ಪತ್ರಿಕೆಗಳು ಸಮಾಜದ ಕನ್ನಡಿಯಿದ್ದಂತೆ. ಒಂದಿಡೀ ಸಮುದಾಯವನ್ನು, ಒಂದಿಡೀ ದೇಶವನ್ನು, ಒಂದಿಡೀ ಜಗತ್ತನ್ನು ಏಕಕಾಲದಲ್ಲಿ ಮತ್ತು ಸಾಮೂಹಿಕವಾಗಿ ಒಂದೇ ಬಾರಿಗೆ ಎಚ್ಚರಿಸಬಲ್ಲ ಏಕೈಕ ಸಮೂಹ ಸಂವಹನ ಶಕ್ತಿ ಕೇಂದ್ರಗಳೇ ಪತ್ರಿಕೆಗಳು. ಒಂದು ಉತ್ತಮ ದಿನ ಪತ್ರಿಕೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದರೆ ಆ ಸಮಾಜ ಆರೋಗ್ಯಯುತ ಸಮಾಜ ವಾಗಿ ಪರಿವರ್ತಿತವಾಗುತ್ತದೆ. ಕೆಲವೊಮ್ಮೆ ಸಮಾಜದ ಜನರ ಕೀಳು ಮಟ್ಟದ ಯೋಚನೆಗಳಿಗೆ, ಮೂಢ ನಂಬಿಕೆಗಳಿಗೆ, ಸಂಕುಚಿತ ಮನಸ್ಥಿತಿಗೆ ಕಡಿವಾಣ ಹಾಕುವ, ಹೊಸ ಬೆಳಕು ತೋರುವ ಮತ್ತು ಆ ದಿಶೆಯಲ್ಲಿ ನಡೆಯುವ ಕಾರ್ಯವನ್ನು ಕೂಡ ಪತ್ರಿಕೆಗಳು ಮಾಡುತ್ತವೆ. ಪತ್ರಿಕೆಗಳಿಗೆ ಸುಮಾರು ಐನೂರು ವರ್ಷಗಳ ಇತಿಹಾಸವಿದೆ. ರೋಮನ್ ಸಾಮ್ರಾಜ್ಯದ ಇತಿಹಾಸದಿಂದಲೇ ಪತ್ರಿಕೋದ್ಯಮವೂ ಪ್ರಾರಂಭವಾಯಿತು ಎಂದೂ ಐತಿಹ್ಯಗಳೂ ಇವೆ. ಐತಿಹಾಸಿಕ ಮತ್ತು ದೈನಂದಿನ ವಿಷಯಗಳನ್ನ ಆಯಾ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಪತ್ರಿಕೆಗಳನ್ನು 2 ಭಾಗವಾಗಿ ಗುರುತಿಸಬಹುದು ದೇಸಿಯ ಪತ್ರಿಕೋದ್ಯಮ ಇನ್ನೊಂದು ಐತಿಹಾಸಿಕ ಪತ್ರಿಕೋದ್ಯಮ ವಿಭಾಗ. ಪತ್ರಿಕೆಗಳು ಆಯಾ ದೇಶದ ರಾಜಕೀಯ, ಐತಿಹಾಸಿಕ, ಭಾವನಾತ್ಮಕ, ಪಾರಮಾರ್ಥಿಕ, ಆರ್ಥಿಕ, ವೈಜ್ಞಾನಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ತಾತ್ವಿಕ ವಿಷಯಗಳ ಕುರಿತು ಬರೆಯುವುದರ ಜೊತೆಜೊತೆಗೆ ಪ್ರಸ್ತುತ ಸಾಮಾಜಿಕ ಬದಲಾವಣೆಗಳು ಮತ್ತು ದೈನಂದಿನ ಆಗುಹೋಗುಗಳ ಕುರಿತು ವಸ್ತುನಿಷ್ಠ ವರದಿಯನ್ನು ಪ್ರಕಟಿಸುತ್ತವೆ ಮತ್ತು ಸರಕಾರಗಳನ್ನು ಎಚ್ಚರಿಸುವ ವಿರೋಧ ಪಕ್ಷಗಳ೦ತೆ (ವಾಚ್ ಡಾಗ್‌ಗಳಾಗಿ) ಯೂ ಕಾರ್ಯನಿರ್ವಹಿಸುತ್ತವೆ.
ಭಾರತದ ಮತ್ತು ಕರ್ನಾಟಕದ ಇತಿಹಾಸದಲ್ಲಂತೂ ಪತ್ರಿಕೆಗಳು ಯಾವತ್ತೂ ಜನಜೀವನದ ಮೇಲೆ ಮಹತ್ತರ ಪ್ರಭಾವವನ್ನು ಬೀರಿದವು. ಭಾರತದ ಮೊತ್ತ ಮೊದಲ ಪತ್ರಿಕೆ ದಿ ಹಿಕ್ಕೀಸ್ ಗೆಜೆಟ್ ಅಥವಾ ಬಂಗಾಲದ ಗೆಜೆಟ್ 1780 ರಲ್ಲಿ ಬ್ರಿಟಿಷ್ ವ್ಯಕ್ತಿ ಜೇಮ್ಸ್ ಆಗಸ್ಟಸ್ ಹಿಕ್ಕಿ ಇಂದ ಪ್ರಾರಂಭವಾಯಿತು. ಮುಂದೆ ರಾಜಾ ರಾಮ್ ಮೋಹನ್ ರಾಯರು 3 ದೇಶೀಯ ಪತ್ರಿಕೆಗಳನ್ನು ಆರಂಭಿಸುವುದರ ಮೂಲಕ ಪತ್ರಿಕೋದ್ಯಮದ ಮೂಲಕ ಭಾರತದ ಸಾರ್ವಜನಿಕ ಮತ್ತು ರಾಜಕೀಯ ಇತಿಹಾಸದ ದಿಕ್ಕನ್ನು ಬದಲಿಸಿದರು. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರು ತಮ್ಮ ಹರಿಜನ ಪತ್ರಿಕೆಯಲ್ಲಿ ಸತ್ಯ, ಅಹಿಂಸೆ ಮತ್ತು ಸ್ವತಂತ್ರ್ಯ ಸಂಗ್ರಾಮದ ಕುರಿತು ಅನೇಕ ವಿಷಯಗಳನ್ನು ಪ್ರಕಟಿಸುತ್ತಾ ದೇಶದ ಜನತೆಯಲ್ಲಿ ಸ್ವಾತಂತ್ರ್ಯ ಪ್ರೇಮವನ್ನು ಬಿತ್ತಿದರು. ಬಾಲಗಂಗಾಧರನಾಥ ತಿಲಕರು ಇನ್ನೊಂದು ಹೆಜ್ಜೆ ಮುಂದೆ ಹೋಗಿ 'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು' ಎಂದು ತಮ್ಮ ಸ್ವರಾಜ್ಯ ಪತ್ರಿಕೆಯಲ್ಲಿ ಹೇಳಿಕೆಗಳನ್ನು ಕೊಟ್ಟರಲ್ಲದೆ ಇಡೀ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಬೆನ್ನೆಲುಬಾಗಿ ಪತ್ರಿಕೆಗಳನ್ನು ನಿಲ್ಲಿಸಿದರು. ಇನ್ನು ಕರ್ನಾಟಕದಲ್ಲಿ ಹೆನ್ರಿ ಮೋಗ್ಲಿಂಗ್, ಎಂ ವೆಂಕಟಕೃಷ್ಣಯ್ಯ, ಯಜಮಾನ್ ವೀರಬಸಪ್ಪ, ಡಿ ವಿ ಗುಂಡಪ್ಪ, ತಿ.ತಾ. ಶರ್ಮಾ, ಪಿ. ಆರ್ ರಾಮಯ್ಯ, ಟಿಎಸ್ ಆರ್ ರಾವ್ ಎನ್ ಎಸ್ ಹರ್ಡಿಕರ್, ಬಿ. ಪುಟ್ಟಸ್ವಾಮಯ್ಯ, ಮೊಹರೆ ಹನುಮಂತರಾಯರು ಬಿಎನ್ ಗುಪ್ತ ಇವರೆಲ್ಲರೂ ದೇಶೀಯ ಪತ್ರಿಕೋದ್ಯಮದ ದೈತ್ಯರು.
'ಮಂಗಳೂರು ಸಮಾಚಾರ'(೧೮೪೩) ಕ್ರಿಶ್ಚಿಯನ್ ಮಶಿನರಿಗಳು ಆರಂಭಿಸಿದ ಪತ್ರಿಕೆಯಾದರೆ, 'ಕರ್ನಾಟಕ ಪ್ರಕಾಶಿದ'(1859) ಹಳೆ ಮೈಸೂರು ಭಾಗದ ಮೊದಲ ದಿನಪತ್ರಿಕೆ ಎಂದು ಡಿ ವಿ ಗುಂಡಪ್ಪನವರು, ಬಳ್ಳಾರಿಯಲ್ಲಿ ನಾಡಿಗ ಕೃಷ್ಣಮೂರ್ತಿಯವರು ಕನ್ನಡ ಸಮಾಚಾರ ಎಂಬ ಪತ್ರಿಕೆಯನ್ನು 1843ರಲ್ಲಿ ಹೊರತಂದರು. ಮೈಸೂರು ಗೆಜೆಟ್ (1885) ಹಿತಬೋಧಿನಿ (1881), ವೃತ್ತಾಂತ ಚಿಂತಾಮಣಿ (1885), ಸೂರ್ಯೋದಯ ಪ್ರಕಾಶಿಕ ಮತ್ತು ಕರ್ನಾಟಕ ಕೇಸರಿ (1888), ಕನ್ನಡ ನಡೆಗನ್ನಡಿ (1959) ಇವೆಲ್ಲವೂ 19ನೇ ಶತಮಾನದ ಮುಂಚಿನ ಪತ್ರಿಕೆಗಳಾದರೆ 19ನೆಯ ಶತಮಾನದ ಹೊಸ್ತಿಲಲ್ಲಿ ಮೈಸೂರು ಸ್ಟಾರ್, ಒಕ್ಕಲಿಗ ಪತ್ರಿಕೆ, ಸಮಾಚಾರ ಸಂಗ್ರಹ, ಮೇಲ್, ಹೀರೋ, ಮೈಸೂರು ಟೈಮ್ಸ್, ಕರ್ಣಾಟಕ, ವಿಶ್ವಕರ್ಣಾಟಕ, ತಾಯಿನಾಡು ಜನನಿ ಮುಂತಾದ ಪತ್ರಿಕೆಗಳು ಪ್ರಾರಂಭವಾದವು. ಮರಾಠಿ ಪ್ರಾಬಲ್ಯದ ಬೆಳಗಾವಿ ಹುಬ್ಬಳ್ಳಿ ಧಾರವಾಡಗಳಲ್ಲಿ ಕೂಡಾ ಮರಾಠಿ ವೃತ್ತಪತ್ರಿಕೆಗಳು ಪ್ರಾರಂಭವಾದವು.
ಪ್ರಾದೇಶಿಕ ಪತ್ರಿಕೆಗಳಾದ ಲೋಕ ಶಿಕ್ಷಣ ಟ್ರಸ್ಟ್ನ ಕರ್ನಾಟಕ ವ್ರತ ಲೋಕಬಂಧು ರಾಜಹಂಸ ಧನಂಜಯ ಪತ್ರಿಕೆಗಳು ಬ್ರಿಟಿಷರ ವಿರುದ್ಧ ಸಾರ್ವಜನಿಕರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಿ ಉತ್ತೇಜಿಸಿದವು. ಮುದವೀಡು ಕೃಷ್ಣರಾಯರು ಉತ್ತರ ಕರ್ನಾಟಕದ (ಅಂದಿನ ಮುಂಬಯಿ ಪ್ರಾಂತ್ಯದ) ದೈತ್ಯ ಪತ್ರಿಕೋದ್ಯಮದ ಶಕ್ತಿ ಎನಿಸಿದರು. ಉತ್ತರ ಕರ್ನಾಟಕದಲ್ಲಿ ಸಂಯುಕ್ತ ಕರ್ನಾಟಕ ಕರ್ನಾಟಕ ಏಕೀಕರಣದಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿತ್ತು ಕೇವಲ ರಾಜಕಾರಣಕ್ಕಷ್ಟೇ ಅಲ್ಲದೆ ರೈತಪರ ಮತ್ತು ಸಾರಿಗೆ ಮತ್ತು ರೈಲುಮಾರ್ಗ ಮತ್ತು ರೇಲ್ವೆಗಳ ಓಡಾಟದ ವಿಷಯದಲ್ಲಿ ಅತ್ಯಂತ ಹೆಚ್ಚಿನ ಕಾಳಜಿ ವಹಿಸಿತು. ಸಂಯುಕ್ತ ಕರ್ನಾಟಕ ಉತ್ತರ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿತ್ತು. ಸಂಯುಕ್ತ ಕರ್ನಾಟಕದ ಶಾಮರಾಯರು ಎಂದರೆ ವಿಧಾನಸೌಧವೂ ಗಡಗಡ ನಡುಗುತ್ತಿತ್ತು ಎಂಬ ಮಾತುಗಳೂ ಇವೆ. ಇದೆಲ್ಲವೂ ಭಾರತ ಮತ್ತು ಕರ್ನಾಟಕದ ಪತ್ರಿಕೋದ್ಯಮವು ನಡೆದುಬಂದ ರಾಜಮಾರ್ಗದ ವಿಷಯವಾದರೆ ಪತ್ರಿಕೋದ್ಯಮ ಸಾಮಾಜಿಕವಾಗಿ ಬೀರಿದ ಪರಿಣಾಮಗಳ ಕುರಿತು ಕೆಲ ವಿಷಯಗಳನ್ನು ಪ್ರಸ್ತಾಪಿಸಲೇಬೇಕು. ಪತ್ರಿಕೋದ್ಯಮ ನಿಂತಿರುವುದೇ ಆಯಾ ಪತ್ರಿಕೆಗಳ ಮಾಲೀಕರ ಮೇಲೆ. ವಸ್ತುನಿಷ್ಠ ವಿಷಯ ಸಂಗ್ರಹಣೆಯ ಜೊತೆಜೊತೆಗೆ, ಅಚ್ಚುಮೊಳೆ ಜೋಡಿಸುವುದರಿಂದ ಹಿಡಿದು ಪತ್ರಿಕೆಯು ಮುದ್ರಣವಾಗಿ, ಎಲ್ಲ ಭಾಗ ಊರುಗಳಿಗೆ ಸಾರಿಗೆ ವ್ಯವಸ್ಥೆಯ ಮೂಲಕ ಸಾಗಿ ಮನೆ ಮನೆಯನ್ನು ಮುಟ್ಟಲು ಕ್ರಮಿಸುವ ಹಾದಿ ಕೇವಲ ದೀರ್ಘ ಮಾತ್ರವಲ್ಲ ತ್ರಾಸದಾಯಕವೂ ಹೌದು. ಅತ್ಯಂತ ಹೆಚ್ಚು ಶ್ರಮ ಬಯಸುವ ಆದರೆ ಅತ್ಯಂತ ಕಡಿಮೆ ಲಾಭ ಎಂದು ಹೇಳಲು ಸಾಧ್ಯವಿಲ್ಲ, ಲಾಭವೇ ಇಲ್ಲದ ಆದರೂ ಮೌಲ್ಯಯುತ ಜೀವನ ಸಾಗಿಸಲು ಸಾಧ್ಯವಾಗಬಹುದಾದಷ್ಟು ಸಂಪಾದನೆಯನ್ನು ಈ ಪತ್ರಿಕೆಗಳು ಹೊಂದಬಹುದು ಅಷ್ಟೆ. ಆದರೂ ಪತ್ರಿಕೆಗಳು ಆರಂಭವಾದಾಗಿನಿಂದಲೂ ಇಲ್ಲಿಯವರೆಗೆ ಸಮಾಜದ ವಿವಿಧ ತಲೆಮಾರಿನಿಂದ ನಡೆದುಬಂದ ಅನೀತಿ, ಅತ್ಯಾಚಾರ, ಅಮಾನವೀಯ ಪದ್ದತಿಗಳು, ಆಕ್ರಮಣಶೀಲ ಮನೋಭಾವಗಳಿಂದ ಸಮಾಜವನ್ನು ರಕ್ಷಿಸುವ ಕೆಲಸವನ್ನು ಮಾಡಿವೆ.
ದೇಶದ ರಾಜ್ಯದ ಪ್ರಾದೇಶಿಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡುತ್ತಾ ತನ್ಮೂಲಕ ದೇಶದ ಪ್ರಗತಿಯಲ್ಲಿ ತಮ್ಮ ಪಾಲನ್ನು ಸಲ್ಲಿಸುತ್ತಲೇ ಇವೆ. ಇನ್ನೂ ಐತಿಹಾಸಿಕ ವಿಷಯಗಳು, ವೈಜ್ಞಾನಿಕ ಆವಿಷ್ಕಾರಗಳು, ಪ್ರತಿಭೆಗಳ ಪರಿಚಯ, ಕುಂದುಕೊರತೆಗಳ ದೂರು, ಸಾಹಿತ್ಯಿಕ ಸಾಂಸ್ಕೃತಿಕ ವಿಷಯಗಳು, ಕೃಷಿಯಲ್ಲಿ ನವೀನ ವಿಷಯಗಳು, ಆರೋಗ್ಯ ಅಲಂಕಾರ ಗೃಹೋಪಯೋಗಿ ವಿಷಯಗಳು, ಕ್ರೀಡೆ, ರಾಜಕೀಯ, ಮಠಾಧೀಶರ ವಿವಿಧ ಲೇಖಕರ ತರಹೇವಾರಿ ಬರಹಗಳು ಪತ್ರಿಕೆಗಳನ್ನು ಶ್ರೀಮಂತಗೊಳಿಸಿವೆ. ಯುದ್ಧಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಪತ್ತುಗಳು ಪ್ರಾದೇಶಿಕ ಅವಘಡಗಳು ಮತ್ತು ಪ್ರಾಕೃತಿಕ ಅನಾಹುತಗಳಾದ ಭೂಕಂಪ ಬರ ನೆರೆ ಸುನಾಮಿಯಂತಹ ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ಬರುವ ಲೇಖನಗಳು ಮಾನವಿಯತೆಯ ಮತ್ತೊಂದು ಮುಖವನ್ನು ಬಯಲು ಮಾಡುತ್ತವೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪತ್ರಿಕೆಯ ವಿಸ್ತೃತ ವರದಿಗಳನ್ನು ಓದಿ ಕೋಟ್ಯಂತರ ಜನರು ಕಾರ್ಗಿಲ್ ನಿಧಿಗೆ ಪತ್ರಿಕೆಗಳ ಮೂಲಕ ಹಣ ಸಂದಾಯ ಮಾಡಿದರು. 1980ರಲ್ಲಿ ಗೋಕಾಕ್ ವರದಿಯ ಪ್ರಕಾರ ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಿ ಇರಬೇಕೆಂಬ ಮತ್ತು ಕನ್ನಡವೇ ಮೊತ್ತಮೊದಲ ಆಯ್ಕೆಯಾಗಿರಬೇಕು ಎಂಬ ಮಾಹಿತಿ ಪತ್ರಿಕೆಗಳ ಮೂಲಕ ಸಾರ್ವಜನಿಕರನ್ನು ಮುಟ್ಟಿದಾಗ ಅದು ಕರ್ನಾಟಕದ ಎಲ್ಲ ಗಣ್ಯರನ್ನು ಸಾಹಿತಿಗಳನ್ನು ಉದ್ಯಮಿಗಳನ್ನು ತನ್ಮೂಲಕ ಇಡೀ ಕರ್ನಾಟಕ ಜನತೆಯನ್ನು ಒಗ್ಗೂಡಿಸುತ್ತದೆ.
ಈ ವರದಿಯ ಜಾರಿಗಾಗಿ ಇಡೀ ಕರ್ನಾಟಕದಾದ್ಯಂತ ಚಳವಳಿ ಹಮ್ಮಿಕೊಳ್ಳಲು ಆಗಿನ ಸರ್ಕಾರವು ಯಶಸ್ವಿಯಾಗಿದ್ದು ಗೋಕಾಕ್ ವರದಿಯು ಜಾರಿಯಾಗಿದ್ದು ವಿದ್ಯುನ್ಮಾನ ದೃಶ್ಯಮಾಧ್ಯಮಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಥವಾ ಇಲ್ಲವೇ ಇಲ್ಲ ಎಂಬಂತಹ ಸಮಯದಲ್ಲಿ. ಇದು ಪತ್ರಿಕೆಯ ಅಂತ ಶಕ್ತಿ. ಮುಂದೆ ಹತ್ತೊಂಬತ್ ನೂರಾ ಎಂಭತ್ಮೂರರಲ್ಲಿ ಕೇಂದ್ರ ಸಚಿವೆ ಸರೋಜಿನಿ ಮಹಿಷಿಯವರ ಅಧ್ಯಕ್ಷತೆಯಲ್ಲಿ ವರದಿಯಾದ ಮಹಿಷಿ ವರದಿ ಕರ್ನಾಟಕದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕೆಂಬ ಹಕ್ಕೊತ್ತಾಯವು ನಡೆದು ಅದು ಕೂಡ ಭಾಗಶಃ ಜಾರಿಗೊಳ್ಳುವಲ್ಲಿ ಪತ್ರಿಕೆಗಳ ಪರಿಣಾಮಕಾರಿ ವರದಿಗಳು ಕಾರಣ. ಇತ್ತೀಚೆಗೆ ನಡೆದ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸುವ ಉದ್ಯಮದ ವಿರುದ್ಧದ ಪೋಸ್ಕೋ ಚಳುವಳಿ ಹೀಗೆ ಹತ್ತು ಹಲವು ಪ್ರಾದೇಶಿಕ ಚಳುವಳಿಗಳ ಉದ್ದೇಶ ಸಫಲವಾಗುವಲ್ಲಿ ಪತ್ರಿಕೆಗಳು ಹಿರಿದಾದ ಪಾತ್ರವನ್ನು ವಹಿಸಿವೆ. ಒಂದು ಪತ್ರಿಕೆ ಇಡೀ ಮನೆಯವರನ್ನ ಒಟ್ಟುಗೂಡಿಸುತ್ತದೆ, ಮನಸ್ಥಿತಿಯನ್ನು ಕೂಡ.
ಇನ್ನೊಂದು ಮಾತು ಪತ್ರಿಕೋದ್ಯಮಕ್ಕೆ ತನ್ನದೇ ಆದ ಸೀಮಿತ ಆದರೂ ಉಪಯುಕ್ತ ಚೌಕಟ್ಟು ಇರುವುದರಿಂದ ವಿಷಯಗಳನ್ನ ಪದೇಪದೆ ಹೇಳುವ, ವೈಪರೀತ್ಯಗಳನ್ನು ಪದೇಪದೆ ತೋರಿಸುವ, ಅನವಶ್ಯಕವಾಗಿ ಕಥೆ ಹೆಣೆಯುವ, ಟಿಆರ್‍ಪಿ ಗಾಗಿ ಯಾವುದೇ ಹಂತದವರೆಗೂ ಹೋಗುವ, ಸತ್ಯ ಮಿಥ್ಯಗಳ ನಡುವಿನ ಸಣ್ಣ ಎಳೆಯನ್ನು ದೂರೀಕರಿಸುವ, ಕೆಲವೊಮ್ಮೆ ಅತಿಯಾದ ಜಾತಿವಾದ, ಕೋಮುವಾದ, ಪಕ್ಷ ವಾದವನ್ನ ವೈಭವೀಕರಿಸುವ 24/7 ನಂತಹ ನ್ಯೂಸ್ ಚಾನೆಲ್‌ಗಳ ಭರಾಟೆಗಳ ನಡುವೆಯೂ ಪತ್ರಿಕೋದ್ಯಮ ತನ್ನ ಹಿರಿಮೆಯನ್ನು ಕಳೆದುಕೊಂಡಿಲ್ಲ. ನಿಖರವಾದ, ವಸ್ತು ನಿಷ್ಠ, ಅವಶ್ಯಕ ಮಾಹಿತಿಗಳಿಗೆ ಮಣೆ ಹಾಕುವ ಪತ್ರಿಕೋದ್ಯಮ ಫೀನಿಕ್ಸ್ ನ೦ತೆ. ಅದೆಷ್ಟೇ ಅಗ್ನಿಪರೀಕ್ಷೆಗಳನ್ನು ಎದುರಿಸಿದರೂ ಪುಟಕ್ಕಿಟ್ಟ ಚಿನ್ನದಂತೆ ಅಪರಂಜಿ ನಮ್ಮ ಪತ್ರಿಕೋದ್ಯಮ ಮತ್ತು ಪತ್ರಿಕಾ ಧರ್ಮ. ಹೊಳಪು ಕಡಿಮೆಯಾಗಿದ್ದರೂ ಚಿನ್ನ ಯಾವತ್ತಿದ್ದರೂ ಚಿನ್ನವೇ.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ