ಚಿಕ್ಕಮಗಳೂರು: ರಾಜ್ಯದಲ್ಲೇ ಅತೀ ಎತ್ತರದ ಗಿರಿ ಶಿಖರವಾದ ಮುಳ್ಳಯ್ಯನಗಿರಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ರೋಪ್‍ವೇ ನಿರ್ಮಿಸಲು ಸರ್ಕಾರ ಆಸಕ್ತಿ ತೋರಿಸುತ್ತಿರುವುದು ಈ ಸೂಕ್ಷ್ಮ ಪ್ರದೇಶಕ್ಕೆ ಮಾರಕವಾಗುವ ಲಕ್ಷಣಗಳಿವೆ.
ನಿಸರ್ಗ ಸೌಂದರ್ಯವನ್ನು ಹೊಂದಿರುವ ಹಾಗೂ ಪ್ರಾಣಿ-ಪಕ್ಷಿಗಳ ನಿರಾತಂಕ ಬದುಕಿಗೆ ಆವಾಸ ಸ್ಥಾನವೂ ಆಗಿರುವ ಮುಳ್ಳಯ್ಯನಗಿರಿ ಬೆಟ್ಟ ಪ್ರದೇಶದಲ್ಲಿ ರೋಪ್‍ವೇ ನಿರ್ಮಿಸಿ ಜನ, ವಾಹನದ ಭರಾಟೆಯನ್ನು ಹೆಚ್ಚಿಸಬಾರದೆಂದು ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ ಹಾಗೂ ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್ ನ ಡಿ.ವಿ. ಗಿರೀಶ್ ಇವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಳ್ಳಯ್ಯನಗಿರಿ ಸಮುದ್ರ ಮಟ್ಟದಿಂದ 6317 ಅಡಿ ಎತ್ತರದಲ್ಲಿರುವ ಹಲವು ಬೆಟ್ಟಗಳನ್ನೊಳಗೊಂಡಿರುವ ಗಿರಿಶ್ರೇಣಿ. ಈ ಶಿಖರ ಕೇವಲ ನಿಸರ್ಗ ಸೌಂದರ್ಯಕ್ಕೆ ಮೀಸಲಾಗಿಲ್ಲ. ಇದೊಂದು ಯಾತ್ರಾ ಸ್ಥಳ ಸಹ. ಪ್ರತೀ ವರ್ಷಏಪ್ರಿಲ್ ತಿಂಗಳಲ್ಲಿ ಸೀತಾಳಯ್ಯನಗಿರಿ ಸೇರಿದಂತೆ ಈ ಬೆಟ್ಟದಲ್ಲೂ ಜಾತ್ರೆ ನಡೆಯುತ್ತದೆ.
ಈ ಬೆಟ್ಟ ಶ್ರೇಣಿ ಚಂದ್ರದ್ರೋಣ ಪರ್ವತದ ಸಾಲಿಗೆ ಸೇರಿದ್ದು, ಇದು ಹಲವಾರು ನದಿಗಳಿಗೆ ಉಗಮ ಸ್ಥಾನವೂ ಆಗಿದೆ. ಅತ್ಯಂತ ವಿರಳವಾದ ಮತ್ತುಅಲ್ಲಿಗೇ ಸೀಮಿತವಾದ ಬಿಳಿ ಹೊಟ್ಟೆಯ ಶಾರ್ಟ್ ವಿಂಗ್ ಪಕ್ಷಿಗಳು, ಸ್ಕೇಲೀಥ್ರಶ್ ಪಕ್ಷಿಗಳು ಕಂಡು ಬರುತ್ತವೆ. ವಿಶೇಷವೆಂದರೆ, ಗಿಡುಗ ಮತ್ತು ಹದ್ದುಗಳ ಸಂತಾನಾಭಿವೃದ್ಧಿಗೂ ಚಳಿಗಾಲದಲ್ಲಿ ವಲಸೆ ಬರುತ್ತವೆ. ಭಾರದ್ವಾಜ ಪಕ್ಷಿಗಳನ್ನು ಕಾಣಬಹುದು. ಹುಲಿಯ ಓಡಾಟ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಾದ ಜಿಂಕೆ, ಕಡವೆ, ಕಾಡು ಕುರಿಗಳು ಕಾಣಸಿಗುತ್ತವೆ.
ಇತ್ತೀಚೆಗೆ ಪ್ರವಾಸೋದ್ಯಮ ಈ ಬೆಟ್ಟಸಾಲುಗಳಲ್ಲಿ ಅಧಿಕವಾಗಿದ್ದು, ಇದು ಅನಿಯಂತ್ರಿತವೂ ಆಗಿದೆ. ವಾರಾಂತ್ಯ ಹಾಗೂ ದೀರ್ಘ ರಜಾದಿನಗಳಲ್ಲಿ ಸಾವಿರಾರು ವಾಹನಗಳ ಭರಾಟೆ ಹಾಗೂ ಜನಜಂಗುಳಿಯಿಂದ ಕೂಡಿದ್ದು, ಈಗಾಗಲೇ ಈ ಬೆಟ್ಟ ಪ್ರದೇಶದಲ್ಲಿ ಘನತ್ಯಾಜ್ಯದ ಪ್ರಮಾಣವೂ ಮಿತಿ ಮೀರಿದೆ. ವನ್ಯಜೀವಿಗಳ ನಿರಾತಂಕ ಬದುಕಿಗೂ ಇವು ಮಾರಕವಾಗಿವೆ.
ಈಗ ಬರುತ್ತಿರುವ ಪ್ರವಾಸಿಗರ ಸಂಖ್ಯೆಯನ್ನೇ ವ್ಯವಸ್ಥಿತವಾಗಿ ನಿರ್ವಹಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಬರುವ ಪ್ರವಾಸಿಗರಲ್ಲಿ ಬಹುತೇಕ ಮಂದಿ ಈ ನಿಸರ್ಗ ಸಿರಿಯ ಪ್ರದೇಶಗಳನ್ನು ತಮ್ಮ ಮೋಜು-ಮಸ್ತಿಗಾಗಿ ಬಳಸಿಕೊಳ್ಳುತ್ತಿದ್ದು, ಪ್ಲಾಸ್ಟಿಕ್ ಚೀಲ ಹಾಗೂ ನೀರಿನ ಬಾಟಲಿಗಳ ಜೊತೆಗೆ ಇದೊಂದು ರೀತಿ ಮದ್ಯಪಾನಕ್ಕೂ ಬಳಕೆಯಾಗಿ ಆ ತ್ಯಾಜ್ಯವೂ ಅಧಿಕವಾಗಿದೆ. ಈ ರೀತಿಯ ಜನ, ವಾಹನದ ಒತ್ತಡ ಮುಂದುವರಿದಲ್ಲಿ ಈ ದಟ್ಟ ಹಸುರಿನ ಪ್ರದೇಶ ತನ್ನ ಸೌಂದರ್ಯವನ್ನೇ ಮುಕ್ಕಾಗಿಸಿಕೊಳ್ಳುವ ಅಪಾಯವಿದೆ.
ರಾಜ್ಯ ಸರ್ಕಾರ ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿಸುವ ಬದಲು ಇದೀಗ ರೋಪ್‍ವೇ ನಿರ್ಮಾಣ ಮಾಡಿ ಪ್ರತಿನಿತ್ಯ ಈ ಪರಿಸರ ಸೂಕ್ಷ್ಮಪ್ರದೇಶ ಜನಜಂಗುಳಿಯಿಂದ ಕೂಡುವಂತೆ ಮಾಡಲಿದ್ದು, ಜೊತೆಗೆ ಬೆಟ್ಟದ ಇಳಿಜಾರಿನಲ್ಲಿ ಆಳವಾದ ಗುಂಡಿಗಳನ್ನು ತೋಡಿ ಖಾಯಂ ಆಗಿ ಕಂಬಗಳನ್ನು ನೆಟ್ಟು ರೋಪ್‍ವೇ ಸೌಲಭ್ಯ ನೀಡಿದಲ್ಲಿ ಈ ಪ್ರದೇಶ ಮತ್ತಷ್ಟು ಹಾನಿಗೆ ಒಳಗಾಗುವ ಆತಂಕವಿದೆ. ಅಲ್ಲದೆ ರೋಪ್‍ವೇ ನಿರ್ಮಾಣಕ್ಕಾಗಿ 16 ವರ್ಷಗಳಿಗೊಮ್ಮೆ ಇಡೀ ಬೆಟ್ಟವನ್ನು ನೀಲಿ ಹೂವುಗಳಿಂದ ಆವರಿಸುವ ಗುರಿಗಿ ಹೂವಿನ ಹಸಿರು ಪತ್ತಲವನ್ನು ಕಿತ್ತು ಯಂತ್ರಗಳನ್ನು ಕೊಂಡೊಯ್ಯಲು ರಸ್ತೆಗಳನ್ನೂ ನಿರ್ಮಿಸುವುದರಿಂದ ನೈಸರ್ಗಿಕ ಸೌಂದರ್ಯ ಹಾಳಾಗಿ ಒಂದು ರೀತಿಯ ಕೃತಕತೆ ಆವರಿಸಿಕೊಳ್ಳಲಿದೆ.
ರೋಪ್‍ವೇ ನಿರ್ಮಾಣ ಮುಂದಿನ ದಿನಗಳಲ್ಲಿ ಲಾಭ ಗಳಿಕೆಯನ್ನಷ್ಟೇ ಗಮನದಲ್ಲಿಟ್ಟುಕೊಂಡಿರುವ ಕಂಪನಿಗಳಿಗೆ ಅವಕಾಶ ನೀಡಲಿದ್ದು, ಈಗಿರುವ ಪಾವಿತ್ರ್ಯ ಮಂಕಾಗಿ ಮುಂದಿನ ದಿನಗಳಲ್ಲಿ ಈ ಪ್ರದೇಶ ಜನಜಂಗುಳಿಯ ತಾಣವಾಗುವುದಲ್ಲದೆ, ನೀರಿನ ಮೂಲಕ್ಕೂ ಕುತ್ತು ತರುವ ಸಂಭವವಿದೆ.
ಪಶ್ಚಿಮ ಘಟ್ಟದ ಚಂದ್ರದ್ರೋಣ ಪರ್ವತ ಭೂಪದರದಿಂದ ಕೂಡಿದ್ದು, ಕೆತ್ತನೆ ಆದಾಕ್ಷಣ ಬಿರುಸಿನ ಮಳೆಗೆ ಕುಸಿತಕ್ಕೊಳಗಾಗುತ್ತದೆ. ಈಗಾಗಲೇ ವಿಪರೀತ ಮಳೆ ಬಂದಾಗ ರಸ್ತೆ ನಿರ್ಮಾಣವಾಗಿರುವಲ್ಲಿ ಭೂಕುಸಿತ ಉಂಟಾಗುವುದು ಸಾಮಾನ್ಯವಾಗಿದ್ದು, ರೋಪ್‍ವೇ ನಿರ್ಮಾಣಕ್ಕೆ ಈ ಇಳಿಜಾರಿನಲ್ಲಿ ಗುಂಡಿಗಳನ್ನು ತೋಡಿದಲ್ಲಿ ಇನ್ನಷ್ಟು ಅನಾಹುತ ಆಗುವ ಸಂಭವವೂ ಇದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ