ಗಂಟೆಯನ್ನು ಮೂರು ಭಾಗವನ್ನಾಗಿಸಿ ಮುಂಜಾನೆ ಮತ್ತು ರಾತ್ರಿಯ ಆಹಾರ ಸೇವನೆಯಲ್ಲಿ 8 ಘಂಟೆಗಳ ಮಧ್ಯಂತರವಿದ್ದು ರಾತ್ರಿಯಿಂದ ಮುಂಜಾನೆಯವರೆಗೆ 16 ಗಂಟೆಗಳ ಕಾಲ ಏನನ್ನು ಸೇವಿಸದೇ ಇರುವುದು ಇಂಟರ್ಮಿಟೆಂಟ್ ಫಾಸ್ಟಿಂಗ್ ಕೂಡ ನಮ್ಮದೇ ಪ್ರಾಚೀನ ಪದ್ಧತಿ. ಕೇವಲ 40-50 ವರ್ಷಗಳ ಹಿಂದೆ ಕೂಡ ಚಾಲ್ತಿಯಲ್ಲಿದ್ದ ಮುಂಜಾನೆ ಮತ್ತು ಇಳಿ ಮಧ್ಯಾಹ್ನದ ಹೊತ್ತಿನ ಆಹಾರ ಸೇವನೆಯು ಮಧ್ಯಂತರ ಆಹಾರ ಸೇವನಾ ಪದ್ಧತಿಯಲ್ಲದೆ ಮತ್ತಿನ್ನೇನು!!


ಮೇಲಿನ ಎಲ್ಲ ಅಂಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಅಜೀರ್ಣವನ್ನು ಒದ್ದೋಡಿಸಬಹುದು.... ಹೂ೦ ಅಂತೀರಾ ಊಹು0 ಅಂತೀರಾ. ತೀರ್ಮಾನ ನಿಮ್ಮದು.

-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top