'ಮೈಸೂರೆನ್ನಿ, ಕನ್ನಡವೆನ್ನಿ,ಮಲ್ಲಿಗೆ ಎನ್ನಿ
ಒಡೆಯರ ಮಕುಟದ ರತ್ನವಿದೆನ್ನಿ, ಒಡೆಯರ ಕನ್ನಡವೆನ್ನಿ
ಇರುಳನು ಕಾಣದ ಕನ್ನಡವೆನ್ನಿ, ಒಡೆಯದ ಕನ್ನಡವೆನ್ನಿ
ಕವಿಗಳು ಬಳಸುವ ಭಾಷೆಯದೆನ್ನಿ, ಒಳಗಿನ ಹೂರಣ ಒಂದೆ'
ಈ ಮೇಲಿನ ಸಾಲುಗಳು `ಮೈಸೂರು ಮಲ್ಲಿಗೆ’ ಕವನ ಸಂಕಲನದ ಮೊದಲ ಪುಟದಲ್ಲಿದೆ. ಕನ್ನಡವನ್ನು ಹೃದಯಾಂತರಾಳದಿಂದ ಪ್ರೀತಿಸುವ, ಗೌರವಿಸುವ ಮನಗಳಿಗೆ ಇದರ ಪದಗಳು ತುಂಬಾ ಆತ್ಮೀಯವೆನ್ನಿಸುತ್ತವೆ. ನಮ್ಮಕನ್ನಡ ನಾಡಿನಕಂಪನ್ನ ಮಲ್ಲಿಗೆಯ ಪರಿಮಳದೊಂದಿಗೆ ಬೆರೆಸಿ ವಿಶ್ವದೆಲ್ಲೆಡೆ ಪಸರಿಸಿದ ಕೀರ್ತಿ ಪ್ರೇಮಕವಿ ಡಾ.ಕೆ.ಎಸ್.ನರಸಿಂಹಸ್ವಾಮಿಯವರದು. 49 ಕವಿತೆಗಳ ಒಂದು ಕವನ ಸಂಕಲನ 1942 ರಿಂದ ಇಂದಿನವರೆಗೂ ರಸಿಕರೆದೆಯಲ್ಲಿ ರೋಮಾಂಚನ ಮೂಡಿಸುತ್ತಾ ಬಂದಿರುವುದು ಸೋಜಿಗವೆ. 'ಏನಿದೆ?' ಅದರಲ್ಲಿಎಂದು ಕೇಳಿದರೆ 'ಏನಿಲ್ಲ ಅದರಲ್ಲಿ' ಎಂಬುದು ಉತ್ತರ.
ಪ್ರಗತಿಶೀಲ ಚಳುವಳಿ, ನವ್ಯ ಕಾವ್ಯಗಳ ಆರಂಭ, ಸ್ವಾತಂತ್ರ್ಯ ಹೋರಾಟ ಎಲ್ಲವೂ ಕಾವೇರುತ್ತಿದ್ದ ಕಾಲದಲ್ಲಿ ಕುಟುಂಬ, ದಾಂಪತ್ಯ, ವಿರಹ, ಪ್ರೇಮ, ಸತಿ-ಪತಿಗಳ ಸರಸ, ಮಲ್ಲಿಗೆ, ಒಲುಮೆ ಎಂದುಇಡೀಕನ್ನಡಿಗರ ಮನಸ್ಸಿನ ಭಾವನೆಗಳನ್ನು ನವಿರಾದ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದು, ಕೆ.ಎಸ್.ಎನ್. ಅವರು. ಇಲ್ಲಿ ಎಲ್ಲವೂ ಅವರಿಗೆ ಕಾವ್ಯ ವಸ್ತುವೇ. ಕೈಬಳೆ, ಮೂಗುತಿ, ಸಂಜೆ, ಕಣ್ಣೋಟ, ದಿಂಬಿನಂಚಿನಲ್ಲಿರುವ ಕಸೂತಿ ಕೂಡ. ಆ ಕಾಲದ ಹೆಣ್ಣಿನ ಮನಸ್ಸು, ವಿವಾಹ ಕಾಲದಲ್ಲಿನ ತಳಮಳವೂ ಹಾಡಾಗಿ ಹರಿದಿತ್ತು.
ಕೇವಲ ಕವನಗಳನ್ನು ಆಧರಿಸಿ ಅದರಲ್ಲಿ ಬರುವ ಪಾತ್ರಗಳ ಮುಖಾಂತರಕಥೆಯಾಗಿ, ನಾಟಕವಾಗಿ, ಚಿತ್ರವಾಗಿ ಅದಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ಕೇವಲ ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ. `ಮೈಸೂರು ಮಲ್ಲಿಗೆ’ ಅದೊಂದು ದಾಖಲೆ ಕೂಡ ಮಾಡಿದೆ. ಜೊತೆಗೆ ಅತೀ ಹೆಚ್ಚು ಬಾರಿ ಮರು ಮುದ್ರಣ ಕಂಡಂತಹ ಕವನ ಸಂಕಲನ ಇದು. ಸಭೆ, ಸಮಾರಂಭಗಳಲ್ಲಿ ಈ ಪುಸ್ತಕ ಉಡುಗೊರೆಯಾಗಿ ಸಲ್ಲುತ್ತಿತ್ತು ಎಂದರೆ ಕವಿ, ಕಾವ್ಯದ ಮಹತ್ವ ಏನು ಎನ್ನುವುದು ತಿಳಿಯುತ್ತದೆ.
ಇಷ್ಟೆಲ್ಲಾ ಪೀಠಿಕೆಗೆ ಕಾರಣ ಇದೇ ಭಾನುವಾರ ಸಂಜೆ 6 ಗಂಟೆಗೆ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ `ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನಗೊಳ್ಳುತ್ತಿರುವುದು. ಬ್ರಾಹ್ಮಣ ಮಹಾಸಭಾ, ಸಾಂಸ್ಕೃತಿಕ ಸಂಘ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೆನರಾ ಬ್ಯಾಂಕ್‍ನ ಪ್ರಾಯೋಜಕತ್ವದಲ್ಲಿ 350ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಂತಹ ನಾಟಕ ನಮ್ಮೂರಿನಲ್ಲೂ ಪ್ರದರ್ಶನವಾಗುತ್ತಿದೆ.
ಇಂತಹ ಒಂದು ಅಮೋಘ ನಾಟಕದ ಹಿಂದಿದೆ `ಕಲಾ ಗಂಗೋತ್ರಿ’ ಎಂಬ ಅಪರೂಪದ ರಂಗ ತಂಡ. 1971ರ ಸುಮಾರಿನಲ್ಲಿ ಅನೇಕ ಸಮಾನ ಮನಸ್ಕರ ಗೆಳೆಯರ ಗುಂಪು ಸೇರಿದ ಕಟ್ಟಿದ ತಂಡ ಈ 'ಕಲಾ ಗಂಗೋತ್ರಿ'. ಇಂದು ಕನ್ನಡ ನಾಡಿನ ಹೆಮ್ಮೆಯರಂಗ ಸಂಸ್ಥೆ. ಅದೊಂದು ವಿಶ್ವವಿದ್ಯಾನಿಲಯಕ್ಕೆ ಸಮ ಎಂದರೆ ತಪ್ಪಾಗಲಾರದು. 52 ವರ್ಷಗಳಿಂದ ನಿರಂತರವಾಗಿ ನಾಟಕ ಪ್ರದರ್ಶನ ಮಾಡುತ್ತಾ ಬಂದಿದೆ ಈ ತಂಡ.
ಈ 'ಕಲಾ ಗಂಗೋತ್ರಿ'ಯ ರೂವಾರಿಗಳಲ್ಲಿ ಒಬ್ಬರು ಡಾ.ಬಿ.ವಿ.ರಾಜಾರಾಂ. ನಮ್ಮ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬುಕ್ಕಾಂಬುಧಿ ಮೂಲದವರು. ಬಾಲ್ಯದಿಂದಲೇ ನಾಟಕದಲ್ಲಿ ಆಸಕ್ತಿ. ಆಚಾರ್ಯ ಪಾಠಶಾಲೆಯ ಕಾಲೇಜಿನಲ್ಲಿ ಓದುವಾಗ ಅವರ ರಂಗಾಸಕ್ತಿಗೆ ಅನೇಕರು ಜೊತೆಯಾದರು. ಸುದರ್ಶನ, ಸತ್ಯನಾರಾಯಣ, ಸರ್ವಶ್ರೀ ಪೂಣಚ್ಚ, ಕೇಶವಮೂರ್ತಿ ಇನ್ನೂ ಅನೇಕರು. ಇವರ ಜೊತೆ ನಮ್ಮ ಹಿರೇಮಗಳೂರಿನ ಕನ್ನಡ ಪೂಜಾರಿ ಕಣ್ಣನ್ ಅವರೂ ಇದ್ದಿದ್ದನ್ನು ನಾವು ಗಮನಿಸಬಹುದು. ರಾಜಾರಾಂ ಅವರು ಹಗಲಿನಲ್ಲಿ ಮಹಾ ಬೋಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಸಂಜೆ ಎಲ್ಲ ಗೆಳೆಯರನ್ನು ಸೇರಿಕೊಂಡು ರಂಗ ತಾಲೀಮು, ಕನ್ನಡ ಚಳುವಳಿ, ಸ್ಪರ್ಧಾ ಚಟುವಟಿಕೆಗಳನ್ನು ನಡೆಸುತ್ತಾ ಎಲ್ಲ ರೀತಿಯ ಸಾಂಸ್ಕೃತಿಕ ಕಲಾ ವಿಭಾಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕಣ್ಣನ್ ನೆನಸಿಕೊಂಡಂತೆ, ಆ ಕಾಲಕ್ಕೆ ಕಾಲೇಜಿಗೆ ಬೀಚಿ, ಬಿ.ವಿ.ವೈಕುಂಠರಾಜು, ಎಚ್.ನರಸಿಂಹಯ್ಯ ಅವರನ್ನೆಲ್ಲಾ ಕರೆಸಿ ಕನ್ನಡಪರ ಕಾರ್ಯಕ್ರಮಗಳನ್ನು ಮಾಡಿ ಸೈ ಅನ್ನಿಸಿಕೊಂಡವರು ರಾಜಾರಾಂ ಅವರು.
ಅವರ ನಾಟಕಗಳು ಮನೆ ಮಾತಾಗುತ್ತಿದ್ದ ಕಾಲದಲ್ಲಿ ಕಣ್ಣನ್ ಅವರೂ ಒಮ್ಮೆ ಪಾತ್ರ ವಹಿಸಿದ್ದನ್ನು ಮರೆಯಲಾಗದು. ಕಾಲಿಗುಲ ನಾಟಕದಿಂದ ಆರಂಭ ಅವರ ವಿಜಯ. ಕುವೆಂಪು ಅವರಿಂದ ಆರಂಭಿಸಿ ಡಾ.ಎಚ್ಚೆಸ್ವಿವರೆಗಿನ ಎಲ್ಲಾ ಕವಿಗಳ ನಾಟಕಗಳನ್ನು ನಿರ್ದೇಶಿಸಿ ನಟಿಸಿದ ಹಿರಿಮೆ ರಾಜಾರಾಂ ಅವರದು. 'ಮುಖ್ಯಮಂತ್ರಿ' ನಾಟಕದ ಯಶಸ್ಸನ್ನುಇಡೀ ಕನ್ನಡ ನಾಡೇ ನೋಡಿದೆ. ತುಘಲಕ್, ಯಯಾತಿ, ಸಿರಿಪುರಂದರ, ಹುಲಿಯ, ಕಿಸಾಗೌತಮಿ, ಜಲಗಾರ, ಅಂಗುಲಿ ಮಾಲಹೀಗೆ ಅವರು ಮಾಡಿದ ನಾಟಕಗಳ ಪಟ್ಟಿ ತುಂಬಾನೇ ದೊಡ್ಡದಿದೆ. ನಿರ್ದೇಶನದಲ್ಲಿಅವರ ಹೆಸರನ್ನು ಮತ್ತಷ್ಟು ಬೆಳಗಿದ ನಾಟಕಗಳೆಂದರೆ ರಾಮಾಯಣದರ್ಶನಂ, ಎಚ್ಚೆಮ ನಾಯಕ, ಮೈಸೂರು ಮಲ್ಲಿಗೆಇನ್ನೂ ಹಲವಾರು.
ನಟನೆ, ನಿರ್ದೇಶನಅಲ್ಲದೆ, ನಾಟಕರಂಗಕ್ಕೆ ಸಂಬಂಧಿಸಿದ ಪ್ರತೀ ವಿಭಾಗದಲ್ಲೂ ಕೆಲಸ ನಿರ್ವಹಿಸಿರುವ ರಾಜಾರಾಂರವರಿಗೆ 1992 ರಲ್ಲಿಕರ್ನಾಟಕ ನಾಟಕಅಕಾಡೆಮಿ ಪ್ರಶಸ್ತಿ ಸಂದಿದೆ. ಕನ್ನಡ, ಸಂಸ್ಕೃತ, ಪಾಲಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು `ನಾಟ್ಯಶಾಸ್ತ್ರ ಮತ್ತು ಭಾರತೀಯ ಆಧುನಿಕ ರಂಗಭೂಮಿ’ ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಪಡೆದಿರುವ ರಾಜಾರಾಂ ಅವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ, ರಂಗಾಯಣದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 50ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ, 100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ, ನೂರಾರು ರೇಡಿಯೋ ನಾಟಕಗಳು ಅವರ ಕೀರ್ತಿಗೆ ಮೆರುಗನ್ನು ತಂದಿವೆ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಅಜಿತನ ಸಾಹಸಗಳು' ಧಾರಾವಾಹಿಯಲ್ಲಿನ ಅಜಿತನ ಪಾತ್ರದಿಂದ ಇತ್ತೀಚಿನವರೆಗೂ ಪ್ರಸಾರವಾದ 'ಯುಗಾಂತರ' ಧಾರವಾಹಿಯವರೆಗೆ, ಅನೇಕ ಪಾತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಕಳೆದ ಐದಾರು ದಶಕಗಳಿಂದ ನಾಡಿನಾದ್ಯಂತ ಯಶಸ್ವಿ ಪ್ರದರ್ಶನಗೊಂಡ ಡಾ.ಬಿ.ವಿ.ರಾಜಾರಾಂ ನಿರ್ದೇಶನದ 'ಮೈಸೂರು ಮಲ್ಲಿಗೆ' ನಾಟಕ ಅತ್ಯುತ್ತಮವಾಗಿ ಪ್ರದರ್ಶನಗೊಂಡಿತು. ಅವರೊಂದಿಗೆ ಈ ನಾಟಕದಲ್ಲಿ ಕಿರುತೆರೆ ಮತ್ತು ಹಿರಿತೆರೆಯ ಅನೇಕ ಖ್ಯಾತಕಲಾವಿದರು ಭಾಗವಹಿಸಿದ್ದರು.
- ಸುಮಾ ಪ್ರಸಾದ್
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ